ಪುನೀತ್ ರಾಜ್​​ಕುಮಾರ್ ಪುಣ್ಯಸ್ಮರಣೆ: ಅಗಲಿ 5 ವರ್ಷ, ಅಭಿಮಾನಿಗಳ ಮನದಲ್ಲಿ ಶಾಶ್ವತ ನೆನಪು! ಸಿಎಂ ಡಿಕೆಶಿ ಗೌರವ ನಮನ!

ಪುನೀತ್ ರಾಜ್‌ಕುಮಾರ್ ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಮುಗ್ಧ ನಗು, ವಿನಯವಂತಿಕೆ ಮತ್ತು ಅಭಿನಯದಿಂದ ಕರುನಾಡಿನ ಮನೆಮನೆಯ ಕಣ್ಮಣಿಯಾಗಿ ಬೆಳೆದಿದ್ದರು.
Puneet Rajkumar(File photo)
ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)
Updated on: 

ಇಂದು (ಅಕ್ಟೋಬರ್ 29) ಕರ್ನಾಟಕ ರತ್ನ, 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ದಿನ. ಇಡೀ ನಾಡು ಅವರನ್ನು ಸ್ಮರಿಸುತ್ತಿದೆ. 2021ರ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ಕೊನೆಯುಸಿರೆಳೆದ ಪುನೀತ್ ರಾಜ್‌ಕುಮಾರ್, ಕನ್ನಡಿಗರನ್ನು ಅಗಲಿ ಐದು ವರ್ಷಗಳು ಕಳೆದರೂ ಅವರ ನೆನಪು ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲೂ ಹಸಿರಾಗಿದೆ.

2021ರ ಅಕ್ಟೋಬರ್ 29ರಂದು ನಡೆದಿದ್ದು ಪುನೀತ್ ಅವರು ಬೆಳಿಗ್ಗೆ ಜಿಮ್ ಅಲ್ಲಿ ವರ್ಕೌಟ್ ಮುಗಿಸಿದ ಬಳಿಕ ಅಸಾಧಾರಣವಾಗಿ ಬೆವರು ಹರಿದು ಬರುತ್ತಿತ್ತು. ಇದರಿಂದ ಅನುಮಾನಗೊಂಡು ಅವರು ಫ್ಯಾಮಿಲಿ ಡಾಕ್ಟರ್ ರಮಣ್ ರಾವ್ ಬಳಿ ತೆರಳಿದರು. ಅವರು ದೊಡ್ಡ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಆದರೆ, ದಾರಿ ಮಧ್ಯೆಯೇ ಅವರು ಕೊನೆಯುಸಿರು ಎಳೆದರು. ಅವರ ಪುಣ್ಯಸ್ಮರಣೆ ದಿನ ಇಡೀ ಕರ್ನಾಟಕ ಅವರನ್ನು ನೆನಪಿಸಿಕೊಳ್ಳುತ್ತಿದೆ.

ಇಂದು ಬೆಳಿಗ್ಗೆಯಿಂದಲೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸ್ಮಾರಕಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ಅಪ್ಪು ಸ್ಮಾರಕವನ್ನು ವಿವಿಧ ರೀತಿಯ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಅಭಿಮಾನಿಗಳು ಅಪ್ಪು ನೆನಪಿನಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಕುಟುಂಬಸ್ಥರು ಬೆಳಿಗ್ಗೆ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಮುಗ್ಧ ನಗು, ವಿನಯವಂತಿಕೆ ಮತ್ತು ಅಭಿನಯದಿಂದ ಕರುನಾಡಿನ ಮನೆಮನೆಯ ಕಣ್ಮಣಿಯಾಗಿ ಬೆಳೆದಿದ್ದರು. ತಮ್ಮ ಕೊಡುಗೈ ಗುಣ ಮತ್ತು ಸಾಮಾಜಿಕ ಕಳಕಳಿಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಹಾದಿಯಲ್ಲೇ ಅಭಿಮಾನಿಗಳು ಇಂದು ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯಾದ್ಯಂತ ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಭಿಮಾನಿ ಬಳಗಗಳು ರಕ್ತದಾನ ಶಿಬಿರಗಳು, ಉಚಿತ ನೇತ್ರ ತಪಾಸಣೆ ಮತ್ತು ನೇತ್ರದಾನ ನೋಂದಣಿ, ಸಾವಿರಾರು ಜನರಿಗೆ ಅನ್ನಸಂತರ್ಪಣೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ಮತ್ತು ಧನಸಹಾಯ ನೀಡುವ ಮೂಲಕ ಅಪ್ಪು ಅವರ ಸ್ಮರಣೆಯನ್ನು ಸಾರ್ಥಕಗೊಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅಪ್ಪು ಅವರನ್ನು ನೆನಪಿಸಿಕೊಳ್ಳಾಗುತ್ತಿದೆ.

Puneet Rajkumar(File photo)
'ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ': ಎಲ್ಲಾ ತಾಲೂಕುಗಳಿಗೂ ವಿಸ್ತರಣೆ..!

ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇಂದಿಗೂ ಕೋಟ್ಯಂತರ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವವರು ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರು. ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದು, ನಾಯಕನಾಗಿ ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅಪ್ಪು ಅವರ ಕಲಾ ಪ್ರತಿಭೆ ಅದ್ವಿತೀಯ. ತೆರೆಯ ಮೇಲೆ ಸೂಪರ್‌ಸ್ಟಾರ್ ಆಗಿದ್ದರೂ, ತೆರೆಯ ಹಿಂದೆ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿ ಅವರು ಬದುಕಿದ ರೀತಿ ಎಲ್ಲರಿಗೂ ಮಾದರಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com