Kantara Chapter 1: ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ; ಪ್ರೇಕ್ಷಕರಲ್ಲಿ ಚಿತ್ರತಂಡ ಮನವಿ!

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ವೀಕ್ಷಿಸುವಾಗ ವೇಳೆ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತುಳುವರ ಕೆಂಗಣ್ಣಿಗೆ ಗುರಿಯಾಗಿತ್ತು.
ಕಾಂತಾರ ಪ್ರೇಕ್ಷಕರು
ಕಾಂತಾರ ಪ್ರೇಕ್ಷಕರು
Updated on

ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ವೀಕ್ಷಿಸುವಾಗ ವೇಳೆ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತುಳುವರ ಕೆಂಗಣ್ಣಿಗೆ ಗುರಿಯಾಗಿತ್ತು. ಥಿಯೇಟರ್‌ಗಳಲ್ಲಿ ದೈವದ ವೇಷ ಧರಿಸಿ ಓಡಾಟ, ಚಿತ್ರದಲ್ಲಿ ತೋರಿಸುವ ದೈವದ ವರ್ತನೆಗಳಂತೆ ಚಿತ್ರಮಂದಿರಗಳಲ್ಲಿ ಕಿರುಚಾಡುವುದು ತುಳುವರ ನಂಬಿಕೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಬೆಂಗಳೂರು ತುಳುಕೂಟ ನಟ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ಪತ್ರವೊಂದು ಕಳುಹಿಸಿದ್ದು ಇದರ ಬೆನ್ನಲ್ಲೇ ಚಿತ್ರತಂಡ ಪ್ರೇಕ್ಷಕರಲ್ಲಿ ಮನವಿಯೊಂದನ್ನು ಮಾಡಿದೆ.

ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ ಏನು?

ತುಳುನಾಡಿನ ಸಂಸ್ಕೃತಿಯ ಪ್ರೌಢತೆಯ ಸಂಕೇತವಾದ ದೈವಾರಾಧನೆ ನಮ್ಮನಂಬಿಕೆ, ಭಕ್ತಿ ಹಾಗೂ ತಾಯ್ತಾಡಿನ ಹೆಮ್ಮೆಯ ಪ್ರತಿರೂಪವಾಗಿದೆ. ಕಾಂತಾರ ಮತ್ತು ಕಾಂತಾರ ಚಾಪ್ಟರ್-1 ಚಿತ್ರಗಳನ್ನು ನಾವು ಗೌರವದೊಂದಿಗೆ ದೈವಗಳ ಮಹಿಮೆಯನ್ನು ಕೊಂಡಾಡುವ ಸದುದ್ದೇಶದಿಂದ ನಿರ್ಮಿಸಿದ್ದೇವೆ. ದೈವಾರಾಧನೆಯ ಗೌರವ ಹಾಗೂ ಅಚಲ ಭಕ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಶ್ರಮಪಟ್ಟು ಕೆಲಸಮಾಡಿದ್ದೇವೆ. ಇದರೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರಿ ಯಶಸ್ವಿಯಾಗಿದ್ದೇವೆ.

ಪ್ರೇಕ್ಷಕರಿಂದ ಬ೦ದಿರುವ ಅಪಾರವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಆದಾಗ್ಯೂ, ಇತ್ತೀಚೆಗೆ ಕೆಲವು ಜನರು ಚಿತ್ರದಲ್ಲಿ ತೋರಿಸಿದ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಚಿತ್ರಗಳಲ್ಲಿ ತೋರಿಸಲಾದ ದೈವಾರಾಧನೆ ಅಥವಾ ದೈವಪೂಜೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯಕ್ಕೆ ಆಧಾರಿತವಾಗಿದೆ. ಇದನ್ನು ಹಾಸ್ಯಾಸ್ಪದವಾಗಿ ಅಣುಕು ಪ್ರದರ್ಶನ ಮಾಡುವಂತಿಲ್ಲ. ಇಂತಹ ಕೃತ್ಯಗಳು ನಮ್ಮ ನಂಬಿಕೆ ಮತ್ತು ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ತೀವ್ರ ನೋವು೦ಟುಮಾಡುತ್ತವೆ. ಆದುದರಿಂದ, ಹೋಂಬಾಳೆ ಫಿಲ್ಡ್ ಜನತೆ ಹಾಗೂ ಪ್ರೇಕ್ಷಕರಿಗೆ ಮನವಿ ಮಾಡಿಕೊಳ್ಳುತ್ತದೆ-ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ಅವರ ರೂಪ-ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ. ಇದನ್ನು ಚಿತ್ರಮಂದಿರಗಳಲ್ಲಿ ಆಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಲಿ ಎಲ್ಲೂ ಮಾಡುವಂತಿಲ್ಲ.

ಕಾಂತಾರ ಪ್ರೇಕ್ಷಕರು
ಕಾಂತಾರ: ಚಾಪ್ಟರ್ 1: ಕರ್ನಾಟಕದಲ್ಲಿ 4ನೇ ದಿನಕ್ಕೇ KGF 2 ಕಲೆಕ್ಷನ್‌ ಧೂಳಿಪಟ!

ದೈವಾರಾಧನೆಯ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಆರಾಧನೆಯ ಆಧ್ಯಾತ್ಮಿಕ ಮಹತ್ವವನ್ನು ಎಲ್ಲರೂ ಗುರುತಿಸಿ, ಗೌರವದಿಂದ ನಡೆದುಕೊಳ್ಳಬೇಕು. ನಮ್ಮ ಚಿತ್ರಗಳ ಮೂಲಕ ನಾವು ಸ೦ಭ್ರಮಿಸಿದ ಈ ನಂಬಿಕೆಯನ್ನು ಯಾವುದೇ ಸಂದರ್ಭದಲ್ಲಿ ಹಾಸ್ಯಾಸ್ಪದವಾಗಲು ಅವಕಾಶ ನೀಡಬಾರದು. ಈ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಪವಿತ್ರತೆಯನ್ನು ಕಾಪಾಡಲು ನೀವು ನೀಡುತ್ತಿರುವ ನಿರಂತರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಮ್ಮ ಹೃತ್ತೂರ್ವಕ ಧನ್ಯವಾದಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com