ಹಣವೆಂದರೆ ಸಾಲ! ಡೆಟ್ ಇಸ್ ಮನಿ

ಸಾಲ ಅಷ್ಟು ಸಲುಭವಾಗಿ ಸಿಗುತ್ತದೆಯೆ? ಸಾಲ ನೀಡಲು ನೋಡುವ ಕ್ರೆಡಿಟ್ ರೇಟಿಂಗ್ ಎಂದರೇನು? ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಈ ಕ್ರೆಡಿಟ್ ರೇಟಿಂಗ್ ಹೇಗೆ ನಿಗದಿ ಪಡಿಸುತ್ತಾರೆ? ಭಾರತದಲ್ಲಿ ಈ ರೀತಿ ಕ್ರೆಡಿಟ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹಿಂದೊಂದು ಕಾಲವಿತ್ತು ಸಾಲ ಎಂದರೆ ಹಾವು ತುಳಿದಂತೆ ಜನ ಬೆಚ್ಚಿ ಬೀಳುತ್ತಿದ್ದರು. ಜೊತೆಗೆ ಮಾರುಕಟ್ಟೆಯಲ್ಲಿ ಸಾಲ ನೀಡುವರ ಸಂಖ್ಯೆಯೂ ಬಹಳ ಕಡಿಮೆಯಿತ್ತು. ಆಗೆಲ್ಲಾ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಗಾದೆಗೆ ಜನ ಬೆಲೆ ನೀಡುತ್ತಿದ್ದರು. ಸರಳವಾದ ಬದುಕು ಮಕ್ಕಳ ಓದು ವಿದ್ಯಾಭ್ಯಾಸ ಅವರ ಮದುವೆ ಮುಗಿದು, ನಿವೃತ್ತಿ ನಂತರ ಹಣ ಉಳಿದಿದ್ದರೆ ಮನೆ ಕಟ್ಟುವುದು ಅತ್ಯಂತ ಸಾಮಾನ್ಯ ವಿಷಯವಾಗಿತ್ತು. ಕಳೆದ ಎರಡು ದಶಕದಲ್ಲಿ ಭಾರತದ ಚಿತ್ರವೇ ಬದಲಾಗಿ ಹೋಗಿದೆ. ಗಂಡ ಹೆಂಡತಿ ಇಬ್ಬರೂ ಇಷ್ಟವಿರಲಿ ಬಿಡಲಿ ದುಡಿಯಬೇಕು. ಸಂಸಾರದ ರಥ ಇಲ್ಲದಿದ್ದರೆ ಮೂರಡಿ ಮುಂದೆ ಹೋಗುವುದಿಲ್ಲ!. ಜೊತೆಗೆ ಸಮಾಜದಲ್ಲಿ ಒಬ್ಬರ ನೋಡಿ ಇನ್ನೊಬ್ಬರು ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವುದು ಹೆಚ್ಚಾಗುತ್ತಿದೆ. ವಸ್ತುವಿನ ಅವಶ್ಯಕತೆ ಇದೆಯೇ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಒಂದು ಮಟ್ಟ ಕಾಯ್ದುಕೊಳ್ಳಲು ಕೊಳ್ಳಲೇಬೇಕು ಎನ್ನುವ ಮನಸ್ಥಿತಿಗೆ ಜನರು ಬಂದಿರುವುದು ವಿಪರ್ಯಾಸ. ಹಾಗೆಯೇ ಇಂದು ಮಾರುಕಟ್ಟೆ ತುಂಬಾ ಹೇಗಾದರೂ ಸರಿ ವಸ್ತುವ ಮಾರಿ ಸಾಲವ ಗ್ರಾಹಕನ ತಲೆಗೆ ಕಟ್ಟಿ ಕಂತಿನಲ್ಲಿ ಹಣ ವಸೂಲಿ ಮಾಡಲು ನೂರಾರು ಸಂಸ್ಥೆಗಳಿವೆ. ತಮ್ಮ ಮಾಸಿಕ ಆದಾಯದ ಎರಡು ಅಥವಾ ಮೂರು ಪಟ್ಟು ಹೆಚ್ಚಿನ ಬೆಲೆಯ ಮೊಬೈಲ್ ಖರೀದಿಸುವ ಯುವ ಜನತೆಯ ಹೊಸ ದಂಡು ಭಾರತವನ್ನ ಭವ್ಯ ಮಾಡುತ್ತಿವೆ. 
ಇಲ್ಲಿ ಇನ್ನೊಂದು ವಿಪರ್ಯಾಸವನ್ನೂ ಹೇಳಿಬಿಡುವೆ. ಕೇವಲ ಎರಡು ಅಥವಾ ಮೂರು ದಶಕದ ಹಿಂದೆ ಸಾಲ ಎಂದರೆ ಏನೂ ಅಪರಾಧ ಮಾಡಿದ ಮನೋಭಾವದಿಂದ ಜನತೆ ಮುಕ್ತರಾಗಿರುವುದೊಂದೇ ಅಲ್ಲ ಜೊತೆಗೆ ಸಾಲ ಹೊಸ ಹಣವಾಗಿ ಬಿಟ್ಟಿದೆ. ಅಂದರೆ ಡೆಟ್ ಇಸ್ ನ್ಯೂ ಮನಿ!. ಎಷ್ಟರ ಮಟ್ಟಿಗೆ ಎಂದರೆ ಮಾರುಕಟ್ಟೆಗೆ ಹೊಸದಾಗಿ ಬಂದ ಕಾರು ಅಥವಾ ಮೊಬೈಲ್ ಖರೀದಿಸಲೇಬೇಕು ಇಲ್ಲದವರ ಗೊಡ್ಡು ಆಲೋಚನೆಯವನು ಎನ್ನುವಷ್ಟು. ಇರಲಿ. ಇವರೆಲ್ಲರಿಗೆ ಸಾಲ ಅಷ್ಟು ಸಲುಭವಾಗಿ ಸಿಗುತ್ತದೆಯೆ? ಸಾಲ ನೀಡಲು ನೋಡುವ ಕ್ರೆಡಿಟ್ ರೇಟಿಂಗ್ ಎಂದರೇನು? ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಈ ಕ್ರೆಡಿಟ್ ರೇಟಿಂಗ್ ಹೇಗೆ ನಿಗದಿ ಪಡಿಸುತ್ತಾರೆ? ಭಾರತದಲ್ಲಿ ಈ ರೀತಿ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳಾವುವು? ಅಂತರರಾಷ್ಟೀಯ ಮಟ್ಟದ ಕತೆಯೇನು? ಇವುಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ ಬನ್ನಿ. 
ಕ್ರೆಡಿಟ್ ರೇಟಿಂಗ್ ಎಂದರೇನು? 
ಸಾಲ ಕೇಳಿ ಹೋದ ವ್ಯಕ್ತಿ ಅಥವಾ ಸಂಸ್ಥೆ ಸಾಲವ ಮರುಪಾವತಿಸುವ ಶಕ್ತಿ ಹೊಂದಿದ್ದಾರೆಯೇ? ಅವರು ಸಾಲ ಮರು ಪಾವತಿಸದೆ ಹೋಗುವ ಸಂಭಾವ್ಯತೆ ಎಷ್ಟು? ಎನ್ನುವುದನ್ನ ಅಭ್ಯಾಸಿಸಿ ವ್ಯಕ್ತಿಗೆ ಅಥವಾ ಸಂಸ್ಥೆಗೆ ಇಂತಿಷ್ಟು ಎನ್ನುವ ಅಂಕ(ಪಾಯಿಂಟ್) ದೊರೆಯುತ್ತದೆ. ಈ ಅಂಕದ ಆಧಾರದ ಮೇಲೆ ಇವರಿಗೆ ಸಾಲ ಕೊಡಬಹುದು ಇವರಿಗೆ ಕೇಳಿದ ಮೊತ್ತದ ಅರ್ಧ ಕೊಡಬಹುದು, ಇವರಿಗೆ ಬೇಡವೇ ಬೇಡ ಹೀಗೆ ನಿರ್ಧಾರ ಮಾಡುವ ಪ್ರಕ್ರಿಯೆಗೆ ಕ್ರೆಡಿಟ್ ರೇಟಿಂಗ್ ಎನ್ನುತ್ತಾರೆ. ಹೀಗೆ ನಿರ್ಧಾರಕ್ಕೆ ಬರಲು ಕ್ರೆಡಿಟ್ ಹಿಸ್ಟ್ರಿ ಬಹಳ ಮುಖ್ಯ! ಅಂದರೆ ನೀವು ಹಿಂದೆ ಸಾಲ ಪಡೆದು ಅದನ್ನ ಸರಿಯಾಗಿ ಮರುಪಾವತಿಸಿದರೆ ಅದು ನಿಮ್ಮ ಕ್ರೆಡಿಟ್ ಹಿಸ್ಟ್ರಿ ಎನಿಸಿಕೊಳ್ಳುತ್ತದೆ. ಅಮೇರಿಕಾದಂತ ದೇಶದಲ್ಲಿ ಕ್ರೆಡಿಟ್ ಹಿಸ್ಟ್ರಿ ಹೊಂದುವುದು ಬಹಳ ಅವಶ್ಯ. ದೊಡ್ಡ ಸಾಲ ಪಡೆಯುವ ಮುನ್ನ ಸಣ್ಣ ಪುಟ್ಟ ಸಾಲ ಮಾಡಿ ಕ್ರೆಡಿಟ್ ಹಿಸ್ಟ್ರಿ ನಿರ್ಮಿಸಿಕೊಳ್ಳಿ ಎಂದು ಸಲಹೆ ಕೊಡುವ ಮತ್ತು ಹೇಗೆ ಉತ್ತಮ ಕ್ರೆಡಿಟ್ ಹಿಸ್ಟ್ರಿ ನಿರ್ಮಿಸಿಕೊಳ್ಳುವುದು ಎಂದು ಹೇಳುವುದಕ್ಕೆ ಜನ/ಸಂಸ್ಥೆಗಳಿವೆ. ನಿಧಾನಕ್ಕೆ ಇದು ಭಾರತವನ್ನೂ ಆಕ್ರಮಿಸಿದೆ. 
ಭಾರತದಲ್ಲಿ ಈ ರೀತಿಯ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳಾವುವು ? 
ಭಾರತದಲ್ಲಿ CRISIL, ICRA, CARE, ONICRA, FITCH & SMERA ಇವು ಪ್ರಮುಖ ಸಂಸ್ಥೆಗಳು. ಇವುಗಳಲ್ಲಿ ಕ್ರಿಸಿಲ್ ಅತ್ಯಂತ ಪ್ರಮುಖಾವಾದದ್ದು. ಭಾರತದ ಅರವತ್ತಕ್ಕೂ ಹೆಚ್ಚು ಮಾರುಕಟ್ಟೆಯನ್ನ ಇದು ಪಡೆದಿದೆ. ಕ್ರೆಡಿಟ್ ರೇಟಿಂಗ್ ಸಾಲ ಪಡೆಯುವನ ಕ್ರೆಡಿಬಿಲಿಟಿ ಹೇಳುವ ಒಂದು ವಿಧಾನ. ಕ್ರೆಡಿಟ್ ರೇಟಿಂಗ್ ಕೇವಲ ಸಾಲ ಮಾರುಕಟ್ಟೆಯಿಂದ ಎತ್ತಲು ಹವಣಿಸುವ ಕಂಪನಿಗಳಿಗೂ ಅನ್ವಯಿಸುತ್ತೆ. ಅಂದರೆ ಹೂಡಿಕೆದಾರರಿಗೆ ಡೆಟ್ ಬಾಂಡ್ ವಿತರಿಸುವ ಕಂಪನಿಯ ಬಗ್ಗೆ ಅವರ ಕ್ರೆಡಿಬಿಲಿಟಿ ಬಗ್ಗೆ ಹೇಳುವ ಒಂದು ಸರಳ ವಿಧಾನ. ನೀವು ಮಾರುಕಟ್ಟೆಯಲ್ಲಿ ನೋಡಿರಬಹದು AA+ ರೇಟಿಂಗ್ AAA ರೇಟಿಂಗ್ ಅಥವಾ BB ರೇಟಿಂಗ್ ಹೀಗೆ ಸಾಗುತ್ತದೆ. ಮೂರು ಎ ಅತ್ಯಂತ ಸುರಕ್ಷಿತ ಎನ್ನುವ ಸಂದೇಶ ನೀಡುತ್ತದೆ. AA + ಆಲ್ಪ ರಿಸ್ಕ್ ಎನ್ನುವುದನ್ನ ಹೇಳುತ್ತದೆ ಹೀಗೆ ನಂತರದ ರೇಟಿಂಗ್ ರಿಸ್ಕ್ ಹೆಚ್ಚು ಎನ್ನುವುದನ್ನ ಹೇಳುತ್ತದೆ. 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ಥೆಗಳಾವುವು? 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಸಂಸ್ಥೆಗಳು ಮಾರುಕಟ್ಟೆಯ ತೊಂಬತ್ತೈದು ಭಾಗ ಆಕ್ರಮಿಸಿವೆ. Moody's Investors Service ಮತ್ತು Standard & Poor's (S&P) ಜೊತೆಯಲ್ಲಿ ಎಂಬತ್ತು ಭಾಗ ಮಾರುಕಟ್ಟೆಯ ಪಾರುಪತ್ಯ ಹೊಂದಿವೆ. ಉಳಿದಂತೆ Fitch Ratings ಸಂಸ್ಥೆ ಹದಿನೈದು ಭಾಗ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 
ಕ್ರೆಡಿಟ್ ರೇಟಿಂಗ್ ಅವಶ್ಯಕತೆ ಏನು ? 
ಮಾರುಕಟ್ಟೆಯಲ್ಲಿ ಪಡೆದ ಸಾಲ ಮರುಪಾವತಿಸದೆ ಹೋದವರ ಸಂಖ್ಯೆ ಹೆಚ್ಚಾಗಿ ಸಾಲ ಕೊಟ್ಟವರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳು ಹೆಚ್ಚಾಗಿ ಇಂತಹ ಸಂಸ್ಥೆಗಳು ಹುಟ್ಟಿಕೊಂಡವು. ಇಂತಹ ಸಂಸ್ಥೆಗಳಿಂದ ಉತ್ತಮ ರೇಟಿಂಗ್ ಪಡೆದ ಸಾಲಗಾರರು ಸುಸ್ತಿದಾರರಾಗುವ (ಡಿಫಾಲ್ಟ್ ರ್ಸ್) ಸಾಧ್ಯತೆ ಬಹಳ ಕಡಿಮೆ. ಹೀಗಾಗಿ ಇಂತಹ ರೇಟಿಂಗ್ ಇಲ್ಲದಿದ್ದರೆ ಸಾಲವೇ ಹುಟ್ಟುವುದಿಲ್ಲ ಎನ್ನುವ ಮಟ್ಟಕ್ಕೆ ಇಂದು ಮಾರುಕಟ್ಟೆ ಬಂದು ನಿಂತಿದೆ. ಮೂಡಿಸ್ 1909ರಲ್ಲಿ ಈ ರೀತಿಯ ಕ್ರೆಡಿಟ್ ರೇಟಿಂಗ್ ನೀಡಲು ಶುರು ಮಾಡಿದ ಮೊದಲ ಸಂಸ್ಥೆ. ಬೇರೆ ಇಂತಹುದೆ ಏಜೆನ್ಸಿಗಳು ಮಾರುಕಟ್ಟೆಗೆ ಬರಲು ದಶಕ ಬೇಕಾಯಿತು. 
ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ನೀಡುವ ಕ್ರೆಡಿಟ್ ರೇಟಿಂಗ್ ಎಷ್ಟು ನಂಬಬಹದು? 
2009 ರಲ್ಲಿ ಶುರುವಾದ ಮಾರುಕಟ್ಟೆ ಕುಸಿತ ಅದರಿಂದ ಉಂಟಾದ ಜಾಗತಿಕ ಕುಸಿತ ಇಂತಹ ಒಂದು ಪ್ರಶ್ನೆಯನ್ನ ಹುಟ್ಟಿಹಾಕಿರುವುದು ಸುಳ್ಳಲ್ಲ. ಯೂರೋಪು ಮತ್ತು ಅಮೇರಿಕಾ ಕುಸಿತದ ದಶಕದ ನಂತರವೂ ಇನ್ನೂ ಚೇತರಿಕೆಯ ಹಂತದಲ್ಲೇ ಇವೆ ಎಂದರೆ ಕುಸಿತದ ಪ್ರಭಾವ ಎಷ್ಟು ಎನ್ನವುದು ಯಾರಾದರೂ ಸರಳವಾಗಿ ಊಹಿಸಬಹದು. ಇಂತಹ ಕ್ರೆಡಿಟ್ ರೇಟಿಂಗ್ ನೀಡುವ ಕಂಪನಿಗಳನ್ನು ತಮ್ಮಿಚ್ಚೆಗೆ ಕುಣಿಸುವ ಬೆರಳೆಣಿಕೆಯ ಜನ ಜಾಗತಿಕ ವಿತ್ತ ಪ್ರಪಂಚವನ್ನ ಆಳುತ್ತಿದ್ದಾರೆ. ಅವರಿಗೆ ಸರಿ ಅನ್ನಿಸಿದ್ದು ಸರಿ ಎನ್ನುವ ಮಟ್ಟಿಗೆ ಜಗತ್ತಿನ ವಿತ್ತ ಪ್ರಪಂಚ ಕೆಲವೇ ಕೆಲವರ ಕೈಲಿದೆ. ಸದ್ಯಕ್ಕೆ ಜನ ಸಾಮಾನ್ಯನ ಮುಂದೆ ಇಂತಹ ಕಂಪನಿಗಳು ನೀಡುವ ರೇಟಿಂಗ್ ನಂಬುವುದೊಂದೇ ಆಯ್ಕೆ. 
ಸಣ್ಣ ಉಳಿತಾಯಾದ ಮೇಲಿನ ಬಡ್ಡಿ ಕುಸಿತ, ವೇಗವಾಗಿ ಬದಲಾಗುತ್ತಿರುವ ಮಾರುಕಟ್ಟೆ, ತಾನು ಮಾಡುತ್ತಿರುವುದು ಸರಿಯೇ? ಅಥವಾ ತಪ್ಪೇ? ಎಂದು ವಿವೇಚಿಸಲು ಕೂಡ ಸಮಯ ನೀಡದ ಕಾರ್ಪೊರೇಟ್ ಜೀವನ ನಮ್ಮ ಜನರ ಜೀವನವನ್ನ ಯಾಂತ್ರಿಕತೆಗೆ ದೂಡಿದೆ. ಇವತ್ತೇನಿದ್ದರೂ ಹಣವನ್ನ ಮುಂಗಡ (ಸಾಲ) ಪಡೆದು ಅನುಭವಿಸಬೇಕು, ವೇತನದಲ್ಲಿ ಮಾಸಿಕ ಕಂತು ಕಟ್ಟಬೇಕು ಎನ್ನುವಂತಾಗಿದೆ. ಲೇಖನದ ಮೊದಲ ಪ್ಯಾರಾದಲ್ಲಿ ಹೇಳಿದಂತೆ ಇಂದಿನ ಯುವಜನತೆಯ ಮಟ್ಟಿಗಂತೂ 'ಸಾಲ ಹೊಸ ಹಣ' ಡೆಟ್ ಇಸ್ ನ್ಯೂ ಮನಿ ಎನ್ನುವಂತಾಗಿದೆ. ಸಾಲ ಮಾಡುವುದು ತಪ್ಪೆ ಅಲ್ಲ ಆದರೆ ಏತಕ್ಕೆ ಸಾಲ ಮಾಡಿದಿರಿ ಎನ್ನುವುದು ಮುಖ್ಯ ಎನ್ನುವ ಮಟ್ಟಕ್ಕೆ ಸಮಾಜ ಬಂದು ನಿಂತಿದೆ. ಮುಂದಿನ ಪ್ರಯಾಣದ ಹಾದಿ ಇನ್ನಷ್ಟೇ ತೆರೆದುಕೊಳ್ಳಬೇಕಿದೆ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com