ಗೆಲುವಿಗಾಗಿ ಬದಲಾಗುವ ಹಿರಿಯಣ್ಣನ ವಿಚಾರ; ವಿತ್ತ ಪ್ರಪಂಚದ ಮೇಲೆ ಪ್ರಹಾರ!

2007 ರಿಂದ ಇಂದಿನ ವರೆಗೆ. ಈ ರೀತಿಯ ವಿಭಜನೆ ನಾವೆಲ್ಲಿಂದ ಹೊರಟೆವು ಇಂದು ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದ ಅರಿಯಲು ಸಹಾಯ ಮಾಡುತ್ತದೆ. ಈ ವಿತ್ತ ವಿಚಾರದ ಸುತ್ತ ಒಂದು ಸುತ್ತು ಹಾಕೋಣ ಬನ್ನಿ.
ಗೆಲುವಿಗಾಗಿ ಬದಲಾಗುವ ಹಿರಿಯಣ್ಣನ ವಿಚಾರ; ವಿತ್ತ ಪ್ರಪಂಚದ ಮೇಲೆ ಪ್ರಹಾರ!
ಗೆಲುವಿಗಾಗಿ ಬದಲಾಗುವ ಹಿರಿಯಣ್ಣನ ವಿಚಾರ; ವಿತ್ತ ಪ್ರಪಂಚದ ಮೇಲೆ ಪ್ರಹಾರ!
ತೊಂಬತ್ತರ ದಶಕದಲ್ಲಿ ಜಾಗತೀಕರಣ ಅರ್ಥಾತ್ ಗ್ಲೋಬಲೈಸಷನ್ ಹೆಚ್ಚು ಬಳಸಲ್ಪಟ್ಟ ಪದ. ಪಿ ವಿ ನರಸಿಂಹರಾವ್ ಮತ್ತು ಮನಮೋಹನ ಸಿಂಗ್ ಅವರ ನೇತೃತ್ವದ್ದಲ್ಲಿ ಭಾರತದ ಬಾಗಿಲನ್ನ ವಿಶ್ವಕ್ಕೆ ತೆರೆದದ್ದು ನಂತರದ ದಿನಗಳಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ವೇಗ ಪಡೆದುಕೊಂಡು ಸುಧಾರಿಸಿದ್ದು ಈಗ ಇತಿಹಾಸ. ಮೇಲೆ ಹೋದದ್ದು ಕೆಳಗೆ ಬರಲೇಬೇಕು ಎನ್ನುತ್ತೆ ಒಂದು ಗಾದೆ. ಇದೀಗ ಎಲ್ಲಡೆ ಮತ್ತೆ ಗ್ಲೋಬಲೈಸಷನ್ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಈ ಬಾರಿ ಇದಕ್ಕೆ ವಿರುದ್ಧವಾಗಿ, ಜಗತ್ತಿನ ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿಗೆ ಜಾಗತೀಕರಣವೇ ಕಾರಣ ಎನ್ನುವುದು ಈಗ ಹೆಚ್ಚು ಬಲ ಪಡೆದುಕೊಳ್ಳುತ್ತಿರುವ ಕೂಗು. ನಾವಾಯ್ತು ನಮ್ಮ ದೇಶವಾಯ್ತು, ಮೊದಲು ನಾವು ನಮ್ಮ ದೇಶ ನಂತರ ಉಳಿದದ್ದು ಎನ್ನುವ ರಾಷ್ಟ್ರೀಯವಾದ ಎಲ್ಲೆಡೆ ಮನ್ನಣೆ ಪಡೆಯುತ್ತಿದೆ. ಹಾಗೆ ನೋಡಿದರೆ ಭಾರತದಲ್ಲಿ ಮೋದಿ ಅವರಿಗೆ ಸಿಕ್ಕ ಜಯ ಕೂಡ ರಾಷ್ಟ್ರೀಯತೆ ಆಧಾರದಲ್ಲಿ ಸಿಕ್ಕದ್ದೇ. ಅಮೇರಿಕಾದ ಟ್ರಂಪ್ , ಇಂಗ್ಲೆಂಡ್ ನ ಥೇರೆಸಾ ಮೇ ಅವರು ತೀವ್ರ ಬಲಪಂಥೀಯ ವಿಚಾರಧಾರೆಯಿಂದ ಅಧಿಕಾರ ಹಿಡಿದವರು.  ಇವೇಲ್ಲಾ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳು. ಇಂತಹ ಬದಲಾವಣೆಗಳ ನೇರ ಪ್ರಭಾವ ದೇಶದ ಆರ್ಥಿಕತೆಯ ಮೇಲೆ ಆಗುತ್ತದೆ. ಅಲ್ಲಿನ ಪ್ರಜೆಗಳ ಜೀವನ ಕೂಡ ಸಾಕಷ್ಟು ಬದಲಾವಣೆ ಕಾಣುತ್ತದೆ. ಈ ಶತಮಾನವನ್ನ ಆರ್ಥಿಕ ದೃಷಿಯಿಂದ ನಾಲ್ಕು ಭಾಗವಾಗಿ ವಿಭಜಿಸಬಹುದು. 1900 ರ ಪ್ರಾರಂಭದಿಂದ 1945 ರ ವರೆಗೆ , ನಂತರ 1945 ರಿಂದ 1980/90 ರ ವರೆಗೆ, 90 ರಿಂದ 2007 ರ ವರೆಗೆ , 2007 ರಿಂದ ಇಂದಿನ ವರೆಗೆ. ಈ ರೀತಿಯ ವಿಭಜನೆ ನಾವೆಲ್ಲಿಂದ ಹೊರಟೆವು ಇಂದು ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದ ಅರಿಯಲು ಸಹಾಯ ಮಾಡುತ್ತದೆ. ಈ ವಿತ್ತ ವಿಚಾರದ ಸುತ್ತ ಒಂದು ಸುತ್ತು ಹಾಕೋಣ ಬನ್ನಿ. 
1900 ರಿಂದ 1945: ಈ ಅವಧಿಯಲ್ಲಿ ಬದುಕಿದ ನಮ್ಮ ಹಿರಿಯರು ನತದೃಷ್ಟರು. ಹಣಕಾಸು ವ್ಯವಸ್ಥೆ ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. 1920 ರ ವರೆಗೆ ಅಮೇರಿಕಾ ದೇಶ ಒಂದರಲ್ಲೇ ಐದು ಸಾವಿರಕ್ಕೂಹೆಚ್ಚು  ಬೇರೆ ಬೇರೆ ಕರೆನ್ಸಿ ಚಾಲನೆಯಲ್ಲಿತ್ತು ಎಂದರೆ ಹಣಕಾಸು ಅವ್ಯವಸ್ಥೆ ಎಂತಹದು ಎನ್ನುವ ಅರಿವಾದೀತು. ಅಮೇರಿಕಾದಲ್ಲಿ ನೆಲವಿತ್ತು ದುಡಿಯಲು ಜನವಿರಲಿಲ್ಲ, ಯೂರೋಪಿನಲ್ಲಿ ಜಾಗದ ಕೊರತೆ ಇತ್ತು ಜನ ಇದ್ದರು. ಹೆಚ್ಚಿನ ಹಣದ ಆಸೆ ತೋರಿಸಿ ಯೂರೋಪಿನಿಂದ ದುಡಿಯಲು ಅಮೇರಿಕಾ ಜನರನ್ನ ಕರೆಸಿಕೊಳ್ಳುತ್ತಿತ್ತು. ಜಗತ್ತಿನಲ್ಲಿ ಹಣಕಾಸು ವ್ಯವಸ್ಥೆ ಇದ್ದುದರಲ್ಲಿ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಬಂದದ್ದು 1920 ರ ನಂತರ. ಈ ಅವಧಿಯಲ್ಲಿ ಜಗತ್ತು ಎರಡು ಮಹಾಯುದ್ಧಕ್ಕೆ ಸಾಕ್ಷಿಯಾಗುತ್ತದೆ . ಜಗತ್ತು ಅತಿ ಹೆಚ್ಚು ವಲಸೆ , ಸಾವು ನೋವು ಕಂಡ ವರ್ಷಗಳಿವು . ಆರ್ಥಿಕವಾಗಿ ಜಗತ್ತು ಕೋಮಾ ತಲುಪಿತ್ತು. 
1945 ರಿಂದ 1990: ಹಣಕಾಸು ವಿಷಯದಲ್ಲಿ ಸಾಕಷ್ಟು ಗೊಂದಲಗಳ ನಿವಾರಣೆ ಮಾಡಿಕೊಂಡು ನಿರ್ದಿಷ್ಟ ರೀತಿ ನೀತಿ ನಿಯಮಗಳ ಜಾರಿಗೆ ತಂದ ಉತ್ತಮ ಅವಧಿ ಇದು ಎನ್ನಬಹುದು. ಅಮೇರಿಕಾ ಮತ್ತು ಇಂಗ್ಲೆಂಡ್ ಜಗತ್ತಿನ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುತ್ತವೆ. ಅಂದಿನ ರಷ್ಯಾ ಒಕ್ಕೊಟ ಅಮೇರಿಕಾ ಆರ್ಥಿಕತೆಗೆ ಸೆಡ್ಡು ಹೊಡೆದು ನಿಂತದ್ದು ಅವುಗಳ ನಡುವಿನ ಶೀತಲ ಸಮರಕ್ಕೆ ಈ ಸಮಯದಲ್ಲಿ ಜಗತ್ತು ಸಾಕ್ಷಿಯಾಗುತ್ತದೆ.
ಎರಡನೇ ಮಹಾಯುದ್ಧದ ನಂತರ ಮುಕ್ಕಾಲು ಪಾಲು ದೇಶಗಳು ಸಾಕಷ್ಟು ಹಣಕಾಸು ಮುಗ್ಗಟ್ಟು, ಏರುತ್ತಿದ್ದ ಹಣದುಬ್ಬರ ಇವುಗಳಿಂದ ಕಂಗೆಟ್ಟಿದ್ದವು, ಅಮೇರಿಕ ಇಂತಹ ಸಮಯದ ಲಾಭ ಪಡೆದು ಚಿನ್ನದ ಠೇವಣಿ ಮೇಲೆ ಡಾಲರ್ ಮುದ್ರಿಸುವ ಒಪ್ಪಂದವನ್ನ ಮುರಿಯುತ್ತದೆ. ಅದಾಗಲೇ ಜನರ ನಡುವೆ ಸಾಮಾನ್ಯವಾಗಿ ಒಪ್ಪಲ್ಪಟ್ಟ ವಿನಿಮಯ ಮಾಧ್ಯಮವಾಗಿ ಡಾಲರ್ ಸ್ಥಾನ ಪಡೆದಾಗಿತ್ತು. ಡಾಲರ್ ಮೇಲಿನ ಅವಲಂಬನೆ, ನಂಬಿಕೆ ಚಿನ್ನದ ಬ್ಯಾಕ್ ಅಪ್ ಇಲ್ಲದೆಯೂ ಅಭಾದಿತವಾಗಿರುವುದು ಮ್ಯಾಜಿಕ್ ಇಲ್ಲ ಎನ್ನುವವರಿಗೆ ಉತ್ತರ ಎನ್ನುವಂತಿದೆ. ಅಮೇರಿಕಾ ಈ ಸಮಯದಲ್ಲಿ ಆರ್ಥಿಕವಾಗಿ ಚನ್ನಾಗಿ ಬೆಳೆಯಿತು . ತನ್ನ ಡೊಮೆಸ್ಟಿಕ್ ಖರೀದಿ ಕಡಿಮೆಯಾಗುತ್ತಿದ್ದಂತೆ ಹಲವಾರು ಆರ್ಥಿಕ ತಜ್ಞರ ಕೂಡಿಸಿಕೊಂಡು ಅಮೇರಿಕಾ ಹೊಸೆದ ಹೊಸ ದಾರ ಗ್ಲೋಬಲೈಸಷನ್!.
1990-2007: ಜಾಗತೀಕರಣ ಎನ್ನುವ ಹೊಸ ಸಮೀಕರಣ ಶುರುವಾದದ್ದು ಈ ಸಮಯದಲ್ಲಿ. ಅಮೇರಿಕಾ ಸಮಾಜ ಹೇಗಾಗಿತ್ತು ಅಂದರೆ ಉತ್ಪತ್ತಿ (ಪ್ರೊಡಕ್ಷನ್) ಮಾಡುತ್ತಿರಬೇಕು ಮತ್ತು ಜನ ಅಥವಾ ಗ್ರಾಹಕ ಅದನ್ನ ಕೊಳ್ಳುತ್ತಿರಬೇಕು. (ಕನ್ಸಮ್ಶನ್ ) ಇವೆರಡರಲ್ಲಿ ಒಂದು ತಪ್ಪಿದರೂ ಆ ಸಮಾಜ ಕುಸಿಯುತಿತ್ತು. ಹಾಗೆ ನೋಡಲು ಹೋದರೆ ಹೊಸ ಆಟಗಳು ಶುರುವಾಗಿದ್ದು ಹಳೆಯ ಆಟದಲ್ಲಿನ ಸೋಲುಗಳಿಂದ. ಪ್ರತಿ ಹೊಸ ಪ್ರಯೋಗ ಜಾಗತಿಕ ಕುಸಿತ, ಹಣಕಾಸು ಏರುಪೇರು ಉಂಟುಮಾಡಿವೆ. ಆಗೆಲ್ಲಾ ತನ್ನ ಜನರ ನಂಬಿಸಲು ಹೊಸ ಆಟಿಕೆ ತಯಾರಾಗುತ್ತದೆ. ಜಾಗತೀಕರಣ ಅಂದಿನ ದಿನಗಳಲ್ಲಿ ತಯಾರಾದ ಹೊಸ ಆಟಿಕೆ. ಅದನ್ನ ತಯಾರಿಸದವರಿಗೂ ಅದರ ಆಯಸ್ಸು ಕಡಿಮೆ ಎನ್ನುವುದರ ಅರಿವು ಇದ್ದೆ ಇತ್ತು. ಆದರೇನು ಅಂದಿನ ದಿನದ ಬದುಕು ಮುಖ್ಯ. ನಾಳಿನ ಸಮಸ್ಯೆ ನಾಳೆಗೆ. ಅಮೇರಿಕಾ ತನ್ನ ವಸ್ತುವಿಗೆ ಜಗತ್ತೇ ಮಾರುಕಟ್ಟೆ ಮಾಡಿಕೊಳ್ಳುವ ಘನ ಉದ್ದೇಶದಿಂದ ಜಾಗತೀಕರಣ ಸೃಷ್ಟಿಸಿತು. ಚೀನಾ ಆಟದಲ್ಲಿ ಎಲ್ಲೂ ಕಾಣದಂತೆ ಇದ್ದು ಧಿಡೀರನೆ ಪ್ರಬುದ್ಧಮಾನಕ್ಕೆ ಬಂದು ಜಾಗತೀಕರಣದ ಎಲ್ಲಾ ಲಾಭವನ್ನ ನುಂಗಿ ನೀರು ಕುಡಿಯಿತು. ಚೀನಾ ಜಗತ್ತಿನ ಕಾರ್ಖಾನೆಯಾಗಿ ಮಾರ್ಪಟ್ಟಿತು. ಚೀನಾದ ಬೆಲೆ ಮುಂದೆ ಹೋರಾಡಲಾರದೆ ಒಂದೊಂದೇ ದೇಶಗಳು ತಲೆ ಬಾಗಿಸ ತೊಡಗಿದವು. ಯೂರೋಪಿನ ಹಲವು ರಾಷ್ಟ್ರಗಳು ಸದ್ದಿಲ್ಲದೇ ಚೀನಾದ ಹೂಡಿಕೆಯ ಕಪಿ ಮುಷ್ಟಿಯಲ್ಲಿ ಸಿಲುಕಿದವು. ಇಂಗ್ಲಿಷ್ ಬಲ್ಲ ಭಾರತೀಯ ನಾಗರೀಕರು ಜಗತ್ತಿನ ಮೂಲೆ ಮೂಲೆ  ತಲುಪಿದರು. ಹೆಚ್ಚು ಸದ್ದು ಮಾಡದೆ ಅಮೇರಿಕಾದ ಕಾರ್ಪೊರೇಟ್ ವಲಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಆಯಕಟ್ಟಿನ ಜಾಗದಲ್ಲಿ ಆಸೀನರಾದರು. ತಾವು ಶುರು ಮಾಡಿದ ಆಟದಲ್ಲಿ ನಮಗೆ ಸೋಲು? ಯಾರು ತಾನೇ ಸಹಿಸಿಯಾರು? ಪ್ರತಿ ಸಲದಂತೆ ಆರ್ಥಿಕ ಕುಸಿತ ಶುರುವಾಗುತ್ತೆ. 
2007 ರಿಂದ 2017: ಮೊದಲೇ ಹೇಳಿದಂತೆ ಪ್ರತಿ ಬಾರಿಯೂ ಆಟ ತನ್ನಿಷ್ಟದಂತೆ ನೆಡೆಯಲಿಲ್ಲ ಎಂದರೆ ಆರ್ಥಿಕ ಕುಸಿತ ಗ್ಯಾರಂಟಿ. ಇತಿಹಾಸವನ್ನ ತೆಗೆದು ನೋಡುತ್ತಾ ಬನ್ನಿ ಯಾವಾಗ ಅಮೇರಿಕಾ ಅಥವಾ ಇಂಗ್ಲೆಂಡ್ಗೆ ನೆಡೆಯುತ್ತಿರುವ ದಾರಿ ನಮಗೆ ಲಾಭದಾಯಕವಲ್ಲ ಅನ್ನಿಸಿತ್ತೋ ಆಗೆಲ್ಲಾ ಜಗತ್ತು ಹಣಕಾಸು ಕುಸಿತಕ್ಕೆ ಒಳಗಾಗಿವೆ. ಗ್ಲೋಬಲೈಸಷನ್ ನಿಂದ ಈ ಎರಡೂ ದೇಶಗಳು ಲಾಭಕ್ಕಿಂತ ಹೆಚ್ಚು ನಷ್ಟ ನಮಗೆ ಅನ್ನುವುದನ್ನ ಅರಿತವು. ಒಂದು ಕಡೆ ಚೀನಾ ಪ್ರೊಡಕ್ಷನ್ ನಲ್ಲಿ ಯಾರೂ ತನ್ನ ಹತ್ತಿರ ಬರದಂತೆ ರಾಕ್ಷಸ ರೀತಿಯಲ್ಲಿ ಕೆಲಸ ಮಾಡಹತ್ತಿತು. ಭಾರತ ,ಬ್ರೆಜಿಲ್ , ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಸದ್ದಿಲ್ಲದೇ ಇಂಗ್ಲೆಂಡ್ ಮತ್ತು ಅಮೇರಿಕಾ ಆರ್ಥಿಕತೆಯ ಒಂದು ಭಾಗ ಕಸಿದು ಕೊಂಡವು. ಅಮೇರಿಕಾ ಆರ್ಥಿಕತೆ 2007 ರಲ್ಲಿ ಕುಸಿಯುತ್ತದೆ. ಯೂರೋಪ್ ನಂತರ ಇಡೀ ಜಗತ್ತು ಗ್ರೇಟ್ ಡಿಪ್ರೆಶನ್ ಅಡಿಯಲ್ಲಿ ನಲುಗುತ್ತದೆ. 
ಇದೀಗ 2018 ರಲ್ಲಿದ್ದೇವೆ ಮುಂದೇನು ? 
ನಾವು ಚಿಕ್ಕವರಿದ್ದಾಗ ಗಲ್ಲಿ ಕ್ರಿಕೆಟ್ ಆಡಿದ್ದೇವೆ ಅಲ್ಲವೇ? ಬ್ಯಾಟಿಂಗ್ ಮಾಡುತ್ತಾ ಔಟ್ ಆದರೆ ನಮ್ಮ ನಡುವೆ ತಾಕತ್ತಾಗಿದ್ದ ಹುಡುಗ ಔಟ್ ಆಗಿಲ್ಲ ಅಂತ ಮೋಸ ಮಾಡುತಿದ್ದದು ನೆನಪಿದೆ ಅಲ್ಲವೇ. ಇಂಗ್ಲೆಂಡ್ ಅಮೇರಿಕಾ ಆ ಮೋಸಗಾರ ಬಲಿಷ್ಠ ಹುಡುಗನಂತೆ. ಯಾವುದು ಏನೇ ಇರಲಿ ಬ್ಯಾಟಿಂಗ್ ಮಾತ್ರ ಅವರು ಮಾಡುತ್ತಿರಬೇಕು. ತಾವೇ ಶುರು ಮಾಡಿದ ಜಾಗತೀಕರಣ ಇಂದು ಜಗತ್ತಿನ ಆರ್ಥಿಕ ಸಂಕಷ್ಟದ ರೊವಾರಿ ಎಂದು ತಮ್ಮ ಜನರನ್ನ ನಂಬಿಸಿದ್ದಾರೆ. ಇದೆ ಆಧಾರದಲ್ಲಿ  ಅಮೇರಿಕಾ ಚುನಾವಣೆ ಫಲಿತಾಂಶ ತಮ್ಮ ಪಾಲಾಗಿಸಿಕೊಂಡಿದ್ದಾರೆ. ಬ್ರಿಟನ್ ಥೇರೆಸಾ ಮೇ ಎನ್ನುವ ಇದೆ ಶಾಲೆಯ ವಿದ್ಯಾರ್ಥಿಯ ಕೈಗೆ ಸಿಕ್ಕಿದೆ. ತಮ್ಮ ತಪ್ಪನ್ನ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ರಾಷ್ಟ್ರೀಯವಾದ ಹುಟ್ಟಿಹಾಕಿದ್ದರೆ. ಜಗತ್ತಿಗೆ ಜಗತ್ತೇ ಸಮೂಹ ಸನ್ನಿಗೆ ಒಳಗಾದಂತೆ ಪೊಲಾರೈಸೇಷನ್ ಗೆ ಒಳಗಾಗುತ್ತಿದೆ. ಬರುವ ನಾಳೆಯ ಒಳಿತಿನ ಹೆಸರಲ್ಲಿ ಇಂದು ಸದ್ದಿಲ್ಲದೇ ಉಸಿರುಗಟ್ಟಿದೆ. ಇದು ಸರಿಯಾದ ಸಮಯ ಕಬ್ಬಿಣ ಕಾದಾಗಲೇ ಬಡಿಯಬೇಕು ಎನ್ನುವುದು ಅಮೇರಿಕಾಗಿಂತ ಚನ್ನಾಗಿ ಯಾರಿಗೆ ಗೊತ್ತಿರಲು ಸಾಧ್ಯ? ರಾಷ್ಟ್ರೀಯತೆಯ ಹೊಸ ಕೂಗಿನಿಂದ ಅಧಿಕಾರ ಪಡೆದದ್ದಾಯಿತು ಆದರೇನು ಅದನ್ನ ಉಳಿಸಿಕೊಂಡು ಜಗತ್ತಿನ ಮೇಲೆ ತಮ್ಮ ಹಿಡಿತ ತಪ್ಪದಂತೆ ಕಾಯ್ದು ಕೊಳ್ಳಲು ಅಮೇರಿಕಾ ಟ್ರೇಡ್ ವಾರ್ ಶುರು ಮಾಡಿದೆ. ಗ್ಲೋಬಲೈಷನ್ ನ ಪೂರ್ಣ ಲಾಭ ಪಡೆದು ಕೊಬ್ಬಿದ ಚೀನಾ ಕೂಡ ಅಮೇರಿಕಾದ ಟ್ರೇಡ್ ವಾರ್ ಗೆ ಪ್ರತಿಯಾಗಿ ತಾನೂ ಟ್ರೇಡ್ ವಾರ್. ಪ್ರೈಸ್ ವಾರ್ ಶುರು ಮಾಡಿಕೊಂಡಿದೆ. ಈ ಎರಡು ದೇಶಗಳ ನಡುವಿನ ಮೇಲಾಟದ ಕಾದಾಟ ವಿತ್ತ ಪ್ರಪಂಚದ ಶಾಂತಿಯನ್ನ ಕದಡುವುದು ಮಾತ್ರ ಸುಳ್ಳಲ್ಲ. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com