
ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಪ್ರೀಕ್ವೆಲ್ 'ಕಾಂತಾರ: ಚಾಪ್ಟರ್ 1' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದ್ದು, ಉದ್ಯಮದ ಒಳಗೆ ಮತ್ತು ಹೊರಗಿನವರಿಂದ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ರಾಮ್ ಗೋಪಾಲ್ ವರ್ಮಾ ' ಕೂಡ ಚಿತ್ರವನ್ನು ಮತ್ತು ರಿಷಭ್ ಶೆಟ್ಟಿ ಅವರನ್ನು ಹೊಗಳಿದ್ದಾರೆ. 'ಕಾಂತಾರ: ಚಾಪ್ಟರ್ 1' ಭಾರತದ ಇತರ ಚಲನಚಿತ್ರ ನಿರ್ದೇಶಕರನ್ನು ನಾಚಿಕೆಗೀಡು ಮಾಡುವ 'ಅದ್ಭುತ' ಚಿತ್ರ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಬಿಜಿಎಂ, ಧ್ವನಿ ವಿನ್ಯಾಸ, ಛಾಯಾಗ್ರಹಣ, ನಿರ್ಮಾಣ ವಿನ್ಯಾಸ ಮತ್ತು ವಿಎಫ್‌ಎಕ್ಸ್' ವಿಭಾಗಗಳಲ್ಲಿ ರಿಷಬ್ ಶೆಟ್ಟಿ ಮತ್ತು ಅವರ ತಂಡವು ಮಾಡಿರುವ 'ಊಹಾತೀತ ಪ್ರಯತ್ನ' ಅದ್ಭುತವಾಗಿದೆ. ಚಿತ್ರದ ಕಂಟೆಂಟ್ 'ಬೋನಸ್' ಆಗಿದ್ದು, ಇದರ ಹಿಂದಿನ ನಿರ್ದೇಶಕರ ಪ್ರಯತ್ನಕ್ಕೆ 'ಬ್ಲಾಕ್‌ಬಸ್ಟರ್' ಸ್ಥಾನಮಾನ ಸಿಗಬೇಕು ಎಂದು ಹೇಳಿದ್ದಾರೆ.
ರಿಷಬ್ ಸಿನಿಮಾದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಯಾವುದರಲ್ಲಿ ಅವರು ಬೆಸ್ಟ್ ಎಂದು ಆಯ್ಕೆ ಮಾಡಲು ತನಗೆ ಸಾಧ್ಯವಾಗುತ್ತಿಲ್ಲ. 'ನೀವು ಶ್ರೇಷ್ಠ ನಿರ್ದೇಶಕರೋ ಅಥವಾ ಶ್ರೇಷ್ಠ ನಟರೋ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ' ಎಂದು ಬರೆದಿದ್ದಾರೆ.
ಇದನ್ನು 'ಒಂದು ದೊಡ್ಡ ಕೃತಿ' ಮತ್ತು 'ಹೊಸ ರೀತಿಯ ಸಿನಿಮಾ' ಎಂದು ಕರೆದ ರಾಮ್ ಗೋಪಾಲ್ ವರ್ಮಾ, ಈ ಚಿತ್ರವು 'ದೊಡ್ಡ ಪರದೆಯ ಮೇಲೆ ನಿಜವಾಗಿಯೂ ಸಿನಿಮಾವನ್ನು ಹೇಗೆ ಮಾಡುವುದು' ಎಂಬುದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. 'ನಾವೆಲ್ಲರೂ ಸಿನಿಮೀಯ ಮೆಗಾ ಪರಾಕಾಷ್ಠೆಯನ್ನು ಹೊಂದಿದ್ದೇವೆ' ಎಂದು ತಮ್ಮ ಪೋಸ್ಟ್‌ನ ಕೊನೆಯಲ್ಲಿ ಬರೆದಿದ್ದಾರೆ.
ಇದಕ್ಕೆ ಉತ್ತರಿಸಿದ ರಿಷಬ್, 'ನಿಮ್ಮ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕಾಗಿ' ರಾಮ್ ಗೋಪಾಲ್ ವರ್ಮಾ ಅವರಿಗೆ ಧನ್ಯವಾದ ಹೇಳಿರುವ ಅವರು, ನಾನು 'ಕೇವಲ ಸಿನಿಮಾ ಪ್ರೇಮಿ' ಎಂದು ಹೇಳಿದ್ದಾರೆ.
ಕಾಂತಾರ: ಚಾಪ್ಟರ್ 1ರಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಸೇರಿದಂತೆ ಇತರರು ನಟಿಸಿದ್ದಾರೆ.
Advertisement