ಬದುಕು ನಾಲ್ಕು ದಿನ, ಹಾಯಾಗಿರೋಕೆ ಏನ್ಮಾಡೋಣ?

ಇಂದಿನ ಲೇಖನದ ಉದ್ದೇಶ ನೀವು ರಿಟೈರ್ ಆಗಲು ಎಷ್ಟು ಸಮಯವಿದೆ ಅಷ್ಟರಲ್ಲಿ ನೀವು ಎಷ್ಟು ಹಣವನ್ನ ಕೂಡಿಟ್ಟಿರಬೇಕು? ಹಣದುಬ್ಬರ ಎಷ್ಟು? ಎಂದೆಲ್ಲಾ ಹೇಳುವುದಲ್ಲ!...
ಬದುಕು ನಾಲ್ಕು ದಿನ ಹಾಯಾಗಿರೋಕೆ ಏನ್ಮಾಡೋಣ?
ಬದುಕು ನಾಲ್ಕು ದಿನ ಹಾಯಾಗಿರೋಕೆ ಏನ್ಮಾಡೋಣ?
ನಾವು ನಿನ್ನೆ ತನಕ ಹೇಗೆ ಬದುಕಿದ್ದೆವು ಎನ್ನುವುದು ನೆನಪು. ನಿನ್ನೆ ಎನ್ನುವುದು ಗತಕಾಲ. ನಿನ್ನೆಯ ನಮ್ಮ ಬದುಕ ಕುರಿತು ಕತೆಯಂತೆ ಹೇಳಬಹದು. ಇಂದು ನಾವು ಏನು? ಮತ್ತು ನಮ್ಮ ಬದುಕು ಹೇಗಿದೆ? ಅನ್ನುವುದು ಬಹಳ ಮುಖ್ಯ. ನಿಮ್ಮ ಬಾಲ್ಯ ಮತ್ತು ಯೌವ್ವನ ಹೇಗೆ ಕಳೆದಿರಲಿ ನಿಮ್ಮ ವೃದ್ಯಾಪ್ಯ ಮಾತ್ರ ಹೇಗೆ ಕಳೆಯಬೇಕು ಎನ್ನುವುದನ್ನ ತಕ್ಕ ಮಟ್ಟಿಗೆ ನಿರ್ಧರಿಸುವ ಶಕ್ತಿ ಮತ್ತು ಅದಕ್ಕೆ ಬೇಕಾದ ವೇಳೆ ಎರಡೂ ನಿಮ್ಮ ಬಳಿ ಇರುತ್ತದೆ. ಹೀಗಾಗಿ ನಿವೃತ್ತಿ ನಂತರದ ಬದುಕನ್ನ ಕಳೆಯಲು ಸಾಕಷ್ಟು ಸಿದ್ದತೆ ಅವಶ್ಯಕೆತೆಯಿದೆ. ಇಂದು ಮೆಡಿಕಲ್ ಸೈನ್ಸ್ ನಲ್ಲಿ ಆಗಿರುವ ಬದಲಾವಣೆ ಎಷ್ಟಿದೆಯೆಂದರೆ ಹಣವಿದ್ದರೆ ಎಂತಹ ರೋಗವಿದ್ದರೂ ಹೇಗೋ ಮಾಡಿ ಎಂಬತ್ತರ ತನಕ ಬದುಕಿಸುವಷ್ಟು!... ಇಂದಿನ ಲೇಖನದ ಉದ್ದೇಶ ನೀವು ರಿಟೈರ್ ಆಗಲು ಎಷ್ಟು ಸಮಯವಿದೆ ಅಷ್ಟರಲ್ಲಿ ನೀವು ಎಷ್ಟು ಹಣವನ್ನ ಕೂಡಿಟ್ಟಿರಬೇಕು? ಹಣದುಬ್ಬರ ಎಷ್ಟು? ನಿಮ್ಮ ಮಾಸಿಕ ಖರ್ಚು ಇಂದು ಹತ್ತು ಸಾವಿರವಿದ್ದರೆ ಇನ್ನು ಇಪ್ಪತ್ತೈದು ವರ್ಷದ ನಂತರ ನಲವತ್ತು ಸಾವಿರ ಬೇಕು ಎಂದೆಲ್ಲಾ ಹೇಳುವುದಲ್ಲ!. ಬದಲಿಗೆ ಇಪ್ಪತೈದರ ಯುವಜನತೆಯಿಂದ ಐವತ್ತರ ವಯೋಮಾನದ ಜನರು ಒಂದಷ್ಟು ಮೂಲಭೂತ ವಿಷಯಗಳ ಬಗ್ಗೆ ಗಮನ ಹರಿಸಿದರೆ ಅವರ ನಿವೃತ್ತಿ ಜೀವನ ಒಂದಷ್ಟು ಹಸನಾಗಬಹದು ಮತ್ತು ಅಂತಹ ಅಂಶಗಳೇನು? ಎನ್ನುವುದನ್ನ ಚರ್ಚಿಸುವುದು. 
ವಯೋಮಾನ ಇಪ್ಪತೈದರಿಂದ ರಿಂದ ಮೂವತ್ತೈದು: ವಿದ್ಯಾರ್ಥಿ ದೆಸೆಯ ನಂತರ ಇದು ಮತ್ತೊಂದು ಗೋಲ್ಡನ್ ಪಿರಿಯಡ್ ಎನ್ನಬಹದು. ಹೊಸ ಕೆಲಸ ಹೊಸ ಪ್ರಪಂಚ ಹೊಸದಾಗಿ ದಕ್ಕಿದ ಆರ್ಥಿಕ ಸ್ವಾತಂತ್ರ್ಯ! ಕಳೆದು ಹೋಗಲು ಇನ್ನೇನುಬೇಕು? ಜಗತ್ತಿನ ಮುಕ್ಕಾಲು ಪಾಲು ಜನತೆ ಈ ವಯಸ್ಸಿನಲ್ಲಿ ಮೋಜು ಮಸ್ತಿಯಲ್ಲಿ ಸಮಯ ಕಳೆದು ಬಿಡುತ್ತಾರೆ. ಮೋಜು ಮಸ್ತಿ ಬೇಡ ಎನ್ನವುದು ಉದ್ದೇಶವಲ್ಲ ಅದರ ಜೊತೆಗೆ ನಾಳಿನ ಬದುಕಿಗೆ ಒಂದಷ್ಟು ತಯಾರಿಯ ಅವಶ್ಯಕತೆ ಕೂಡ ಇರುತ್ತದೆ. ಇನ್ನೂ ಬದುಕನ್ನ ಶುರು ಮಾಡುವ ಹೊತ್ತಿನಲ್ಲಿ ನಿವೃತ್ತಿಯ ಮಾತು!? ಎನ್ನುವುದು ಬಹುತೇಕರು ಕೇಳುವ ಪ್ರಶ್ನೆ. ಗಮನಿಸಿ ನಿಮ್ಮ ಬಳಿ ಸಾಕಷ್ಟು ಸಮಯವಿದೆ. ಎಷ್ಟೊಂದು ಸಮಯವೆಂದರೆ ಜೋಬಿಗೆ ಭಾರವಾಗದ ಅತ್ಯಂತ ಸಣ್ಣ ಮೊತ್ತವನ್ನ ಸೇರಿಸುತ್ತಾ ಬಂದರೂ ಸಾಕು ನಿಮ್ಮ ನಿವೃತ್ತಿ ಸುಗಮವಾಗಿರುತ್ತದೆ. ತಿಂಗಳ ಆದಾಯದ ಮೂವತ್ತು ಪ್ರತಿಶತ ಉಳಿತಾಯಕ್ಕೆ ಮೀಸಲಿಡಬೇಕು. ಆ ಮೂವತ್ತು ಪ್ರತಿಶತ ಹಣವನ್ನ ಹೇಗೆ ಮತ್ತು ಎಲ್ಲಿ ಹೂಡಿಕೆಮಾಡಬೇಕು ಎನ್ನುವುದನ್ನ ನೋಡೋಣ. ಉದಾಹರಣೆಗೆ  ರಾಜ ಎನ್ನುವ ಹುಡುಗನ ಮಾಸಿಕ ವೇತನ ಐವತ್ತು ಸಾವಿರ ಎಂದುಕೊಳ್ಳೋಣ. ಐವತ್ತು ಸಾವಿರದ ಮೂವತ್ತು ಪ್ರತಿಶತ ಹದಿನೈದು ಸಾವಿರ ರೂಪಾಯಿ. ಇದನ್ನ ಎಲ್ಲಿ ಮತ್ತು ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನ ತಿಳಿಯೋಣ. 
  1. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್: ಹತ್ತು ಪ್ರತಿಶತ ಅಂದರೆ 1500 ರೂಪಾಯಿ. 
  2. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಇಪ್ಪತ್ತು ಪ್ರತಿಶತ ಅಂದರೆ 3೦೦೦ ರೂಪಾಯಿ. 
  3. ನ್ಯಾಷನಲ್ ಪೆನ್ಷನ್ ಸ್ಕೀಮ್: ಇಪ್ಪತ್ತು ಪ್ರತಿಶತ ಅಂದರೆ 3೦೦೦ ರೂಪಾಯಿ. ಗಮನಿಸಿ ನ್ಯಾಷನಲ್ ಪೆನ್ಷನ್ ಸ್ಕೀಮ್ ಕೇಂದ್ರ ಸರಕಾರ ಆದೇಶದ ಮೇರೆಗೆ ಶುರುವಾಗಿರುವ ಯೋಜನೆ. ಇಲ್ಲಿ ಹೂಡಲಾಗುವ ಹಣವನ್ನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಲ್ಲಿ ವಿವಿಧ ರೀತಿಯ ಅಸೆಟ್ ಕ್ಲಾಸ್ ಇರುತ್ತದೆ. ವ್ಯಕ್ತಿಯ ರಿಸ್ಕ್ ತೆಗೆದುಕೊಳ್ಳುವ ಶಕ್ತಿಯ ಮೇಲೆ ಮತ್ತು ಆತ ಆಯ್ಕೆ ಮಾಡಿದ ಸ್ಥರದಲ್ಲಿ ಹೂಡಿಕೆಮಾಡಲಾಗುತ್ತದೆ. ಈ ಅಸೆಟ್ ಕ್ಲಾಸ್ ಅನ್ನವುದರಲ್ಲಿ 50 ಪ್ರತಿಶತ ಹಣವನ್ನ ಈಕ್ವಿಟಿ ಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಅಂದರೆ ಹೈ ರಿಸ್ಕ್ ಹೈ ರಿಟರ್ನ್. ಉಳಿದ ಐವತ್ತು ಪ್ರತಿಶತವನ್ನ ಕೂಡ ನಿಮ್ಮ ಇಚ್ಚೆಗೆ ಅನುಸಾರವಾಗಿ ಸೆಕ್ಯುರಿಟೀಸ್ ಅಥವಾ ಬಾಂಡ್ ಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ನನ್ನ ಸಲಹೆ 25-30 ರ ವಯೋಮಾನದವರು ಅಸೆಟ್ ಕ್ಲಾಸ್ ಈ ನಲ್ಲಿ ಹೂಡಿಕೆ ಮಾಡಿ. 
  4. ಗೋಲ್ಡ್ ಮತ್ತು ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್: ಹತ್ತು ಪ್ರತಿಶತ ಅಂದರೆ 15೦೦ ರೂಪಾಯಿ. 
  5. ಎಮರ್ಜೆನ್ಸಿ ಫಂಡ್: ಹತ್ತು ಪ್ರತಿಶತ ಅಂದರೆ 1500 ರೂಪಾಯಿ. 
  6. ಷೇರು ಮಾರುಕಟ್ಟೆ: ಉಳಿದ ಮೂವತ್ತು ಪ್ರತಿಶತ ಹಣವನ್ನ ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ದೃಷ್ಟಿಯಿಂದ ಹೂಡಿಕೆ ಮಾಡಬೇಕು. ಅಂದರೆ 4500 ರೂಪಾಯಿಯನ್ನ ಉತ್ತಮವಾದ ಮ್ಯೂಚುವಲ್ ಫಂಡ್ ನಲ್ಲಿ ನಿಯಮಿತವಾಗಿ ತೊಡಗಿಸುತ್ತ ಹೋದರೆ. ಮೂವತ್ತು ರಿಂದ ಮೂವತ್ತೈದು ವರ್ಷದಲ್ಲಿ ನಿವೃತ್ತಿಗೆ ಬೇಕಾಗುವ ಹಣ ಸಿಗುತ್ತದೆ. 
ವಯೋಮಾನ ಮೂವತ್ತೈದರಿಂದ ನಲವತೈದು: ಬದುಕಲ್ಲಿ ಎಂತಹ ವ್ಯತ್ಯಾಸ ನೋಡಿ! ಖರ್ಚು ಹೆಚ್ಚಾಗಿರುತ್ತದೆ. ಆದಾಯದಲ್ಲಿ ಮೂವತ್ತು ಪ್ರತಿಶತ ಉಳಿಸುವುದು ಏಕ ವ್ಯಕ್ತಿ ದುಡಿಯುವ ಮನೆಯಲ್ಲಿ ಕಷ್ಟಸಾಧ್ಯ ಎನ್ನಬಹದು. ಪತಿ ಪತ್ನಿ ಇಬ್ಬರೂ ದುಡಿಯುತ್ತಿದ್ದರೆ. ಮೂವತ್ತು ಪ್ರತಿಶತ ಉಳಿಸಲೇಬೇಕು. ಹೆಚ್ಚುತ್ತಿರುವ ಖರ್ಚು ಹೆಚ್ಚಾಗುತ್ತಿರುವ ಜೀವಿತಾವಧಿ ನಾಳಿನ ಬದುಕಿಗೆ ಒಂದಷ್ಟು ಹಣವನ್ನ ಉಳಿಸುವ ಕಟ್ಟುಪಾಡಿಗೆ ನಮ್ಮನ್ನ ಸಿಲುಕಿಸುತ್ತದೆ. ಗಮನಿಸಿ ಇವೆಲ್ಲಾ ಎಲ್ಲರನ್ನೂ ಗಮನದಲ್ಲಿರಿಸಿ ಕೊಂಡು ಹೇಳಲಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಸಂಸಾರದಿಂದ ಸಂಸಾರದ ಆದಾಯ ವ್ಯಯ ಮತ್ತು ಉಳಿತಾಯದ ಶೈಲಿ ಬದಲಾಗುತ್ತದೆ. ಹೀಗಾಗಿ ಅದಕ್ಕೆ ತಕ್ಕಂತೆ ಬದಲಾವಣೆ ಅವಶ್ಯಕತೆ ಇರುತ್ತದೆ. ಒಂದೇ ಆದಾಯ ಹೊಂದಿರುವರು ಎಮರ್ಜನ್ಸಿ ಫಂಡ್ ಅಥವಾ ಲಿಕ್ವಿಡ್ ಫಂಡ್ ಅನ್ನು ಹತ್ತು ಪ್ರತಿಶತದಿಂದ ಇಪ್ಪತ್ತು ಪ್ರತಿಶತಕ್ಕೆ ಏರಿಕೆ ಮಾಡಿ, ಗೋಲ್ಡ್ ಮತ್ತು ಸೇವಿಂಗ್ ಸರ್ಟಿಫಿಕೇಟ್ ಮೇಲಿನ ಹೂಡಿಕೆ ಕಡಿತಗೊಳಿಸಿ.  ಗಮನಿಸಿ ಲಿಕ್ವಿಡ್ ಫಂಡ್ ಅಥವಾ ಎಮಿರ್ಜನ್ಸಿ ಫಂಡ್  ಎಲ್ಲಿಯೂ ಹೂಡಿಕೆ ಮಾಡದೆ ಉಳಿತಾಯ ಖಾತೆಯಲ್ಲಿ ಸುಮ್ಮನೆ ಇಟ್ಟ ಹಣ. ಇನ್ನು ಎರಡು ಆದಾಯವಿದ್ದು ಮೂವತ್ತಕ್ಕೂ ಹೆಚ್ಚು ಪ್ರತಿಶತ ಉಳಿತಾಯ ಮಾಡಲು ಸಾಧ್ಯವಿದ್ದಲ್ಲಿ ಎಮೆರ್ಜೆನ್ಸಿ ಫಂಡ್ ಹತ್ತು ಪ್ರತಿಶತ ಏರಿಸಿ. ಉಳಿದ ಎಲ್ಲವನ್ನೂ ಹಾಗೆ ಮುಂದುವರಿಸಿ. ಇನ್ನು ಹೆಚ್ಚಿನ ಹಣವಿದ್ದರೆ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ. 
ವಯೋಮಾನ ನಲತೈದರಿಂದ ಅರವತ್ತು: ಇದೊಂದು ಸಂಕ್ರಮಣ ಕಾಲಘಟ್ಟ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಖರ್ಚು.  ಸಾಮಾಜಿಕವಾಗಿ ಗುರುತಿಸಿಕೊಳ್ಳಬೇಕಾದ ಒತ್ತಡ. ಇವುಗಳ ಜೊತೆಗೆ ಕೆಲಸದಲ್ಲಿ ಬದಲಾವಣೆ ಹೀಗೆ ಒಂದಲ್ಲ ಒಂದು ಬದಲಾವಣೆಗಳ ಸರಿಮಾಲೆ ಎದುರಾಗುವ ಕಾಲಘಟ್ಟವಿದು. ಮೂವತ್ತು ಅಥವಾ ನಲವತ್ತು ವರ್ಷ ಒಂದೇ ಸಮನೆ ನಿಗದಿತ ಮೊತ್ತವನ್ನ ಲೇಖನದಲ್ಲಿ ಬರದಂತೆ ಮಾಡುತ್ತಾ ಬರುವುದು ಸುಲಭದ ಮಾತಲ್ಲ! ಈ ರೀತಿ ಅಂದುಕೊಂಡ ರೀತಿಯಲ್ಲಿ ಉಳಿತಾಯ ಮತ್ತು ಹೂಡಿಕೆ ಮಾಡಲು ಜಗತ್ತಿನ ಅದೆಷ್ಟು ಪ್ರತಿಶತ ಜನರಿಗೆ ಸಾಧ್ಯವಾದೀತು? ಹೌದಲ್ಲ!! ಸರಿ ಹಾಗಾದರೆ ಇದಕ್ಕೆ ಪರಿಹಾರವೇನು?. ಇದಕ್ಕೆ ಪರಿಹಾರ ಸುಲಭವಿದೆ. ಅದಕ್ಕೆ ಸಮಾನ ಮನಸ್ಕ ಹದಿನೈದು ಅಥವಾ ಇಪ್ಪತ್ತು ದಂಪತಿಗಳ ಒಂದು ಒಕ್ಕೊಟದ ಅವಶ್ಯಕತೆಯಿದೆ. ಇಂದಿನ ರಿಟೈರ್ಮೆಂಟ್ ಮನೆಗಳು ಅತ್ಯಂತ ದುಬಾರಿಯಾಲಿವೆ. ಮತ್ತೆ ಅಲ್ಲಿನ ಮಾಸಿಕ ಶುಲ್ಕ ಕೂಡ ಬಹಳವೇ ಹೆಚ್ಚಾಗಿದೆ. ಜನ ಸಾಮಾನ್ಯರಿಗೆ ಐವತ್ತರ ನಂತರ ಷೇರುಮಾರುಕಟ್ಟೆಯ ಹೂಡಿಕೆಯನ್ನ ನಾನು ಬೇಡವೆನ್ನುತ್ತೇನೆ. ಅಲ್ಲಿನ ಏರಿಳಿತಗಳು ಕ್ಷುಲುಕ ಕಾರಣಕ್ಕೆ ಕುಸಿತಕಾಣುವುದು... ಇಂತಹ ನೋವುಗಳ ಬದಲಿಗೆ ನಿಮ್ಮ ಹಣವನ್ನ ನೀವೇ ನಿರ್ವಹಿಸಿ ಎನ್ನವುದು ನನ್ನ ಸಲಹೆ. ಮಾಸಿಕ ಹತ್ತು ಸಾವಿರ ವ್ಯಯಿಸಿ ನಮಗೆ ಬೇಕಾದ ಬದಲಾವಣೆ ಮಾಡಿಕೊಳ್ಳುವ ಅವಕಾಶವಿದೆ. ಯೋಜನೆ ಸರಳವಿದೆ. ಅದನ್ನ ಅಷ್ಟೇ ಸರಳವಾಗಿ ಅದನ್ನ ಕಾರ್ಯರೂಪಕ್ಕೆ ತಂದರೆ ಒಂದು ಸಾಮಾಜಿಕ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಸರಿ ಏನು ಮಾಡಬೇಕು ? ಯೋಜನೆಯೇನು? 
  1. ನಿಮ್ಮ ಆಪ್ತ ಸ್ನೇಹಿತರ ಪಟ್ಟಿ ಮಾಡಿ, ಸಂಖ್ಯೆ 20 ರಿಂದ 25 ಇರಲಿ. 
  2. ಸಾಧ್ಯವಾದಷ್ಟು ಸಮಾನಮನಸ್ಕರ ಪಟ್ಟಿ ಮಾಡಿ. ಅವರಲ್ಲಿ ಡಾಕ್ಟರ್, ಅಕೌಂಟೆಂಟ್ ಹೀಗೆ ವಿವಿಧ ವೃತ್ತಿಯ ಜನರಿರಲಿ. 
  3. ಒಂದು ಶಾಂತ ಜಾಗದಲ್ಲಿ ಎರಡರಿಂದ ಮೂರು ಎಕರೆ ಜಮೀನು  ಖರೀದಿಸಿ. 
  4. ಸರಳವಾಗಿ ಇಬ್ಬರು ಬದುಕಲು ಬೇಕಾದ ಕೊಠಡಿಗಳ ನಿರ್ಮಾಣಮಾಡಿ. ಪ್ರಾರ್ಥನೆಗೆ,  ಓಡಾಟಕ್ಕೆ ಆಟಕ್ಕೆ ಬೇಕಾದ ಪರಿಕರಗಳು ಇರಲಿ. 
  5. ಊಟ ಮತ್ತು ಮನರಂಜನೆಗೆ ಸಾಮಾನ್ಯ ಜಾಗವಿರಲಿ. 
  6. ಸದಸ್ಯರಿಂದ ಮಾಡಲಾಗದ ಕೆಲಸಕ್ಕೆ ಬೇಕಾದ ಜನರನ್ನ ನೇಮಿಸಿಕೊಳ್ಳುವುದು. 
  7. ಮಾಸಿಕ ಖರ್ಚನ್ನ ಸಮಾನವಾಗಿ ಎಲ್ಲರೊಂದಿಗೆ ಹಂಚಿಕೊಳ್ಳುವುದು. 
ಹತ್ತು ಲಕ್ಷ ಬೆಲೆಬಾಳದ ಜಾಗ ಮತ್ತು ಮನೆಗೆ ಕೋಟಿ ರೂಪಾಯಿ ಕೀಳುವ ಜನರಿಗೆ ಉತ್ತರ ಹೇಳಲು ಮತ್ತು ಜೀವಿತಾವಧಿ ದುಡಿದು ಉಳಿಸಿದ ಹಣವನ್ನ ಸುಲಭವಾಗಿ ಅವರಿವರ ಬಾಯಿಗೆ ಇಡುವ ಬದಲು ನಮ್ಮದೇ ಆದ ಸಣ್ಣ ಸಣ್ಣ ಗುಂಪನ್ನ ಮಾಡಿಕೊಂಡು ಈ ರೀತಿಯ ಸವಲತ್ತು ಮತ್ತು ಪರ್ಯಾಯ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ನಲವತ್ತೈದು ಮೇಲ್ಪಟ್ಟವರು ಇಂತಹ ಕಾರ್ಯವನ್ನ ತಡಮಾಡದೆ ಶುರು ಮಾಡಬೇಕು. ಹದಿನೈದು ವರ್ಷದ ಸಮಯದಲ್ಲಿ ತಮಗೆ ಬೇಕಾದ ಶಾಂತ ವಾತಾವರಣ ಕಲ್ಪಿಸಕೊಳ್ಳುವುದು ಕಷ್ಟವೇನಲ್ಲ! 
ನಿವೃತ್ತಿ ನಂತರದ ಹೂಡಿಕೆ: ನಿವೃತ್ತಿ ನಂತರ ಮೇಲಿನ ಶಾಂತ ಬದುಕು ಕಟ್ಟಿಕೊಂಡ ನಂತರ ಉಳಿದ ಹಣವನ್ನ ಬ್ಯಾಂಕ್ ಡೆಪಾಸಿಟ್, ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ ಪೋಸ್ಟ್ ಆಫೀಸ್ ಮಾಸಿಕ ವರಮಾನ ಯೋಜನೆಯಲ್ಲಿ ಜೊತೆಗೆ ಮ್ಯೂಚುಯಲ್ ಫಂಡ್ ಮಂತ್ಲಿ ಇನ್ಕಮ್ ಪ್ಲಾನ್ಸ್ (MIP's) ನಲ್ಲಿ ಹೂಡಿಕೆ ಮಾಡಬಹದು. ಇವೆಲ್ಲಾ ಮಾಸಿಕ ನಿಗದಿತ ವರಮಾನ ನೀಡುವ ಯೋಜನೆಗಳು ಮತ್ತು ಇವುಗಳಲ್ಲಿ ಅಪಾಯದ ಪ್ರಮಾಣ ಬಹಳವೇ ಕಡಿಮೆ. 
ಬದಲಾದ ಸಮಯದಲ್ಲಿ ಬದುಕನ್ನ ಕಟ್ಟಿಕೊಳ್ಳಲು ನಾವು ಕೂಡ ಕಾಲದಿಂದ ಕಾಲಕ್ಕೆ ಬದಲಾವಣೆಗೆ ನಮ್ಮನ್ನ ನಾವೇ ಒಡ್ಡಿಕೊಳ್ಳುತ್ತಾ ಹೋಗಬೇಕು. ಅದಕ್ಕೆ ಅಲ್ಲವೇ ಹಿರಿಯರು ಬದಲಾವಣೆ ಜಗದ ನಿಯಮ, ಬದಲಾವಣೆಯೊಂದೇ ನಿರಂತರ ಸತ್ಯ ಎಂದದ್ದು. ನಮಗೆ ಬೇಕಾದ ಬದಲಾವಣೆ ಯಾರೋ ಮಾಡಲಿ ಎನ್ನುವುದರ ಬದಲು ನಾವೇ ಮಾಡಿಕೊಳ್ಳೋಣ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com