

ದರ್ಶನ್ ಅಭಿನಯದ ಸಾರಥಿ, ಚಕ್ರವರ್ತಿ, ದಿವಂಗತ ಪುನೀತ್ ರಾಜ್ ಕುಮಾರ್ ಅವರ ಪರಮಾತ್ಮ, ಯಶ್ ನಟನೆಯ ಜಾನು ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ, 2017 ರಲ್ಲಿ ಇದ್ದಕ್ಕಿದ್ದಂತೆ ಮಾಯವಾಗಿದ್ದ ಚೆಲುವೆ ದೀಪಾ ಸನ್ನಿಧಿ ದಶಕಗಳ ನಂತರ ಮತ್ತೆ ಪ್ರತ್ಯಕ್ಷರಾಗಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಬಹಳ ದಿನಗಳ ಮೌನದ ನಂತರ ಮತ್ತೆ ಬಂದಿದ್ದೇನೆ. ನನಗೆ ಇಂದಿಗೂ ಸೆಲ್ಫಿ ತೆಗೆದುಕೊಳ್ಳಲು ಮುಜುಗರವಾಗುತ್ತದೆ. ಆದರೆ ನಿಮ್ಮ ಪ್ರೀತಿ ಮತ್ತು ಸಂದೇಶಗಳನ್ನು ನೋಡಿ ಬೇಡ ಎಂದು ಹೇಳಲು ಸಾಧ್ಯವಾಗಲಿಲ್ಲ. ಈ ಫೋಟೋ ನಿಮಗಾಗಿ. ನನ್ನ ಮೇಲೆ ಇಷ್ಟೊಂದು ಅಪಾರವಾದ ಪ್ರೀತಿಯನ್ನು ಇಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾನು ನಿಮಗೆ ಎಂದಿಗೂ ಚಿರಋಣಿ ಎಂದು ಬರೆದುಕೊಂಡಿದ್ದಾರೆ.
ಆದರೆ ಕುಟುಂಬ ಹಾಗೂ ಯಾವುದೇ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿಲ್ಲ. ಹಾಫ್ ಸೀರೆಯ ಫೋಟೋ ಹಂಚಿಕೊಂಡಿದ್ದು, ದಶಕಗಳ ನಂತರ ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅಭಿನಯದ ‘ಸಾರಥಿ’ ಸಿನಿಮಾ ಮೂಲಕ 2011ರಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ಎಂಟ್ರಿ ನೀಡಿದ ನಟಿ ದೀಪಾ ಸನ್ನಿಧಿ, ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ‘ಪರಮಾತ್ಮ’, ಯಶ್ ಜೊತೆಗೆ‘ಜಾನು’, ಗಣೇಶ್ ಅವರೊಂದಿಗೆ‘ಸಕ್ಕರೆ’, ‘ಎಂದೆಂದು ನಿನ್ನಗಾಗಿ’, ‘ಚೌಕ’ ಸಿನಿಮಾಗಳಲ್ಲಿ ನಟಿಸಿದರು. 2017ರಲ್ಲಿ ರಿಲೀಸ್ ಆದ ದರ್ಶನ್ ಸಿನಿಮಾ ‘ಚಕ್ರವರ್ತಿ ಅವರ ಕೊನೆಯ ಸಿನಿಮಾ. ಅಲ್ಲಿಂದ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ.
ಸಾರಥಿಯ 'ಐತಲಕ್ಕಡಿ' ಪರಮಾತ್ಮ ಸಿನಿಮಾದ 'ಪರವಶನಾದೇನು' ಮತ್ತಿತರ ಸೂಪರ್ ಹಿಟ್ ಗೀತೆಗಳು ದೀಪಾ ಸನ್ನಿಧಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದವು. ಇಂದಿಗೂ ಈ ಗೀತೆಗಳನ್ನು ಅಭಿಮಾನಿಗಳು ಗುನುಗುತ್ತಿರುತ್ತಾರೆ.