ಶಿವಂ ಚಿತ್ರದ ಸ್ಟಿಲ್
ಶಿವಂ ಚಿತ್ರದ ಸ್ಟಿಲ್

'ಶಿವಂ' ಅಂತಾ ಹೋಗಬೇಡಿ ರೋಡಿನಲಿ

ನಟ ಉಪೇಂದ್ರ ಅಭಿನಯದ ಶೀರ್ಪಿಕೆ ಮೂಲಕ ವಿವಾದ ಸೃಷ್ಠಿಸಿದ್ದ 'ಬಸವಣ್ಣ' ಅಲ್ಲಲ್ಲ...
Published on

ಈ ಭಾನುವಾರ ಕಾಯಕವೇ ಕೈಲಾಸ ಎಂದುಕೊಂಡು ನಿಮ್ಮ ನಿಮ್ಮ ಕೆಲಸದಲ್ಲಿ ಮಗ್ನರಾಗುವುದು, ಕಾಯಕಯೋಗಿ ಬಸವಣ್ಣನವರಿಗೆ ತೋರಬಹುದಾದ ಗೌರವ.

ನಟ ಉಪೇಂದ್ರ ಅಭಿನಯದ ಶೀರ್ಪಿಕೆ ಮೂಲಕ ವಿವಾದ ಸೃಷ್ಠಿಸಿದ್ದ 'ಬಸವಣ್ಣ' ಅಲ್ಲಲ್ಲ... 'ಶಿವಂ' ಚಿತ್ರದಲ್ಲಿ ಉಪೇಂದ್ರ ತಮ್ಮ ವಿಶ್ವರೂಪವನ್ನು ತೋರಿಸಿದ್ದಾರೆ.

ಚಿತ್ರದಲ್ಲಿ ಉಪೇಂದ್ರ ಮೊದಲ ಬಾರಿಗೆ ಬ್ರಾಹ್ಮಣ ಅರ್ಚಕನಾಗಿ ಕಾಣಿಸಿದ್ದಾರೆ. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಬೋಧಿಸುವಂತೆ ಧರ್ಮೋ ರಕ್ಷತಿ ರಕ್ಷತಃ(ಧರ್ಮವನ್ನು ನೀನು ಕಾಪಾಡು ಧರ್ಮ ನಿನ್ನನ್ನು ಕಾಪಾಡುತ್ತೆ) ಎಂಬುದು ಶಿವಂ ಚಿತ್ರದ ಎಳೆ. ಅದನ್ನು 2 ಗಂಟೆಯ ಚಿತ್ರವನ್ನಾಗಿ ಎಳೆದಿದ್ದಾರೆ ಶ್ರೀನಿವಾಸ್ ರಾಜು.

ರಾ(RAW)ಏಜೆಂಟ್ ಆಗಿರುವ ಬಸವಣ್ಣ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತಿನಂತೆ ಭಾರತದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಿದ್ದ ಭೂಗತ ದೊರೆಗಳನ್ನು ಅಳಿಸಿ ಹಾಕಲು ಅಲೆಕ್ಸಾಂಡರ್ ಆಗಿ  ಭೂಗತ ದೊರೆ ಅಮಾನುಲ್ಲಾ ಖಾನ್(ರವಿಶಂಕರ್)ನ ಸಂಹಾರಕ್ಕೆ ಮುಂದಾಗುತ್ತಾನೆ. ಇದಕ್ಕಾಗಿ ಮಂದಿರ(ರಾಗಿಣಿ ದ್ವಿವೇದಿ, ರಾ ಏಜೆಂಟ್)ಳನ್ನು ಅಮಾನುಲ್ಲಾ ಖಾನ್‌ಗೆ ಹತ್ತಿರವಾಗುವಂತೆ ಮಾಡುತ್ತಾನೆ. ರಾಗಿಣಿಯಿಂದ ಖಾನ್‌ನ ಮುಂದಿನ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವ ಬಸವಣ್ಣ ಮೊದಲಿಗೆ ಆತನ ಸಹಚರರನ್ನು ಕೊಂದು, ಖಾನ್‌ನನ್ನು ಪೊಲೀಸರು ಬಂಧಿಸುವಂತೆ ಮಾಡುತ್ತಾನೆ. ಜಾಮೀನಿನ ಮೇಲೆ ಹೊರಗೆ ಬಂದ ಖಾನ್‌ನನ್ನು ಮಾಧ್ಯಮದವರ ಮುಂದೆ ಕೊಲ್ಲುತ್ತಾನೆ. ಆದರೆ ಖಾನ್ ತನ್ನ ತದ್ರೂಪಿಯನ್ನು ಸೃಷ್ಟಿಸಿಕೊಂಡು ಆತನನ್ನು ಮುಂದೆ ಬಿಟ್ಟು ತಾನು ತೆರೆಯ ಹಿಂದೆ ನಿಲ್ಲುತ್ತಾನೆ. ಸತ್ತಿದ್ದು ಭೂಗತ ದೊರೆ ಖಾನ್ ಎಂದು ತಿಳಿಯುತ್ತಾನೆ. ಆದರೆ ಖಾನ್ ಬದುಕಿರುವ ವಿಚಾರವನ್ನು ಅರಿತ ಬಸವಣ್ಣ ಮತ್ತೆ ಖಾನ್‌ನನ್ನು ಸಂಹಾರ ಮಾಡುತ್ತಾನೋ ಇಲ್ಲವೋ ಎನ್ನುವುದನ್ನು ತಿಳಿಯಬೇಕೆನ್ನುವವರು ಮಾತ್ರ ಚಿತ್ರವನ್ನು ನೋಡಬೇಕು.

ತಲೆತಲಾಂತರವಾಗಿ ಬಂದಿರುವ ಅರ್ಚಕ ವೃತ್ತಿಯನ್ನು ಪರಮೇಶ್ವರ ಭಟ್ಟ(ಶ್ರೀನಿವಾಸಮೂರ್ತಿ)ಮುಂದುವರೆಸಿಕೊಂಡು ಬಂದಿರುತ್ತಾರೆ. ಆದರೆ ಕೆಲ ಹಿತಾಸಕ್ತಿಗಳು ದೇವಾಲಯವನ್ನು ಆಡಳಿತವನ್ನು ತಮ್ಮ ಹಿಡಿತಕ್ಕೆ ಪಡೆಯಲು ಹವಣಿಸುತ್ತಾರೆ. ರಾಜರಿಂದ ಬಳುವಳಿಯ ಸಂಕೇತವಾಗಿ ಬಂದಿರುವ ಅರ್ಚಕವೃತ್ತಿಯನ್ನು ತಮ್ಮ ಅಸ್ವಿತ್ವದ ಮೂಲ ಎಂದು ಭಾವಿಸುವ ಪರಮೇಶ್ವರ ಭಟ್ಟ ಇದಕ್ಕೆ ಅಡಿಯಾಗುತ್ತಾರೆ. ಇದರ ಸಲುವಾಗಿ ತಮ್ಮ ಮೊದಲ ಮಗ ಶಿವ(ಗೌರೀಶ್ ಅಕ್ಕಿ)ನನ್ನು ಅರ್ಚಕ ವೃತ್ತಿಯನ್ನು ಮುಂದುವರೆಸುವಂತೆ ಕೇಳುತ್ತಾರೆ. ಸಂಶೋಧಕ ವೃತ್ತಿಯಲ್ಲಿ ತಿಂಗಳಿಗೆ 1 ಕೋಟಿಯಷ್ಟು ಸಂಬಳ ತೆಗೆದುಕೊಳ್ಳುವ ಶಿವ ಇದನ್ನು ತಿರಸ್ಕರಿಸುತ್ತಾನೆ. ಈ ಆಘಾತದಿಂದ ಪರಮೇಶ್ವರ ಭಟ್ಟರು ಹೃದಯಾಘಾತದಿಂದ ಮೃತಪಡುತ್ತಾರೆ. ಈ ಸಮಯದಲ್ಲಿ ಪರಂಪರಾಗತವಾಗಿ ಬಂದಿರುವ ಅರ್ಚಕರ ವೃತ್ತಿಯನ್ನು ಬಸವಣ್ಣ ಮುಂದುವರೆಸುತ್ತಾನಾ? ಎಂಬುದು ಚಿತ್ರದ ಸಸ್ಪೆನ್ಸ್.
ಬಸವಣ್ಣ ಎಂದು ಹೆಸರಿಟ್ಟ ಪಾತ್ರದ (ನಾಯಕನ) ಬಾಯಲ್ಲಿ ಅವಾಚ್ಯ ಶಬ್ಧಗಳನ್ನು ನಿರ್ದೇಶಕ ಶ್ರೀನಿವಾಸ್ ರಾಜು ಆಡಿಸಿದ್ದಾರೆ. ಬಸವಣ್ಣ ಶಿವನ್ನ ಬಿಟ್ಟು ಬೇರೆ ಯಾರನ್ನೂ ಕಾಯಲ್ಲ. ಫಸ್ಟ್ ಬುಲೆಟ್ ನಾವೇ ಹಾರಿಸಲಿಲ್ಲ ಅಂದ್ರೆ ಉಳಿಯಲ್ಲ. ಇದರ ಮಧ್ಯೆ ತೇರಿ ಮಾ ಕಿ ಎಂಬ ಸಂಭಾಷಣೆಯೂ ಇದೆ.

ಚಿತ್ರಕ್ಕೆ ಬಹುತಾರಾಗಣವಿದ್ದು ಬ್ರಾಹ್ಮಣ ಕುಟುಂಬದ ಮುಗ್ಧ ಹೆಣ್ಣಿನ ಪಾತ್ರ ನಿರ್ವಹಿಸಿರುವ ಸಲೋನಿ ಅಸ್ವಾನಿ ಬಸವಣ್ಣನನ್ನು ಕಾಡುವಾಗ ಮಾತ್ರ ಪ್ರೇಕ್ಷಕರಿಗೆ ನಗು ತರಿಸುತ್ತದೆ. ಉಳಿದ ಸಮಯದಲ್ಲಿ ಮೈಯೆಲ್ಲಾ ತುರಿಸುತ್ತದೆ. ಎದೆಯ ಮೇಲೆ ಕೋ'ಬ್ರಾ' ಹಚ್ಚೆ ಹಾಕಿಸಿಕೊಂಡು ನಾಗಿಣಿಯಂತೆ ಭುಸುಗುಟ್ಟಿದ್ದಾರೆ ರಾಗಿಣಿ. ಸತ್ವವೇ ಇರದ ಯಾವುದೇ ತತ್ವವೂ ಇರದ ಚಿತ್ರಕ್ಕೆ ಪ್ರೇಕ್ಷಕನನ್ನು ಕರೆತರಲು ರಾಗಿಣಿಗೊಂದು ಐಟಂ ಸಾಂಗ್ ಇದೆ.

ಸಂಗೀತ ವಿದ್ವಾನ್ ಆಗಿ ಕಾಣಿಸಿಕೊಂಡಿರುವ ಬುಲೆಟ್ ಪ್ರಕಾಶ್‌ರದ್ದು ಸಂಪೂರ್ಣ ಹಾಸ್ಯಮಯ ಪಾತ್ರ. ದೇವಸ್ಥಾನದ ಕಮಿಟಿ ಸದಸ್ಯರಾಗಿ ದೊಡ್ಡಣ್ಣ, ಶರತ್ ಲೋಹಿತಾಶ್ವ ಅಭಿನಯ ಎಂದಿನಂತೆ ಕೊಟ್ಟ ಪಾತ್ರ ನಿರ್ವಹಿಸಿದ್ದಾರೆ. ಬಸವಣ್ಣನ ತಂದೆಯಾಗಿ ಶ್ರೀನಿವಾಸಮೂರ್ತಿ ಹಾಗೂ ತಾಯಿಯಾಗಿ ನಟಿ ಗೀತಾ ಮಾಮೂಲಿ. ಹಿರಿಯ ನಟ ಶಿವರಾಂ ಬಸವಣ್ಣನಿಗೆ ತಾತನಾಗಿ ಧಾರ್ಮಿಕ ಆಚಾರ ವಿಚಾರಗಳನ್ನು ಕಲಿಸುವ ಪಾತ್ರ ಪೋಷಣೆ ಮಾಡಿದ್ದಾರೆ. ಅಘೋರಿ ಪಾತ್ರದಲ್ಲಿ ಮಕರಂದ ದೇಶಪಾಂಡೆ ಸಹಜ ಅಭಿನಯ ನೀಡಿರುವುದು ಮೆಂಟಲ್ ಪಾತ್ರ ಮೆಚ್ಚುವವರಿಗೆ ಇಷ್ಟವಾಗಬಹುದು.

ವಿದೇಶದಲ್ಲೂ ಚಿತ್ರೀಕರಣವಾಗಿರುವ ಶಿವಂ ಚಿತ್ರ ಸುಮಾರು 15 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ,  ತೆಲುಗು ಸಂಗೀತ ನಿರ್ದೇಶಕ ಮಣಿಶರ್ಮಾರ ಸಂಗೀತ ಚಿತ್ರಕ್ಕಿದೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವಾಳವಾಗಿದೆ. ಸಿ. ಆರ್ ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೂ, ಚಿತ್ರಕಥೆಯಲ್ಲಿ ಬಂಡವಾಳವೇ ಇಲ್ಲ.
ಈ ಭಾನುವಾರ ಕಾಯಕವೇ ಕೈಲಾಸ ಎಂದುಕೊಂಡು ನಿಮ್ಮ ನಿಮ್ಮ ಕೆಲಸದಲ್ಲಿ ಮಗ್ನರಾಗುವುದು, ಕಾಯಕಯೋಗಿ ಬಸವಣ್ಣನವರಿಗೆ ತೋರಬಹುದಾದ ಗೌರವ.


- ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com