ಹಣಕ್ಲಾಸು ಅಂಕಣ: ಹೇಳುವೆ ಕೇಳಿ ವಿದೇಶಿ ವಿನಿಮಯ ಕಥೆ!

ಭಾರತದ ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಹಣ ಕಳೆದ ಎರಡು ಮೂರು ವರ್ಷಗಳಿಂದ ಏರುಗತಿಯಲ್ಲಿದೆ. ಈ ತಿಂಗಳ ನಮ್ಮ ಫಾರಿನ್ ಎಕ್ಸ್ಚೇಂಜ್ ರಿಸರ್ವ್ 418 ಬಿಲಿಯನ್ ಅಮೆರಿಕನ್ ಡಾಲರ್.
ವಿದೇಶಿ ವಿನಿಮಯ
ವಿದೇಶಿ ವಿನಿಮಯ
ಭಾರತದ ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಹಣ ಕಳೆದ ಎರಡು ಮೂರು ವರ್ಷಗಳಿಂದ ಏರುಗತಿಯಲ್ಲಿದೆ. ಈ ತಿಂಗಳ ನಮ್ಮ ಫಾರಿನ್ ಎಕ್ಸ್ಚೇಂಜ್ ರಿಸರ್ವ್ 418 ಬಿಲಿಯನ್ ಅಮೆರಿಕನ್ ಡಾಲರ್. ವಿದೇಶಿ ವಿನಿಮಯ ಹೆಚ್ಚು ಇದ್ದಷ್ಟೂ ಅಂತಾರಾಷ್ಟ್ರೀಯ ವ್ಯವಹಾರ ಸುಲುಭ. ಹೆಚ್ಚು ಚೌಕಾಸಿ ಮಾಡಬಹುದು ಮತ್ತು ಜಗತ್ತಿನ ಇತರ ದೇಶಗಳು ಕಣ್ಣಿಗೆ ಹೆಚ್ಚು ವಿದೇಶಿ ವಿನಿಮಯ ಹೊಂದಿದ ದೇಶ ಬಲಿಷ್ಠವಾಗಿಯೂ,ನಂಬಿಕಾರ್ಹವಾಗಿಯೂ ಕಾಣುತ್ತದ್ದೆ. ಈ ನಿಟ್ಟಿನಿಂದ ನೋಡುವುದಾದರೆ ಭಾರತದ ವಿದೇಶಿ ವಿನಿಮಯ ಮೀಸಲು ಆರೋಗ್ಯಕರ ಸಂಖ್ಯೆಯಲ್ಲಿದೆ. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರ ವಹಿಸಿಕೊಂಡಾಗ ಭಾರತದ ವಿದೇಶಿ ವಿನಿಮಯ ಮೀಸಲು ಹಣ 276 ಬಿಲಿಯನ್ ಅಮೆರಿಕನ್ ಡಾಲರ್. ಅಂದರೆ ಅಂದಿನಿಂದ ಕೇವಲ ನಾಲ್ಕು ವರ್ಷಗಳಲ್ಲಿ ಭಾಗಾಂಶ ಮೀಸಲು ಹಣವನ್ನ ದ್ವಿಗುಣ ಗೊಳಿಸಿರುವುದು ಕಡಿಮೆ ಸಾಧನೆಯಲ್ಲ. ಅಮೇರಿಕಾ ಇರಬಹದು, ರಷ್ಯಾ ಇರಬಹದು ಅಥವಾ ನಮ್ಮ ಪಕ್ಕದಲ್ಲೇ ಇದ್ದು ಸದಾ ನಮ್ಮ ನಿದ್ದೆಗೆಡಿಸುವ ಚೀನಾ ಇರಬಹದು ಅಥವಾ ಜಗತ್ತಿನ ಇನ್ನಿತರೇ ದೇಶಗಳಿರಬಹದು ಮೋದಿಯವರನ್ನ ಗೌರವಿಸಲು ಮೂಲ ಕಾರಣ ಸದ್ದಿಲ್ಲದೆ ಭಾರತದಲ್ಲಿ ಆಗುತ್ತಿರುವ ಬದಲಾವಣೆ.  
ಏನಿದು ಫಾರಿನ್ ಎಕ್ಸ್ಚೇಂಜ್ ರಿಸರ್ವ್? 
ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ತನ್ನ ಬಳಿ ಯಾವುದೇ ದೇಶದ ಕರೆನ್ಸಿ ನೋಟು, ಟ್ರೆಷರಿ ಬಿಲ್, ಬ್ಯಾಂಕ್ ಡೆಪೋಸಿಟ್ಸ್, ಬಾಂಡ್ಸ್ ಮತ್ತು ಗವರ್ನಮೆಂಟ್ ಸೆಕ್ಯುರಿಟೀಸ್ ಹೊಂದಿದ್ದು ಇವುಗಳ ಒಟ್ಟು ಮೌಲ್ಯವನ್ನ ತನ್ನ ವಿದೇಶಿ ವಿನಿಮಯ ಎಂದು ಕರೆದು ಕೊಳ್ಳುತ್ತದೆ. ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣ ಮತ್ತು ಚಿನ್ನದ ರೂಪದಲ್ಲಿ ಇರುವ ಹೂಡಿಕೆಯನ್ನ ಕೂಡ ವಿದೇಶಿ ವಿನಿಮಯ ಮೀಸಲು ಎಂದು ಪರಿಗಣಿಸಲಾಗುತ್ತದೆ. ಇದನ್ನ ಇನ್ನಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ. 
ಭಾರತೀಯ ರಿಸರ್ವ್ ಬ್ಯಾಂಕ್  ಅಮೇರಿಕಾ ಡಾಲರ್ 100 ಬಿಲಿಯನ್ ಹೊಂದಿದ್ದು, 100 ಯುರೋ ಕರೆನ್ಸಿ, 50 ಕೆನಡಾ ದೇಶದ ಟ್ರಶರಿ ಬಿಲ್, 50 ಚಿನ್ನದ ರೂಪದಲ್ಲಿ ಮತ್ತು ಉಳಿದ ಮೊತ್ತ 21 ಹಲವಾರು ದೇಶದ ಕರೆನ್ಸಿ ಹೊಂದಿದ್ದರೆ ಇವುಗಳೆಲ್ಲವ ಒಟ್ಟು ಮೊತ್ತವನ್ನ ಫಾರಿನ್ ಎಕ್ಸ್ಚೇಂಜ್ ರಿಸರ್ವ್ ಎಂದು ಕರೆಯಲಾಗುತ್ತದೆ. ಜಗತ್ತಿನ ಅರ್ಧಕ್ಕೂ ಹೆಚ್ಚು ಫಾರಿನ್ ಎಕ್ಸ್ಚೇಂಜ್ ಇರುವುದು ಅಮೆರಿಕನ್ ಡಾಲರ್ ನಲ್ಲಿ. ಉಳಿದ ಅರ್ಧ ಯುರೋ, ಬ್ರಿಟಿಷ್ ಪೌಂಡ್, ಚೈನೀಸ್ ಹಣ, ಜಪಾನೀಸ್ ಯೆನ್ ಗಳಲ್ಲಿ ವಿಭಜನೆಯಾಗಿದೆ. 
ಫಾರಿನ್ ಎಕ್ಸ್ಚೇಂಜ್ ರಿಸರ್ವ್ ನ ಅವಶ್ಯಕತೆ ಏನು? ಇದು ಏಕೆ ಬೇಕು? 
ಜಗತ್ತಿನ ವಹಿವಾಟು ನೆಡೆಯುತ್ತಿರುವುದು ನಂಬಿಕೆಯ ಆಧಾರದ ಮೇಲೆ ಆ ನಂಬಿಕೆಯನ್ನ ಹೆಚ್ಚಿಸಲು ಇದು ಬೇಕು. ಫಾರಿನ್ ಎಕ್ಸ್ಚೇಂಜ್ ಹೊಂದಲು ಬಹು ಮುಖ್ಯ ಕಾರಣ ಆಕಸ್ಮಾತ್ ಯಾವುದೇ ದೇಶದ ಕರೆನ್ಸಿ ಅಪಮೌಲ್ಯಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಹಣ ಬೇಡಿಕೆ ಕಳೆದುಕೊಂಡೋ ಅಥವಾ ಚಾಲನೆಯನ್ನ ಕಳೆದುಕೊಂಡರೆ, ಇಲ್ಲಿ ನೋಡಿ ಹೆದರುವುದು ಬೇಡ ನನ್ನ ಬಳಿ ಬೇರೆ ಹಣವೂ ಉಂಟು ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಇದು ಬೇಕು. ಜಗತ್ತಿನ ಇತರ ದೇಶಗಳ ಜೊತೆಗೆ ನಾವು ಮಾಡುವ ಎಲ್ಲಾ ವ್ಯವಹಾರಗಳು ನೆಡೆಯುವುದು ಮುಕ್ಕಾಲು ಪಾಲು ಅಮೇರಿಕನ್ ಡಾಲರ್ ನಲ್ಲಿ. ಬೇರೆ ದೇಶಗಳು ನಮ್ಮ ಬಳಿ ಅಮೇರಿಕನ್ ಡಾಲರ್ ರಿಸರ್ವ್ ನಲ್ಲಿದೆ ಎಂದರೆ ವ್ಯಾಪಾರ ಸುಲುಭವಾಗುತ್ತದೆ. ಭಾರತೀಯ ರೂಪಾಯಿ ಅದೆಷ್ಟೇ ಸಾವಿರ ಕೋಟಿ ಇದೆ ಎಂದರೂ ಬಾರದ ನಂಬಿಕೆ ಈ ಫಾರಿನ್ ಎಕ್ಸ್ಚೇಂಜ್ ನೀಡುತ್ತದೆ. 
ಉದಾಹರಣೆ ನೋಡಿ ನಾವು ಸೌದಿಯಿಂದ ಪೆಟ್ರೋಲ್ ಕೊಂಡರೆ ಅವರಿಗೆ ಹಣ ನೀಡುವುದು ಡಾಲರ್ ನಲ್ಲಿ. ಹೀಗೆ ಜಗತ್ತಿನ ಯಾವುದೋ ಒಂದು ದೇಶದಿಂದ ಇನ್ನೇನೋ ಕೊಂಡರೆ ಅವರಿಗೆ ಬದಲಿಗೆ ಹಣ ಸಂದಾಯವಾಗುವುದು ಡಾಲರ್ ನಲ್ಲಿ ಹೀಗಾಗಿ ವಿದೇಶಿ ವಿನಿಮಯ ಹಣ ಹೊಂದಿರುವುದು ಅತ್ಯವಶ್ಯಕ. 
ಜಗತ್ತಿನ ಎಲ್ಲಾ ದೇಶಗಳು ಇಂದು ಫಾರಿನ್ ಎಕ್ಸ್ಚೇಂಜ್ ಹೊಂದಿರಲೇಬೇಕು. ಇದು ಅಲಿಖಿತ ನಿಯಮ. ಅದು ಸರಿ ಆದರೆ ಎಷ್ಟು ಹಣವನ್ನ ಫಾರಿನ್ ಎಕ್ಸ್ಚೇಂಜ್ ನಲ್ಲಿ ಹೊಂದಿರಬೇಕು? ಎನ್ನುವ ಪ್ರಶ್ನೆಗೆ ಈ ವಿಷಯದಲ್ಲಿ ತಜ್ಞರು ಎನಿಸಿಕೊಂಡವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ನಿಖರವಾಗಿ ಫಾರ್ಮುಲಾ ಹಾಕಿ ಇಷ್ಟು ಹಣ ಫಾರಿನ್ ಎಕ್ಸ್ಚೇಂಜ್ ನಲ್ಲಿರಲಿ ಎಂದು ಯಾರೂ ಹೇಳಲು ಬರುವುದಿಲ್ಲ. ಆಯಾ ದೇಶದ ಅವಶ್ಯಕತೆಗೆ ಅನುಗುಣವಾಗಿ ಇದನ್ನ ನಿರ್ಧರಿಸಬೇಕು. 
ಆದರೆ ವಿದೇಶಿ ವಿನಿಮಯ ಹಣ ಹೆಚ್ಚಿದಷ್ಟು ಮಾರುಕಟ್ಟೆಯ ಮೇಲೆ ಹಿಡಿತ ಹೆಚ್ಚಾಗುತ್ತೆ. ಯಾವ ದೇಶದ ಹಣವನ್ನ ನೀವು ರಿಸರ್ವ್ ಎಂದು ಕೊಂಡಿರುತ್ತೀರೋ ಆ ದೇಶದ ಹಣವನ್ನ ನೀವೇ ಕಂಟ್ರೋಲ್ ಮಾಡುವ ಸ್ಥಿತಿಗೆ ತಲುಪಬಹುದು.  ಉದಾಹರಣೆ ನೋಡಿ ಚೀನಾ ದೇಶ ಜಗತ್ತಿನಲ್ಲಿ ಅತ್ಯಂತ ಹೆಚ್ಚು ವಿದೇಶಿ ವಿನಿಮಯ ಹೊಂದಿದ ದೇಶಗಳಲ್ಲಿ ಅಭಾದಿತವಾಗಿ ಮೊದಲ ಸ್ಥಾನದಲ್ಲಿದೆ. ಒಟ್ಟು ಅಮೇರಿಕನ್ ಡಾಲರ್ ಚಲಾವಣೆಯಲ್ಲಿರುವುದು ನೂರು ಎಂದುಕೊಳ್ಳಿ ಚೀನಾ ಇಪ್ಪತ್ತೋ ಅಥವಾ ಮೂವತ್ತೋ ತನ್ನ ಕೈಯಲ್ಲಿ ವಿನಿಮಯದ ಹೆಸರಲ್ಲಿ ಕೊಂಡರೆ ಅಷ್ಟರ ಮಟ್ಟಿಗೆ ಅಮೇರಿಕಾದ ಹಣಕಾಸು ನಿರ್ಧಾರವನ್ನೂ ಕಂಟ್ರೋಲ್ ಮಾಡಬಹುದು. ಹಾಗೆಂದು ಚೀನಾ ಬೀಗುವ ಹಾಗೂ ಇಲ್ಲ ಏಕೆಂದರೆ ಅಮೇರಿಕಾ ತನ್ನ ಹಣವನ್ನ ಅಪಮೌಲ್ಯ ಗೊಳಿಸಿದರೆ ಚೀನಾ ಅಷ್ಟು ಹಣವನ್ನ ಸುಮ್ಮನೆ ಕಳೆದುಕೊಳ್ಳುತ್ತದೆ. ಅದಕ್ಕೆ ತಜ್ಞರು ಹೇಳುವುದು ಅವಶ್ಯಕತೆ ಮೀರಿ ಸಂಗ್ರಹಿಸಿದ ರಿಸರ್ವ್ ಹಣ ಕೂಡ ಒಳ್ಳೆಯದಲ್ಲ ಎಂದು. ಚೀನಾ-ಅಮೇರಿಕಾ ಎರಡೂ ಬೇಕೆಂದರೂ ಒಬ್ಬರನ್ನ ಒಬ್ಬರು ಬಿಟ್ಟಿರಲಾರದ, ಒಬ್ಬರು ಬಿದ್ದರೆ ಇನ್ನೊಬ್ಬರು ಬೀಳುವ ಸನ್ನಿವೇಶ ಸೃಷ್ಟಿಸಿಕೊಂಡಿದ್ದಾರೆ. 
ಇಲ್ಲಿ ನಮ್ಮ ಸ್ಥಾನವೇನು?
ಭಾರತದ ವಿದೇಶಿ ವಿನಿಮಯ ಏರುಗತಿಯಲ್ಲಿದೆ. ಚೀನಾ ಅತಿ ಹೆಚ್ಚು ವಿದೇಶಿ ವಿನಿಮಯ ಮೀಸಲು ಹೊಂದಿದ ದೇಶವಾಗಿ ಮೊದಲನೇ ಸಾಲಿನಲ್ಲಿ ಅಭಾದಿತವಾಗಿದೆ. ಉಳಿಕೆಯಲ್ಲಿ ಬಹಳ ನಂಬಿಕೆ ಇರಿಸಿರುವ ಪುಟ್ಟ ಜಪಾನ್ ಎರಡನೇ ಸ್ಥಾನದಲ್ಲಿದೆ. ವಿದೇಶಿಯರ ಹಣವನ್ನ ಭದ್ರವಾಗಿ ಇರಿಸಿಕೊಂಡು ಗೌಪ್ಯತೆ ಕಾಯುವ ಕೆಲಸ ಮಾಡುವ ಸ್ವಿಟರ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಇಂತಹ ಘಟಾನುಘಟಿಗಳ ಸಾಲಿನಲ್ಲಿ ಭಾರತ ಎಂಟನೇ ಸ್ಥಾನಪಡೆದಿದೆ. ನಮ್ಮ ನಂತರ ಸಿಂಗಾಪುರ, ಯುನೈಟೆಡ್ ಕಿಂಗ್ಡಮ್, ಬ್ರೆಜಿಲ್, ಜರ್ಮನಿ, ಫ್ರಾನ್ಸ್.. ಅಮೇರಿಕಾ ದೇಶಗಳು ಸ್ಥಾನಪಡೆದಿವೆ. ಈ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ಡಮ್ 16ನೇ ಸ್ಥಾನ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ 21 ನೇ ಸ್ಥಾನದಲ್ಲಿವೆ. 
ಕೊನೆಮಾತು: ಭಾರತದಲ್ಲಿ ಆಂತರಿಕವಾಗಿ ಬ್ಯಾಂಕುಗಳು ಗಂಭೀರ ಸ್ಥಿತಿಯಲ್ಲಿದೆ. ಹೀಗಿದ್ದೂ ಅಂತರಾಷ್ಟ್ರಿಯ ಮಟ್ಟದಲ್ಲಿ ಭಾರತದ ಗೌರವ ಮುಗಿಲೆತ್ತರಕ್ಕೆ ಮುಟ್ಟಿದೆ. ಬ್ಯಾಂಕುಗಳು 80 ರ ದಶಕದಿಂದ ಇನ್ನಿಲ್ಲದ ನೋವುಗಳಿಂದ ಜರ್ಜರಿತವಾಗಿದೆ. ಇದು ಹೇಗಾಯಿತೆಂದರೆ ಖಾಯಿಲೆಯನ್ನ ಹೇಳಿಕೊಳ್ಳದೆ ಮುಚ್ಚಿಟ್ಟ ಹಾಗಿತ್ತು. ಇದೀಗ ಖಾಯಿಲೆಯನ್ನ ಇದೆ ಎಂದು ಸಾರುವ ಕೆಲಸವಾಗಿದೆ. ಯಾವ ಖಾಯಿಲೆ ಎನ್ನುವುದರ ಪತ್ತೆ ಕೂಡ ಆಗಿದೆ. ಇನ್ನು ಅದನ್ನ ಗುಣಪಡಿಸುವ ಕಾರ್ಯ ಶುರುವಾಗಬೇಕಿದೆ. ಹೊರಗಿನ ಜನರ ನಂಬಿಕೆ ಹೆಚ್ಚುತ್ತಿರುವಾಗ ನಮ್ಮ ಜನ ನಿಧಾನವಾಗಿಯಾದರೂ ಸರಿಯೇ ಒಪ್ಪಲೇ ಬೇಕು. ಒಪ್ಪುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರುತ್ತಿರುವ ತೈಲ ಬೆಲೆಯ ಬಿಸಿ ಜನರಿಗೆ ತಟ್ಟದಂತೆ ಮೋದಿ ಸರಕಾರ ಈ ನಿಧಿಯನ್ನ ಬಳಸಿ ನೋಡಿಕೊಳ್ಳಬಹದು. ಆದರೆ ಚುನಾವಣೆ ಗೆಲ್ಲಲು ಮೋದಿ ಸರಕಾರ ಹಾಗೆ ಮಾಡುವುದೇ? ಎನ್ನವುದು ಸದ್ಯದ ಪ್ರಶ್ನೆ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com