

'ಕಾಫಿ ವಿತ್ ಕರಣ್ 9' (Koffee With Karan 9) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ತಮಗೆ ಮತ್ತು ತಮ್ಮ ಪತಿ ವಿಜಯ್ ದೇವರಕೊಂಡ ಅವರಿಗೆ ಎದುರಾದ ಆನ್ಲೈನ್ ಟೀಕೆಗಳಿಗೆ ರಶ್ಮಿಕಾ ಮಂದಣ್ಣ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
ಟೀಕಿಸುವವರನ್ನು "ಸಿಟ್ಟಿಗೆದ್ದ ಗುಂಪು" (angry mob) ಎಂದು ಕರೆದಿರುವ ನಟಿ ರಶ್ಮಿಕಾ, ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
ತಾರಾ ಜೋಡಿ 'ಕಾಫಿ ವಿತ್ ಕರಣ್ 9'ನಲ್ಲಿ ಕಾಣಿಸಿಕೊಂಡ ನಂತರ ಅವರ ಮದುವೆ ಪ್ರಪೋಸಲ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ಸ್ ಮತ್ತು ನೆಗೆಟಿವ್ ಕಮೆಂಟ್ಗಳು ಹರಿದಾಡುತ್ತಿದ್ದವು.
ಸಾಮಾನ್ಯವಾಗಿ ಇಂತಹ ಗಾಳಿ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳದ ರಶ್ಮಿಕಾ, ಈ ಬಾರಿ ಮಾತ್ರ ಸುಮ್ಮನೆ ಕೂತಿಲ್ಲ. ಸಂದರ್ಶನದ ಬಳಿಕ ನೆಟ್ಟಿಗರು ಆಡಿಕೊಳ್ಳುತ್ತಿರುವ ರೀತಿ ಕೇವಲ ವೈಯಕ್ತಿಕ ಅಭಿಪ್ರಾಯದಂತೆ ಕಾಣುತ್ತಿಲ್ಲ, ಬದಲಾಗಿ ತಮ್ಮ ಸಿಟ್ಟನ್ನು ತೀರಿಸಿಕೊಳ್ಳಲು ಕಾಯುತ್ತಿರುವ ಒಂದು ಉದ್ರಿಕ್ತ ಗುಂಪಿನಂತೆ ಆಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ತಮ್ಮಿಬ್ಬರ ಮದುವೆ ವಿಚಾರದ ಮೂಲ ಉದ್ದೇಶವನ್ನೇ ಜನ ಮರೆತು ಬಿಟ್ಟಿದ್ದಾರೆ ಎಂದು ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ತಮ್ಮ ಪತಿ ವಿಜಯ್ ದೇವರಕೊಂಡ ಅವರ ಬೆಂಬಲಕ್ಕೆ ನಿಂತಿರುವ ರಶ್ಮಿಕಾ, ಹೌದು, ನನಗೆ ನನ್ನ ಗಂಡನ ಮೇಲೆ ಅತಿಯಾದ ಪ್ರೀತಿ (Obsessed) ಇದೆ, ಅದರಲ್ಲಿ ತಪ್ಪೇನಿದೆ? ಅವರು ನನ್ನ ಇಡೀ ಜೀವನದ ಸಂಗಾತಿ, ಬೆಸ್ಟ್ ಫ್ರೆಂಡ್, ನನ್ನ ಮಕ್ಕಳಿಗೆ ತಂದೆ ಮತ್ತು ಕೊನೆಗಾಲದವರೆಗೂ ಜೊತೆಗಿರುವ ವ್ಯಕ್ತಿ. ಮದುವೆಯಾದ ನಂತರವೂ ಮತ್ತೆ ಮತ್ತೆ ಮದುವೆಯಾಗೋಣ ಎಂದು ಹೇಳುವಷ್ಟು ಪ್ರೀತಿ ತಮ್ಮ ಸಂಬಂಧದಲ್ಲಿದೆ. ಇದಕ್ಕಾಗಿ ನಾನು ನೂರಲ್ಲ, ಸಾವಿರ ಬಾರಿ ಪ್ರಪೋಸ್ ಮಾಡಲೂ ರೆಡಿ ಇದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇತರರು ತಮ್ಮ ಸಂಬಂಧದ ಬಗ್ಗೆ ಏನೇ ಮಾತನಾಡಿದರೂ, ತಮ್ಮ ಜೀವನವನ್ನು ಹೇಗೆ ನಡೆಸಬೇಕು ಮತ್ತು ಅದನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ತಮಗಿದೆ ಎಂಬುದು ರಶ್ಮಿಕಾ ಹೆಳಿಕೊಂಡಿದ್ದಾರೆ.
ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಬದುಕು ಇರುತ್ತದೆ. ಆ ಬದುಕಿನ ನಿರ್ಧಾರಗಳನ್ನು ಹೊರಗಿನವರು ನಿರ್ಧರಿಸುವುದಕ್ಕಿಂತ, ಸಂಬಂಧದಲ್ಲಿರುವವರೇ ತೆಗೆದುಕೊಳ್ಳುವುದು ಮುಖ್ಯ ಎಂದು ರಶ್ಮಿಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನಗೆ ಜೀವನದಲ್ಲಿ ಏನು ಬೇಕು ಎಂಬುದು ಕ್ಲಿಯರ್ ಆಗಿ ಗೊತ್ತಿತ್ತು. ಹಾಗೆಯೇ ನನ್ನ ಸಂಗಾತಿಗೆ ಲೈಫ್ನ ಪ್ರಾಕ್ಟಿಕಲ್ ವಿಷಯಗಳ ಬಗ್ಗೆ ಯೋಚಿಸಲು ಕೊಂಚ ಸಮಯ ಬೇಕಿತ್ತು. ಅದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ದೃಷ್ಟಿಯಲ್ಲಿ ಮದುವೆ ಅಂದರೆ ಬರೀ ಮಂಡಿಯೂರಿ ಕುಳಿತು ಉಂಗುರ ತೊಡಿಸುವ ಅಲಂಕಾರಿಕ ಭಾಗವಲ್ಲ; ಇಬ್ಬರೂ ಒಟ್ಟಾಗಿ ಒಂದು ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳುವುದು ಎಂದಿದ್ದಾರೆ.