ಸೀತೆ ಪಾತ್ರಕ್ಕಾಗಿ ನಾನು ಆಡಿಷನ್ ನೀಡಿದ್ದೆ, ಆದರೆ ಎಲ್ಲೋ ಒಂದು ಕಡೆ...': ಸಾಯಿ ಪಲ್ಲವಿ ಉತ್ತಮ ಆಯ್ಕೆ ಎಂದ ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ

'ರಾಮಾಯಣ' ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ನಟಿಸಿದ್ದಾರೆ. ಈ ಚಿತ್ರವು ಇಂದು ಬಿಡುಗಡೆಯಾಗಿದೆ.
Srinidhi Shetty - Sai Pallavi
ಶ್ರೀನಿಧಿ ಶೆಟ್ಟಿ - ಸಾಯಿ ಪಲ್ಲವಿ
Updated on: 

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ, ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಕೂಡ ಈ ಪಾತ್ರಕ್ಕಾಗಿ ಆಡಿಷನ್ ನೀಡಿದ್ದಾಗಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ತುಣುಕೊಂದು ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದೆ.

ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಅವರನ್ನು ರಾಮಾಯಣ ಚಿತ್ರಕ್ಕೆ ನಿತೇಶ್ ತಿವಾರಿ ಪಾತ್ರವರ್ಗವನ್ನು ಆಯ್ಕೆ ಮಾಡುತ್ತಿದ್ದಾಗ, ಜನರು ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ, ಆಲಿಯಾ ಭಟ್ ಮತ್ತು ನಿಮ್ಮ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು. ಅದು ನಿಜವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶ್ರೀನಿಧಿ ಶೆಟ್ಟಿ, 'ಈಗ ವಿಷಯ ಹೊರಬಿದ್ದಿದೆ. ಅಂದರೆ, ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ, ಹಾಗಾಗಿ ನಾನಿದನ್ನು ಹೇಳಬಹುದು ಎಂದುಕೊಳ್ಳುತ್ತೇನೆ. ಹೌದು, ನಾನು ಅವರನ್ನು ಭೇಟಿಯಾಗಿದ್ದೆ ಮತ್ತು ಸ್ಕ್ರೀನ್ ಟೆಸ್ಟ್ ಕೂಡ ನೀಡಿದ್ದೆ' ಎಂದರು.

ಅದಕ್ಕೆ ಪಾಡ್‌ಕಾಸ್ಟರ್, 'ಹಾಗಾದರೆ, ನಿಮ್ಮ ಮನಸ್ಸಿನಲ್ಲಿ ಎಂದಾದರೂ, 'ಅಯ್ಯೋ, ಈ ಸಿನಿಮಾ ನನ್ನ ಕೈತಪ್ಪಿ ಹೋಯಿತಲ್ಲಾ! ಇದೊಂದು ಐಕಾನಿಕ್ ಪಾತ್ರವಾಗಬಹುದಿತ್ತು, ಅಲ್ಲವೇ?' ಎಂದು ಅನಿಸಿತ್ತೇ?' ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿಧಿ, 'ಸೀತೆ? ಹೌದು... ನನಗೆ ನೆನಪಿದೆ, ನಾನು ಮೂರು ದೃಶ್ಯಗಳಿಗೆ ಚೆನ್ನಾಗಿ ಸಿದ್ಧತೆ ನಡೆಸಿ, ಅವುಗಳನ್ನು ಅಭಿನಯಿಸಿ ತೋರಿಸಿದ್ದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು ಮತ್ತು ನನ್ನ ಆಡಿಷನ್ ಅವರಿಗೆ ತುಂಬಾ ಇಷ್ಟವಾಯಿತು. ಆದರೆ ಎಲ್ಲೋ ಒಂದು ಕಡೆ, ಏನೋ ಒಂದು ರೀತಿಯ ಭಾವನೆ ನನ್ನಲ್ಲಿತ್ತು. ಅದೇ ಸಮಯದಲ್ಲಿ ಯಶ್ ಕೂಡ 'ರಾಮಾಯಣ'ದ ಭಾಗವಾಗಲಿದ್ದಾರೆ ಎಂದು ನಾನು ಕೇಳಿದ್ದೆ. ಆ ವರ್ಷದ ಏಪ್ರಿಲ್‌ನಲ್ಲಿ 'ಕೆಜಿಎಫ್ 2' ಬಿಡುಗಡೆಯಾಗಿತ್ತು ಮತ್ತು ಅದರಲ್ಲಿನ ರಾಕಿ ಹಾಗೂ ರೀನಾ ಜೋಡಿ ಭಾರಿ ಯಶಸ್ಸು ಕಂಡಿತ್ತು. ಜನರು ನಮ್ಮನ್ನು ಒಟ್ಟಿಗೆ ನೋಡುವುದನ್ನು ಇಷ್ಟಪಟ್ಟಿದ್ದರು. ಆ ನಂತರ, ಒಂದೆರಡು ತಿಂಗಳು ಕಳೆಯುವುದರಲ್ಲೇ ಈ ಅವಕಾಶ ಬಂತು. ಒಂದು ವೇಳೆ ಅವರು ರಾವಣನ ಪಾತ್ರದಲ್ಲಿ ಮತ್ತು ನಾನು ಸೀತೆಯ ಪಾತ್ರದಲ್ಲಿ ನಟಿಸಿದರೆ, ನಾವು ಪರಸ್ಪರ ಎದುರಾಳಿಗಳಾಗುತ್ತೇವೆ ಎಂದು ನಾನು ಯೋಚಿಸಿದೆ. ಆಗತಾನೆ ಜನರು ನಮ್ಮನ್ನು ಒಟ್ಟಿಗೆ ನೋಡಿ, ನಮ್ಮ ಜೋಡಿಯನ್ನು ಇಷ್ಟಪಟ್ಟಿದ್ದರು. ಅಂತಹ ಪರಿಸ್ಥಿತಿಯಲ್ಲಿ, ನಾವು ಪರಸ್ಪರ ಎದುರಾಳಿಗಳಾಗಿ ಕಾಣಿಸಿಕೊಳ್ಳುವುದನ್ನು ಪ್ರೇಕ್ಷಕರು ಎಷ್ಟು ಸುಲಭವಾಗಿ ಸ್ವೀಕರಿಸುತ್ತಾರೆ ಎಂಬ ಬಗ್ಗೆ ನನಗೆ ಖಚಿತವಿರಲಿಲ್ಲ' ಎಂದರು.

Srinidhi Shetty - Sai Pallavi
'ಸೀತೆ ಕತ್ತಿ ಹಿಡಿದು ಹೋರಾಡಿದ್ದು ವಾಲ್ಮಿಕಿ ರಾಮಾಯಣದಲ್ಲಿಲ್ಲ': ರಾಮನೊಂದಿಗೆ ಹೋರಾಟದಲ್ಲಿ ಭಾಗಿಯಾದ ದೃಶ್ಯದ ಬಗ್ಗೆ ನೆಟ್ಟಿಗರು ಕಿಡಿ!

'ಹಾಗಾಗಿ, ಇದು ಫಲಪ್ರದವಾಗದಿರಬಹುದು ಎಂದು ನನಗೆ ಎಲ್ಲೋ ಒಂದು ಕಡೆ ಅನ್ನಿಸಿತ್ತು. ಆದರೆ, ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ; ಈ ಚಿತ್ರದಲ್ಲಿ ಅವರು ಸೀತೆಯ ಪಾತ್ರ ನಿರ್ವಹಿಸುವುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ. ನಾನು ಯಾವಾಗಲೂ ಹೇಳುವಂತೆ, ಒಂದು ವಿಷಯ ಯಶಸ್ವಿಯಾದರೆ ಅದು ತುಂಬಾ ಒಳ್ಳೆಯದು. ಒಂದು ವೇಳೆ ಅದು ಯಶಸ್ವಿಯಾಗದಿದ್ದರೂ, ಅದೂ ಕೂಡ ಅದ್ಭುತವೇ; ಏಕೆಂದರೆ ಅದು ಬೇರೆ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ' ಎಂದು ಶ್ರೀನಿಧಿ ಹೇಳಿದರು.

'ರಾಮಾಯಣ' ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ನಟಿಸಿದ್ದಾರೆ. ಈ ಚಿತ್ರವು ಇಂದು ಬಿಡುಗಡೆಯಾಗಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ವು ಎರಡು ಭಾಗಗಳ ಚಲನಚಿತ್ರ ಸರಣಿಯಾಗಿದ್ದು, ಇದರ ಎರಡನೇ ಭಾಗವು 2028ರ ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X