

ಅಜಿತ್ ಕುಮಾರ್ ತಮ್ಮ ಸುದೀರ್ಘ ಸಾಧನೆಗಳ ಪಟ್ಟಿಗೆ ಮತ್ತೊಂದು ಪ್ರತಿಷ್ಠಿತ ಗೌರವವನ್ನು ಸೇರಿಸಿಕೊಂಡಿದ್ದಾರೆ; ಈ ಬಾರಿ, ಸಿನಿಮಾಕ್ಕಾಗಿ ಅಲ್ಲ, ಬದಲಾಗಿ ಮೋಟಾರ್ ಸ್ಪೋರ್ಟ್ ಮೇಲಿನ ಅವರ ಉತ್ಸಾಹಕ್ಕಾಗಿ ಪ್ರಶಸ್ತಿ ಲಭಿಸಿದೆ. ಇಟಲಿಯ ವೆನಿಸ್‌ನಲ್ಲಿ ಫಿಲಿಪ್ ಚಾರ್ರಿಯೊಲ್ ಮೋಟಾರ್‌ಸ್ಪೋರ್ಟ್ ಗ್ರೂಪ್ ನೀಡುವ 'ಜಂಟಲ್‌ಮನ್ ಡ್ರೈವರ್ ಆಫ್ ದಿ ಇಯರ್ 2025' ಪ್ರಶಸ್ತಿಗೆ ನಟನನ್ನು ಆಯ್ಕೆ ಮಾಡಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಈ ಸುದ್ದಿಯನ್ನು ಹಂಚಿಕೊಂಡ ಅಜಿತ್ ಅವರ ಪತ್ನಿ ಮತ್ತು ನಟಿ ಶಾಲಿನಿ, 'ವೆನಿಸ್‌ನಲ್ಲಿ ನನ್ನ ಪತಿಗೆ ಉದ್ಯಮಿ ಮತ್ತು ರೇಸಿಂಗ್ ಚಾಲಕ ದಿವಂಗತ ಫಿಲಿಪ್ ಚಾರ್ರಿಯೊಲ್ ಅವರ ಗೌರವಾರ್ಥವಾಗಿ 'ಜಂಟಲ್‌ಮನ್ ಡ್ರೈವರ್ ಆಫ್ ದ ಇಯರ್ 2025' ಪ್ರಶಸ್ತಿ ನೀಡಲಾಗಿರುವುದರಿಂದ ಅವರ ಪಕ್ಕದಲ್ಲಿ ನಿಲ್ಲುವುದು ಹೆಮ್ಮೆಯ ವಿಚಾರವಾಗಿದೆ' ಎಂದು ಬರೆದಿದ್ದಾರೆ. ಫೋಟೊಗಳಲ್ಲಿ ಅಜಿತ್ ಮತ್ತು ಅವರ ಕುಟುಂಬದ ಸದಸ್ಯರು ಇದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅಜಿತ್, 'ಈ ಗೌರವವು ತಮಗೆ ಬಹಳ ಮಹತ್ವದ್ದಾಗಿದೆ. ನಾನು ಈ ಕ್ಷಣ ಫಿಲಿಪ್ ಚಾರ್ರಿಯೊಲ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಚಾರ್ರಿಯೊಲ್ ಬಗ್ಗೆ ನಾನು ತುಂಬಾ ಒಳ್ಳೆಯ ವಿಷಯಗಳನ್ನು ಕೇಳಿದ್ದೇನೆ. ಅವರು ತುಂಬಾ ದಯಾಳು ಮತ್ತು ಅದ್ಭುತ ವ್ಯಕ್ತಿ. ಅವರು ತಮ್ಮ ಜೀವನದಲ್ಲಿ ಕಂಡ ಎಲ್ಲರಿಗೂ ಸ್ಫೂರ್ತಿ ನೀಡಿದರು ಎಂದು ನಾನು ಕೇಳಿದೆ. ಮೋಟಾರ್ ಸ್ಪೋರ್ಟ್ಸ್ ಜಗತ್ತಿನಲ್ಲಿ ನನ್ನ ಅನುಭವವು ರೋಮಾಂಚಕಾರಿ, ಸವಾಲಿನ ಮತ್ತು ಸಂತೋಷದಾಯಕವಾಗಿದೆ' ಎಂದು ಹೇಳಿದರು.
ಅಜಿತ್ ಅವರ ಮೋಟಾರ್ ಸ್ಪೋರ್ಟ್ ವೃತ್ತಿಜೀವನವು ಹೊಸ ಎತ್ತರವನ್ನು ತಲುಪುತ್ತಿರುವ ಸಮಯದಲ್ಲಿ ಈ ಪ್ರಶಸ್ತಿ ಬಂದಿದೆ. 2025ರ ಆರಂಭದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಅಜಿತ್ ಕುಮಾರ್ ರೇಸಿಂಗ್ ಮೂಲಕ, ಬಹು ರೇಸಿಂಗ್ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ತಂಡವು ಈಗಾಗಲೇ 24-ಗಂಟೆಗಳು ಮತ್ತು 12-ಗಂಟೆಗಳ ರೇಸ್ ಸ್ವರೂಪಗಳಲ್ಲಿ ಎರಡು ಮೂರನೇ ಸ್ಥಾನ ಮತ್ತು ಒಂದು ಎರಡನೇ ಸ್ಥಾನವನ್ನು ಪಡೆದಿದೆ. ಇದು ತಮಿಳುನಾಡು ಮತ್ತು ಭಾರತ ಎರಡಕ್ಕೂ ಹೆಮ್ಮೆಯ ವಿಚಾರವಾಗಿದೆ.
ಅಜಿತ್ ರೇಸಿಂಗ್ ಬಗ್ಗೆ ಹೊಂದಿರುವ ಸಮರ್ಪಣೆ ಹಲವು ವರ್ಷಗಳಿಂದ ಬಹಿರಂಗ ರಹಸ್ಯವಾಗಿದೆ. ಆದರೆ, ಅವರ ಆಪ್ತರು ಹೇಳುವಂತೆ ಅವರ ಇತ್ತೀಚಿನ ಸಾಧನೆಗಳು ಅವರು ಬಾಕಿ ಇರುವ ಎಲ್ಲ ಚಿತ್ರಗಳನ್ನು ಮುಗಿಸಿ ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಸಾಧ್ಯವಾಯಿತು. ಡಿಸೆಂಬರ್ 2024ರ ಹೊತ್ತಿಗೆ, ಅವರು ವಿದಾಮುಯಾರ್ಚಿ ಮತ್ತು ಗುಡ್ ಬ್ಯಾಡ್ ಅಗ್ಲಿ ಚಿತ್ರಗಳ ಕೆಲಸವನ್ನು ಪೂರ್ಣಗೊಳಿಸಿದರು. ತಮ್ಮ ರೇಸಿಂಗ್ ಗುರಿಗಳಿಗೆ ಸಂಪೂರ್ಣ ಗಮನ ನೀಡಲು ಕೆಲವೇ ದಿನಗಳಲ್ಲಿ ಡಬ್ಬಿಂಗ್ ಭಾಗಗಳನ್ನು ಸಹ ಮುಗಿಸಿದರು.
ಅಜಿತ್ ತಮ್ಮ ಮುಂದಿನ ನಿರ್ದೇಶಕ ಅಧಿಕ್ ರವಿಚಂದ್ರನ್ ಅವರೊಂದಿಗಿನ ದೊಡ್ಡ ಚಿತ್ರ AK64 ಗೂ ತಯಾರಿ ನಡೆಸುತ್ತಿದ್ದಾರೆ. ಈ ಯೋಜನೆಯ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ.
Advertisement