
ಮುಂಬೈ: ಅಕ್ಟೋಬರ್ 2ರಂದು ಬಿಡುಗಡೆಯಾದ 'ಕಾಂತಾರ: ಚಾಪ್ಟರ್ 1' ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಲೇ ಇದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಚಿತ್ರದ ಚಿತ್ರೀಕರಣದ ವೇಳೆ ತಮ್ಮ ಸ್ಥಿತಿ ಹೇಗಿತ್ತು ಎಂಬುದರ ಕುರಿತು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 'Climax shooting ನ ಸಮಯ … ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ.. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ' ಎಂದು ಬರೆದಿದ್ದಾರೆ.
'ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು..' ಎಂದು ಪೋಸ್ಟ್ ಮಾಡಿದ್ದಾರೆ.
'ಕಾಂತಾರ: ಚಾಪ್ಟರ್ 1' ತುಳುನಾಡಿನಲ್ಲಿ ನಡೆಯುವ ದೈವ ಪೂಜೆಯ ಮೂಲದ ಸುತ್ತ ಸುತ್ತುತ್ತದೆ. ನಾಲ್ಕನೇ ಶತಮಾನದ ಕದಂಬ ರಾಜವಂಶಕ್ಕೆ ಸಂಬಂಧ ಹೊಂದಿದೆ. ರಿಷಭ್ ಶೆಟ್ಟಿ ಅವರು ಕಾಂತಾರ ಅರಣ್ಯ ಮತ್ತು ಅದರ ಬುಡಕಟ್ಟು ಸಮುದಾಯಗಳ ರಕ್ಷಕ ಬೆರ್ಮೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ದೈವಗಳಿಂದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ರಾಜಮನೆತನ ಮತ್ತು ಅವರ ಆಳ್ವಿಕೆಯನ್ನು ವಿರೋಧಿಸುವ ಬುಡಕಟ್ಟು ಜನಾಂಗದ ನಡುವಿನ ಹೋರಾಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪೋಷಕ ಪಾತ್ರಗಳಲ್ಲಿ ದಿವಂಗತ ರಾಕೇಶ್ ಪೂಜಾರಿ, ಹರಿಪ್ರಶಾಂತ್ ಎಂಜಿ, ದೀಪಕ್ ರೈ ಪಣಾಜೆ, ಶನೀಲ್ ಗೌತಮ್ ಮತ್ತು ನವೀನ್ ಬೋಂಡೆಲ್ ಸೇರಿದಂತೆ ಇತರರು ನಟಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ನಿರ್ಮಿಸಿರುವ ಈ ಚಿತ್ರವು ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿದ್ದು, ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
Advertisement