
'ZEE Kannada' ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದ ಮೂಲಕ ಜನಪ್ರಿಯರಾಗಿದ್ದ ಶಿವಮೊಗ್ಗದ ಸಾಗರದ ಗಾಯಕಿ ಸುಹಾನಾ ಸೈಯ್ಯದ್ ಹಾಗೂ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಗರದ ಖಾಸಗಿ ರೆಸಾರ್ಟ್ ನಲ್ಲಿ ಗುರು ಹಿರಿಯರ ಹಾಗೂ ಆಪ್ತರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾದರು. ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದರೂ ಧೈರ್ಯವಾಗಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಿಜಬ್ ಧರಿಸಿ ಹಿಂದೂ ಭಜನೆ ಹಾಡುವ ಸುಹಾನಾಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೀಗ ಎಲ್ಲಾ ಅಡೆತಡೆಗಳನ್ನ ದಾಟಿ ತಾವು ಬಹುವರ್ಷಗಳಿಂದ ಪ್ರೀತಿಸುತ್ತಿರುವ ಅಂತರ್ ಧರ್ಮದ ಹುಡುಗನ ಜೊತೆ ಮದುವೆಯಾಗಿದ್ದಾರೆ.
ಸುಹಾನಾ ಸೈಯ್ಯದ್ ಹಾಗೂ ನಿತಿನ್ ಶಿವಾಂಶ್ ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗಿನಿಂದಲೂ ಪರಿಚಯವಂತೆ. ನಿತಿನ್ ರಂಗಭೂಮಿ ಕಲಾವಿದರಾಗಿದ್ದು, ಸುಹಾನಾ ಸೈಯ್ಯದ್‌ಗೂ ರಂಗಭೂಮಿ ಮೇಲೆ ಆಸಕ್ತಿಯಿತ್ತು. ಅಲ್ಲಿಂದ ಇಬ್ಬರ ಪರಿಚಯ ಮತ್ತಷ್ಟು ಗಾಢವಾಗಿದ್ದು, ಇಬ್ಬರ ನಡುವೆ ಪ್ರೇಮಂಕುರವಾಗಿದೆ. ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕವೇ ಮದುವೆ ಆಗಬೇಕೆಂದು ಇಬ್ಬರು ನಿರ್ಧರಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.
"ಮದುವೆ ಆದರೆ, ಮಂತ್ರ ಮಾಂಗಲ್ಯವೇ ಆಗಬೇಕು ಎಂಬ ಕನಸು ಬಹಳ ವರ್ಷಗಳಿಂದ ಇತ್ತು. ಅದು ಈಗ ನೆರೆವೇರಿದೆ ಹಾಗಾಗಿ ಬಹಳ ಖುಷಿಯಿದೆ. ತುಂಬಾ ಕಡಿಮೆ ಸಮಯದಲ್ಲಿ ಇದೆಲ್ಲ ನೆರವೇರಿದೆ. ಇಬ್ಬರ ಗುರುಗಳು ತುಂಬಾ ಜನ ಬಂದಿದ್ದಾರೆ ಎಂದು ಸುಹಾನಾ ಸೈಯ್ಯದ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಜೋಡಿಯ ಆಮಂತ್ರಣ ಪತ್ರಿಕೆಯಲ್ಲಿ, ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಹೇಳಿಕೊಂಡಿದ್ದರು.
Advertisement