
ಚೆನ್ನೈ: ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದ್ದು, ಕ್ಷಮೆಯಾಚನೆಗೆ ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ಈ ನಡುುವಲ್ಲೇ ತಪ್ಪಿಲ್ಲದಿದ್ದಾಗ ಕ್ಷಮೆಯಾಚಿಸುವುದಿಲ್ಲ ಎಂದು ನಟ ಕಮಲ್ ಹಾಸನ್ ಅವರು ಪುನರುಚ್ಛರಿಸಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ಕುತಂತ್ರ ಹೊಂದಿರುವವರನ್ನು ಹೊರತುಪಡಿಸಿ ಯಾರೂ ಈ ಪ್ರೀತಿಯನ್ನು ಅನುಮಾನಿಸುವುದಿಲ್ಲ. ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತು. ನನ್ನಿಂದ ತಪ್ಪಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ, ತಪ್ಪಿಲ್ಲ ಎಂದಾಗ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟ ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದಾರೆ. ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ.
ಸಿನಿಮಾ ತಾರೆಯರು, ಸಾಹಿತಿಗಳು, ರಾಜಕೀಯ ಮುಖಂಡರು ಸೇರಿದಂತೆ ಕಮಲ್ ಹಾಸನ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಿಗರಿಗೆ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಆದರೆ, ಕಮಲ್ ಹಾಸನ್ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದ್ದಾರೆ.
ಈ ನಡುವೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಮಂಡ್ಯದಲ್ಲಿ ನಟನ ವಿರುದ್ದ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆದಿದೆ.
ಕದಂಬ ಸೈನ್ಯ ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಕಮಲ್ ಹಾಸನ್ ವಿರುದ್ಧ ಘೋಷಣೆ ಕೂಗಿ, ನಟನ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಟನ ಮೇಲೆ ನಿಷೇಧ ಹೇರುವಂತೆ ಹಾಗೂ ತಮಿಳು ಚಲನಚಿತ್ರಗಳನ್ನು ನಿಷೇಧ ಮಾಡುವಂತೆ ಆಗ್ರಹಿಸುತ್ತಿದ್ದಾರೆ.
Advertisement