

'ರಾಮ ರಾಮ ರೇ' ಚಿತ್ರಕ್ಕೆ ಹೆಸರುವಾಸಿಯಾದ ನಿರ್ದೇಶಕ ಸತ್ಯ ಪ್ರಕಾಶ್, 'ಎಕ್ಸ್ & ವೈ' ಎಂಬ ಫ್ಯಾಂಟಸಿ ಕಾಮಿಡಿ ಚಿತ್ರದೊಂದಿಗೆ ಬರಲು ಸಜ್ಜಾಗಿದ್ದಾರೆ. ಚಿತ್ರವು ಸೆನ್ಸಾರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, 'ಯು/ಎ' ಪ್ರಮಾಣ ಪತ್ರವನ್ನು ಪಡೆದಿದೆ. ಇದೀಗ ಚಿತ್ರವನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.
ಸತ್ಯ ಪ್ರಕಾಶ್ ನಿರ್ದೇಶನದ ನಾಲ್ಕನೇ ಚಿತ್ರ ಇದಾಗಿದ್ದು, ವಿಭಿನ್ನ ಕಥೆಯನ್ನು ಒಳಗೊಂಡಿದೆ. ಈ ಚಿತ್ರದ ಮೂಲಕ ಸತ್ಯ ಪ್ರಕಾಶ್ ಅವರೇ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರ ಇದೀಗ ಶೀರ್ಷಿಕೆಯಿಂದಲೇ ತೀವ್ರ ಕುತೂಹಲ ಕೆರಳಿಸಿದೆ.
ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ 'X & Y' ಕಾಮಿಡಿ ಮೂಲಕವೇ ಮಾನವ ಸಂಬಂಧಗಳು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಹೇಳುತ್ತದೆ. ಚಿತ್ರದಲ್ಲಿ ಆ್ಯಂಬು ಆಟೋ ಎಂಬ ತ್ರಿಚಕ್ರ ವಾಹನ ಭಾವನಾತ್ಮಕ ಪಾತ್ರವಾಗಿ ಕಾಣಿಸಿಕೊಂಡಿದೆ. ಇದು ಚಿತ್ರದ ನಿರೂಪಣೆಯಲ್ಲಿ ಎದ್ದು ಕಾಣುವ ಅಂಶವಾಗಿದೆ ಎಂದು ಹೇಳಲಾಗಿದೆ.
ಸತ್ಯ ಪ್ರಕಾಶ್ ಅವರು ನಿರ್ಮಾಣದ ಜೊತೆಗೆ, ನಿರ್ದೇಶನ, ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ. ಸಿನಿಮಾ ವಿತರಣೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಒಂದಲ್ಲಾ ಎರಡಲ್ಲಾ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಸೇರಿದಂತೆ ಅವರ ಹಿಂದಿನ ಚಿತ್ರಗಳು ಕೂಡ ತಮ್ಮ ವಿಶಿಷ್ಟ ರೀತಿಯ ಕಥೆ ಹೇಳುವಿಕೆಗೆ ಮೆಚ್ಚುಗೆಗೆ ಪಾತ್ರವಾಗಿವೆ.
ಚಿತ್ರದಲ್ಲಿ ಸತ್ಯ ಅವರ ಜೊತೆಗೆ ಮ್ಯಾನ್ ಆಫ್ ದ ಮ್ಯಾಚ್ ಚಿತ್ರದ ನಟ ಅಥರ್ವ ಪ್ರಕಾಶ್, ದೂರದರ್ಶನ ಚಿತ್ರದ ನಾಯಕಿ ಅಯನಾ ಹಾಗೂ ಬೃಂದಾ ಆಚಾರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ದೊಡ್ಡಣ್ಣ, ವೀಣಾ ಸುಂದರ್ ಮತ್ತು ಇತರರು ನಟಿಸಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ, ಕೌಶಿಕ್ ಹರ್ಷ ಮತ್ತು ಬಿ.ಎಸ್. ಕೆಂಪರಾಜು ಅವರ ಸಂಗೀತ ಸಂಯೋಜನೆ ಮತ್ತು ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿದೆ.
Advertisement