

ಯಶ್-ರಣಬೀರ್ ಕಪೂರ್ ಅಭಿನಯದ 'ರಾಮಾಯಣ: ಭಾಗ 1' ಚಿತ್ರವು ವಾಲ್ಮೀಕಿ ರಾಮಾಯಣವನ್ನು ಆಧರಿಸಿ, ರಾವಣನ ಅಟ್ಟಹಾಸದಿಂದ ರಾಮನ ಜನನದವರೆಗೆ ಕಥೆಯನ್ನು ಚಿತ್ರಿಸುತ್ತದೆ. ದೃಶ್ಯ ವೈಭವ, ಶಬ್ದ ಸಂಯೋಜನೆ, ಮತ್ತು ಪಾತ್ರಗಳ ನಟನೆ ಪ್ರೇಕ್ಷಕರನ್ನು ಸೆಳೆಯುತ್ತವೆ. ಆದರೆ, ಭಾವನಾತ್ಮಕ ಸಂಪರ್ಕದಲ್ಲಿ ಚಿತ್ರವು ನಿರಂತರವಾಗಿ ಹೆಣಗಾಡುತ್ತದೆ.
ನಮಿತ್ ಮಲ್ಹೋತ್ರಾ ನಿರ್ಮಾಣದ ನಿತೇಶ್ ತಿವಾರಿ ನಿರ್ದೇಶಿಸಿ ಯಶ್ -ರಣಬೀರ್ ಕಪೂರ್ ಅಭಿನಯಿಸಿರುವ ರಾಮಾಯಣ ತೆರೆಕಂಡಿದೆ. ನಮಿತ್ ಮಲ್ಹೋತ್ರಾ ರಾಮಾಯಣ ಎಂದು ಹೆಸರಿಟ್ಟಿರುವುದು ಈಗ ಅರ್ಥಪೂರ್ಣವೆನಿಸುತ್ತದೆ.
ನಿರ್ಮಾಪಕರು ತಮ್ಮನ್ನು ತಾವು ಅತಿಯಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಕಂಡು, ಸಾಕಷ್ಟು ತಮಾಷೆಗಳು ಮತ್ತು ಮೀಮ್ಗಳು ಹರಿದಾಡಿದ್ದವು. ಭಾರತದಿಂದ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಯಶಸ್ಸು ಕಂಡ 'ದಂಗಲ್' ಚಿತ್ರವನ್ನು ನಿರ್ದೇಶಿಸಿದ ನಿತೇಶ್ ತಿವಾರಿ ಈ ಚಿತ್ರ ನಿರ್ದೇಶಿಸಿದ್ದಾರೆ. 'ರಾಮಾಯಣ: ಭಾಗ 1' ಒಂದು ಬೃಹತ್ ದೃಶ್ಯ ವೈಭವ; ಇದು ಮಹತ್ವಾಕಾಂಕ್ಷೆಯಿಂದ ಕೂಡಿದೆ, ಹಾಗೆಂದ ಮಾತ್ರಕ್ಕೆ ನ್ಯೂನ್ಯತೆಗಳು ಇಲ್ಲವೆಂದಲ್ಲ. 4000 ಕೋಟಿ ರೂಪಾಯಿಗಳ ಬಜೆಟ್ನ ಮೇಲೆ — ಅವಲಂಬಿತವಾಗಿರುವ ಒಂದು ಸಾಹಸವಾಗಿದೆ. ಇಲ್ಲಿ ಕಥಾಹಂದರಕ್ಕಿಂತ ಹೆಚ್ಚಾಗಿ, ಕಣ್ಣಿಗೆ ಕಟ್ಟುವಂತಹ ದೃಶ್ಯ ವೈಭವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಕಥೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಒಂದಿಷ್ಟು ಪ್ರಸಂಗಗಳನ್ನು ಬೇರೆ ಬೇರೆ ರೀತಿಯಲ್ಲಿ ನಾವು ಕೇಳಿದ್ದಿರಬಹುದು, ಅವು ಚಿತ್ರದಲ್ಲಿ ಬದಲಾಗಿರುವುದನ್ನು ಕಾಣಬಹುದು. ಆದರೆ ಮೂಲ ಅದೇ. ಅಸುರರನ್ನು ಸೋಲಿಸುವ ಇಂದ್ರ, ಕುಬೇರನ ಕೈಗೆ ಲಂಕೆಯ ಅಧಿಕಾರ, ಕೈಕಸಿಯ ಪ್ರತೀಕಾರ, ರಾವಣನಾಗಿ ಬದಲಾಗುವ ದಶಾನನ, ಬ್ರಹ್ಮನ ಬಳಿ ಅಜೇಯತ್ವಕ್ಕಾಗಿ ವರ, ಆತನ ಸಂಹಾರಕ್ಕಾಗಿ ರಾಮನ ಜನನ, ಆತನ ಪರಾಕ್ರಮ, ವನವಾಸ, ಶೂರ್ಪನಖಿಯ ಪ್ರಸಂಗ, ಸೀತಾಪಹರಣ. ಇದು‘ರಾಮಾಯಣ: ಭಾಗ 1’ರ ಕಥೆಯಾಗಿದೆ.
ವಾಲ್ಮೀಕಿ ರಾಮಾಯಣವನ್ನು ಆಧರಿಸಿರುವ ಈ ಚಿತ್ರದ ಕಥೆ ಅಸುರರ ಸಾಮ್ರಾಜ್ಯದ ಏಳಿಗೆ ಮತ್ತು ರಾವಣನ ಪ್ರಾಬಲ್ಯದಿಂದ ಆರಂಭವಾಗುತ್ತದೆ. ದಶಾನನನಾದ ರಾವಣ (ಯಶ್) ದೇವಲೋಕದ ಮೇಲೆ ದಾಳಿ ನಡೆಸಿ, ಇಂದ್ರನನ್ನು (ಕುನಾಲ್ ಕಪೂರ್) ಸೋಲಿಸಿ, ಕುಬೇರನಿಂದ ಲಂಕೆಯನ್ನು ವಶಪಡಿಸಿಕೊಳ್ಳುತ್ತಾನೆ. ರಾವಣನ ಅಟ್ಟಹಾಸಕ್ಕೆ ಅಂತ್ಯ ಹಾಡುವಂತೆ ಇಂದ್ರನು ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣು ಅಯೋಧ್ಯೆಯ ರಾಜ ದಶರಥನ ಪುತ್ರನಾಗಿ ರಾಮನ (ರಣಬೀರ್ ಕಪೂರ್) ರೂಪದಲ್ಲಿ ಅವತರಿಸುತ್ತಾನೆ.
ರಾಜಕುಮಾರ ರಾಮನ ಜೀವನದಲ್ಲಿ ಎದುರಾಗುವ ಸವಾಲುಗಳು, ಮಿಥಿಲೆಯ ರಾಜಕುಮಾರಿ ಸೀತೆಯ (ಸಾಯಿ ಪಲ್ಲವಿ) ಜೊತೆಗಿನ ವಿವಾಹ, ಲಕ್ಷ್ಮಣನೊಂದಿಗೆ ವನವಾಸಕ್ಕೆ ತೆರಳುವ ಸಂದರ್ಭಗಳು ಕಥೆಯ ಪ್ರಮುಖ ಭಾಗಗಳಾಗಿವೆ. ಬ್ರಹ್ಮನಿಂದ ವರ ಪಡೆಯಲು ರಾವಣ ಕೈಗೊಳ್ಳುವ ಕಠಿಣ ತಪಸ್ಸು, ಲಂಕೆ ವಶಪಡಿಸಿಕೊಂಡ್ಮೇಲೆ ರಾವಣ ಕೈಗೊಳ್ಳುವ ಅಶ್ವಮೇಧ ಯಾಗ, ಶಿವಭಕ್ತ ರಾವಣ ಮಾಡುವ ತಾಂಡವ ನೃತ್ಯ, ರಾಮನ ಶಬ್ದವೇಧಿ ವಿದ್ಯೆ, ಅಸುರರ ಸಂಹಾರ, ಸೀತಾ ಸ್ವಯಂವರ, ರಾಮ - ಪರಶುರಾಮ ಸಂಘರ್ಷ, ರಾಮ - ಸೀತಾ - ಲಕ್ಷ್ಮಣ ವನವಾಸ, ರಾವಣ - ವಿದ್ಯುಜ್ಜಿಹ್ವ ನಡುವಿನ ಯುದ್ಧ, ಶೂರ್ಪನಖಿಯ ಮೂಗು ಕುಯ್ಯುವ ಲಕ್ಷ್ಮಣ ಕಥೆಯ ಪ್ರಮುಖ ಹೈಲೈಟ್ಸ್.
‘ರಾಮ’ನಾಗಿ ರಣ್ಬೀರ್ ಕಪೂರ್ ಪ್ರಬುದ್ಧ, ಮುಗ್ಧ ನಟನೆ ಹಾಗೂ ‘ಸೀತೆ’ಯಾಗಿ ಸಾಯಿ ಪಲ್ಲವಿ ನಟನೆ ಚೆನ್ನಾಗಿದೆ. ಶೂರ್ಪನಖಿಯ ಮೂಗು ಕತ್ತರಿಸಿದ ಪ್ರಸಂಗದ ನಂತರ ‘ರಾಮ’ನೊಂದಿಗೆ ಯುದ್ಧವೋ ಅಥವಾ ಸಂಯಮವೋ ಎನ್ನುವ ಗೊಂದಲದಲ್ಲಿರುವ ಸಂದರ್ಭದಲ್ಲಿನ ರಾವಣನ ಮನಃಸ್ಥಿತಿಯನ್ನು ನಿರ್ದೇಶಕರು ಕಟ್ಟಿಕೊಟ್ಟ ರೀತಿ ಅದ್ಭುತ. ಹತ್ತು ತಲೆಯ ರಾವಣನೊಳಗಿನ ಮನಸ್ಸಿಗೂ ಹತ್ತಾರು ಯೋಚನೆಗಳು. ಹೀಗೆ ಯಶ್ ಹತ್ತು ಭಿನ್ನ ರಾವಣನಾಗಿ ಪ್ರತ್ಯಕ್ಷಗೊಳ್ಳುತ್ತಾರೆ.
ಇಲ್ಲಿ ಯಾವುದೇ ದೊಡ್ಡ ಅಚ್ಚರಿಗಳಿಲ್ಲ. ಮೂಲತಃ, ಇದೊಂದು ತ್ಯಾಗ, ಸಹೋದರತ್ವ, ಕರ್ತವ್ಯ ಮತ್ತು ಕರ್ಮದ ಕುರಿತಾದ, ಭಾವನಾತ್ಮಕತೆಯಿಂದ ಕೂಡಿದ ಕಥೆ. ಆರಂಭದಲ್ಲಿ ಭಾವನಾತ್ಮಕವಾಗಿ ಪ್ರೇಕ್ಷಕರೊಂದಿಗೆ ಸರಿಯಾಗಿ ಬೆಸೆಯಲು ಪರದಾಡುತ್ತದೆ. ವಿಶೇಷವಾಗಿ ಮೊದಲಾರ್ಧದಲ್ಲಿ, ಮಹಾಕಾವ್ಯದಂತಹ ಬೃಹತ್ ಕಥೆಯನ್ನು ನಿಭಾಯಿಸುವಾಗ ಮತ್ತು ಅದರ ಭಾವನಾತ್ಮಕ ಆಳವನ್ನು ತಲುಪಲು ಪ್ರಯತ್ನಿಸುವಾಗ, ಚಿತ್ರವು ಒಂದು ನಿರ್ದಿಷ್ಟ ರಚನೆಯನ್ನು ಕಂಡುಕೊಳ್ಳಲು ಹೆಣಗಾಡುತ್ತದೆ.
ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅತ್ಯಂತ ಪ್ರಬುದ್ಧವಾಗಿ ನಟಿಸಿದ್ದಾರೆ. ರಾಮನಲ್ಲಿರಬೇಕಾದ ಶಾಂತ ಸ್ವಭಾವ, ಮುಗ್ಧತೆ, ತಾಳ್ಮೆ ಮತ್ತು ಭಾವನಾತ್ಮಕ ಆಳವನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. ವಿಶೇಷವಾಗಿ ಕೈಕೇಯಿ ರಾಮನ ವನವಾಸವನ್ನು ಘೋಷಿಸುವ ಸಂದರ್ಭ ಹಾಗೂ ತಂದೆ-ತಾಯಿಯೊಂದಿಗೆ ರಾಮ ನಡೆಸುವ ಸಂಭಾಷಣೆಗಳು ಮನಕಲಕುತ್ತವೆ. ನೋವು, ದುಃಖ ಮತ್ತು ಕೋಪವನ್ನು ನಿಯಂತ್ರಿತವಾಗಿ ವ್ಯಕ್ತಪಡಿಸಿರುವ ರಣಬೀರ್ ಕಪೂರ್ ಅಭಿನಯ ಚೆನ್ನಾಗಿ ಮೂಡಿಬಂದಿದೆ.
ಇನ್ನು ರಾವಣನ ಪಾತ್ರಧಾರಿ ಯಶ್ ಚಿತ್ರದ ಪ್ರಮುಖ ಆಕರ್ಷಣೆ. ರಾವಣನ ಗತ್ತು, ಗೈರತ್ತು, ಕ್ರೌರ್ಯ ಮತ್ತು ವ್ಯಕ್ತಿತ್ವವನ್ನು ಯಶ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲ ಭಾಗದಲ್ಲಿ ರಾವಣನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ಚಿತ್ರಕ್ಕೆ ದೊಡ್ಡ ಬಲ ನೀಡಿದೆ.
ಇದೊಂದು ಸುಲಭದ ಕೆಲಸವಲ್ಲ, ಸಿನಿಮಾ ಅಲ್ಲಲ್ಲಿ ರೋಚಕವಾಗಿದ್ದರೂ, ಬಹುತೇಕ ಭಾಗಗಳಲ್ಲಿ ಅಸಮರ್ಪಕವಾಗಿದೆ. ರಾಮ ಮತ್ತು ಕೌಸಲ್ಯೆಯ ನಡುವೆ ಅವರ ಬಾಂಧವ್ಯವನ್ನು ಎತ್ತಿ ತೋರಿಸುವ ಒಂದೇ ಒಂದು ದೃಶ್ಯವೂ ಇಲ್ಲ. ಭರತನು ವನವಾಸದಲ್ಲಿದ್ದ ರಾಮನನ್ನು ಭೇಟಿಯಾಗಲು ಬರುವ ದೃಶ್ಯವು ಅತಿಯಾದ ಸಂಯಮದಿಂದ ಕೂಡಿದ್ದು, ತೀರಾ ಮಂದವಾಗಿದೆ. ರಾಮನಿಗೆ ತನ್ನ ಕರ್ತವ್ಯವನ್ನು ನೆರವೇರಿಸಲು ಹೊರಟಾಗ, ಲಕ್ಷ್ಮಣನು ಹಿಂದೆ ಬಿಟ್ಟು ಬಂದ ತನ್ನ ಪತ್ನಿ ಊರ್ಮಿಳೆಯ ಮುಖವನ್ನಾದರೂ ಒಮ್ಮೆಯಾದರೂ ಹತ್ತಿರದಿಂದ ತೋರಿಸಲಾಗಿಲ್ಲ? ರಾಮನ ನಿರ್ಗಮನವು ಅಯೋಧ್ಯೆಯ ಸಾಮಾನ್ಯ ಜನರಿಗೆ ಅಷ್ಟೊಂದು ಮಹತ್ವದ್ದೇಕೆ? ನಮಗೆ ಮೂಲ ಕಥೆ ತಿಳಿದಿರುವುದರಿಂದ ಮಾತ್ರ, ರಾಮನು ಹೊರಟುಹೋಗುವಾಗ ಜನರು ಭಾವನಾತ್ಮಕವಾಗುತ್ತಾರೆ. ಆದರೆ ಸ್ವತಂತ್ರವಾಗಿ ನೋಡಿದರೆ, 'ರಾಮಾಯಣ: ಭಾಗ 1' ಭಾವನೆಗಳನ್ನು ಜಾಗೃತಗೊಳಿಸುವಲ್ಲಿ ನಿರಂತರವಾಗಿ ಹೆಣಗಾಡುತ್ತದೆ.
ಕೆಲವು ಸಣ್ಣ ಬದಲಾವಣೆಗಳು ಪರಿಣಾಮಕಾರಿಯಾಗಿವೆ. ಸೀತೆ ಶೂರ್ಪನಖಿ ಪರ (ರಕುಲ್ ಪ್ರೀತ್ ಸಿಂಗ್) ಧ್ವನಿ ಎತ್ತುತ್ತಾಳೆ, ಹಾಗೂ ಸೀತೆಯನ್ನು ಸ್ವತಃ ಒಬ್ಬ ಸಮರ್ಥ ಯೋಧೆಯಾಗಿ ಚಿತ್ರಿಸಿರುವುದು ಸೀತೆಯ ಪಾತ್ರಕ್ಕೆ ಒಂದು ಗಂಭೀರತೆಯನ್ನು ತಂದುಕೊಟ್ಟಿರುವುದು ಗಮನಾರ್ಹ. ಇನ್ನೊಂದು ಚಾಣಾಕ್ಷತನದ ವಿಷಯವೆಂದರೆ, ರಾವಣನು ಸೀತೆಯನ್ನು ಅವಳ ಗುಡಿಸಲಿನಿಂದ ಅಪಹರಿಸುವ ದೃಶ್ಯವನ್ನು ಇಲ್ಲಿ ನೇರವಾಗಿ ತೋರಿಸಲಾಗಿಲ್ಲ. ಜನಪ್ರಿಯ ಧಾರ್ಮಿಕ ಗ್ರಂಥದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಟೀಕೆಗಳನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿರುವುದು ಎದ್ದು ಕಾಣುತ್ತದೆ, ಪುಷ್ಪಕ ವಿಮಾನದಲ್ಲಿ ಸೀತೆ ತನ್ನ ಆಭರಣಗಳನ್ನು ಎಸೆಯುವ ಘಟನೆಯನ್ನು ತಾರ್ಕಿಕವಾಗಿ ಸಮರ್ಥಿಸಲು, ಅದಕ್ಕೂ ಮುನ್ನ ಒಂದು ಸಾಮಾನ್ಯ ದೃಶ್ಯವನ್ನು ಸೇರಿಸಲಾಗಿದೆ.
ಈ ಚಿತ್ರದ ಅಚ್ಚರಿಯ ಸಂಗತಿಗಳಲ್ಲಿ ಒಂದೆಂದರೆ, ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಪ್ರಭಾವಶಾಲಿ ಅಭಿನಯ. ಅದಕ್ಕಿಂತ ಮುಖ್ಯವಾಗಿ, ಕಥೆಯಲ್ಲಿ ಈ ಪಾತ್ರವನ್ನು ರೂಪಿಸಿರುವ ರೀತಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತದೆ. ದೇವರು ಮತ್ತು ರಾಕ್ಷಸರ ಅಲೌಕಿಕ ಕಥೆಯ ನಡುವೆ, ಲಕ್ಷ್ಮಣನು ಮಾನವೀಯ ದೃಷ್ಟಿಕೋನವನ್ನು ಪ್ರತಿನಿಧಿಸುವ ಪಾತ್ರವಾಗಿ ಹೊರಹೊಮ್ಮುತ್ತಾನೆ, ಅವನು ಕಟುವಾದ ಮಾತು ಆಡುವವನು, ಸೂಕ್ಷ್ಮ ಅವಲೋಕನಕಾರ, ಹಾಸ್ಯಪ್ರಿಯ ಮತ್ತು ಸರಳ ವ್ಯಕ್ತಿತ್ವದವನು. ಕೆಲವೆಡೆ ಅವನನ್ನು ಹಾಸ್ಯದ ಮೂಲಕ ವಾತಾವರಣವನ್ನು ಹಗುರಗೊಳಿಸುವುದು ಇಷ್ಟವಾಗುತ್ತದೆ.
ಚಿತ್ರದ ಆರಂಭದಲ್ಲಿ ಬಳಸಲಾದ ಕೆಲವು ಸಿಜಿಐ (CGI) ತಂತ್ರಗಳು, ವಿಶೇಷವಾಗಿ ರಾವಣನ ಲಂಕೆಯಲ್ಲಿರುವ ರಾಕ್ಷಸರ (ಕುಂಭಕರ್ಣನೂ ಸೇರಿದಂತೆ) ಅನಿಮೇಟೆಡ್ ರೂಪಗಳು, ತೀರಾ ಸಾಧಾರಣವಾಗಿವೆ. ರಾವಣ ಮತ್ತು ವಿದ್ಯುಜ್ಜಿಹ್ವ ನಡುವಿನ ಸುದೀರ್ಘ ಕದನದಲ್ಲಿ, ಕುಂಭಕರ್ಣ ಕೇವಲ ಬೇಸರಗೊಂಡ ಪ್ರೇಕ್ಷಕನಂತೆ ನಿಂತಿರುವುದು ಅಚ್ಚರಿ ಮೂಡಿಸುವಷ್ಟು ಕಳಪೆಯಾಗಿದೆ. ವಿವೇಕ್ ಒಬೆರಾಯ್ ಇಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ.
ಚಿತ್ರದ ದ್ವಿತೀಯಾರ್ಧದಲ್ಲಿ ಮಾತ್ರ, ಕೆಲವು ಆಕ್ಷನ್ ದೃಶ್ಯಗಳ ಮೂಲಕ ಸಿನಿಮಾ ಪ್ರೇಕ್ಷಕರನ್ನು ತನ್ನೊಳಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ರಾಮ, ಲಕ್ಷ್ಮಣ ಮತ್ತು ಸೀತೆ ಒಟ್ಟಾಗಿ ರಾಕ್ಷಸರ ವಿರುದ್ಧ ಹೋರಾಡುವ ದೃಶ್ಯಗಳಲ್ಲಿ ಒಂದು ರೀತಿಯ ರೋಮಾಂಚಕ ಶಕ್ತಿಯಿದೆ. ರಾವಣ ತನ್ನ ಆಂತರಿಕ ಧ್ವನಿಗಳೊಂದಿಗೆ ಹೋರಾಡುವ ದೃಶ್ಯವು ಚೆನ್ನಾಗಿದೆ. ಇಲ್ಲಿ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ; ದೃಶ್ಯ ವೈಭವ ಮತ್ತು ಶಬ್ದ ಸಂಯೋಜನೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ನಿರ್ದೇಶನ: ನಿತೇಶ್ ತಿವಾರಿ
ಪಾತ್ರವರ್ಗ: ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ರಾಕುಲ್ಪ್ರೀತ್ ಸಿಂಗ್, ರವಿ ದುಬೆ, ಶೀಬಾ ಚಡ್ಡಾ, ಲಾರಾ ದತ್ತಾ