

ಕನ್ನಡ ನಟ ಪುನೀತ್ ರಾಜ್ಕುಮಾರ್ ನಿಧನರಾಗಿ ಐದು ವರ್ಷಗಳ ನಂತರ, ಅವರ ವೈದ್ಯರಾದ ಡಾ. ರಮಣ ರಾವ್ ಅವರು ಪುನೀತ್ ಅಂತಿಮ ಕ್ಷಣಗಳಿಗೆ ಕಾರಣವಾದ ಘಟನೆಗಳನ್ನು ಸ್ಮರಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತೀವ್ರವಾದ ವ್ಯಾಯಾಮದ ನಂತರ ಪುನೀತ್ ತಮ್ಮ ಕ್ಲಿನಿಕ್ಗೆ ಭೇಟಿ ನೀಡಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕಳವಳ ಮೂಡಿಸಿದ ಇಸಿಜಿ (ECG) ವರದಿಗಳು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಲು ಕೈಗೊಂಡ ತುರ್ತು ಕ್ರಮಗಳ ಬಗ್ಗೆ ಅವರು ವಿವರಿಸಿದರು.
'ಅಪ್ಪು' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಪುನೀತ್, 2021ರ ಅಕ್ಟೋಬರ್ 29ರಂದು, ತಮ್ಮ 46ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ತರಾತುರಿಯಲ್ಲಿ ಕರೆದೊಯ್ಯಲಾಯಿತಾದರೂ, ವೈದ್ಯರಿಗೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
'ಜಸ್ಟ್ ಕ್ಯೂರಿಯಸ್ ಕನ್ನಡ' (Just Curious Kannada) ಜೊತೆ ಮಾತನಾಡಿದ ಡಾ. ರಮಣ ರಾವ್, ನಟ ಮತ್ತು ಅವರ ಕುಟುಂಬದೊಂದಿಗೆ ತಮಗಿದ್ದ ವೈಯಕ್ತಿಕ ಒಡನಾಟವನ್ನು ನೆನಪಿಸಿಕೊಂಡರು. "ಅಪ್ಪು ಒಬ್ಬ ಅದ್ಭುತ ವ್ಯಕ್ತಿ. ಅವರು ನನಗೆ ಮಗನಿದ್ದಂತೆ. ಅವರು ಮತ್ತು ನನ್ನ ಎರಡನೇ ಮಗ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರೂ ಆಗಾಗ್ಗೆ ಒಟ್ಟಿಗೆ ಆಟವಾಡುತ್ತಿದ್ದರು ಮತ್ತು ತಮ್ಮ ಆಟಿಕೆಗಳನ್ನು ಹಂಚಿಕೊಳ್ಳುತ್ತಿದ್ದರು" ಎಂದು ಅವರು ಹೇಳಿದರು.
ನಟನ ನಿಧನವು ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಅನುಭವಗಳಲ್ಲಿ ಒಂದಾಗಿದೆ. "ಒಬ್ಬ ವೈದ್ಯನಾಗಿ, ನನ್ನ ಜೀವನದಲ್ಲಿ ಅನೇಕ ದುರಂತಗಳನ್ನು ಕಂಡಿದ್ದೇನೆ. ಅವು ಮನಸ್ಸಿನ ಮೇಲೆ ತೀವ್ರವಾದ, ಭಯಾನಕ ಪರಿಣಾಮ ಬೀರುತ್ತವೆ. ಕೆಲವು ವಿಷಯಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅಪ್ಪು ಅಂತಹ ಉದಾಹರಣೆಗಳಲ್ಲಿ ಒಬ್ಬರು ಎಂದಿದ್ದಾರೆ.
ಘಟನೆ ನಡೆದ ದಿನವನ್ನು ನೆನಪಿಸಿಕೊಂಡ ಡಾ. ರಮಣ ರಾವ್, ಜಿಮ್ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್ ಅಭ್ಯಾಸ ಮಾಡಿದ ನಂತರ ಪುನೀತ್ ತಮ್ಮ ಕ್ಲಿನಿಕ್ಗೆ ಬಂದಿದ್ದರು ಎಂದು ಹೇಳಿದರು. ವೈದ್ಯರ ಪ್ರಕಾರ, ಅಂದು ಪುನೀತ್ ಮೊದಲ ಬಾರಿಗೆ ಈ ಕ್ರೀಡೆಯನ್ನು ಪ್ರಯತ್ನಿಸಿದ್ದರು ಮತ್ತು ಅಸಾಮಾನ್ಯ ರೀತಿಯಲ್ಲಿ ದಣಿದಂತೆ ಕಂಡುಬಂದರು.
"ಅಪ್ಪು ಕ್ಲಿನಿಕ್ಗೆ ಬಂದಾಗ ನಾನು ಅಲ್ಲಿದ್ದೆ. ಅವರಿಗೆ ವಿಪರೀತ ಬೆವರು ಸುರಿಯುತ್ತಿತ್ತು. ಜಿಮ್ಗೆ ಹೋಗಿ ಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್ ಮಾಡಿದ್ದಾಗಿ ಅವರು ನನಗೆ ಹೇಳಿದರು. ಅಂದು ಅವರು ಮೊದಲ ಬಾರಿಗೆ ಇದನ್ನು ಪ್ರಯತ್ನಿಸಿದ್ದರು ಮತ್ತು ತುಂಬಾ ಆಯಾಸಗೊಂಡಿದ್ದರು. ಆದರೆ, ಅವರಿಗೆ ಸುರಿಯುತ್ತಿದ್ದ ಬೆವರನ್ನು ಗಮನಿಸಿದಾಗ, ಅವರ ಆರೋಗ್ಯ ಸ್ಥಿತಿಯಲ್ಲಿ ಗಂಭೀರವಾದ ಏನೋ ಇದೆ ಎಂದು ನನಗೆ ಅರಿವಾಯಿತು. ನಾನು ತಕ್ಷಣವೇ ಇಸಿಜಿ (ECG) ಮಾಡಿದೆ. ಆ ಇಸಿಜಿ ವರದಿಯಲ್ಲಿ ಹೃದಯದ ಮೇಲಿನ ಒತ್ತಡ (strain) ಕಂಡುಬಂತು" ಎಂದು ಅವರು ವಿವರಿಸಿದರು.
ಇಸಿಜಿ ಫಲಿತಾಂಶಗಳನ್ನು ಕಂಡ ಕೂಡಲೇ ಡಾ. ರಮಣ ರಾವ್ ತುರ್ತು ಕ್ರಮಗಳನ್ನು ಕೈಗೊಂಡರು. ತಾನು ಪುನೀತ್ಗೆ ಔಷಧ ನೀಡಿದ್ದಾಗಿ ಮತ್ತು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾಗಿ ಅವರು ತಿಳಿಸಿದರು.
ಇದು ಹೃದಯಾಘಾತವಲ್ಲ, ಬದಲಾಗಿ ದೇಹದ ಮೇಲಾದ ಅತಿಯಾದ ಒತ್ತಡ (strain) ಆಗಿತ್ತು. ಏನೋ ಅನಾಹುತ ಸಂಭವಿಸಲಿದೆ ಎಂದು ನನಗೆ ಅರಿವಾಗಿತ್ತು. ನಾನು ಅವರಿಗೆ ಔಷಧ ನೀಡಿದೆ ಮತ್ತು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದೆವು. ಅವರು ತಮ್ಮದೇ ಕಾರಿನಲ್ಲಿ ಪ್ರಯಾಣಿಸಿದರು. ಆ ಸಮಯದಲ್ಲಿ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಕಾರಿನಲ್ಲಿ ಕುಳಿತುಕೊಳ್ಳಲು ಅವರು ಬಯಸಿದ್ದರು, ಆದರೆ ನಾನು ಅವರನ್ನು ಅವರ ಪತ್ನಿ ಅಶ್ವಿನಿ ಅವರ ಮಡಿಲಲ್ಲಿ ತಲೆ ಇಟ್ಟು ವಿಶ್ರಾಂತಿ ಪಡೆಯುವಂತೆ ಕೋರಿದೆ. ಡಾ. ರಂಗ ನಾಯಕ್ ಅವರು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿರುವಾಗಲೇ, ಚಾಲಕನಿಗೆ ಅವರನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದೆ," ಎಂದು ಅವರು ಹೇಳಿದರು.
ಪುನೀತ್ ಅವರ ತಂದೆ ಹಾಗೂ ದಿಗ್ಗಜ ನಟ ರಾಜ್ಕುಮಾರ್ ಸೇರಿದಂತೆ, ಪುನೀತ್ ಅವರ ಕುಟುಂಬದ ಇತರ ಸದಸ್ಯರಿಗೂ ಚಿಕಿತ್ಸೆ ನೀಡಿದ್ದ ಡಾ. ರಂಗ ನಾಯಕ್ ಅವರು, ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಸಂಘಟಿಸಲು ನೆರವಾದರು. ಆಸ್ಪತ್ರೆ ತಲುಪುವ ಒಂದು ನಿಮಿಷದ ಮೊದಲು ಅವರ ಹೃದಯ ಬಡಿತ ನಿಂತುಹೋಗಿತ್ತು ಎಂದರು.
ಆಸ್ಪತ್ರೆಗೆ ಕರೆದೊಯ್ಯುವಾಗ ಪುನೀತ್ ಗೆ ಪ್ರಜ್ಞೆ ಇತ್ತು ತಮ್ಮ ಸುತ್ತಲಿದ್ದವರೊಂದಿಗೆ ಮಾತನಾಡುತ್ತಿದ್ದರು ಎಂದು ಡಾ. ರಮಣ ರಾವ್ ನೆನಪಿಸಿಕೊಂಡರು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರು ಆಸ್ಪತ್ರೆ ತಲುಪಲು ಕೇವಲ ಒಂದು ನಿಮಿಷ ಬಾಕಿ ಇರುವಾಗ ಅವರ ಹೃದಯ ಬಡಿತ ನಿಂತುಹೋಗಿತ್ತು. ಅವರು ಆಸ್ಪತ್ರೆಯ ಒಳಗೆ ಪ್ರವೇಶಿಸಿದಾಗ, ಅವರಲ್ಲಿ ಯಾವುದೇ ಹೃದಯ ಬಡಿತವಿರಲಿಲ್ಲ ಎಂದು ಅವರು ವಿವರಿಸಿದರು.
ವಿಕ್ರಮ್ ಆಸ್ಪತ್ರೆಯ ವೈದ್ಯಕೀಯ ತಂಡವು, ಅಗತ್ಯ ತುರ್ತು ಚಿಕಿತ್ಸಾ ವಿಧಾನಗಳನ್ನು ಅನುಸರಿಸುವ ಮೂಲಕ ನಟನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿತು. ಆದರೆ, ಅವರ ಪ್ರಯತ್ನಗಳು ಫಲ ನೀಡಲಿಲ್ಲ.
ಈ ದುರಂತವನ್ನು ನೆನಪಿಸಿಕೊಂಡ ಡಾ. ರಮಣ ರಾವ್, "ಇದು ನಮ್ಮೆಲ್ಲರಿಗೂ ಅತ್ಯಂತ ದುಃಖಕರ ಕ್ಷಣಗಳಲ್ಲಿ ಒಂದಾಗಿತ್ತು. ಇದು ನನ್ನ ಸ್ವಂತ ಮಗನನ್ನೇ ಕಳೆದುಕೊಂಡಂತೆ ಭಾಸವಾಯಿತು," ಎಂದು ಹೇಳಿದ್ದಾರೆ.