

1997ರ ಕ್ಲಾಸಿಕ್ ‘ಅಮೆರಿಕಾ ಅಮೆರಿಕಾ’ ನಂತರ ಬಂದಿರುವ ಈ ಭಾಗಕ್ಕೆ ಕಥಾ ಲಿಂಕ್ ಇಲ್ಲದಿದ್ದರೂ, ಪ್ರೀತಿ ಮತ್ತು ಸಂಬಂಧಗಳ ಗೊಂದಲವನ್ನು ಹೊಸ ಕಾಲಘಟ್ಟದಲ್ಲಿ ಅನ್ವೇಷಿಸುತ್ತದೆ. ಶಾನ್ವಿ ಶ್ರೀವಾಸ್ತವ್ ಸ್ತ್ರೀ ಪ್ರಧಾನ ಪಾತ್ರದಲ್ಲಿ ಮಿಂಚಿದ್ದು, ಪೃಥ್ವಿ ಅಂಬರ್ ಮತ್ತು ನಿರೂಪ್ ಭಂಡಾರಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಅಮೆರಿಕಾ ಅಮೆರಿಕಾ 2 ಸಿನಿಮಾ ರಿಲೀಸ್ ಆಗಿದೆ. ಪ್ರಧಾನ ಪಾತ್ರದಲ್ಲಿ ಸಾನ್ವಿ ಶ್ರೀವಾಸ್ತವ, ನಿರೂಪ್ ಭಂಡಾರಿ ಮತ್ತು ಪೃಥ್ವಿ ಅಂಬರ್ ನಟಿಸಿದ್ದಾರೆ. ಈ ಮೊದಲು ನಾಗತಿಹಳ್ಳಿ ನಿರ್ದೇಶನದ ಅಮೆರಿಕಾ ಅಮೆರಿಕಾ ಸಿನಿಮಾ 1997ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಸುಮಾರು 3 ದಶಕಗಳ ಬಳಿಕ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಬಂದಿದೆ. ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಯಾವುದೇ ಲಿಂಕ್ ಇಲ್ಲ.
ನುಡಿ (ಶಾನ್ವಿ ಶ್ರೀವಾಸ್ತವ) ಎಐ ಇಂಜಿನಿಯರ್. ಆಕೆಯ ಮೇಲೆ ಕಿಂಚಿತ್ತೂ ಕಾಳಜಿ ತೋರದ ಗಂಡ ನಿನಾದ್ (ನಿರೂಪ್ ಭಂಡಾರಿ) . ಇಬ್ಬರ ಮಧ್ಯೆ ದೊಡ್ಡ ಅಂತರ ಸೃಷ್ಟಿ ಆಗಿದೆ. ಮಗಳು ಸಿರಿ (ರೀತು ಸಿಂಗ್) ಕಾರಣಕ್ಕೆ ಇಬ್ಬರ ಸಂಸಾರ ಹಾಗೆಯೇ ಉಳಿದುಕೊಂಡಿದೆ. ಪ್ರಾಜೆಕ್ಟ್ ನಿಮಿತ್ತ ಶಾನ್ವಿ ಅಮೆರಿಕ ತೆರಳಬೇಕಾದ ಪರಿಸ್ಥಿತಿ ಬರುತ್ತದೆ. ಅಮೆರಿಕದಲ್ಲಿ ಆಕೆಯ ಹಳೆಯ ಬಾಯ್ಫ್ರೆಂಡ್ ನೀಲ್ (ಪೃಥ್ವಿ ಅಂಬರ್) ಭೇಟಿ ಆಗುತ್ತದೆ. ಬಿಟ್ಟುಹೋದ ಭೂತ ಕಾಲದ ಪ್ರೀತಿ ಹಠಾತ್ ಎದುರು ಬಂದು ನಿಲ್ಲುತ್ತದೆ. ಕಟ್ಟಿಕೊಂಡ ಗಂಡ ಹಾಗೂ ಬಿಟ್ಟುಹೋದ ಪ್ರೇಮಿ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು? ಹೀಗೆ ತನ್ನೊಳಗಿನ ಗೊಂದಲದಲ್ಲಿ ಸಿಲುಕುತ್ತಾಳೆ ನಾಯಕಿ. ಅಲ್ಲಿಂದ ನುಡಿಯ ಮನಸ್ಸಿನ ಭಾವನೆಗಳ ತಿಕ್ಕಾಟ ಶುರು. ನುಡಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ? ಕೊನೆಗೆ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಎಂಬುದೇ ಸಿನಿಮಾದ ಕಥೆ.
ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಪ್ರೀತಿ ಎಂಬುದು ಸುಂದರವೂ ಹೌದು, ಗೊಂದಲವೂ ಹೌದು ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್ ಬಹಳ ಅದ್ಭುತವಾಗಿ ತೋರಿಸಿದ್ದರು. ಈ ಬಾರಿ ದಾಂಪತ್ಯ ಬದುಕಿನ ಸಂಕೀರ್ಣತೆಗಳನ್ನು ಬಿಡಿಸಿಡಲು ಹೊರಟಿದ್ದಾರೆ. ನಟಿ ಶಾನ್ವಿಗೆ ಮಹತ್ವದ ಪಾತ್ರವೇ ಸಿಕ್ಕಿದ್ದು, ನುಡಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಇದೊಂದು ಸ್ತ್ರೀ ಪ್ರಧಾನ ಚಿತ್ರವಾಗಿದ್ದು, ಶಾನ್ವಿ ಶ್ರೀವಾಸ್ತವ್ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.
ಪೃಥ್ವಿ ಅಂಬಾರ್ ಮತ್ತು ನಿರೂಪ್ ಭಂಡಾರಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ಮಾನಸಿ ಸುಧೀರ್ ರೀತು ಸಿಂಗ್ ಅಭಿನಯ ಚೆನ್ನಾಗಿದೆ. ಸೆಕೆಂಡ್ ಹಾಫ್ನಲ್ಲಿ ನಾಗತಿಹಳ್ಳಿಹಳ್ಳಿ ಚಂದ್ರಶೇಖರ್ ಕೂಡಾ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ನಿರ್ದೇಶನದ ಜೊತೆ ನಿರ್ಮಾಣ ಮಾಡಿರುವ ಮೇಷ್ಟ್ರ ಒಂದೊಂದು ಡೈಲಾಗ್ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಆದರೆ ಚಿತ್ರ ಕೊಂಚ ನಿಧಾನವಾಗಿ ಸಾಗುತ್ತದೆ ಎಂದನಿಸುತ್ತದೆ.
ನುಡಿಯ ಮನಃಸ್ಥಿತಿಯನ್ನು ಮತ್ತು ಸಂವೇದನೆಗಳನ್ನು ನಿರ್ದೇಶಕರು ಕಟ್ಟಿಕೊಟ್ಟ ರೀತಿ ಭಿನ್ನವಾಗಿದೆ. ಅಂದಿನಿಂದ ಇಂದಿನವರೆಗೆ ಮಹಿಳೆಯ ಸ್ವಾತಂತ್ರ್ಯದಲ್ಲಿ ಆಗಿರುವ ಬದಲಾವಣೆಗಳನ್ನು ಚಿತ್ರಿಸುತ್ತಾ, ಇನ್ನೂ ಉಳಿದುಕೊಂಡಿರುವ ಮೂಢನಂಬಿಕೆಗಳನ್ನೂ ನಿರ್ದೇಶಕರು ಉಲ್ಲೇಖಿಸಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ಮುಖ್ಯ ಪಾತ್ರಗಳ ನಡುವಿನ ಸಂಬಂಧಕ್ಕೆ ಇನ್ನಷ್ಟು ಆಳವಾದ ತರ್ಕ ಬೇಕಿತ್ತು ಎಂದೆನಿಸುತ್ತದೆ. ನುಡಿ ಮತ್ತು ನಿನಾದ್ ನಡುವಿನ ಸಂಘರ್ಷಕ್ಕೆ ಸೂಕ್ತವಾದ ಕಾರಣ ಇಲ್ಲ. ಅವರ ಸಂಬಂಧದ ಬಿರುಕು ಮತ್ತು ಅದರ ಹಿಂದಿನ ಕಾರಣಗಳನ್ನು ಇನ್ನಷ್ಟು ಆಳವಾಗಿ ಕಟ್ಟಿಕೊಡಬಹುದಿತ್ತು.
ಸಂಭಾಷಣೆಗಳು ಸಂಬಂಧಗಳಿಂದ ಹಿಡಿದು ಜಾಗತಿಕ ತಾಪಮಾನ ಏರಿಕೆ, ಯುದ್ಧ, ಬಡತನ, ಕಾಫಿ ಮತ್ತು ಸಾಮಾಜಿಕ ಜಾಲತಾಣದ ಜ್ಞಾನದವರೆಗೆ ಮುಕ್ತವಾಗಿ ಕಥೆ ಸಾಗುತ್ತವೆ. ಕೆಲವೊಮ್ಮೆ ಇದು ಚಿತ್ರಕ್ಕೆ ಸಹಜವಾದ, ನೈಜ ಜೀವನದ ಸ್ಪರ್ಶವನ್ನು ನೀಡುತ್ತದೆ, ಮತ್ತೆ ಕೆಲವೆಡೆ, ಪಾತ್ರಗಳು ಲೇಖಕರ ಅಭಿಪ್ರಾಯಗಳನ್ನೇ ಹೇಳುತ್ತಿರುವಂತೆ ಭಾಸವಾಗುತ್ತದೆ.
ಆದಾಗ್ಯೂ, 'ವಾಟ್ಸಾಪ್ ಯೂನಿವರ್ಸಿಟಿ' ಕುರಿತಾದ ಹಾಸ್ಯವು ಪ್ರೇಕ್ಷಕರನ್ನು ರಂಜಿಸುತ್ತದೆ. ಅಮೆರಿಕದ ಸುಂದರ ತಾಣಗಳನ್ನು ಎಸ್‌ಕೆ ರಾವ್ ಅವರು ಅದ್ಭುತವಾಗಿ ಚಿತ್ರಿಸಿದ್ದಾರೆ. ಮನೋಮೂರ್ತಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಬಾರಿ ಮೋಡಿ ಮಾಡುವಲ್ಲಿ ಕೊಂಚ ಎಡವಿದೆ. ಕೆಲವೊಂದು ನ್ಯೂನ್ಯತೆಗಳ ನಡುವೆಯೂ ಅಮೆರಿಕಾ ಅಮೆರಿಕಾ 2 ನೋಡಬಹುದಾದ ಸಿನಿಮಾ.