

ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-Ups) ಸಿನಿಮಾ ಆಗಸ್ಟ್ 26 ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿರುವಂತೆಯೇ ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಇತ್ತೀಚಿಗೆ ತಮ್ಮ ಮಗಳು, ನಟಿ ರಿಷಿಕಾ ಸಿಂಗ್ ನೀಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾದ ಟ್ರೈಲರ್ ಮತ್ತು ಹಾಡುಗಳಲ್ಲಿನ ದೃಶ್ಯಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಚಿತ್ರಿಸಿರುವ ರೀತಿಯ ಬಗ್ಗೆ ರಿಷಿಕಾ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿದ್ದವು.
ಇದೀಗ ಮಗಳ ಹೇಳಿಕೆಗಳ ಕುರಿತು ಮಾತನಾಡಿದ ರಾಜೇಂದ್ರ ಸಿಂಗ್ ಬಾಬು, ಅವು ಆಕೆಯ ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸುವುದಾಗಿ ತಿಳಿಸಿದ್ದಾರೆ ಜೊತೆಗೆ ಯಶ್ ಮತ್ತು 'ಟಾಕ್ಸಿಕ್' ಚಿತ್ರದ ಬಗ್ಗೆ ಅತ್ಯಂತ ಸಕಾರಾತ್ಮಕ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ರಿಷಿಕಾ ಅವರ ಟೀಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹಿರಿಯ ನಿರ್ದೇಶಕ "ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಮೊದಲೇ ಹೇಳಿದಂತೆ, ಯಶ್ ಮಾಡುತ್ತಿರುವ ಸಿನಿಮಾಗಳ ಬಗ್ಗೆ ನಾವೆಲ್ಲರೂ ಹೆಮ್ಮೆಪಡಬೇಕು ಎಂದು ಹೇಳಿದರು. ಅವರು 'ಟಾಕ್ಸಿಕ್' ಚಿತ್ರದ ಬೃಹತ್ ವ್ಯಾಪ್ತಿ ಮತ್ತು ಕನ್ನಡ ಚಿತ್ರರಂಗಕ್ಕೆ ಅದು ತಂದುಕೊಡಲಿರುವ ಮಹತ್ವದ ಬಗ್ಗೆಯೂ ಪ್ರಸ್ತಾಪಿಸಿದರು. ಯಶ್ ಇಂತಹ ಬೃಹತ್ ಮಟ್ಟದ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಮತ್ತು ರಾವಣನಂತಹ ಪಾತ್ರವನ್ನು ನಿರ್ವಹಿಸುತ್ತಿರುವುದು, ಕನ್ನಡ ಚಿತ್ರರಂಗದ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
"ಇಡೀ ದೇಶವೇ 'ಟಾಕ್ಸಿಕ್' ಚಿತ್ರಕ್ಕಾಗಿ ಕಾಯುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇರಬೇಕು," ಎಂದು ಹೇಳಿದ ಅವರು, ಯಶ್ ಅವರನ್ನು "ನಮ್ಮ ಚಿತ್ರರಂಗದ ಕೊಹಿನೂರ್ ವಜ್ರ" ಎಂದು ಬಣ್ಣಿಸಿದರು. ಕನ್ನಡ ಚಿತ್ರರಂಗವನ್ನು ವಿಶಾಲ ಪ್ರೇಕ್ಷಕವರ್ಗದತ್ತ ಕೊಂಡೊಯ್ದ ಕೀರ್ತಿ ಯಶ್ ಅವರಿಗೆ ಸಲ್ಲುತ್ತದೆ ಎಂದ ಅವರು, ನಟನ ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ತಮಗೆ ಹೆಮ್ಮೆಯಿದೆ ಎಂದು ತಿಳಿಸಿದರು.
ಆದರೆ, ನಟಿ ರಿಷಿಕಾ ಸಿಂಗ್ ಇದಕ್ಕೆ ತೀರಾ ಭಿನ್ನವಾದ ನಿಲುವನ್ನು ತಳೆದಿದ್ದರು. ಸಾಮಾಜಿಕ ಜಾಲತಾಣದ ವಿಡಿಯೋವೊಂದರಲ್ಲಿ, ಅವರು 'ಟಾಕ್ಸಿಕ್' (Toxic) ಚಿತ್ರದಲ್ಲಿ ಮಹಿಳೆಯರನ್ನು ಚಿತ್ರಿಸಿರುವ ರೀತಿಯನ್ನು ಪ್ರಶ್ನಿಸಿದ್ದರು. ಅಲ್ಲದೆ, ಪತಿ ಮತ್ತು ತಂದೆಯಾಗಿರುವ ಯಶ್ ಅವರು ಮಹಿಳೆಯರಿಗೆ ಅಗೌರವ ತೋರುವಂತಹ ದೃಶ್ಯಗಳಿಗೆ ಹೇಗೆ ಒಪ್ಪಿಗೆ ನೀಡಿದರು ಎಂದೂ ಕೇಳಿದ್ದರು. ತೆರೆಯ ಮೇಲೆ ಮಹಿಳೆಯರಿಗೆ ಸೂಕ್ತ ಗೌರವ ನೀಡದಿದ್ದರೆ ನಿರ್ದೇಶಕರು ಸಾರ್ವಜನಿಕ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದರು.
ಆಗಸ್ಟ್ 26 ರಂದು 'ಟಾಕ್ಸಿಕ್' ಚಿತ್ರವು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಆಗಸ್ಟ್ 21 ರಿಂದ ಮುಂಗಡ ಬುಕಿಂಗ್ (advance bookings) ಆರಂಭವಾಗಿದೆ. ಹೀಗಾಗಿ, ಈಗ ಎಲ್ಲರ ಗಮನವು ಚಿತ್ರದತ್ತ ಹಾಗೂ ಚಿತ್ರಮಂದಿರಗಳಲ್ಲಿ ಅದಕ್ಕೆ ಸಿಗುವ ಪ್ರತಿಕ್ರಿಯೆಯತ್ತ ನೆಟ್ಟಿದೆ.