ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ತಮ್ಮ ಮುಂಬರುವ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ನಲ್ಲಿ ಬ್ಯುಸಿಯಾಗಿರುವ ನಟ ಯಶ್, ಮುಂಬರುವ 'ಅಮೃತ ಅಂಜನ್' ಚಿತ್ರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ಇನ್‌ಸ್ಟಾಗ್ರಾಂನಲ್ಲಿ ತಂಡಕ್ಕೆ ಶುಭ ಕೋರಿದ್ದಾರೆ.
ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಅಮೃತಾಂಜನ್ ಕಿರುಚಿತ್ರ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿ ವೈರಲ್ ಆದ ನಂತರ ಯುವ ತಂಡವು 'ಅಮೃತ ಅಂಜನ್' ಮೂಲಕ ಬೆಳ್ಳಿ ಪರದೆಯತ್ತ ಮುಖಮಾಡಿದೆ. 'ತಾನು ಯಾವಾಗಲೂ ತಂಡದ ಕೆಲಸವನ್ನು ಮೆಚ್ಚಿದ್ದೇನೆ. ಕಿರುಚಿತ್ರದಿಂದ ಪೂರ್ಣ ಪ್ರಮಾಣದ ಚಿತ್ರಕ್ಕೆ ಹೇಗೆ ಬದಲಾದರು ಎಂಬುದನ್ನು ಗಮನಿಸಿದ್ದೇನೆ. ಈ ಪ್ರಯಾಣವು ಮಹತ್ವಾಕಾಂಕ್ಷಿ ಕಥೆಗಾರರು ಮತ್ತು ಕಂಟೆಂಟ್ ಕ್ರಿಯೇಟರ್ಸ್‌ಗೆ ಸ್ಪೂರ್ತಿದಾಯಕವಾಗಿದೆ. ಸಿನಿ ಉದ್ಯಮದಲ್ಲಿ ತಂಡಕ್ಕೆ ಯಶಸ್ಸು ಲಭಿಸಲಿ' ಎಂದು ಹಾರೈಸಿದ್ದಾರೆ.
ಜ್ಯೋತಿ ರಾವ್ ಮೋಹಿತ್ (ಜೆಆರ್‌ಎಂ) ನಿರ್ದೇಶನದ ಅಮೃತ ಅಂಜನ್, ಪೂರ್ಣ ಪ್ರಮಾಣದ ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಶೇ 80ರಷ್ಟು ಹಾಸ್ಯ ಮತ್ತು ಶೇ 20ರಷ್ಟು ಭಾವನೆಗಳ ಮಿಶ್ರಣವಾಗಿದೆ. ಈ ಚಿತ್ರವು ಪ್ರೀತಿ, ಸ್ನೇಹ ಮತ್ತು ಸಂಬಂಧಗಳನ್ನು ಅನ್ವೇಷಿಸುತ್ತದೆ. ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ಹಾಡುಗಳು ಮತ್ತು ಆ್ಯಕ್ಷನ್ ಸನ್ನಿವೇಶಗಳೊಂದಿಗೆ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಚಿತ್ರದ ತಾರಾಗಣದಲ್ಲಿ ಸುಧಾಕರ್ ಗೌಡ ಆರ್, ಗೌರವ್ ಶೆಟ್ಟಿ, ಕಾರ್ತಿಕ್ ರೂವಾರಿ, ಪಾಯಲ್ ಚೆಂಗಪ್ಪ, ಶ್ರೀ ಭವ್ಯ, ಪಲ್ಲವಿ ಪರ್ವ, ನವೀನ್ ಡಿ ಪಡೀಲ್, ಮಧುಮತಿ, ಚೇತನ್ ದುರ್ಗ ಮತ್ತು ಮೂಲ ಅಮೃತಾಂಜನ್ ಕಿರುಚಿತ್ರದಲ್ಲಿದ್ದ ಉಳಿದವರು ಇದ್ದಾರೆ. ಸುಮಂತ್ ಆಚಾರ್ಯ ಅವರ ಛಾಯಾಗ್ರಹಣ, ಕಿರಣ್ ಕುಮಾರ್ ಅವರ ಸಂಕಲನ ಮತ್ತು ರೋಹಿತ್ ಸೋವರ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
Advertisement