ಅಭಿಮಾನಿ-ತಾರೆಯರ ನಡುವಿನ ಸಂಘರ್ಷಕ್ಕೆ ಹಿಡಿದ ಕನ್ನಡಿ ಫ್ಯಾನ್

ಸ್ಟಾರ್ ಮತ್ತು ಅವನ ಅಭಿಮಾನಿಯ ಸಂಕೀರ್ಣವಾದ ಸಂಬಂಧವನ್ನು ಉತ್ತಮವಾಗಿ ಸೆರೆ ಹಿಡಿದಿರುವ ಸ್ಕ್ರಿಪ್ಟ್ ನಲ್ಲಿ,...
ಅಭಿಮಾನಿ-ತಾರೆಯರ ನಡುವಿನ ಸಂಘರ್ಷಕ್ಕೆ ಹಿಡಿದ ಕನ್ನಡಿ ಫ್ಯಾನ್
Updated on

ಸಿನೆಮಾ: ಫ್ಯಾನ್ (ಅಭಿಮಾನಿ)
ಭಾಷೆ: ಹಿಂದಿ
ತಾರಾಗಣ: ಶಾರುಕ್ ಖಾನ್, ಸಯನಿ ಗುಪ್ತಾ, ದೀಪಿಕಾ ಅಮಿನ್ ಮತ್ತು ಯೋಗೇಂದ್ರ ಟಿಕೂ
ನಿರ್ದೇಶಕ: ಮನೀಶ್ ಶರ್ಮ

ಸಾಮಾನ್ಯ ಸ್ಕ್ರಿಪ್ಟ್ ಗಳು ಮತ್ತು ಸಾಧಾರಣ ನಿರ್ದೇಶಕರ ಮಧ್ಯೆ ಸಿಲುಕಿ ನರಳಿದ್ದ ನಟನ ಕಂಬ್ಯಾಕ್ ಸಿನೆಮಾ 'ಫ್ಯಾನ್' ಎನ್ನಲು ಅಡ್ಡಿಯಿಲ್ಲ.

ಸ್ಟಾರ್ ಮತ್ತು ಅವನ ಅಭಿಮಾನಿಯ ಸಂಕೀರ್ಣವಾದ ಸಂಬಂಧವನ್ನು ಉತ್ತಮವಾಗಿ ಸೆರೆ ಹಿಡಿದಿರುವ ಸ್ಕ್ರಿಪ್ಟ್ ನಲ್ಲಿ, ಮತ್ತು ಈ ಎರಡೂ ಪಾತ್ರಗಳಲ್ಲಿ ಶಾರುಕ್ ಖಾನ್ ಮಿಂಚಿರುವುದು ವಿಶೇಷ. ಹೌದು ಅಭಿಮಾನಿಯಾಗಿಯೂ, ತಾರೆಯಾಗಿಯೂ ನಟಿಸಿರುವ ಶಾರುಕ್ ಖಾನ್ ತಮ್ಮ ಅಭಿಮಾನಿಗಳ ಮನಗೆಲ್ಲುವುದರಲ್ಲಿ ಸಂಶಯ ಇಲ್ಲ.

ಸ್ಟಾರ್ ಆರ್ಯನ್ ಮತ್ತು ಅಭಿಮಾನಿ ಗೌರವ್ - ದ್ವಿಪಾತ್ರಗಳಲ್ಲಿ ಶಾರುಕ್ ಖಾನ್ ನಟನೆ, ಈ ಎರಡು ಪಾತ್ರಗಳ ನಡುವಿನ ಸಂದಿಗ್ಧತೆ, ಘರ್ಷಣೆ, ಪ್ರೀತಿ- ಇವುಗಳನ್ನು ಸಮರ್ಥವಾಗಿ ಹಿಡಿದಿಡುವ ಸ್ಕ್ರಿಪ್ಟ್ ಸಿನೆಮಾದ ಹೈಲೈಟ್ ಎನ್ನಬಹುದು.

ಸೂಪರ್ ಸ್ಟಾರ್ ಆರ್ಯ ಖನ್ನನಾಗಿ ನಟಿಸಿರುವ ಪಾತ್ರ, ಅವನ ಹುಚ್ಚು ಅಭಿಮಾನಿಯಾದ ಗೌರವ್ ಪಾತ್ರಕ್ಕಿಂತಲೂ ಶಾರುಕ್ ಖಾನ್ ಅವರಿಗೆ ನಟಿಸಲು ಸುಲಭವಾಗಿದೆ ಎನ್ನಿಸಿದರೂ, ತುಸು ವಿಭಿನ್ನ ಕೋನದಲ್ಲಿ ಚಿಂತಿಸಿದರೆ ಸ್ಟಾರ್ ಪಾತ್ರ ನಿಭಾಯಿಸುವುದು ಕಷ್ಟವೇ. ಆದರೆ ಶಾರುಕ್ ಖಾನ್ ತಮ್ಮ ನಿಜ ಜೀವನದ ಅಂಶಗಳನ್ನು ತೆರೆಯ ಮೇಲೆ ಸುಲಭವಾಗಿ-ಸುಲಲಿತವಾಗಿ ಮೂಡಿಸುತ್ತಾ ಹೋಗುತ್ತಾರೆ.

ಇನ್ನು ಅಭಿಮಾನಿ ಗೌರವ್ ಖನ್ನ ಪಾತ್ರ ಕೂಡ ಬಹಳ ಆಪ್ತವಾದ-ನಂಬುವಂತಹ ಪಾತ್ರವಾಗಿದೆ. ಆದರೂ ವಿಭಿನ್ನವಾಗಿದೆ ಎಂದೆನಿಸದೆ ಇರದು. ಈ ಎರಡು ಪಾತ್ರಗಳನ್ನು ಯಾರೋ ವಿಭಿನ್ನ ನಟರು ನಟಿಸಿದ್ದಾರೆ ಎಂಬ ಸಂಶಯ ಮೂಡಿಸುವಂತಿದೆ. ಇದೇ ಆ ಪಾತ್ರ ಕಲ್ಪನೆಯ ಶಕ್ತಿ. ಗೌರವ್ ಪಾತ್ರದ ಕಂಠ, ಆಂಗಿಕ ಅಭಿನಯ ಎಲ್ಲವೂ ವಿನೂತನವಾಗಿ ಮೂಡಿ ಬಂದಿದ್ದು, 'ಮೈ ನೇಮ್ ಇಸ್ ಖಾನ್' ಮತ್ತು 'ರಬ್ ದೇ ಬನಾದಿ ಜೋಡಿ'ಯ ಶಾರುಕ್ ಖಾನ್ ಅವರನ್ನು ತುಸು ನೆನಪಿಗೆ ತರುತ್ತದೆ,

ಇವರ ಜೊತೆಗೆ ಸಹನಟರಾದ ಸಯಾನಿ ಗುಪ್ತಾ, ದೀಪಿಕಾ ಅಮಿನ್ ಮತ್ತು ಯೋಗೇಂದ್ರ ಯಾದವ್ ಕೂಡ ಅದ್ಭುತ ಸಾಥ್ ನೀಡಿದ್ದು, ಸೂಪರ್ ಸ್ಟಾರ್ ಮತ್ತು ಖಿನ್ನತೆಯ ಹುಚ್ಚು ಅಭಿಮಾನಿಯ ನಡುವಿನ ಸಂಘರ್ಷಕ್ಕೆ ರಂಗೇರಿಸುತ್ತದೆ.

ಸ್ಟಾರ್ ಒಬ್ಬನಿಗೆ ಇರಬಹುದಾದ ಒಳಗಿನ ತಲ್ಲಣಗಳನ್ನು ಹಿಡಿದಿಡಲು ಕಥೆಗಾರ ಹಬೀಬ್ ಫೈಸಲ್ ಯಶಸ್ವಿಯಾಗಿದ್ದಾರೆ. ತಾರೆ ಮತ್ತು ಅಭಿಮಾನಿಯ ನಡುವೆ ಪ್ರೀತಿಯ ಸಂಬಂಧಕ್ಕಿಂತಲೂ ಅವರ ನಡುವಿನ ಘರ್ಷಣೆಯನ್ನು ಅತ್ಯುತ್ತಮವಾಗಿ ಹಿಡಿದಿಟ್ಟು, ಆರಾಧಿಸುವ ವ್ಯಕ್ತಿ ಮತ್ತು ಆರಾಧಕನ ನಡುವಿನ ಸಂಬಂಧವನ್ನು ಇನ್ನೊಂದು ಸ್ಥರಕ್ಕೆ ಕೊಂಡೊಯ್ಯುತ್ತಾರೆ.

ಇದಕ್ಕೆ ಪೂರಕವಾಗಿ ಕೆಲಸ ಮಾಡಿರುವವರು ಸಂಕಲನಕಾರ್ತಿ ನಮ್ರತಾ ರಾವ್. ಡ್ರಾಮಾದ ಕಥೆಗೆ ಕುಂದು ಬರದಂತೆ, ಈ ಸಂಘರ್ಷಕ್ಕೆ ಬೇಕಾದ ವೇಗವನ್ನು ಒದಗಿಸಿಕೊಡಲು ಸಂಕಲಕಾರ್ತಿ ಯಶಸ್ವಿಯಾಗಿದ್ದಾರೆ. ಅಂತ್ಯಕ್ಕೆ ಪ್ಲಾಟ್ ತುಸು ಸವಕಲು ಎನಿಸಿದರೂ, ಬಹುಷಃ ನಿಜ ಜೀವನದಲ್ಲಿ ಸಮವಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಇಂತಹುದೇ ಎನ್ನುವ ಸಂಶವನ್ನೂ ಬಿತ್ತುತ್ತದೆ.

ಕೊನೆಗೆ 'ಫ್ಯಾನ್' ಹೇಳುವ ತತ್ವವೆಂದರೆ ತಾರೆ ಮತ್ತು ಅಭಿಮಾನಿಯ ನಡುವೆ ಒಂದು ಸೂತ್ರ-ಸಂಬಂಧ-ಅಂತರ ಉಳಿದಿರುತ್ತದೆ ಮತ್ತು ಆ ಅಂತರವನ್ನು ಒಡೆಯುವ ಪ್ರತಿ ಯತ್ನವೂ ದುರಂತದಲ್ಲಿ ಕೊನೆಯಾಗುತ್ತದೆ! ತನ್ನ ಅಭಿಮಾನಿಗಳೊಂದಿಗೆ ಬೆರೆತು ಬದುಕಬೇಕು ಅವರಲ್ಲಿ ಒಂದಾಗಿ ಇರಬೇಕೆಂದು ಯೋಚಿಸುವ ಎಲ್ಲ ತಾರೆಯರೂ, ಮತ್ತು ಸ್ಟಾರ್ ಗಳ ಜೊತೆ ಬೆರೆತು ಒಂದಾಗಿ ಬದುಕಬೇಕೆಂದು ಕನಸು ಕಾಣುವ ಅಭಿಮಾನಿಗಳು ನೋಡಬೇಕಾದ ಸಿನೆಮಾ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com