Bigg Boss Kannada 13: ದೊಡ್ಮನೆಯಲ್ಲಿ ಡಬಲ್‌ ಎಲಿಮಿನೇಷನ್‌; ವೈಷ್ಣವಿ-ಅವಿನಾಶ್‌ ಔಟ್‌, ತಾಂಡವ್‌ಗೆ ಮತ್ತೆ ಚಾನ್ಸ್..!

ಇನ್ನು ಎರಡನೇ ಎಲಿಮಿನೇಷನ್‌ಗಾಗಿ ಧನುಷ್‌, ವೈಷ್ಣವಿ ಹಾಗೂ ಆಸಿಯಾ ಅವರಿಗೆ ಟಾಸ್ಕ್‌ ನೀಡಲಾಗಿತ್ತು. ಈ ಪೈಕಿ ಆಸಿಯಾ ಮೊದಲು ಸೇಫ್‌ ಆಗಿದ್ದು, ಬಳಿಕ ವೈಷ್ಣವಿ ಎಲಿಮಿನೇಟ್‌ ಆಗಿದ್ದಾರೆ.
Avinash and Vaishnavi
ಅವಿನಾಶ್‌ ಹಾಗೂ ವೈಷ್ಣವಿ
Updated on: 

ಬೆಂಗಳೂರು: ‘ಬಿಗ್‌ಬಾಸ್‌ ಕನ್ನಡ 13’ ಮನೆಯಲ್ಲಿ ಈ ವಾರ ಡಬಲ್‌ ಎಲಿಮಿನೇಷನ್‌ ನಡೆದಿದ್ದು, ವೈಷ್ಣವಿ ಹಾಗೂ ಅವಿನಾಶ್‌ ಅವರು ಎಮರ್ಜೆನ್ಸಿ ಎಕ್ಸಿಟ್‌ ಮೂಲಕ ಹೊರಬಂದಿದ್ದಾರೆ.

ಇದರ ನಡುವೆ ವಾರದ ಮಧ್ಯದಲ್ಲೇ ಮನೆಯಿಂದ ಹೊರಬಂದಿದ್ದ ತಾಂಡವ್‌ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದ್ದು, ಮತ್ತೆ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಅವಕಾಶ ದೊರೆತಿದೆ.

ಅವಿನಾಶ್‌ ಮನೆಯಿಂದ ಹೊರಬರುವಾಗ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದು, ಅವರು ಹೊರಬರುತ್ತಿದ್ದಂತೆ ಮನೆಯ ಸದಸ್ಯರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಇನ್ನು ಎರಡನೇ ಎಲಿಮಿನೇಷನ್‌ಗಾಗಿ ಧನುಷ್‌, ವೈಷ್ಣವಿ ಹಾಗೂ ಆಸಿಯಾ ಅವರಿಗೆ ಟಾಸ್ಕ್‌ ನೀಡಲಾಗಿತ್ತು. ಈ ಪೈಕಿ ಆಸಿಯಾ ಮೊದಲು ಸೇಫ್‌ ಆಗಿದ್ದು, ಬಳಿಕ ವೈಷ್ಣವಿ ಎಲಿಮಿನೇಟ್‌ ಆಗಿದ್ದಾರೆ.

ವೈಷ್ಣವಿ ಅವರನ್ನು ಮತ್ತೆ ಬಿಗ್‌ಬಾಸ್‌ ಮನೆಗೆ ಕಳುಹಿಸದೆ, ಚಟುವಟಿಕೆ ಕೊಠಡಿಯಿಂದಲೇ ನೇರವಾಗಿ ಹೊರಗೆ ಕಳುಹಿಸಲಾಗಿದೆ.

ಮನೆಯಲ್ಲಿದ್ದ ಅವಧಿಯಲ್ಲಿ ವೈಷ್ಣವಿ ಹಲವು ವಿಚಾರಗಳಲ್ಲಿ ತಮ್ಮ ಧ್ವನಿ ಎತ್ತಿದ್ದರು. ಫ್ಲೈಟ್‌ ಟಾಸ್ಕ್‌ ವೇಳೆ ಮಂಜ ಅವರೊಂದಿಗೆ ವಾಗ್ವಾದ ನಡೆಸಿದ್ದ ಅವರು, ಇತ್ತೀಚೆಗೆ ಸೌಂದರ್ಯ ಶೆಟ್ಟಿ ಅವರೊಂದಿಗೆ ನಡೆದ ಸಣ್ಣ ವಿಚಾರವೊಂದು ದೊಡ್ಡ ಜಗಳಕ್ಕೆ ಕಾರಣವಾಗಿತ್ತು.

ಇನ್ನು ಅವಿನಾಶ್‌ ವಿಚಾರಕ್ಕೆ ಬಂದರೆ, ಮನೆಯಲ್ಲಿನ ಇತರ ಸ್ಪರ್ಧಿಗಳೊಂದಿಗೆ ಹೋಲಿಸಿದರೆ ಅವರು ಹೆಚ್ಚು ಮೌನವಾಗಿಯೇ ಇರುತ್ತಿದ್ದರು. ಆದರೆ, ಮಂಜ ಅವರ ಮಾತಿನಿಂದ ಟ್ರಿಗರ್‌ ಆದ ಅವಿನಾಶ್‌ ತೀವ್ರವಾಗಿ ಕೋಪಗೊಂಡಿದ್ದರು. ಈ ವೇಳೆ ಮಂಜ ಅವರನ್ನು ಹೊಡೆಯುವುದಾಗಿ ಹೇಳಿ ಮನೆ ತೊರೆಯಲು ಮುಂದಾಗಿದ್ದರು. ಬಳಿಕ ಅವರ ಪತ್ನಿ ಫೋನ್‌ ಮೂಲಕ ಮಾತನಾಡಿ ಅವರನ್ನು ಸಮಾಧಾನಪಡಿಸಿದ್ದರು.

Avinash and Vaishnavi
Bigg Boss Kannada 13, Mid-week elimination: ಪ್ರಬಲ ಸ್ಪರ್ಧಿ ತಾಂಡವ್ ರಾಮ್ ಔಟ್; ಇದು ಅನ್ಯಾಯ- ವೀಕ್ಷಕರ ಆಕ್ರೋಶ..!

ತಾಂಡವ್‌ಗೆ ಮತ್ತೆ ಅವಕಾಶ

ವಾರದ ಮಧ್ಯದಲ್ಲೇ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದ ತಾಂಡವ್‌ ಅವರನ್ನು ಕಿಚ್ಚ ಸುದೀಪ್‌ ಅವರು ವೇದಿಕೆಗೆ ಕರೆಸಿ ಮಾತನಾಡಿದ್ದಾರೆ.

ತಾಂಡವ್‌ ಅವರ ವರ್ತನೆಯನ್ನು ಮೆಚ್ಚಿದ ಸುದೀಪ್‌, ಧನುಷ್‌ ಅವರ ತಪ್ಪೇನೂ ಇಲ್ಲ. ಬಿಗ್‌ಬಾಸ್‌ ಆಟದ ಭಾಗವಾಗಿಯೇ ಆ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದ್ದಾರೆ.

ಬಳಿಕ ತಾಂಡವ್‌ ಅವರಿಗೆ ಕಿವಿಮಾತು ಹೇಳಿದ ಸುದೀಪ್‌, “ಅಷ್ಟು ಆತ್ಮವಿಶ್ವಾಸದಿಂದ ಹೋಗಿದ್ದೀರಿ. ಏನಾಯಿತು? ಕಳೆದ ವಾರ ಬಂದಾಗ ಏನು ಹೇಳಿದ್ದೆ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಾಂಡವ್‌, “ಕೋ-ವಿಐಪಿ ಆಗಬೇಡಿ ಎಂದು ಹೇಳಿದ್ದೀರಿ” ಎಂದು ನೆನಪಿಸಿದ್ದಾರೆ.

ಬಳಿಕ ತಾಂಡವ್‌ ಅವರ ಬಿಗ್‌ಬಾಸ್‌ ಜರ್ನಿಯ ವಿಡಿಯೊ ಪ್ರಸಾರ ಮಾಡುವಂತೆ ಸುದೀಪ್‌ ಸೂಚಿಸಿದ್ದಾರೆ. ಆದರೆ, ವಿಡಿಯೊ ಅರ್ಧದಲ್ಲೇ ನಿಂತಿದ್ದು, ಇದಕ್ಕೆ ಸುದೀಪ್‌ ಅವರು, “ಇದರ ಅರ್ಥ ನಿಮ್ಮ ಜರ್ನಿ ಇನ್ನೂ ಮುಕ್ತಾಯವಾಗಿಲ್ಲ” ಎಂದು ಹೇಳಿದ್ದಾರೆ.

“ಜನರ ವೋಟಿಂಗ್‌ ಮೇಲೆ ನಮಗೆ ನಂಬಿಕೆಯಿದೆ. ಜನರ ವಿರುದ್ಧ ಹೋಗುವ ಹಕ್ಕು ನಮಗಿಲ್ಲ,” ಎಂದು ಸುದೀಪ್‌ ಹೇಳಿದ್ದಾರೆ. ಬಳಿಕ ತಾಂಡವ್‌ಗೆ ಬುದ್ಧಿಮಾತು ಹೇಳಿ ಅವರನ್ನು ಮತ್ತೆ ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸಿದ್ದಾರೆ.

ಹೀಗಾಗಿ ಹಲವು ಟ್ವಿಸ್ಟ್‌ಗಳ ನಡುವೆ ತಾಂಡವ್‌ ಮತ್ತೆ ಬಿಗ್‌ಬಾಸ್‌ ಮನೆಗೆ ಪ್ರವೇಶಿಸಲಿದ್ದು, ಮುಂದಿನ ದಿನಗಳಲ್ಲಿ ಅವರ ಆಟ ಯಾವ ತಿರುವು ಪಡೆಯಲಿದೆ ಎಂಬುದರ ಕುರಿತು ಕುತೂಹಲ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com