ಚೆಲುವಿನ ಚಿತ್ತಾರ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗೋಲ್ಡನ್ ಕ್ವೀನ್ ಅಮೂಲ್ಯ ಮದುವೆ ನಂತರ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಎರಡನೇ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದು, ಪೀಕಬೂ ಚಿತ್ರದ ಮೂಲಕ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡವು ಅಮೂಲ್ಯ ಅವರಿಗೆ ಜೋಡಿಯಾಗಿ ಶ್ರೀರಾಮ್‌ನನ್ನು ಅಧಿಕೃತವಾಗಿ ಘೋಷಿಸಿದೆ. ಶ್ರಾವಣಿ ಸುಬ್ರಹ್ಮಣ್ಯ ಚಿತ್ರ ನಿರ್ದೇಶಿಸಿದ್ದ ಮಂಜು ಸ್ವರಾಜ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮತ್ತೊಮ್ಮೆ ಅಮೂಲ್ಯ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದೀಗ ಚಿತ್ರದ ಬಗ್ಗೆ ವ್ಯಾಪಕ ನಿರೀಕ್ಷೆಗಳು ಗರಿಗೆದರಿವೆ.
ಸಂಕ್ರಾಂತಿ ವಿಶೇಷ ಸುಗ್ಗಿ ಸಂಭ್ರಮದಲ್ಲಿ ಚಿತ್ರತಂಡ ನಾಯಕನನ್ನು ಪರಿಚಯಿಸುವ ವಿಶೇಷ ಟೀಸರ್ ಬಿಡುಗಡೆ ಮಾಡಿದೆ. ಅಮೂಲ್ಯ ಅವರ ದೃಷ್ಟಿಕೋನದಲ್ಲಿಯೇ ಚಿತ್ರದಲ್ಲಿ ಶ್ರೀರಾಮ್ ನಾಯಕನಾಗಿ ನಟಿಸಲಿದ್ದಾರೆ ಎಂಬುದನ್ನು ವಿಭಿನ್ನವಾಗಿ ತೋರಿಸಲಾಗಿದೆ.
ಶ್ರೀಮಾದೇವ್ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಶ್ರೀರಾಮ್, ಚಿತ್ರರಂಗಕ್ಕೆ ಹೊಸಬರೇನಲ್ಲ. ಇರುವದೆಲ್ಲವ ಬಿಟ್ಟು, ಗಜಾನನ, ಗ್ಯಾಂಗ್ ಮತ್ತು ಹೊಂದಿಸಿ ಬರೆಯಿರಿ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪೀಕಬೂ ಚಿತ್ರದ ಮೂಲಕ ಅವರು ತಮ್ಮ ಹೆಸರನ್ನು ಶ್ರೀರಾಮ್ ಎಂದು ಬದಲಿಸಿಕೊಂಡಿದ್ದಾರೆ.
ಅಮೂಲ್ಯ ಪೀಕಬೂ ಚಿತ್ರದ ಮೂಲಕ ವಿರಾಮದ ನಂತರ ದೊಡ್ಡ ಪರದೆಗೆ ಮರಳುತ್ತಿದ್ದಾರೆ. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಮದುವೆಯ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದ ಅವರು, ಇದೀಗ ಮತ್ತೆ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಅಮೂಲ್ಯ ಅವರ ಹುಟ್ಟುಹಬ್ಬದಂದು ಈ ಚಿತ್ರವನ್ನು ಘೋಷಿಸಲಾಯಿತು.
ಪೀಕಬೂ ಚಿತ್ರವನ್ನು ಗಣೇಶ್ ಕೆಂಚಂಬ ಅವರು ಶ್ರೀ ಕೆಂಚಂಬ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಛಾಯಾಗ್ರಾಹಕರಾಗಿ ಸುರೇಶ್ ಬಾಬು, ಸಂಗೀತ ಸಂಯೋಜಕರಾಗಿ ವೀರ್ ಸಮರ್ಥ್ ಮತ್ತು ಶ್ರೀಧರ್ ಕಶ್ಯಪ್ ಮತ್ತು ಸಂಕಲನಕಾರರಾಗಿ ಎನ್.ಎಂ. ವಿಶ್ವಾಸ್ ಇದ್ದಾರೆ. ಶೇ 60 ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ತಂಡವು ಚಿತ್ರೀಕರಣದ ಜೊತೆಗೆ ಈ ಯೋಜನೆಯ ಪ್ರಚಾರವನ್ನು ಪ್ರಾರಂಭಿಸಿದೆ.
Advertisement