ನಿವೇದಿತಾ ಜೊತೆ ನವಿಲು ಗರಿ ಡ್ಯಾನ್ಸ್ ವಿವಾದ: Video ಡಿಲೀಟ್ ಮಾಡಿ, ಕ್ಷಮೆ ಕೇಳಿದ ಕಿಶನ್ ಬಿಳಗಲಿ-ನಿವೇದಿತಾ!

ಒಂದು ಡ್ಯಾನ್ಸ್ ವಿಡಿಯೋ ಹಿಂದೆ ದೊಡ್ಡ ತಂಡ ಕೆಲಸ ಮಾಡುತ್ತದೆ. ಅದೇ ರೀತಿ ಈ ರೀಲ್ಸ್‌ಗಾಗಿ ನವಿಲು ಗರಿಗಳನ್ನು ಬಾಡಿಗೆಗೆ ತಂದಿದ್ದೇವೆ. ಆದರೆ, ಬಾಡಿಗೆಗೆ ತಂದು ಬಳಕೆ ಮಾಡುವುದೂ ತಪ್ಪೇ ಎಂಬುದು ಈಗ ತಿಳಿಯಿತು.
kishen and nivedita gowda
ಕಿಶನ್, ನಿವೇದಿತಾ ಗೌಡ
Updated on

ಬೆಂಗಳೂರು: ನವಿಲು ಗರಿ ಮಾದರಿಯ ಉಡುಪು ಧರಿಸಿ ರೀಲ್ಸ್ ಮಾಡಿದ್ದ ಹಿನ್ನೆಲೆಯಲ್ಲಿ ನಟ ಹಾಗೂ ಡ್ಯಾನ್ಸರ್ ಕಿಶನ್ ಬಿಳಗಲಿ ಮತ್ತು ನಟಿ ನಿವೇದಿತಾ ಗೌಡ ವಿರುದ್ಧ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಕಿಶನ್ ಹಾಗೂ ನಿವೇದಿತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿವಾದದ ಬಳಿಕ ಪ್ರತಿಕ್ರಿಯಿಸಿರುವ ಕಿಶನ್ ಬಿಳಗಲಿ ಅವರು, “ನವಿಲು ಗರಿಯನ್ನು ಬಾಡಿಗೆಗೆ ತಂದು ಬಳಕೆ ಮಾಡುವುದು ಕೂಡ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ತಪ್ಪು ಎಂಬುದು ನಮಗೆ ಗೊತ್ತಿರಲಿಲ್ಲ. ಈಗ ಅದು ಅರ್ಥವಾಗಿದೆ. ನಾನು ಮಾಡಿರುವುದು ತಪ್ಪು. ಯಾರಿಗಾದರೂ ಇದರಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇನೆ” ಎಂದು ಹೇಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲೂ ಕಿಶನ್ ಇದೇ ವಿಷಯವನ್ನು ಉಲ್ಲೇಖಿಸಿದ್ದಾರೆ. ಒಂದು ಡ್ಯಾನ್ಸ್ ವಿಡಿಯೋ ಹಿಂದೆ ದೊಡ್ಡ ತಂಡ ಕೆಲಸ ಮಾಡುತ್ತದೆ. ಅದೇ ರೀತಿ ಈ ರೀಲ್ಸ್‌ಗಾಗಿ ನವಿಲು ಗರಿಗಳನ್ನು ಬಾಡಿಗೆಗೆ ತಂದಿದ್ದೇವೆ. ಆದರೆ, ಬಾಡಿಗೆಗೆ ತಂದು ಬಳಕೆ ಮಾಡುವುದೂ ತಪ್ಪೇ ಎಂಬುದು ಈಗ ತಿಳಿಯಿತು. ಜೊತೆಗೆ, ವಿವಾದಕ್ಕೆ ಕಾರಣವಾದ ‘ಪಿಕಾಕ್ ಡ್ಯಾನ್ಸ್’ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ತೆಗೆದುಹಾಕಿರುವುದಾಗಿ ತಿಳಿಸಿದ್ದಾರೆ.

“ಚಿಕ್ಕ ವಯಸ್ಸಿನಿಂದಲೇ ಫ್ಯಾನ್ಸಿ ಡ್ಯಾನ್ಸ್‌ಗಳಲ್ಲಿ, ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ, ಕೆಲವು ಧಾರ್ಮಿಕ ಆಚರಣೆಗಳಲ್ಲೂ ನವಿಲು ಗರಿಯ ಬಳಕೆಯನ್ನು ನೋಡಿದ್ದೇನೆ. ಅದೇ ಕಲ್ಪನೆಯಿಂದ ಈ ಕಾನ್ಸೆಪ್ಟ್ ಮಾಡಿದ್ದೆ. ಆದರೆ, ಕಾನೂನುಬದ್ಧ ಅಂಶಗಳನ್ನು ಗಮನಿಸದೇ ಹೋಗಿದ್ದು ನನ್ನ ತಪ್ಪು” ಎಂದು ಹೇಳಿದ್ದಾರೆ.

kishen and nivedita gowda
'ರೀಲ್ಸ್‌ನಲ್ಲಿ ಗರಿಬಿಚ್ಚಿದ ನವಿಲುಗಳು': BiggBoss ಮಾಜಿ ಸ್ಪರ್ಧಿಗಳಿಗೆ ಸಂಕಷ್ಟ; ಕಿಶನ್, ನಿವೇದಿತಾ ಗೌಡ ವಿರುದ್ಧ ದೂರು!

ಇದೇ ವೇಳೆ ನಿವೇದಿತಾ ಗೌಡ ಕೂಡ, ತಿಳಿಯದೇ ಆದದ್ದು ಹೇಳಿದ್ದು, ತಮ್ಮಿಂದಾಗಿರುವ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ದೂರು ನೀಡಿದ್ದರು.

ಕಿಶನ್ ಮತ್ತು ನಿವೇದಿತಾ ಗೌಡ ನವಿಲು ಗರಿಗಳಂತಿರುವ ಉಡುಪು ಧರಿಸಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನವಿಲು ರಾಷ್ಟ್ರೀಯ ಪಕ್ಷಿಯಾಗಿದ್ದು, ಸಂರಕ್ಷಿತ ಪ್ರಭೇದವಾದ ಕಾರಣ, ಬಳಸಿರುವ ಗರಿಗಳು ನೈಜವಾಗಿವೆಯೇ? ಅವುಗಳ ಮೂಲವೇನು? ಕಾನೂನುಬದ್ಧವಾಗಿ ಪಡೆಯಲಾಗಿದೆಯೇ? ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದರು.

ದೂರಿನ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com