

ಬೆಂಗಳೂರು: ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದ ‘ರಾಮಾಯಣ’ ಟ್ರೇಲರ್ ಜಾಗತಿಕವಾಗಿ ಅನಾವರಣಗೊಂಡ ಬೆನ್ನಲ್ಲೇ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರತಂಡವನ್ನು ಕೊಂಡಾಡಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಲಾವಿದರು ಹಾಗೂ ತಾಂತ್ರಿಕ ತಂಡವನ್ನು ಶ್ಲಾಘಿಸಿದ್ದಾರೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಮ್ಮ ಪುರಾಣಗಳ ಕಥೆಗಳು ಮತ್ತು ಪಾತ್ರಗಳನ್ನು ದೃಶ್ಯರೂಪದಲ್ಲಿ ತೆರೆಗೆ ತಂದು ಜನರನ್ನು ಮೆಚ್ಚಿಸುವುದು ಅಷ್ಟು ಸುಲಭದ ಕೆಲಸವಲ್ಲ.
ಆದರೆ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಪ್ರೇಕ್ಷಕರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ ಎಂದು ರಿಷಬ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಪೌರಾಣಿಕ ಕಥೆಗಳು ಮತ್ತು ಪಾತ್ರಗಳ ಮೂಲಕ ಜನರನ್ನು ಮೆಚ್ಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಾವೆಲ್ಲರೂ ಈ ಮಹಾಕಾವ್ಯಗಳನ್ನು ಕೇಳುತ್ತಲೇ ಬೆಳೆದಿದ್ದು, ನಮ್ಮದೇ ಆದ ಕಲ್ಪನೆಗಳನ್ನು ಹೊಂದಿರುತ್ತೇವೆ. ಆದರೆ ಇಂತಹ ಅದ್ಭುತ ಮತ್ತು ಅದ್ವಿತೀಯ ಜಗತ್ತನ್ನು ಸೃಷ್ಟಿಸಿದ ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ನನ್ನ ಸಲಾಂ ಎಂದಿದ್ದಾರೆ.
ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವಾಗ ನಟರ ಮೇಲಿರುವ ಜವಾಬ್ದಾರಿ ಮತ್ತು ಒತ್ತಡ ಎಂಥದ್ದು ಎಂಬುದು ನನಗೂ ಗೊತ್ತು. ಈ ಚಿತ್ರದ ಪ್ರತಿಯೊಬ್ಬ ನಟ-ನಟಿಯರೂ ಆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಅದ್ಭುತವಾಗಿ ಅಭಿನಯಿಸಿದ್ದಾರೆ.
ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಝಿಮ್ಮರ್ ಅವರ ಹಿನ್ನೆಲೆ ಸಂಗೀತ ಪ್ರತಿಯೊಂದು ಭಾವುಕ ಕ್ಷಣವನ್ನು ಅತ್ಯಂತ ಸುಂದರವಾಗಿ ತಲುಪಿಸಿದೆ. ರಣಬೀರ್ ಕಪೂರ್ ಬ್ರದರ್, ಶ್ರೀರಾಮನ ದಿವ್ಯತೆ ಮತ್ತು ತೇಜಸ್ಸನ್ನು ನೀವು ತೆರೆಯ ಮೇಲೆ ಜೀವಿಸುವಂತೆ ಮಾಡಿದ್ದೀರಿ ಎಂದು ಹೊಗಳಿದ್ದಾರೆ.
ಯಶ್ ಸರ್, ನಿಮ್ಮ ಪ್ರತಿಯೊಂದು ಫ್ರೇಮ್ ನೋಡಿದಾಗಲೂ ನನ್ನ ಕಣ್ಣುಗಳು ಅಗಲವಾಗುತ್ತಿದ್ದವು. ಆ ಪಾತ್ರಕ್ಕೆ ನಿಮ್ಮಷ್ಟು ಅದ್ಭುತವಾಗಿ ಬಹುಶಃ ಬೇರೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿರಲಿಲ್ಲವೇನೋ. ನಿಮ್ಮ ನಟನೆಯ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಸಾಲುತ್ತಿಲ್ಲ. ಆದರೆ ಒಂದಂತೂ ಸತ್ಯ, ಕನ್ನಡಿಗನಾಗಿ ನೀವು ಸದಾ ನಮಗೆ ಹೆಮ್ಮೆ ತಂದಿದ್ದೀರಿ ಎಂದು ಬರೆದುಕೊಂಡಿದ್ದಾರೆ.