

ರಶ್ಮಿಕಾ ಮಂದಣ್ಣ ಅವರು ಅನೇಕ ವಿಷಯಗಳಿಗೆ ಟ್ರೋಲ್ ಆದ ಉದಾಹರಣೆ ಇದೆ. ಈಗ ಅವರು ಟ್ರೋಲ್ ಮಾಡುವ ಎಲ್ಲರಿಗೂ ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ.
ತೆಲಂಗಾಣ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವಾರ್ಡ್ ಸ್ವೀಕರಿಸಿದರು. ಅಂದರೆ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದ್ದು, ಅದನ್ನು ಸಿಎಂ ಕೈಯಿಂದ ಪಡೆದರು. ಈ ಸಂದರ್ಭದಲ್ಲಿ ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಅವರೊಟ್ಟಿಗೆ ಬಲು ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಇದು ಅವರಿಗೆ ಮೊದಲ ಹಬ್ಬ. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಮತ್ತು ರಾಮ್ ಚರಣ್ ಅವರು ಜಂಟಿಯಾಗಿ ರಶ್ಮಿಕಾ ಅವರಿಗೆ ಗದರ್ ಅವಾರ್ಡ್ ಅನ್ನು ನೀಡಿದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಖುದ್ದು ಸಿಎಂ ರೇವಂತ್ ರೆಡ್ಡಿ ಅವರು ರಶ್ಮಿಕಾರನ್ನು ತಮ್ಮ ಊರಿನ ಸೊಸೆ ಎಂದರು. ಇದು ರಶ್ಮಿಕಾಗೆ ಸಖತ್ ಖುಷಿ ಕೊಟ್ಟಿತು.
ಬಳಿಕ ಮಾತನಾಡಿದ ರಶ್ಮಿಕಾ ಮಂದಣ್ಣ, ಒಂದು ಸಮಯದಲ್ಲಿ ನನ್ನ ನಟನೆಯನ್ನು ಟ್ರೋಲ್ ಮಾಡಿದ್ದರು ಆದರೆ ಈಗ ಸರ್ಕಾರವೊಂದು ನನ್ನ ನಟನೆ ಮೆಚ್ಚಿ ಪ್ರಶಸ್ತಿ ನೀಡಿದೆ ಎಂದರು.
'ಗರ್ಲ್ಫ್ರೆಂಡ್' ಸಿನಿಮಾಕ್ಕೆ ಈ ಪ್ರಶಸ್ತಿ ಸಿಕ್ಕಿರುವುದು ಹೆಚ್ಚು ಖುಷಿ ಕೊಟ್ಟಿದೆ. ಗರ್ಲ್ಫ್ರೆಂಡ್ ಸಿನಿಮಾ ನನ್ನ ಪಾಲಿಗೆ ಬಹಳ ವಿಶೇಷ ಸಿನಿಮಾ. ಈ ಸಿನಿಮಾಕ್ಕೆ ಪ್ರಶಸ್ತಿ ನೀಡಿರುವುದು ಇಂಥಹಾ ಇನ್ನೂ ಹಲವು ಸಿನಿಮಾಗಳನ್ನು ಮಾಡಲು, ಪ್ರಯೋಗಗಳನ್ನು ಮಾಡಲು ಸ್ಪೂರ್ತಿ ನೀಡಿದೆ.
ದಿಲ್ ರಾಜು ಸೇರಿದಂತೆ ಈ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು. ಗರ್ಲ್ಫ್ರೆಂಡ್' ಸಿನಿಮಾದ ನಿರ್ದೇಶಕ ರಾಹುಲ್ ರವೀಂದ್ರನ್, ಸಹ ನಟ ದೀಕ್ಷಿತ್, ನಿರ್ಮಾಪಕರಾದ ವಿದ್ಯಾ ಮತ್ತು ಧೀರಜ್ ಇನ್ನೂ ಹಲವರಿಗೆ ಧನ್ಯವಾದ ಹೇಳಿದರು ರಶ್ಮಿಕಾ.
ಬಳಿಕ ತುಸು ಭಾವುಕರಾದ ನಟಿ ರಶ್ಮಿಕಾ, ನಾನು ಕೆಲವು ವರ್ಷಗಳ ಹಿಂದೆ ಮಗಳಾಗಿ ಬಂದಿದ್ದೆ, ಈಗ ಸೊಸೆಯಾಗಿ ಎದುರಿಗೆ ನಿಂತಿದ್ದೀನಿ, ಆ ಬಗ್ಗೆ ನನಗೆ ಹೆಮ್ಮೆಯಿದೆ, ನನ್ನನ್ನು ಸ್ವೀಕರಿಸಿದ್ದಕ್ಕೆ ಬಹಳ ಧನ್ಯವಾದಗಳು. ನನಗೆ ಈಗ ಇರುವ ಆಸೆಯೆಂದರೆ ನನ್ನ ಕುಟುಂಬಕ್ಕೆ ಇದೇ ಪ್ರೀತಿ ಕೊಡಿ, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದರು ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರು ಪ್ರಶಸ್ತಿ ಸ್ವೀಕರಿಸುವಾಗ ಅವರ ಅತ್ತೆ ಸಮಾರಂಭದಲ್ಲಿ ಹಾಜರಿದ್ದರು. ಜೋರಾಗಿ ಚಪ್ಪಾಳೆ ತಟ್ಟುತ್ತಾ ಸೊಸೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೆ ನಾನು ಟ್ರೋಲ್‌ಗಳನ್ನು ಎದುರಿಸಿದ್ದೆ. ಆದರೆ ಈಗ ರಾಜ್ಯ ಪ್ರಶಸ್ತಿ ಪಡೆದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದೂ ಗರ್ಲ್ ಫ್ರೆಂಡ್ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಕ್ಕೆ ತುಂಬಾ ಖುಷಿ ಇದೆ ಎಂದು ರಶ್ಮಿಕಾ ಹೇಳಿದರು. ಅವರು ಪಡೆದಿರುವ ಈ ಅವಾರ್ಡ್ ಟ್ರೋಲ್ಗಳಿಗೆ ನೀಡಿದ ಉತ್ತರ ಎಂದು ಪರಿಗಣಿಸಲಾಗಿದೆ.
Advertisement