
ಮುಂಬೈ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ: ಚಾಪ್ಟರ್ 1' ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲಿಯೇ 700 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎಂದು ಚಿತ್ರತಂಡ ಗುರುವಾರ ಘೋಷಿಸಿದೆ.
2022ರ ಬ್ಲಾಕ್ ಬಸ್ಟರ್ ಚಿತ್ರ 'ಕಾಂತಾರ'ದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1ನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 2 ರಂದು ದೇಶದಾದ್ಯಂತ ಬಿಡುಗಡೆಯಾಗಿದೆ.
'ಬಾಕ್ಸ್ ಆಫೀಸ್‌ನಲ್ಲಿ ದೈವಿಕ ಬಿರುಗಾಳಿ ಕಾಂತಾರ: ಚಾಪ್ಟರ್ 1 ಬಿಡುಗಡೆಯಾದ 2 ವಾರಗಳಲ್ಲಿ ವಿಶ್ವದಾದ್ಯಂತ ಒಟ್ಟು 717.50 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬ್ಲಾಕ್ ಬಸ್ಟರ್ ಕಾಂತಾರದೊಂದಿಗೆ ದೀಪಾವಳಿಯನ್ನು ಆಚರಿಸಿ!' ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಕಾಂತಾರ: ಚಾಪ್ಟರ್ 1 ಚಿತ್ರವು ಕಾಂತಾರ ಅರಣ್ಯದ ಆದಿವಾಸಿಗಳು ಮತ್ತು ದಬ್ಬಾಳಿಕೆ ನಡೆಸುವ ರಾಜನ ನಡುವಿನ ಸಂಘರ್ಷವನ್ನು ಚಿತ್ರಿಸುತ್ತದೆ. ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಗುಲ್ಶನ್ ದೇವಯ್ಯ, ರುಕ್ಮಿಣಿ ವಸಂತ್, ಜಯರಾಮ್, ಪಿಡಿ ಸತೀಶ್ ಚಂದ್ರ ಮತ್ತು ಪ್ರಕಾಶ್ ತುಮಿನಾಡ್ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣ, ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಿದೆ.
Advertisement