ಬೆಂಗಳೂರು: ನಾನಿಯ ಈ ಚಿತ್ರ ನೋಡುವುದಕ್ಕೆ ಕೂರುವ ಮುನ್ನ ವೀಕ್ಷಕರಲ್ಲಿ, ಅಭಿಮಾನಿಗಳಲ್ಲಿ ಮೂಡುವ ಮೊತ್ತ ಮೊದಲ ಪ್ರಶ್ನೆ ಸಿನಿಮಾದ ಶೀರ್ಷಿಕೆ ಕುರಿತಾದದ್ದು. ಟಕ್ ಜಗದೀಶ್ ಎನ್ನುವ ಹೆಸರೇ ಅನೇಕರಿಗೆ ಕುತೂಹಲ ಮೂಡಿಸಬಹುದು. ಅದಕ್ಕೆ ಉತ್ತರ ಸಿಗಬೇಕೆಂದರೆ ಸಿನಿಮಾದ ಮೊದಲಾರ್ಧದ ತನಕ ಕಾಯಬೇಕು.
ಚಿತ್ರದ ಕಥೆ ಶುರುವಾಗುವುದು, ಕೊನೆಗೊಳ್ಳುವುದು ಭೂದೇವಿಪುರಂ ಎನ್ನುವ ಕಾಲ್ಪನಿಕ ಊರಿನಲ್ಲಿ. ಅಲ್ಲಿ 500 ಎಕರೆ ಹೊಂದಿದ ಜಮೀನ್ದಾರಿ ಕುಟುಂಬ. ಯಜಮಾನನಿಗೆ ಇಬ್ಬರು ಪತ್ನಿಯರು. ಮೊದಲನೆಯವಳು ಸತ್ತ ನಂತರ ಎರಡನೇ ಮದುವೆಯಾಗಿರುತ್ತಾನೆ ಆತ.
ಮೊದಲನೇ ಪತ್ನಿಯ ಇಬ್ಬರು ಮಕ್ಕಳಲ್ಲಿ ಜಗದೀಶ್ ಕಿರಿಯವ. ದೊಡ್ಡವನು ಜಗಪತಿ ಬಾಬು. ಎರಡನೇ ಪತ್ನಿಗೆ ಮೂವರು ಹೆಣ್ಣುಮಕ್ಕಳು. ತುಂಬು ಕುಟುಂಬದಲ್ಲಿ ಬೆಳೆದ ಜಗದೀಶ್ ಹೆಂಗರುಳಿನವ. ಮನೆಮಂದಿಗೆಲ್ಲಾ ಅಚ್ಚುಮೆಚ್ಚಿನವ.
ಈ ಸಿನಿಮಾ ನಂತರ ನಾನಿ ಅಭಿಮಾನಿಗಳ ಖಾತೆಗೆ ಇನ್ನಷ್ಟು ಮಹಿಳಾಮಣೀಯರು ಸೇರ್ಪಡೆಯಾದರೆ ಅಚ್ಚರಿಯೇನಿಲ್ಲ. ಈ ಸಿನಿಮಾದ ಕಥಾನಕ ಫ್ಯಾಮಿಲಿ ಡ್ರಾಮಾ ಅಲ್ಲ. ಹಾಗೆಂದು ಫ್ಯಾಮಿಲಿ ಡ್ರಾಮ ಇಲ್ಲವೆಂದಲ್ಲ. ಸಿನಿಮಾ ತುಂಬಾ ಅದು ತುಂಬಿಕೊಂಡಿದ್ದರೂ ಸಿನಿಮಾದ ಕೇಂದ್ರಬಿಂದು ಭೂವ್ಯಾಜ್ಯೆಗಳು. ಈ ಮಾತನ್ನು ದೃಢೀಕರಿಸುತ್ತದೆ ಸಿನಿಮಾ ಓಪನಿಂಗ್ ಶಾಟ್.
ಊರಿಗೆ ಹೊಸದಾಗಿ ಬರುವ ಎಂ ಆರ್ ಒ (ಮಂಡಲ್ ಪಂಚಾಯತ್ ಆಫೀಸರ್)ನಿಗೆ ದಾರಿಯಲ್ಲಿ ಸಿಗುವ ವ್ಯಕ್ತಿಯೊಬ್ಬ ಭೂದೇವಿಪುರದಲ್ಲಿನ ಭೂ ಮಾಫಿಯಾ ಬಗ್ಗೆ ಎಚ್ಚರಿಕೆ ಹೇಳುತ್ತಾನೆ. ಎಚ್ಚರಿಕೆ ಹೇಳುವಾತ ಕೇಡಿಯ ಕಡೆಯವನೇ ಆಗಿರುತ್ತಾನೆ.
ಜಗದೀಶ್ ತಂದೆ ಜಮೀನ್ದಾರ ಆದಿಶೇಷ್ ಗಾಂಧಿ ತತ್ವ ಮತ್ತು ವಿನೋಬಾ ಭಾವೆ ಆಶಯವನ್ನು ಅಳವಡಿಸಿಕೊಂಡ ವ್ಯಕ್ತಿ. ಗ್ರಾಮಸ್ಥರಿಗಾಗಿ ತನ್ನ ಜಮೀನನ್ನೇ ಬಿಟ್ಟುಕೊಡುವ ವ್ಯಕ್ತಿ. ಅದೇ ಕೇಡಿ ಗ್ರಾಮಸ್ಥರ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿಕೊಂಡಿರುತ್ತಾನೆ. ಹಳ್ಳಿಗೆ ಬರುವ ಪ್ರತಿ ಎಂ ಆರ್ ಒ ನನ್ನು ಬುಟ್ಟಿಗೆ ಹಾಕಿಕೊಂದು ನಕಲಿ ದಾಖಲೆ ಸೃಷ್ಟಿಸಿ, ಬೆದರಿಸಿ ಅಕ್ರಮ ಒತ್ತುವರಿ ಮಾಡಿಕೊಂಡಿರುತ್ತಾನೆ. ಊರಿನ ಹೆಸರೇ ಹೇಳುವಂತೆ ಭೂದೇವಿಪುರ.
ಊರ ಮುಖಂಡ ಆದಿಶೇಷ ತೀರಿಕೊಳ್ಳುತ್ತಾನೆ. ತಂದೆಯ ಮಾತನ್ನು ಮಗ ಉಳಿಸಿಕೊಂಡು ಹೋಗುತ್ತಾನೆ, ತಮ್ಮನ್ನು ಕಾಪಾಡುತ್ತಾನೆ ಎಂದು ಗ್ರಾಮಸ್ಥರು ಅಂದುಕೊಳ್ಳುತ್ತಿರುವಾಗಲೇ ಆದಿಶೇಷನ ಹಿರಿಯ ಮಗ, ಜಗದೀಶ್ ಅಣ್ಣ ಕೇಡಿ ಜೊತೆ ಒಂದಾಗಿ ತಾನೂ ಭೂಕಬಳಿಕೆಗೆ ನಿಂತುಬಿಡುತ್ತಾನೆ. ಅಲ್ಲದೆ ತನ್ನ ಮಲತಾಯಿಯನ್ನೂ, ಆಕೆಯ ಮಕ್ಕಳನ್ನೂ ಮನೆಯಿಂದ ಹೊರಹಾಕುತ್ತಾನೆ.
ಇದೀಗ ಅವರೆಲ್ಲರ ಕಷ್ಟ ಪರಿಹಾರ ಮಾಡುವ ಸಾಮರ್ಥ್ಯ ಇರುವ ನೂತನ ಎಂ ಆರ್ ಒ ಹಳ್ಳಿಗೆ ಬರುತ್ತಾನೆ. ಆತನಿಂದ ಗ್ರಾಮಸ್ಥರ ಕಷ್ಟ ಮತ್ತು ಜಮೀನ್ದಾರ ಕುಟುಂಬದ ಕಷ್ಟಗಳೆಲ್ಲವೂ ಕಳೆಯುತ್ತದೆ. ಆತ ಯಾರು ಎನ್ನುವುದು ಒಂದು ಟ್ವಿಸ್ಟ್. ಈ ಸಿನಿಮಾದಲ್ಲಿ ಹಲವು ಟ್ವಿಸ್ಟ್ ಗಳಿವೆ. ನಾನಿಯ ಅಭಿಮಾನಿಗಳಿಗೆ ಈ ಟ್ವಿಸ್ಟ್ ಗಳು ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.
ತಾರಾಗಣದಲ್ಲಿ ನಾಯಕಿಯಾಗಿ ಪೆಳ್ಳಿ ಚೂಪುಲು ಸಿನಿಮಾ ಖ್ಯಾತಿಯ ರಿತು ವರ್ಮಾ, ನಾಜರ್, ಜಗಪತಿ ಬಾಬು, ಕೇಡಿಯಾಗಿ ಕನ್ನಡದ ಕಿರಾತಕ ಖ್ಯಾತಿಯ ಡೇನಿಯಲ್ ಬಾಲಾಜಿ ಮತ್ತಿತರರು ನಟಿಸಿದ್ದಾರೆ. ಟಕ್ ಜಗದೀಶ್ ಸಿನಿಮಾ ಡೈರೆಕ್ಟ್ ಆಗಿ ಒಟಿಟಿ ಪ್ಲಾಟ್ ಫಾರ್ಮ್ ಅಮೇಜಾನ್ ಪ್ರೈಂ ನಲ್ಲಿ ತೆರೆ ಕಂಡಿದೆ.
ಹೊಡೆದಾಟ ಬಡಿದಾಟಗಳಿದ್ದರೂ ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ಕೌಟುಂಬಿಕ ಮನರಂಜನೆಯ ಚಿತ್ರ. ಗ್ರಾಮದ ಚಿತ್ರಣವನ್ನು ಕಟ್ಟಿಕೊಡುತ್ತದೆ ಎನ್ನಲಡ್ಡಿಯಿಲ್ಲ.