
ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂತೆರೋ ನಟಿಸಿರುವ ಆ್ಯಕ್ಷನ್-ಡ್ರಾಮಾ 'ಮಾದೇವ' ಇದೀಗ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 1980ರ ದಶಕದ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರವು ಭಾವನೆಗಳಿಂದ ದೂರ ಉಳಿದ ಗಲ್ಲಿಗೇರಿಸುವ ವ್ಯಕ್ತಿ ಮಾದೇವ (ವಿನೋದ್ ಪ್ರಭಾಕರ್) ಅವರ ಜೀವನಕ್ಕೆ ಕರೆದೊಯ್ಯುತ್ತದೆ. ಜೈಲಿನಲ್ಲಿದ್ದ ತನ್ನ ತಾಯಿಗೆ ಸಹಾಯ ಬೇಡುವ ಪಾರ್ವತಿ (ಸೋನಲ್ ಮೊಂತೆರೋ) ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ.
ಈ ಹಿಂದೆಂದು ಕಾಣಿಸದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ವಿನೋದ್ ಪ್ರಭಾಕರ್ ಅವರಿಗೆ ಈ ಚಿತ್ರ ಯಶಸ್ಸು ತಂದುಕೊಟ್ಟಿತು. ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ ಈ ಚಿತ್ರಕ್ಕೆ ಖಾಕಿ ಚಿತ್ರದ ನಂತರ ನವೀನ್ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕಾಗಿ ತಾವೇ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಈ ಚಿತ್ರಕ್ಕೆ ಪ್ರದ್ಯೋತನ್ ಅವರ ಸಂಗೀತ ಸಂಯೋಜನೆ, ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಅವರ ಸಂಕಲನ, ಗುಣ ಅವರ ಕಲಾ ನಿರ್ದೇಶನ, ಜೊತೆಗೆ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ರಿಯಲ್ ಸತೀಶ್ ಮತ್ತು ವಿಕ್ರಮ್ ಮೋರ್ ಅವರ ಸಾಹಸ ಸಂಯೋಜನೆ ಇದೆ.
'ಮಾದೇವ' ಚಿತ್ರದಲ್ಲಿ ವಿನೋದ್ ಪ್ರಭಾಕರ್, ಸೋನಲ್ ಮೊಂತೆರೋ ಜೊತೆಗೆ ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಹಿರಿಯ ನಟರಾದ ಮಾಲಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಮೈಕೋ ನಾಗರಾಜ್, ಬಾಲ ರಾಜವಾಡಿ, ಮುನಿರಾಜು ಮತ್ತು ಚೈತ್ರ ಕೂಡ ತಾರಾಗಣದಲ್ಲಿದ್ದಾರೆ.
Advertisement