

ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಖ್ಯಾತ ನೃತ್ಯ ನಿರ್ದೇಶಕ, ನಟ ಪ್ರಭುದೇವ ಬರೋಬ್ಬರಿ 24 ವರ್ಷಗಳ ಸುದೀರ್ಘ ಬಿಡುವಿನ ನಂತರ ಮತ್ತೆ ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಸಜ್ಜಾಗಿದ್ದಾರೆ. ಜನಪ್ರಿಯ ಓಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಈ ಬೃಹತ್ ಮಲ್ಟಿಸ್ಟಾರರ್ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ನಿರ್ಮಿಸುತ್ತಿದ್ದು, ಕಾಲಿವುಡ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ 2002 ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ H2O ಸಿನಿಮಾದಲ್ಲಿ ಉಪೇಂದ್ರ ಮತ್ತು ಪ್ರಭುದೇವ ಒಟ್ಟಿಗೆ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಅದಾದ ಬಳಿಕ ಅಂದರೆ 24 ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಡೈರೆಕ್ಟ್ ಓಟಿಟಿ ರಿಲೀಸ್
ಇನ್ನು ಹೆಸರಿಡದ ಈ ಸಿನಿಮಾ ಯಾವುದೇ ಥಿಯೇಟರ್ ಬಿಡುಗಡೆ ಇಲ್ಲದೆ, ನೇರವಾಗಿ ನೆಟ್‌ಫ್ಲಿಕ್ಸ್ ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದ್ದು, ತಮಿಳುನಾಡಿನ ಸಾಂಪ್ರದಾಯಿಕ ಜಾನಪದ ಕಲೆಯಾದ ಪುಲಿಯಾಟ್ಟಂ - ಹುಲಿ ವೇಷದ ನೃತ್ಯ ಹಿನ್ನೆಲೆಯನ್ನು ಒಳಗೊಂಡ ಕಾದಂಬರಿಯೊಂದರ ಆಧಾರದ ಮೇಲೆ ಕಾರ್ತಿಕ್ ಸುಬ್ಬರಾಜ್ ಈ ಗ್ರಾಮೀಣ ಆ್ಯಕ್ಷನ್-ಡ್ರಾಮಾ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ.
ಮುಂದುವರೆದು, ಈ ಚಿತ್ರದಲ್ಲಿ ಉಪೇಂದ್ರ ಮತ್ತು ಪ್ರಭುದೇವ ಅವರೊಂದಿಗೆ ತಮಿಳಿನ ಮತ್ತೊಬ್ಬ ಜನಪ್ರಿಯ ಯುವ ನಟ ಅಥರ್ವ ಮುರಳಿ ಕೂಡ ಪ್ರಮುಖ ಹಾಗೂ ಪ್ರಭಾವಶಾಲಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ತಮ್ಮ ಡೊರೊತಿ ಸಿನಿಮಾದ ಪ್ರಮೋಷನ್ ಸಂದರ್ಶನದಲ್ಲಿ ಸ್ವತಃ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ಈ ಹೊಸ ಚಿತ್ರದ ಮೊದಲ ಹಂತದ ಶೂಟಿಂಗ್ ಅನ್ನು ಅತ್ಯಂತ ರಹಸ್ಯವಾಗಿ ಈಗಾಗಲೇ ಮುಗಿಸಿರುವುದಾಗಿ ಬಹಿರಂಗಪಡಿಸಿದ್ದಾರೆ. ಚಿತ್ರದ ಮುಂದಿನ ಹಂತದ ಚಿತ್ರೀಕರಣವು ಅಕ್ಟೋಬರ್ ಮಧ್ಯಭಾಗದಿಂದ ಆರಂಭವಾಗಲಿದೆ.
ಏತನ್ಮಧ್ಯೆ, ಈ ಸಿನಿಮಾವನ್ನು ತಮಿಳು ಭಾಷೆಯಲ್ಲಿ ನಿರ್ಮಿಸಲಾಗುತ್ತಿದ್ದು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.