ಜಾಗತಿಕ ಹಾವು-ಏಣಿ ಆಟ: ಸೋತರೂ ನಿಲ್ಲದ ಕಾದಾಟ! 

ಮುಂದಿನ 5 ವರ್ಷಗಳಲ್ಲಿ ನಾವು ಬದುಕುವ ರೀತಿಯೇ ಬದಲಾಗಿಬಿಡುತ್ತದೆ. ಇವತ್ತು ನಾವು ಮಾಡುತ್ತಿರುವ ಕೆಲಸವನ್ನ  ಮಾಡುವ ವಿಧಾನ ಬದಲಾಗಿ ಹೋಗುತ್ತದೆ. ಆಶ್ಚರ್ಯ ಅನ್ನಿಸುತ್ತೆ ಅಲ್ವಾ? ಆದರೆ ಇದು ನಿಜ. ನಾವೆಲ್ಲಾ ನಮ್ಮದೆ ಪ್ರಪಂಚದಲ್ಲಿ ನಮ್ಮದೇ ಆದ ಕೆಲಸದಲ್ಲಿ ಮಗ್ನರಾಗಿದ್ದೇವೆ.
ಜಾಗತಿಕ ಹಾವು-ಏಣಿ ಆಟ: ಸೋತರೂ ನಿಲ್ಲದ ಕಾದಾಟ! 

ಮುಂದಿನ 5 ವರ್ಷಗಳಲ್ಲಿ ನಾವು ಬದುಕುವ ರೀತಿಯೇ ಬದಲಾಗಿಬಿಡುತ್ತದೆ. ಇವತ್ತು ನಾವು ಮಾಡುತ್ತಿರುವ ಕೆಲಸವನ್ನ  ಮಾಡುವ ವಿಧಾನ ಬದಲಾಗಿ ಹೋಗುತ್ತದೆ. ಆಶ್ಚರ್ಯ ಅನ್ನಿಸುತ್ತೆ ಅಲ್ವಾ? ಆದರೆ ಇದು ನಿಜ. ನಾವೆಲ್ಲಾ ನಮ್ಮದೆ ಪ್ರಪಂಚದಲ್ಲಿ ನಮ್ಮದೇ ಆದ ಕೆಲಸದಲ್ಲಿ ಮಗ್ನರಾಗಿದ್ದೇವೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಭಕ್ಕೆ ಜಿಗಿಯಲು ಆಗಲೇ ಸ್ಪರ್ಧೆ ಶುರುವಾಗಿದೆ. 

ತಂತ್ರಜ್ಞಾನವನ್ನ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಉಪಗ್ರಹಗಳನ್ನ ಬಾನಂಗಳಕ್ಕೆ ಬಿಡುವುದು ನಮಗೆಲ್ಲ ತಿಳಿದಿರುವ ವಿಷಯವಾಗಿದೆ. ಭಾರತ ಈ ಓಟದಲ್ಲಿ ಮುಂಚೂಣಿಯಲ್ಲಿದೆ. 2018 ಭಾರತದ ಪಾಲಿಗೆ ಮರೆಯಲಾಗದ ವರ್ಷ ಅದಕ್ಕೆ ಕಾರಣ ಭಾರತ ಹೀಗೆ ನಭಕ್ಕೆ ಸೇರಿಸಿದ ಉಪಗ್ರಹಗಳ ಸಂಖ್ಯೆ 100ರ ಗಡಿ ದಾಟಿದೆ. ಎಂದಿನಂತೆ ಯಾವುದು ಸುದ್ದಿಯಾಗಿ ಪ್ರಚಾರ ಪಡೆಯಬೇಕಿತ್ತು ಅದು ಆಗಿಲ್ಲ. ಇರಲಿ ಭಾರತ ಇಂದು ಕೇವಲ ತನ್ನ ಉಪಗ್ರಹಗಳನ್ನ ಮಾತ್ರ ಆಕಾಶಕ್ಕೆ ಚಿಮ್ಮಿ ಬಿಡುತ್ತಿಲ್ಲ. ಜಗತ್ತಿನ ಅತ್ಯಂತ ಮುಂದುವರೆದ ದೇಶಗಳು ಎಂದು ಹೆಸರು ಮಾಡಿರುವ ದೇಶಗಳು ಕೂಡ ಭಾರತದ ಮುಂದೆ ಬಂದು ತನ್ನ ಉಪಗ್ರಹವನ್ನ ಉಡಾವಣೆ ಮಾಡಿ ಎಂದು ಕೇಳಿಕೊಳ್ಳುತ್ತಿವೆ. ಹೀಗೆ ಇದೆ ವರ್ಷ ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ನ ಎರಡು ಉಪಗ್ರಹಗಳನ್ನ ಕೂಡ ಭಾರತ ಕಕ್ಷೆಗೆ ಸೇರಿಸಿದೆ. ಇದೊಂದು ಅತ್ಯಂತ ನಿಪುಣತೆ ಬೇಡುವ ವಿಷಯ. ಗಮನಿಸಿ ಬಾಹ್ಯಾಕಾಶಕ್ಕೆ ಉಪಗ್ರಹ ಉಡಾವಣೆ ಮಾಡುವ ವ್ಯಾಪಾರ 335 ಬಿಲಿಯನ್ ಡಾಲರ್ ಮುಟ್ಟಿದೆ. ಅಂದರೆ ಹತ್ತಿರ ಹತ್ತಿರ 25 ಲಕ್ಷ ಕೋಟಿ ವ್ಯಾಪಾರ ಎಂದರೆ ಇದೆಷ್ಟು ದೊಡ್ಡದು ಎನ್ನುವುದರ ಅರಿವಾದೀತು. ಇಷ್ಟೊಂದು ದೊಡ್ಡ ವ್ಯಾಪಾರ ಅಂದ ಮೇಲೆ ಹಿರಿಯಣ್ಣ ಅಮೇರಿಕ, ಹಿರಿಯಣ್ಣನಾಗಲು ಹೆಬ್ಬಯಕೆ ಹೊಂದಿ ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಚೀನಾ ಸುಮ್ಮನೆ ಕೂರುತ್ತಾರೆಯೇ? ಅದರಲ್ಲೂ ಭಾರತವನ್ನ ತನ್ನ ತೀವ್ರ ಪ್ರತಿಸ್ಪರ್ಧಿ ಎಂದು ಭಾವಿಸಿರುವ ಚೀನಾ ಇಷ್ಟೊಂದು ದೊಡ್ಡ ವ್ಯಾಪಾರವನ್ನ ನೋಡುತ್ತಾ ಭಾರತ ಆಗಲೇ ಈ ಸ್ಪರ್ಧೆಯಲ್ಲಿ ದಾಪುಗಾಲು ಇಡುತ್ತಿರುವುದನ್ನ ಸಹಿಸಿತೇ? 

3 ವರ್ಷದ ಹಿಂದೆ ಚೀನಾ ಲ್ಯಾಂಡ್ ಸ್ಪೇಸ್ ಎನ್ನುವ ಖಾಸಗಿ ಸಂಸ್ಥೆಯನ್ನ ಹುಟ್ಟು ಹಾಕುತ್ತದೆ. ಈ ಸಂಸ್ಥೆಯ ಉದ್ದೇಶ ನಮ್ಮ ಇಸ್ರೋ ಸಂಸ್ಥೆಯಂತೆ ತನ್ನ ಮತ್ತು ಇತರ ದೇಶದ ಉಪಗ್ರಹಗಳ ಕಕ್ಷೆಗೆ ಸೇರಿಸುವುದು ಆ ಮೂಲಕ ತನ್ನ ದೇಶಕ್ಕೆ ಆದಾಯದ ಜೊತೆಗೆ ಕೀರ್ತಿಯನ್ನ ಕೂಡ ತಂದು ಕೊಡುವುದು. ಹೀಗೆ ಕಳೆದ 3 ವರ್ಷಗಳಿಂದ ಸತತವಾಗಿ ಶ್ರಮಿಸುತ್ತಾ ಬಂದ ಲ್ಯಾಂಡ್ ಸ್ಪೇಸ್ 27/10/2018 ರಂದು ತನ್ನ ಪ್ರಥಮ ಉಡಾವಣೆಯಲ್ಲಿ ಸೋತಿದೆ. "Zhuque-1" ಎನ್ನುವ ಹೆಸರಿನ ಈ ವಾಹನವನ್ನ ಚೀನಾದ ವಾಂಗ್ಸೂ ಎನ್ನುವ ಪ್ರದೇಶದಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾಯಿಸುವಲ್ಲಿ ವಿಫಲವಾಗಿದೆ. ಚೀನಾದಲ್ಲಿ ಈ ರೀತಿಯ ಮತ್ತೊಂದೆರಡು ಸಂಸ್ಥೆಗಳಿವೆ ಆದರೆ ಅವಕ್ಕೂ ಕೂಡ ಇಲ್ಲಿಯ ತನಕ ಗೆಲುವಿನ ರುಚಿ ಮಾತ್ರ ಸಿಕ್ಕಿಲ್ಲ. 

ಗಮನಿಸಿ ನೋಡಿ ಒಮ್ಮೆ ಇಂತಹ ಪ್ರಯತ್ನದಲ್ಲಿ ಸೋತರೆ ಪೋಲಾಗುವುದು ಕೋಟ್ಯಂತರ ಹಣವಷ್ಟೇ ಅಲ್ಲ, ವರ್ಷಗಟ್ಟಲೆ ಶ್ರಮ ವಹಿಸಿ ದುಡಿದ ವಿಜ್ಞಾನಿಗಳ ಮನೋಬಲ ಕೂಡ ಒಂದಷ್ಟು ಮಟ್ಟಿಗೆ ಕುಸಿಯುತ್ತದೆ. ಚೀನಾ ಜಗತ್ತಿನ ಎಲ್ಲಾ ರಾಷ್ಟ್ರಗಳನ್ನ ಕಬಳಿಸಲು ತನ್ನದೇ ಆದ ಹೊಸ ಸಮರವನ್ನ ಸಾರಿದೆ. ಅಂತರರಾಷ್ಟ್ರೀಯ ರಾಜಕೀಯದಲ್ಲಿಅದು ಸಿದ್ದ ಹಸ್ತವೆನಿಸಿದೆ. ಮದ್ದು ಗುಂಡು ಸಿಡಿಸದೆ ಜಗತ್ತಿನ ದೇಶಗಳನ್ನ ತನ್ನ ಸಾಮಂತ ದೇಶಗಳನ್ನಾಗಿ ಮಾಡಿಕೊಳ್ಳುವುದು ಆ ಮೂಲಕ ಜಗತ್ತಿನ ಹಿರಿಯಣ್ಣನಾಗುವುದು ಚೀನಾದ ಉದ್ದೇಶ. ಇದಕ್ಕಾಗಿ ಅದು ಹೆಣೆದಿರುವುದು ಸಾಲದ ಬಲೆ. ಚೀನಾ ಹೆಣೆದಿರುವ ಈ ಬಲೆಯಲ್ಲಿ ಆಗಲೇ ಜಗತ್ತಿನ 50ಕ್ಕೂ ಹೆಚ್ಚು ದೇಶಗಳು ಸಿಲುಕಿವೆ. ಭಾರತ ದೇಶದ ಸುತ್ತಮುತ್ತಲಿನ ದೇಶಗಳನ್ನೂ ಹೀಗೆ ತನ್ನ ಹಿಡಿತಕ್ಕೆ ತೆಗೆದುಕೊಂಡು ಭಾರತವನ್ನ ತನ್ನಿಚ್ಛೆಗೆ ತಕ್ಕಂತೆ ಕುಣಿಸುವುದು ಚೀನಾದ ಇನ್ನೊಂದು ಮಹದೋದ್ದೇಶ. ಶ್ರೀಲಂಕಾ ದೇಶದಲ್ಲಿ ಹಲವು ತಿಂಗಳ ಹಿಂದೆ ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದು ಇದರ ಹಿಂದಿನ ಶಕ್ತಿ ಡ್ರ್ಯಾಗನ್ ಎನ್ನವುದನ್ನ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲವಷ್ಟೆ! 

ಭಾರತವನ್ನ ಮಣಿಸುವುದು ಅದೂ ನೇರ ಹೋರಾಟದಲ್ಲಿ ಅಷ್ಟು ಸುಲಭವಲ್ಲ ಎನ್ನುವುದು ಚೀನಾಗೆ ತಿಳಿದ ವಿಷಯ. ಹೀಗಾಗಿ ಅದು ಬೇರೆಯ ದಾರಿಯನ್ನ ಹುಡಕುತ್ತದೆ. ಗಮನಿಸಿ ನೋಡಿ ಭಾರತದ ಪ್ರಧಾನ ಮಂತ್ರಿಗಳು 2014ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದ 2018ರ ಅಂತ್ಯದವರೆಗೆ ಅಂದರೆ ಜಪಾನ್ ಭೇಟಿಯವರೆಗೆ ನಲವತ್ತು ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಇಂತಹ ಪ್ರಯಾಣದಲ್ಲಿ58 ದೇಶಗಳಿಗೆ ಭೇಟಿ ನೀಡಿದ್ದಾರೆ. 28-10-2018ರ ಜಪಾನ್ ಭೇಟಿಯಂತೂ ಚೀನಾ ದೇಶವನ್ನ ಒಂದಷ್ಟು ಹಂತಕ್ಕೆ ತಹಬದಿಗೆ ತರಲು ಅತ್ಯಂತ ಅವಶ್ಯಕವಾಗಿತ್ತು. ಚೀನಾ ಜಗತ್ತಿನ ಸಣ್ಣ ಪುಟ್ಟ ದೇಶಗಳನ್ನ ತನ್ನ ಸಾಲದ ಖೆಡ್ಡಾದಲ್ಲಿ ಕೆಡವಿ ಅವುಗಳನ್ನ ತನ್ನ ಇಚ್ಛೆಗೆ ಕುಣಿಸುತ್ತಿರುವ ಈ ಸಮಯದಲ್ಲಿ ಪ್ರಧಾನಮಂತ್ರಿಯವರ ಈ ರೀತಿಯ ರಾಜಕೀಯ ನಡೆ ಅತ್ಯಂತ ಶ್ಲಾಘನೀಯ. ಅದರಲ್ಲೂ ಜಪಾನ್ ನೊಂದಿಗೆ ಆಪ್ತಮಿತ್ರ ಎನ್ನುವ ಪಟ್ಟ ಪಡೆಯಲು ಪಟ್ಟ ಶ್ರಮ ಸಾರ್ಥಕ. ಜಪಾನ್ ಮುದಿತನದ ಜೊತೆಗೆ ನೆಗೆಟಿವ್ ಇಂಟರೆಸ್ಟ್ ರೇಟ್ ಅಲ್ಲದೆ ತನ್ನ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತಾನೇ ಖುಷಿಯಿಂದ ಹೆಣೆದುಕೊಂಡ ಬಲೆಯಲ್ಲಿ ವ್ಯವಸ್ಥಿತವಾಗಿ ಸಿಲುಕಿ ಬಿದ್ದಿದೆ. ಎಲ್ಲಕ್ಕೂ ಮೊದಲು ಈ ದೇಶ ತನ್ನ ಉತ್ಪಾದನೆಯನ್ನ ಬೇರೆ ದೇಶಗಳಿಗೆ ಕಳಿಸುತ್ತದೆ. ಇಲ್ಲಿನ ಆಂತರಿಕ ಬಳಕೆಗಿಂತ ರಫ್ತು ಹೆಚ್ಚು. ಹೀಗೆ ಎಕ್ಸ್ಪೋರ್ಟ್ ನಂಬಿರುವ ಈ ದೇಶದ ಆರ್ಥಿಕತೆ ಎಂದಿಗೂ ಬಹಳ ಸೂಕ್ಷ್ಮ. ಅಮೆರಿಕಾ ಮತ್ತು ಚೀನಾ ನಡುವಿನ ಟ್ರೇಡ್ ವಾರ್ ನಲ್ಲಿ ಜಪಾನ್ ಕೂಡ ಬಳಲಿದೆ.  ಜಪಾನ್ ಭೂಪಟದಲ್ಲಿ ಅತ್ಯಂತ ಸಣ್ಣ ದೇಶ ಇಷ್ಟೆಲ್ಲಾ ಇದ್ದೂ ಅದು ಚೀನಾ ದೇಶದ ಪಕ್ಕೆಯಲ್ಲಿ ನಡುಕ ಹುಟ್ಟುವಷ್ಟು ಬಲಶಾಲಿ ಎನ್ನುವುದನ್ನ ಮರೆಯಬಾರದು. ಇನ್ನು ಅಮೆರಿಕಾದೇಶಕ್ಕೂ ಚೀನಾ ಈ ರೀತಿಯಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವುದು ಬೇಕಿಲ್ಲ. ಸಮಯಸಾಧಕ ಅಮೆರಿಕಾಭಾರತಕ್ಕೆ ಬೇಕಾದ ಸಹಾಯವನ್ನ ಖಂಡಿತ ಮಾಡುತ್ತದೆ. 

ಒಟ್ಟಿನಲ್ಲಿ 2018 ಅಕ್ಟೋಬರ್ ಭಾರತದ ಪಾಲಿಗೆ ಖುಷಿಯ ತಿಂಗಳು. ರಾಜತಾಂತ್ರಿಕ ಗೆಲುವನ್ನ ಪ್ರಧಾನಮಂತ್ರಿಯವರು ಹೋದಲ್ಲೆಲ್ಲ ದಾಖಲಿಸುತ್ತ ಬರುತ್ತಿದ್ದಾರೆ. ಅಸಲಿ ಪದಾರ್ಥಗಳ ನಕಲಿ ಮಾಡುವುದರಲ್ಲಿ ಸಿದ್ಧಹಸ್ತ ಚೀನಾ ಉಪಗ್ರಹ ಉಡಾವಣೆಯಲ್ಲಿ ಸೋತಿದೆ. ಎಲ್ಲಕ್ಕೂ ಹೆಚ್ಚು ಅದನ್ನ ಬಾಧಿಸುತ್ತಿರುವ ವಿಷಯ ವೈಫಲ್ಯಕ್ಕೆ ಕಾರಣವನ್ನ ಅವರ ವಿಜ್ಞಾನಿಗಳು ಇನ್ನೂ ಪತ್ತೆ ಹಚ್ಚಿಲ್ಲ. ನಮ್ಮಇಸ್ರೋ ಕೂಡ ವೈಫಲ್ಯದ ನಂತರವೇ ಜಯದ ಹಾದಿ ಹಿಡಿದಿದೆ. ಆದರೆ ನಮ್ಮ ವಿಜ್ಞಾನಿಗಳಿಗೆ ವೈಫಲ್ಯಕ್ಕೆ ಕಾರಣ ಅಥವಾ ಇದು ವಿಫಲವಾಗಬಹದು ಎನ್ನವುದರ ನಿಖರತೆ ಇತ್ತು. 

ಜಗತ್ತಿನ ಮುಂದೆ ಚೀನಾ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ನಡೆದುಕೊಳ್ಳಬಹದು ಆದರೆ ಚೀನಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿರುವುದಂತೂ ನಿಜ. ಮುಂದಿನ 5 ವರ್ಷದಲ್ಲಿ ಜಗತ್ತು ಬದುಕುವ ರೀತಿ ಬದಲಿಸುವ ನಭಕ್ಕೆ ಜಿಗಿಯುವ ಆಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತದ ಇಂದಿನ ಸರಕಾರ ಇಸ್ರೋ ವಿಜ್ಞಾನಿಗಳ ಪಾಲಿಗೆ ಅಭಯ ಹಸ್ತ ನೀಡಿ ನಿಂತಿದೆ. ಚೀನಾ 'ಪ್ರಥಮ ಚುಂಬನಂ ದಂತ ಭಗ್ನಂ' ಎನ್ನುವಂತೆ ನಿರಾಸೆಯನ್ನ ಅನುಭವಿಸಿದೆ. 

ಅಮೆರಿಕಾದೇಶದ ಜೊತೆಗಿನ ಟ್ರೇಡ್ ವಾರ್ ಚೀನಾದ ಆರ್ಥಿಕ ವ್ಯವಸ್ಥೆಯನ್ನ ಶಿಥಿಲಗೊಳಿಸುತ್ತಿದೆ. ಎರಡು ವರ್ಷದ ಹಿಂದೆ ಜಗತ್ತಿನಲ್ಲಿ ಹೂಂಕರಿಸುತಿದ್ದ ಡ್ರ್ಯಾಗನ್ ಆರ್ಭಟ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿವೆ. ಫೆಬ್ರವರಿ 25, 2019 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ದೇಶದ ಟ್ರೇಡ್ ವಾರ್ ಬಗ್ಗೆ ಎರಡು ಟ್ವೀಟ್ ಮಾಡಿದರು. ಮೊದಲನೆಯದು 'ನಾನು ಸಂಪ್ರೀತನಾಗಿದ್ದೇನೆ ಏಕೆಂದರೆ ಚೀನಾ ಜೊತೆಗಿನ ಮಾತುಕತೆ ಉತ್ತಮ ಬೆಳವಣಿಗೆಯ ಹಂತದಲ್ಲಿದೆ.' ಎರಡನೆಯದು  'ಮಾರ್ಚ್ ಒಂದಕ್ಕೆ ಹೆಚ್ಚಿಸಬೇಕಾಗಿದ್ದ ತೆರಿಗೆಯನ್ನ ನಾನು ಮುಂದೂಡುತ್ತಿದ್ದೇನೆ. ಎರಡು ದೇಶಗಳ ನಡುವಿನ ಸಂಬಂಧ ಹೀಗೆ ಮುಂದುವರೆದರೆ ಚೀನಾ ಅಧ್ಯಕ್ಷರ ಜೊತೆ ಒಂದು ಭೇಟಿ ಮಾಡಿ ಒಪ್ಪಂದ ಮುಗಿಸುತ್ತೇವೆ. ಶುಭ ವಾರಾಂತ್ಯ ಅಮೆರಿಕಾ ಮತ್ತು ಚೀನಾ ದೇಶಗಳಿಗೆ' ಎಂದು ಬರೆದುಕೊಂಡಿದ್ದರು. ಈ ಟ್ವೀಟ್ ನಂತರ ಏಷ್ಯಾ ಷೇರು ಮಾರುಕಟ್ಟೆ ಕೂಡ ಒಂದಷ್ಟು ಲವಲವಿಕೆ ಪಡೆದುಕೊಂಡಿದ್ದವು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಅಮೆರಿಕಾ ಮತ್ತು ಚೀನಾ ಟ್ರೇಡ್ ವಾರ್ ಶುರುವಾಗಿ ವರ್ಷವಾಗುತ್ತಾ ಬಂದಿದೆ. ಹೀಗೆ ಆರಂಭದಲ್ಲಿ ಎರಡೂ ದೇಶಗಳು ಜಿದ್ದಿಗೆ ಬಿದ್ದವರಂತೆ ಒಬ್ಬರ ಮೇಲೆ ಒಬ್ಬರು ವಸ್ತುಗಳ ಬೆಲೆಯನ್ನ ಅವುಗಳ ಮೇಲೆ ಹಾಕುವ ತೆರಿಗೆಯನ್ನ ಹೆಚ್ಚಿಸಿದವು. ಹೀಗೆ ವರ್ಷದಿಂದ ಹೆಚ್ಚಾಗುತ್ತಾ ಬಂದ ಬೆಲೆಯನ್ನ ಇವುಗಳು ಇಳಿಸುವ ಮಾತಾಡಿಲ್ಲ. ಹಾಗೆಯೇ ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ತಕ್ಷಣ ಇಳಿಯುವ ಯಾವ ಸಾಧ್ಯತೆಗಳು ಇಲ್ಲ. ಇವುಗಳ ಇಂದಿನ ಮಾತೇನಿದ್ದರೂ ಇನ್ನು ಹೆಚ್ಚಿನ ಹೊಡೆದಾಟ ಮಾಡದಿರುವುದರ ಬಗ್ಗೆಯಷ್ಟೇ!. ಗಮನಿಸಿ ನೋಡಿ ಈ ಕಾದಾಟ ಎರಡೂ ದೇಶಗಳನ್ನ ಬಸವಳಿಸಿದೆ. ಇವತ್ತು ಟ್ರೇಡ್ ವಾರ್ ಎರಡೂ ದೇಶಕ್ಕೂ ಬೇಡ ವಿಷಯ. ಪರಿಸ್ಥಿತಿ ಹೀಗಿದ್ದೂ ಹಿಂದೆ ಮಾಡಿದ ತಪ್ಪಿಗೆ ಇನ್ನೆರಡು ವರ್ಷ ಬೆಲೆ ತೆರಬೇಕಾಗುತ್ತದೆ.

ಆದರೆ ಡ್ರ್ಯಾಗನ್ ಆಗಸಕ್ಕೆ ಸ್ಯಾಟಲೈಟ್ ಚಿಮ್ಮಿಸುವ ವಿಷಯದಲ್ಲಿ ಅಷ್ಟು ಸಲುಭವಾಗಿ ಸೋಲೊಪ್ಪುತ್ತದೆಯೇ? ನಭಕ್ಕೆ ಚಿಮ್ಮುವ ಹೊಸ ಹಣಕಾಸಿನ ಆಟದಲ್ಲಿ ರಷ್ಯಾ, ಅಮೆರಿಕಾ, ಚೀನಾ ದೇಶಗಳು ಭಾರತವನ್ನ ನಾಯಕನೆಂದು ಸುಲಭವಾಗಿ ಒಪ್ಪಿಕೊಳ್ಳುತ್ತವೆಯೇ? ಎನ್ನುವುದು ಪ್ರಶ್ನೆ. ಆದರೆ ಸದ್ಯದ ಮಟ್ಟಿಗಂತೂ ಭಾರತ ಈ ಎಲ್ಲಾ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿರುವುದು ಸ್ಪಷ್ಟ. ನಾಯಕನಾದವನಲ್ಲಿ ನಿಖರತೆ, ಸ್ಪಷ್ಟತೆ ಇದ್ದರೆ ಉಳಿದದ್ದು ಸಾಧಿಸುವುದು ಅಸಾಧ್ಯವೇನಲ್ಲ. 

- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com