
2022ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1 ಅಕ್ಟೋಬರ್ 2ರಂದು ದೇಶದಾದ್ಯಂತ ಬಿಡುಗಡೆಯಾಯಿತು. ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಚಿತ್ರವು ಅಕ್ಟೋಬರ್ 31 ರಂದು ಇಂಗ್ಲಿಷ್ ಭಾಷೆಯಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ.
ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಜಾಗತಿಕವಾಗಿ 800 ಕೋಟಿ ರೂ.ಗಳ ಮೈಲಿಗಲ್ಲನ್ನು ತಲುಪುವತ್ತ ಸಾಗುತ್ತಿದೆ. ಇದು 2025ರಲ್ಲಿ ಅತಿದೊಡ್ಡ ಗಳಿಕೆ ಕಂಡ ಭಾರತೀಯ ಚಿತ್ರಗಳಲ್ಲಿ ಒಂದಾಗಿದ್ದು, ದೇಸೀಯ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇದೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಭರ್ಜರಿ ಕಲೆಕ್ಷನ್ ಕಾಣುತ್ತಿರುವ ಚಿತ್ರವು ಇದೀಗ ಇಂಗ್ಲಿಷ್‌ನಲ್ಲಿಯೂ ಬಿಡುಗಡೆಯಾಗಲಿದೆ.
ಹೊಸ ಆವೃತ್ತಿಯು 2 ಗಂಟೆ 14 ನಿಮಿಷಗಳ ಕಡಿಮೆ ರನ್‌ಟೈಮ್ ಅನ್ನು ಹೊಂದಿದ್ದು, ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಮೂಲ ಚಿತ್ರವು 2 ಗಂಟೆ 49 ನಿಮಿಷಗಳ ರನ್‌ಟೈಮ್ ಅನ್ನು ಹೊಂದಿತ್ತು. ಈ ಚಿತ್ರವು ಈಗಾಗಲೇ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇಂಗ್ಲೀಷ್ ಆವೃತ್ತಿಯು ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸದ್ಯ, ಕಾಂತಾರ: ಚಾಪ್ಟರ್ 1 ಚಿತ್ರವು ಈ ವರ್ಷದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ವೀಕ್ಷಕರ ಸಂಖ್ಯೆ ಮತ್ತು ಬಾಕ್ಸ್ ಆಫೀಸ್ ಗಳಿಕೆ ಎರಡರಲ್ಲೂ ಅಗ್ರ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ಫಾರ್ಸ್ ಫಿಲ್ಮ್, ಪ್ರತ್ಯಂಗಿರಾ ಯುಎಸ್ ಮತ್ತು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ನಂತಹ ವಿತರಕರ ಬೆಂಬಲದೊಂದಿಗೆ, ಚಿತ್ರವು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ನೋಡುತ್ತಿದೆ. ಚಿತ್ರದ ಗಳಿಕೆಯು 800 ಕೋಟಿ ರೂ. ಮೈಲಿಗಲ್ಲನ್ನು ತಲುಪುತ್ತಿದ್ದು, ಈ ಚಿತ್ರವು ಬಾಹುಬಲಿ 2, ಕೆಜಿಎಫ್: ಚಾಪ್ಟರ್ 2 ಮತ್ತು ಆರ್‌ಆರ್‌ಆರ್ ಹೊಂದಿದ್ದ ದಾಖಲೆಗಳನ್ನು ಮೀರಿಸುವತ್ತಾ ಸಾಗಿದೆ. ಹೊಂಬಾಳೆ ಫಿಲ್ಮ್ಸ್ ಇದೀಗ ಕಾಂತಾರ: ಚಾಪ್ಟರ್ 1 ಚಿತ್ರವನ್ನು ಆಸ್ಕರ್ ಪರಿಗಣನೆಗೆ ಸಲ್ಲಿಸಲು ಯೋಜಿಸಿದೆ.
ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಸುರೇಶ್ ಮಲ್ಲಯ್ಯ ಅವರ ಸಂಕಲನ, ಧರಣಿ ಗಂಗೇಪುತ್ರ ಅವರೊಂದಿಗೆ ವಿನೇಶ್ ಬಂಗ್ಲನ್ ಅವರ ನಿರ್ಮಾಣ ವಿನ್ಯಾಸ, ಪ್ರಗತಿ ಶೆಟ್ಟಿ ಅವರ ಕಾಸ್ಟ್ಯೂಮ್ ಮತ್ತು ಅರ್ಜುನ್ ರಾಮು ಮತ್ತು ಟೋಡರ್ ಲಜರೋವ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಕೂಡ ನಟಿಸಿದ್ದಾರೆ.
Advertisement