ಇದಕ್ಕೆ ಉತ್ತರ ಹೇಳುವುದಕ್ಕೆ ಮುಂಚೆ ನಮ್ಮ ಪೆಟ್ರೋಲ್ ಮೇಲೆ ಬೀಳುತ್ತಿರುವ ತೆರಿಗೆ ಏನೇನು ಅಂತ ತಿಳಿದುಕೊಳ್ಳೋಣ. ನಮ್ಮ ತೈಲದ ಮೇಲೆ ವ್ಯಾಟ್, ಅಬಕಾರಿ ತೆರಿಗೆ ಮತ್ತು ಡೀಲರ್ ಕಮಿಷನ್ ಸೇರಿಕೊಳ್ಳುತ್ತದೆ. ಎರಡು ದಿನಗಳ ಹಿಂದೆ ಕರ್ನಾಟಕದ ಸದ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಲು ಬೊಕ್ಕಸದಲ್ಲಿ ಹಣವಿಲ್ಲ, ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚು ಮಾಡಿ ಹೆಚ್ಚು ಹಣ ಸಂಗ್ರಹಿಸುವ ಮಾತನ್ನ ಆಡಿದ್ದರು. ಆದರೇನು ಮೋದಿ ಸರಕಾರ ಕಳೆದ ಹದಿನೈದು ದಿನದಿಂದ ತೈಲವನ್ನ ಕೂಡ ಜಿಎಸ್ಟಿ ಪರಿಧಿಗೆ ತರಲು ಯೋಚನೆ ಮಾಡುತ್ತಿದೆ. ಹೀಗೆ ತೈಲವನ್ನ ಕೂಡ ಜಿಎಸ್ಟಿ ವ್ಯಾಪ್ತಿಗೆ ತರುವುದರಿಂದ ಮೇಲೆ ಹೇಳಿದ ವ್ಯಾಟ್, ಅಬಕಾರಿ ಸುಂಕ ಮತ್ತು ಡೀಲರ್ ಕಮಿಷನ್ ಎಲ್ಲಾ ಹೋಗಿ ನಿಗದಿತ ಜಿಎಸ್ಟಿ ಸುಂಕ ಮಾತ್ರ ಉಳಿದುಕೊಳ್ಳುತ್ತದೆ. ಈ ರೀತಿ ಮಾಡುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಐದರಿಂದ ಹತ್ತು ರೂಪಾಯಿ ಕುಸಿತವಾಗುತ್ತದೆ. ಆದರೆ ರಾಜ್ಯ ಸರಕಾರಗಳಿಗೆ ಸಿಗುತ್ತಿದ್ದ ತೆರಿಗೆ ಹಣ ನಿಂತು ಹೋಗುತ್ತದೆ. ಇದರಿಂದ ರಾಜ್ಯ ಸರಕಾರಗಳು ಕೇಂದ್ರದ ಈ ನಿಲುವನ್ನ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ.