'ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ವಿ ಸಹಯೋಗದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ನಿರ್ದೇಶಕ ಶ್ರೀನಿವಾಸ್ ರಾಜು ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಸೆಟ್ಟೇರಿದ ಇನ್ನೂ ಹೆಸರಿಡದ ಈ ಚಿತ್ರವನ್ನು ಸಮೃದ್ಧಿ ಮಂಜುನಾಥ್ ಅವರ ಕೆವಿಸಿ ಪ್ರೊಡಕ್ಷನ್ಸ್ ಮತ್ತು ವಿರಾಟ್ ಸಾಯಿ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿದ್ದು, ಈಗಾಗಲೇ ಚಿತ್ರದ ಶೇ 60ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ದೇವಿಕಾ ಭಟ್ ಅಧಿಕೃತವಾಗಿ ಚಿತ್ರತಂಡ ಸೇರ್ಪಡೆಗೊಂಡಿದ್ದರೆ, ಮಾಳವಿಕಾ ಶರ್ಮಾ ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಮೂಲತಃ ವಕೀಲ ವೃತ್ತಿಯಿಂದ ಮಾಡೆಲ್ ಆಗಿ ಬದಲಾದ ಮಾಳವಿಕಾ, ತೆಲುಗು ಮತ್ತು ತಮಿಳು ಚಿತ್ರಗಳಾದ ನೆಲ ಟಿಕೆಟ್ (2018), ರೆಡ್ (2021), ಕಾಫಿ ವಿತ್ ಕಾದಲ್ (2022), ಭೀಮಾ (2024) ಮತ್ತು ಹರೋಮ್ ಹರಾ (2024) ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿ ಈ ತಿಂಗಳು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕೇರಳ, ಉತ್ತರ ಭಾರತ ಮತ್ತು ಭೂತಾನ್‌ನ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಮೈಸೂರಿನ ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
ರೊಮ್ಯಾಂಟಿಕ್ ಚಿತ್ರಗಳಿಗೆ ಹೆಸರಾದ ಗಣೇಶ್ ಈ ಚಿತ್ರದ ಮೂಲಕ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಸಂಗೀತ, ಕೃಷಿ ಮತ್ತು ಪ್ರಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಬೌದ್ಧಿಕ ಪಾತ್ರವನ್ನು ನಿರ್ವಹಿಸಿಸುತ್ತಿದ್ದಾರೆ.
ಚಿತ್ರಕ್ಕೆ ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತ ಸಂಯೋಜನೆ ಇದೆ. ವಿಜಯ್ ಈಶ್ವರ್ ಮತ್ತು ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2026ರ ಆರಂಭದಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ. 2025ರಲ್ಲಿ ನಟ ಗಣೇಶ್ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ.
ಈಮಧ್ಯೆ, ಗಣೇಶ್ ವಿಖ್ಯಾತ್ ನಿರ್ದೇಶನದ 'Your's Sincerely ರಾಮ್' ಮತ್ತು ಧನಂಜಯ್ ಜೊತೆಗಿನ ಪಿನಾಕಾ ಸೇರಿದಂತೆ ಇತರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
Advertisement