

'ರಾಮಾಯಣ' ಭಾಗ: 1 ಟ್ರೈಲರ್ ಬಿಡುಗಡೆಯಾದಾಗಿನಿಂದ ರಾಮ ಪಾತ್ರದಾರಿ ರಣಬೀರ್ ಕಪೂರ್, ಸೀತಾ ಪಾತ್ರದಾರಿ ಸಾಯಿ ಪಲ್ಲವಿ ಹಾಗೂ VFX ಸೇರಿದಂತೆ ನಾನಾ ಕಾರಣಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಟ ಚೇತನ್ ಹನ್ಸ್‌ರಾಜ್ ಚಿತ್ರದ ಪರವಾಗಿ ದನಿ ಎತ್ತಿದ್ದಾರೆ.
ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಪೌರಾಣಿಕ ಸಿನಿಮಾದಲ್ಲಿ ರಾಕ್ಷಸ 'ಮಾಲಿ' ಪಾತ್ರ ಮಾಡಿರುವ ಚೇತನ್, ಟೀಕೆಗಳನ್ನು ತಳ್ಳಿಹಾಕಿದ್ದು, ಚಿತ್ರದ ನಿಜವಾದ ಅಂಶವನ್ನು ಅರ್ಥಮಾಡಿಕೊಳ್ಳದೆ ಅನೇಕರು ಅದರ ಬಗ್ಗೆ ಟೀಕೆಗಳನ್ನು ಮಾಡ್ತಾ ಇದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡ ಚೇತನ್, ಪಾತ್ರವರ್ಗವನ್ನು ಅಂತಿಮಗೊಳಿಸುವ ಮುನ್ನ ಚಿತ್ರತಂಡ ನಡೆಸಿದ ಸಿದ್ಧತೆ ಮತ್ತು ಶ್ರಮವನ್ನು ಶ್ಲಾಘಿಸಿದ್ದಾರೆ. ಟ್ರೈಲರ್ ಬಿಡುಗಡೆಯಾದಾಗಿನಿಂದಲೂ, ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಅವರ ಆಯ್ಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಚೇತನ್, ತಾವು ಈ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
"ಪಾತ್ರವರ್ಗದ ಆಯ್ಕೆ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ರಾಮನ ಪಾತ್ರದಲ್ಲಿ ರಣಬೀರ್ ಅದ್ಭುತವಾಗಿ ಕಾಣುತ್ತಾರೆ. ಅವರು ತಮ್ಮ ನೋಟವನ್ನು (look) ನಿಭಾಯಿಸಿರುವ ರೀತಿ ನನಗೆ ತುಂಬಾ ಇಷ್ಟವಾಯಿತು. ಸಾಯಿ ಪಲ್ಲವಿ ಕೂಡ ತುಂಬಾ ಚೆನ್ನಾಗಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯವಿರುತ್ತದೆ. ಆದರೆ ನಮಿತ್ ಮಲ್ಹೋತ್ರಾ, ನಿತೇಶ್ ತಿವಾರಿ ಮತ್ತು ತಂಡವು ಪಾತ್ರಗಳ ನೋಟ ಮತ್ತು ಸ್ವರೂಪದ ಬಗ್ಗೆ ಸಾಕಷ್ಟು ಶೋಧಿಸಿ, ಸುದೀರ್ಘ ಚರ್ಚೆಯ ನಂತರವೇ ಪಾತ್ರವರ್ಗವನ್ನು ಅಂತಿಮಗೊಳಿಸಿದೆ ಎಂದು ಅವರು 'ವೆರೈಟಿ ಇಂಡಿಯಾ'ಗೆ ತಿಳಿಸಿದ್ದಾರೆ.
ಚಿತ್ರದ VFX ಬಗ್ಗೆಯೂ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಟೀಕೆಗಳಿಗೆ ಚೇತನ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. "ಅವರು ಭ್ರಮೆಯ ಲೋಕದಲ್ಲಿದ್ದಾರೆ (dreamland). ನೀವು ದೊಡ್ಡ ಪರದೆಯ ಮೇಲೆ 'ರಾಮಾಯಣ'ವನ್ನು ನೋಡಿದಾಗ, ಅದರ ವ್ಯಾಪ್ತಿ ಅಥವಾ ಭವ್ಯತೆ ನಿಮಗೆ ಅರ್ಥವಾಗುತ್ತದೆ. ಅದು ಊಹಿಸಲಸಾಧ್ಯವಾದದ್ದು. ಟೀಕಿಸುವವರಿಗೆಲ್ಲ ಅದರ ನಿಜವಾದ ವ್ಯಾಪ್ತಿಯ ಅರಿವು ಇರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
"ಕೀಬೋರ್ಡ್ ವಿಎಫ್‌ಎಕ್ಸ್ (VFX) ಸೂಪರ್‌ಸ್ಟಾರ್‌ಗಳು"
ಟೀಕಾಕಾರರನ್ನು "ಕೀಬೋರ್ಡ್ ವಿಎಫ್‌ಎಕ್ಸ್ (VFX) ಸೂಪರ್‌ಸ್ಟಾರ್‌ಗಳು" ಎಂದು ಕರೆದಿದ್ದು, ಸಿನಿಮಾ ನೋಡದೆ ಟೀಕೆ ಹೇಗೆ? ಮಾಡ್ತೀರಾ, ಸ್ವಲ್ಪ ಕಾಯಿರಿ ಎಂದಿದ್ದಾರೆ. ಎಲ್ಲರೊಂದಿಗೆ ಕೆಲಸ ಮಾಡುವಾಗ ಯಶ್ ತೋರಿದ ಸೌಮ್ಯತೆ ಮತ್ತು ವಿನಯವನ್ನೂ ಅವರು ಶ್ಲಾಘಿಸಿದರು. ಮನರಂಜನಾ ಕ್ಷೇತ್ರದಲ್ಲಿ 47 ವರ್ಷಗಳನ್ನು ಕಳೆದಿದ್ದರೂ, 'ರಾಮಾಯಣ' ಚಿತ್ರಕ್ಕಾಗಿ ಕೆಲಸ ಮಾಡಿದ 20 ದಿನಗಳು ತಮ್ಮ ವೃತ್ತಿಜೀವನದ ಅತ್ಯುತ್ತಮ ದಿನಗಳಾಗಿದ್ದವು ಎಂದು ನಟ ಹೇಳಿದರು.
ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರದಲ್ಲಿ ಸನ್ನಿ ಡಿಯೋಲ್, ರವಿ ದುಬೆ, ಅರುಣ್ ಗೋವಿಲ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್ ಮತ್ತು ವಿವೇಕ್ ಒಬೆರಾಯ್ ಕೂಡ ನಟಿಸಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು 2026ರ ದೀಪಾವಳಿಯಂದು ಮತ್ತು ಎರಡನೇ ಭಾಗವು 2027ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.