

'ಆಯುಷ್' ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಹಾಗೂ ಪ್ರಿಯಾಂಕಾ ಉಪೇಂದ್ರ ವಾದ-ವಿವಾದಗಳು ತಣ್ಣಗಾಗಿವೆ. ಈ ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂಬ ಸುದ್ದಿಯನ್ನು ಘೋಷಿಸಲಾಗಿದೆ.
ಆಯುಷ್ ಸಿನಿಮಾಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ವಿವಾದ ಸೃಷ್ಟಿ ಆಗಿತ್ತು. ಪ್ರಿಯಾಂಕಾ ಉಪೇಂದ್ರ ಮತ್ತು ನಿರ್ದೇಶಕ ಪುರುಷೋತ್ತಮ್ ನಡುವೆ ಮನಸ್ತಾಪ ಉಂಟಾಗಿತ್ತು. ಈ ವಿವಾದವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿತ್ತು. ಅಲ್ಲಿಯೇ ರಾಜಿ, ಸಂಧಾನ ಮಾಡಲಾಗಿದೆ
ಫಿಲಂ ಚೇಂಬರ್ ಮಧ್ಯಸ್ಥಿಕೆಯಲ್ಲಿ 'ಆಯುಷ್' ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಹಾಗೂ ಪ್ರಿಯಾಂಕಾ ಉಪೇಂದ್ರ ವಾದ-ವಿವಾದಗಳು ತಣ್ಣಗಾಗಿವೆ. ಈ ಸಮಸ್ಯೆ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂಬ ಸುದ್ದಿಯನ್ನು ಘೋಷಿಸಲಾಗಿದೆ.
ಅವರ ಮಧ್ಯೆ ಎದ್ದಿದ್ದ ಸಮಸ್ಯೆಗಳು, ಮನಸ್ತಾಪಗಳು ಎಲ್ಲದಕ್ಕೂ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಅವರು ಒಮ್ಮತದ ಪರಿಹಾರ ನೀಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಫಿಲಂ ಚೇಂಬರ್ ಅಂಗಸಂಸ್ಥೆಗಳಿಂದ ಸಿಕ್ಕ ಸಹಕಾರ, ಈ ವಿವಾದಕ್ಕೆ ಫುಲ್ಸ್ಟಾಪ್ ಇಡುವಲ್ಲಿ ಮುಖ್ಯಪಾತ್ರ ವಹಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ಮುಂದೆ ಪುರುಷೋತ್ತಮ್ ಕಥೆಗೂ, ಅಭಿಷೇಕ್ ಕಥೆಗೂ ಯಾವುದೇ ಸಂಬಂಧವಿಲ್ಲ. ರೆಮ್ಯುನರೇಷನ್ ವಿಚಾರದಲ್ಲೂ ಕ್ಲಿಯರೆನ್ಸ್ ಸಿಕ್ಕಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಈ ಸಿನಿಮಾಗೆ ಸಂಬಂಧಪಟ್ಟಂತೆ ಅಗ್ರಿಮೆಂಟ್ ಪಾಲನೆಗೆ ಸೂಚನೆ ನೀಡಲಾಗಿದೆ. ಇದಕ್ಕೂ ಮೊದಲು 'ಫಿಲಂ ಚೇಂಬರ್ ಮೂಲಕವೇ ಈ ಸಮಸ್ಯೆ ಬಗೆಹರಿದರೆ ಸೂಕ್ತ' ಎಂದು ಪ್ರಿಯಾಂಕಾ ಹೇಳಿದ್ದು, ಅದೀಗ ಜಾರಿಯಾಗಿದೆ ಎನ್ನಲಾಗಿದೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪುರುಷೋತ್ತಮ್ ಅವರು ಪ್ರಿಯಾಂಕಾ ಉಪೇಂದ್ರ ಅವರ ಕ್ಷಮೆಯನ್ನು ಕೇಳಿದರು. ‘ನನ್ನಿಂದ ಪ್ರಿಯಾಂಕಾ ಮೇಡಂ ಅವರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ’ ಎಂದು ಪುರುಷೋತ್ತಮ್ ಹೇಳಿದ್ದಾರೆ. ತಮ್ಮಲ್ಲೇ ವಿವಾದ ಬಗೆಹರಿಸಿಕೊಳ್ಳುವ ಬದಲು ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಕ್ಕಾಗಿಯೂ ಪುರುಷೋತ್ತಮ್ ಕ್ಷಮೆ ಕೇಳಿದ್ದಾರೆ ಎಂದು ಜಯಮಾಲಾ ಅವರು ಮಾಹಿತಿ ನೀಡಿದರು.