ಬೆಂಗಳೂರು: ಬಾನ ದಾರಿ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿ ಇಂದು ದಕ್ಷಿಣ ಭಾರತದ ಸಿನಿರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಕಾಂತಾರ ಚಲುವೆ ರುಕ್ಮಿಣಿ ವಸಂತ್ ತಮ್ಮ ಮನದಾಳದ ಆಸೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಅದುವೇ, ಈ ನಟ ಅಂದರೆ ತುಂಬಾ ಇಷ್ಟವಂತೆ, ಅವರ ಜೊತೆ ಒಂದಾದರೂ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅವರ ದೊಡ್ಡ ಆಸೆಯಾಗಿದೆ ಎನ್ನುತ್ತಾ ಸುದ್ದಿಯಲ್ಲಿದ್ದಾರೆ. ಹಾಗಾದ್ರೆ, ಪುಟ್ಟಿಯ ಆ ನೆಚ್ಚಿನ ಹೀರೋ ಯಾರು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
ನ್ಯಾಚುರಲ್ ಸ್ಟಾರ್ ಅಭಿನಯಕ್ಕೆ ಫಿದಾ
ಸಂದರ್ಶನವೊಂದರಲ್ಲಿ ತೆಲುಗು ಚಿತ್ರರಂಗದಲ್ಲಿ ನಿಮಗೆ ಇಷ್ಟವಾದ ಹೀರೋ ಯಾರು? ಯಾರ ಜೊತೆ ಜೋಡಿಯಾಗಿ ನಟಿಸಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ರುಕ್ಮಿಣಿ, ನಾನಿ ಅವರ ಹೆಸರನ್ನು ಹೇಳಿದ್ದಾರೆ. ನಾನಿ ಅವರ ಸಿನಿಮಾಗಳಲ್ಲಿ ಕಾಣಿಸುವ ಸಹಜ ಅಭಿನಯ, ಭಾವನಾತ್ಮಕ ಸನ್ನಿವೇಶಗಳನ್ನು ನಿಭಾಯಿಸುವ ರೀತಿ ಹಾಗೂ ವಿಭಿನ್ನ ಕಥೆಗಳ ಆಯ್ಕೆ ತಮಗೆ ಬಹಳ ಇಷ್ಟವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಾನಿ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದು, ಅವರ ಜೊತೆ ಒಂದಾದರೂ ಸಿನಿಮಾದಲ್ಲಿ ನಟಿಸಲೇಬೇಕು ಎಂಬ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ
ಈಗಾಗಲೇ ಕಾಂತಾರ: ಚಾಪ್ಟರ್ 1 ಮತ್ತು ಯಶ್ ನಟನೆಯ ಟಾಕ್ಸಿಕ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರುಕ್ಮಿಣಿ ವಸಂತ್, ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಜೂನಿಯರ್ ಎನ್ಟಿಆರ್ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ ಡ್ರ್ಯಾಗನ್ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ, ನಾನಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನಿತಿನ್ ನಟನೆಯ ಅಲಿಯಾಸ್ ರುಕ್ಮಿಣಿ ತೆಲುಗು ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಏತನ್ಮಧ್ಯೆ, ರುಕ್ಮಿಣಿ ವಸಂತ್ ಅವರ ಈ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಾನಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ನೋಡಲು ಕಾತರರಾಗಿದ್ದಾರೆ.