

ಚೆನ್ನೈ: ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ಚಿತ್ರ ಬಿಡುಗಡೆ ಮುಂದೂಡಿಕೆಯಾಗಿದ್ದು, ಸೆನ್ಸಾರ್ ಕುರಿತ ಅಂಶಗಳು ಚಿತ್ರ ಬಿಡುಗಡೆಗೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ.
'ಜನನಾಯಗನ್' ಚಿತ್ರ ಇದೇ ಜನವರಿ 9ರಂದು ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಬೇಕಿತ್ತು. ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ಆದರೆ, ಕಳೆದ ಕೆಲವು ದಿನಗಳಿಂದ ಸೆನ್ಸಾರ್ ಮಂಡಳಿ ಹಾಗೂ ಈ ಸಿನಿಮಾದ ನಡುವಿನ ಗೊಂದಲ ಮುಂದುವರೆದಿದ್ದು, ಅಂದುಕೊಂಡ ದಿನವೇ ರಿಲೀಸ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ.
ಸೆನ್ಸಾರ್ ಸಂಕಷ್ಟ
'ಜನನಾಯಗನ್' ತಂಡ ಮೊದಲ ಬಾರಿ ಸೆನ್ಸಾರ್‌ಗೆ ಸಿನಿಮಾವನ್ನು ತೋರಿಸಿದ ಬಳಿಕ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಲಾಗಿತ್ತು. ಸೆನ್ಸಾರ್ ಮಂಡಳಿ ಸೂಚನೆ ಮೇರೆಗೆ ಬದಲಾವಣೆಗಳನ್ನು ಮಾಡಿ ಮರು ವೀಕ್ಷಣೆಗೆ ನೀಡಲಾಗಿತ್ತು. ಆದಾಗ್ಯೂ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡಿಲ್ಲ.
ಸೆನ್ಸಾರ್ ಮಂಡಳಿ ಹಾಗೂ 'ಜನ ನಾಯಗನ್' ತಂಡದ ನಡುವೆ ಗೊಂದಲಗಳು ಶುರುವಾಗಿತ್ತು. ಈ ಸಂಬಂಧ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಚೆನ್ನೈ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ತೀರ್ಪನ್ನು ಜನವರಿ 9ರಂದು ಮುಂದೂಡಲಾಗಿದೆ.
ಜನ ನಾಯಗನ್' ಸಿನಿಮಾದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ವಿಜಯ್ ನಟನೆಯ ಈ ರಿಮೇಕ್ ಸಿನಿಮಾದಲ್ಲಿ ಸೇನೆಯ ಚಿಹ್ನೆಗಳನ್ನು ಯಾವುದೇ ಅನುಮತಿ ಇಲ್ಲದೆ ಬಳಸಿರೋದಕ್ಕೆ ಸೆನ್ಸಾರ್ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ.
Advertisement