

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ದೊಡ್ಮನೆಯಲ್ಲಿ ಸರ್ಪೈಸ್ ಎಂಟ್ರಿಯೊಂದು ಆಗಿದೆ. ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರು ಕೈಯಲ್ಲಿ ಸೂಟ್‌ಕೇಸ್ ಹಿಡಿದು ಮನೆಯೊಳಗೆ ಧಿಡೀರ್ ಎಂಟ್ರಿ ಕೊಟ್ಟಿದ್ದಾರೆ.
ಸದ್ಯ ಬಿಗ್‌ಬಾಸ್ ಮನೆಯಲ್ಲಿ ‘ಶೆಟ್ಟಿ ಡಾನ್’ ಮದುವೆಯ ಸಂಭ್ರಮ ಶುರುವಾಗಿದ್ದು, ಸೌಂದರ್ಯ ಶೆಟ್ಟಿ ಅವರಿಗೆ ವರನನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ.
ಈ ನಡುವೆ ರಕ್ಷಿತಾ ಶೆಟ್ಟಿಯನ್ನು ಸೌಂದರ್ಯ ಅವರ ತಂಗಿ ಎಂಬಂತೆ ಮನೆಯವರಿಗೆ ಪರಿಚಯಿಸಲಾಗಿದೆ. ಆದರೆ, ಅವರು ಅತಿಥಿಯಾಗಿ ಬಂದಿದ್ದಾರೆಯೇ ಅಥವಾ ಮುಂದಿನ ದಿನಗಳಲ್ಲೂ ಸ್ಪರ್ಧಿಯಾಗಿ ಮನೆಯಲ್ಲೇ ಉಳಿಯಲಿದ್ದಾರೆಯೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.
‘ಶೆಟ್ಟಿ ಡಾನ್ ಕುಟುಂಬಕ್ಕೆ ಸ್ವಾಗತ’ ಎಂದು ರಕ್ಷಿತಾ ಶೆಟ್ಟಿಯನ್ನು ಬಿಗ್‌ಬಾಸ್ ಮನೆಗೆ ಬರಮಾಡಿಕೊಳ್ಳಲಾಗಿದೆ. ಪ್ರಶಾಂತಿ ಅವರು ಎಂಬಿಎ ಓದಲು ಮಲೇಷ್ಯಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರೇಮ ಸಂಬಂಧವೊಂದು ಬೆಳೆದಿತ್ತು. ಆ ಪ್ರೇಮದ ಫಲವಾಗಿ ರಕ್ಷಿತಾ ಶೆಟ್ಟಿ ಜನಿಸಿದ್ದು, ಇದೀಗ ಕುಟುಂಬ ಪೂರ್ಣಗೊಂಡಿದೆ ಎಂಬ ರೀತಿಯಲ್ಲಿ ಬಿಗ್‌ಬಾಸ್ ಪರಿಚಯಿಸಿದ್ದಾರೆ. ಈ ವೇಳೆ ಪ್ರಶಾಂತಿ ಅವರು, “ಮಾತನಾಡು ಮಗಳೇ” ಎಂದು ಹೇಳಿದಾಗ, ರಕ್ಷಿತಾ “ಅಮ್ಮ, ನೀವು ತುಂಬಾ ಬದಲಾಗಿದ್ದೀರಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ರಕ್ಷಿತಾ ಶೆಟ್ಟಿ ಅವರ ಆಗಮನದಿಂದ ಬಿಗ್‌ಬಾಸ್ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಎಂಟ್ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಶೈನ್ ಶೆಟ್ಟಿ ಮತ್ತು ರೂಪೇಶ್ ಶೆಟ್ಟಿ ಅವರನ್ನೂ ಮನೆಗೆ ಕರೆಸುವಂತೆ ಕೆಲವರು ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಗಿಲ್ಲಿ ಮತ್ತು ಕಾವ್ಯ ಅವರನ್ನು ಕರೆಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.
“ಹಿಂದಿನ ಸೀಸನ್ ನಡೆಯುವಾಗಲೇ ರಕ್ಷಿತಾ ಮುಂದಿನ ಬಾರಿ ಬಿಗ್‌ಬಾಸ್‌ಗೆ ಬರುತ್ತಾರೆ ಎಂದುಕೊಂಡಿದ್ದೆವು. ಅವರಿದ್ದರೆ ನೋಡುವುದಕ್ಕೇ ಖುಷಿ” ಎಂಬಂತಹ ಪ್ರತಿಕ್ರಿಯೆಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ ಅವರ ಎಂಟ್ರಿ ಈಗ ವೀಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ.