

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ಆಪ್ತ ಸ್ನೇಹಿತ ನಟ ಧನ್ವೀರ್ ಗೌಡ ನಡುವಿನ ಶೀತಲ ಸಮರ ಮುಂದುವರೆದಿದ್ದು, ಕಾನೂನು ಸಮರಕ್ಕೂ ತಿರುಗಿದೆ.
ವಿಜಯಲಕ್ಷ್ಮಿ ಅವರಿಗೆ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಹಾಗೂ ಕಿರುಕುಳ ನೀಡಿದ್ದಾರೆ ಎಂಬ ಆರೋಪದಡಿ ನಟ ಧನ್ವೀರ್ ವಿರುದ್ಧ ಬೆಂಗಳೂರಿನ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದರ ಬೆನ್ನಲ್ಲೇ ನಟ ಧನ್ವೀರ್ ಸಾಮಾಜಿಕ ಮಾಧ್ಯಮಗಳಲ್ಲಿ ದರ್ಶನ್ ಬಗ್ಗೆ ಪೊಸ್ಟ್ ಹಾಕಿದ್ದಾರೆ.
ದರ್ಶನ್ ಸರ್ ಅಕೌಂಟ್‌ನಿಂದ ನನ್ನನ್ನು ಬ್ಲಾಕ್ ಮಾಡಬಹುದು. ನಾನೇ ಅನ್‌ಫಾಲೋ ಮಾಡಿದೆ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ಬಿಂಬಿಸಬಹುದು. ನನ್ನ ವಿರುದ್ಧ ಎಷ್ಟು ಬೇಕಾದರೂ ನೆಗೆಟಿವ್ ಪಿಆರ್ ಮಾಡಬಹುದು… ಆದರೆ ನನ್ನ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ ಎಂದು ಧನ್ವೀರ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ. ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ, ದರ್ಶನ್ ಸರ್! ‘ದೆನ್ ನೌ ಫಾರೆವರ್` ಎಂದು ಧನ್ವೀರ್ ಪೋಸ್ಟ್ ಹಾಕಿದ್ದಾರೆ.
ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿದ್ದ ಧನ್ವೀರ್, ತಮ್ಮ ಬಳಿ ಕೂಡ ಆಡಿಯೋ ದಾಖಲೆಗಳಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದೀಗ ಪೋಸ್ಟ್ ಮೂಲಕ ವಿಜಯಲಕ್ಷ್ಮಿ ಅವರಿಗೆ ತಿರುಗೇಟು ನೀಡಿದ್ದಾರೆ.