
ಅಕ್ಟೋಬರ್ 2ರಂದು ಬಿಡುಗಡೆಯಾದ ಕಾಂತಾರ: ಚಾಪ್ಟರ್ 1 ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಓಟವನ್ನು ಮುಂದುವರಿಸಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿಗೆ ಭೇಟಿ ನೀಡಿದ್ದ ನಟ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮುಂದಿನ ಯೋಜನೆ 'ಜೈ ಹನುಮಾನ್' ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದರು.
ಮುಂಬರುವ ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸಲಿದ್ದಾರೆ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಲಿದೆ ಎಂದು ನಟ ಮತ್ತು ನಿರ್ದೇಶಕರು ಖಚಿತಪಡಿಸಿದ್ದಾರೆ. 'ಹೌದು, ನನ್ನ ಮುಂದಿನ ಚಿತ್ರ ಜೈ ಹನುಮಾನ್. ಇದು ಸದ್ಯ ನಾನು ಕೆಲಸ ಮಾಡುತ್ತಿರುವ ಏಕೈಕ ಯೋಜನೆಯಾಗಿದೆ. ಕಾಂತಾರ: ಚಾಪ್ಟರ್ 2 ಮಾಡುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ' ಎಂದು ಸ್ಪಷ್ಟಪಡಿಸಿದರು.
ಜೈ ಹನುಮಾನ್ ತೆಲುಗಿನಲ್ಲಿ ಚಿತ್ರೀಕರಣವಾಗಲಿದ್ದು, ರಿಷಬ್ ಹನುಮನ ಪಾತ್ರದಲ್ಲಿ ನಟಿಸಲಿದ್ದಾರೆ. 'ಈ ಕಥೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನನಗೆ ದೈವಿಕತೆಯ ಮೇಲೆ ಅಪಾರ ನಂಬಿಕೆ ಇದೆ ಮತ್ತು ಈ ಚಿತ್ರವು ಆ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ನನ್ನ ಸೃಜನಶೀಲ ಪಯಣದ ಪ್ರತಿಯೊಂದು ಹೆಜ್ಜೆಯೂ ಭಕ್ತಿ ಮತ್ತು ಶಿಸ್ತಿನಿಂದ ಪ್ರೇರಿತವಾಗಿರುತ್ತದೆ' ಎಂದು ಅವರು ಹೇಳಿದರು.
2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಚಿತ್ರ ಕಾಂತಾರದ ಪ್ರೀಕ್ವೆಲ್ ಕಾಂತಾರ: ಚಾಪ್ಟರ್ 1 ಆಗಿದ್ದು, ರಿಷಭ್ ಜೊತೆಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಇದರೊಂದಿಗೆ ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜೈ ಹನುಮಾನ್ ಚಿತ್ರದೊಂದಿಗೆ, ಹೊಸ ಸೃಜನಶೀಲ ಅವಕಾಶಗಳನ್ನು ಅನ್ವೇಷಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಜೈ ಹನುಮಾನ್ ಚಿತ್ರವು 2024ರಲ್ಲಿ ಬಿಡುಗಡೆಯಾದ 'ಹನುಮಾನ್' ಚಿತ್ರದ ಮುಂದುವರಿದ ಭಾಗವಾಗಿದೆ. ಹನುಮಾನ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ತೇಜ್ ಸಜ್ಜಾ, ಅಮೃತಾ ಅಯ್ಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Advertisement