

ದೀಪಾವಳಿಯನ್ನು ಪಟಾಕಿ ಮುಕ್ತವಾಗಿ ಆಚರಿಸುವಂತೆ ಕೋರಿ ದಿಯಾ ಮಿರ್ಜಾ ನೀಡಿದ್ದ ಸಂದೇಶವಿದ್ದ ವಿಡಿಯೋವನ್ನು ಮುಂಬೈ ಮಹಾನಗರ ಪಾಲಿಕೆ (BMC) ಅಳಿಸಿಹಾಕಿತ್ತು. ಈ ವಿಡಿಯೋವನ್ನು ಮರು-ಅಪ್‌ಲೋಡ್ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಇದರ ಬೆನ್ನಲ್ಲೇ ಹಿರಿಯ ನಟಿ ಸೋನಿ ರಜ್ದಾನ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ, ದೀಪಾವಳಿಯಂದು ಒಂದೇ ಒಂದು ಪಟಾಕಿಯನ್ನು ಸಿಡಿಸುವುದು ಕೂಡ ತಮಗೆ 'ರಾಷ್ಟ್ರವಿರೋಧಿ' ಕೃತ್ಯದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ದೀಪಾವಳಿಯಂದು ಪಟಾಕಿಗಳನ್ನು ಸಿಡಿಸುವುದರಿಂದ ಸಣ್ಣ ಮಕ್ಕಳು ಎದುರಿಸಬೇಕಾದ ಆರೋಗ್ಯ ಸಮಸ್ಯೆಗಳನ್ನು ಸೋನಿ ರಜ್ದಾನ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸಣ್ಣ ಮಕ್ಕಳಿರುವ ಯಾವುದೇ ಪೋಷಕರನ್ನು ಕೇಳಿದರೆ, ವಾಯು ಮಾಲಿನ್ಯದಿಂದ ತಮ್ಮ ಮಕ್ಕಳು ಎಷ್ಟು ಕಷ್ಟಪಡುತ್ತಿದ್ದಾರೆ ಮತ್ತು ಅನಾರೋಗ್ಯದ ಕಾರಣದಿಂದ ಅವರು ಎಷ್ಟು ದಿನಗಳ ಕಾಲ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರು ವಿವರಿಸುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ, ಈ ದೀಪಾವಳಿಯಂದು ಕನಿಷ್ಠ ಒಂದು ಪಟಾಕಿಯನ್ನಾದರೂ ಸಿಡಿಸುವುದು ಸರಿಯೇ ಎಂದು ನೀವು ಕೇಳಿದರೆ, ನನ್ನ ಪ್ರಕಾರ ಇದು ಜೀವವಿರೋಧಿ, ಆರೋಗ್ಯವಿರೋಧಿ ಮತ್ತು ರಾಷ್ಟ್ರವಿರೋಧಿ ಕೃತ್ಯವಾಗಿದೆ ಎಂದು ನಾನು ಹೇಳಬಲ್ಲೆ, ಎಂದು ಸೋನಿ ರಜ್ದಾನ್ ಬರೆದುಕೊಂಡಿದ್ದಾರೆ. ಮಂಗಳವಾರ ತಡರಾತ್ರಿ ಈ ಪೋಸ್ಟ್ ಹಂಚಿಕೊಂಡಿದ್ದ ಸೋನಿ ರಜ್ದಾನ್, ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡುವ ಆಯ್ಕೆ ನಿಷ್ಕ್ರಿಯಗೊಳಿಸಿದ್ದಾರೆ.
'ಆರೋಗ್ಯ' ಎಂಬುದು ನಮಗಾಗಿ ಮತ್ತು ನಮ್ಮ ಮಕ್ಕಳಿಗಾಗಿ ನಾವು ತೆಗೆದುಕೊಳ್ಳುವ ಆಯ್ಕೆಯಾಗಿದೆ. ಹಾಗಾಗಿ, ಸರಿಯಾದ ಆಯ್ಕೆಯನ್ನೇ ಮಾಡೋಣ,"ಎಂದು 'ಶಕ್' ಚಿತ್ರದ ನಟಿ ಸೋನಿ ರಜ್ದಾನ್ ತಿಳಿಸಿದ್ದಾರೆ.
ದಿಯಾ ಮಿರ್ಜಾ ಅವರ ಜಾಗೃತಿ ಮೂಡಿಸುವ ವಿಡಿಯೋವನ್ನು ಮುಂಬೈ ಮಹಾನಗರ ಪಾಲಿಕೆ ತೆಗೆದುಹಾಕಿದ ಕೆಲವೇ ದಿನಗಳಲ್ಲಿ ಸೋನಿ ರಜ್ದಾನ್ ಅವರ ಈ ಸಂದೇಶ ಹೊರಬಿದ್ದಿದೆ. ಭಾರತೀಯ ಜನತಾ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ ನಂತರ, ಮಾಲಿನ್ಯ ಮುಕ್ತ ದೀಪಾವಳಿಯ ಕುರಿತಾದ ದಿಯಾ ಮಿರ್ಜಾ ಅವರ ವಿಡಿಯೋವನ್ನು ಬಿಎಂಸಿ ಅಳಿಸಿಹಾಕಿತ್ತು.