
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಚಿತ್ರ ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನೆನ್ನೆ (ಭಾನುವಾರ) ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನ ಕಂಡಿದೆ. ದೇಶ ಮತ್ತು ವಿದೇಶಗಲ್ಲಿ ಪ್ರೇಕ್ಷಕರ ಹೃದಯ ಗೆಲ್ಲುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಚಿತ್ರವು ಅಕ್ಟೋಬರ್ 5 ರಂದು ನವದೆಹಲಿಯಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ವಿಶೇಷ ಮೂರು ಪ್ರದರ್ಶನಗಳನ್ನು ಕಂಡಿದೆ ಎನ್ನಲಾಗಿದೆ.
ಕನ್ನಡ ಭಾಷೆಯ ಚಿತ್ರಕ್ಕೆ ಇದು ರಾಷ್ಟ್ರೀಯ ಮನ್ನಣೆ ದೊರಕಿರುವ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
ಕಾಂತಾರ: ಚಾಪ್ಟರ್ 1 ಚಿತ್ರವು ಅಕ್ಟೋಬರ್ 2ರಂದು ದೇಶದಾದ್ಯಂತ ಏಳು ಭಾಷೆಗಳಲ್ಲಿ ತೆರೆಕಂಡಿದೆ. ಪ್ರಮುಖ ರಾಜ್ಯಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಅಭಿಮಾನಿಗಳು ಮತ್ತು ಉದ್ಯಮದ ದಿಗ್ಗಜರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಟ ಪ್ರಭಾಸ್, ಜೂನಿಯರ್ ಎನ್‌ಟಿಆರ್ ಮತ್ತು ಯಶ್ ಸೇರಿದಂತೆ ಹಲವರು ರಿಷಬ್ ಶೆಟ್ಟಿ ಅವರನ್ನು ಶ್ಲಾಘಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಈ ವಿಶೇಷ ಪ್ರದರ್ಶನವು ಕೇವಲ ಔಪಚಾರಿಕ ಪ್ರದರ್ಶನವಾಗಿರದೆ ಪ್ರಾದೇಶಿಕ ಸಿನಿಮಾಗಳಿಗೆ ಭಾಷೆ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಅತ್ಯುನ್ನತ ಸಾಂಸ್ಕೃತಿಕ ಕೋಷ್ಟಕದಲ್ಲಿ ಸ್ಥಾನ ಗಳಿಸಲು ಅನುವು ಮಾಡಿಕೊಟ್ಟಿದೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಕಾಂತಾರ: ಚಾಪ್ಟರ್ 1 ನಲ್ಲಿ ರಿಷಭ್ ಜೊತೆಗೆ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ನಟಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಸೇರಿದಂತೆ ಪ್ರಬಲ ತಂಡವಿದೆ.
ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಾಹಕ ಅರವಿಂದ್ ಎಸ್ ಕಶ್ಯಪ್ ಅದ್ಭುತ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸುರೇಶ್ ಮಲ್ಲಯ್ಯ ಸಂಕಲನ ಮಾಡಿದ್ದಾರೆ.
Advertisement