ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI) ಚಾಲನೆ ಭಾರತದಲ್ಲಿ ಸಾಧ್ಯವೇ?

ಏನಿದು ಯೂನಿವರ್ಸಲ್ ಬೇಸಿಕ್ ಇನ್ಕಮ್? ಇದರ ಒಳಿತು ಕೆಡುಕುಗಳೇನು? ಇದು ಭಾರತದಂತಹ ದೇಶದಲ್ಲಿ ಲಾಗೂ ಮಾಡಲು ಸಾಧ್ಯವೇ? ಎನ್ನುವ ವಿಷಯಗಳ ಬಗ್ಗೆ ಇಂದು ಒಂದಷ್ಟು ತಿಳಿದುಕೊಳ್ಳೋಣ.

Published: 31st January 2019 12:00 PM  |   Last Updated: 31st January 2019 11:56 AM   |  A+A-


Can India afford and Implement Universal Basic Income scheme

ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI )ಚಾಲನೆ ಭಾರತದಲ್ಲಿ ಸಾಧ್ಯವೇ?

Posted By : SBV SBV
Source : Online Desk
ನಮ್ಮ ದೇಶದಲ್ಲಿ ಚುನಾವಣೆ ಹತ್ತಿರ ಬಂದಂತೆ ರಾಜಕೀಯ ಪಕ್ಷಗಳು ಪ್ರಜೆಗಳಿಗೆ ಆಶ್ವಾಸನೆಗಳ ಭಂಡಾರವನ್ನೇ ನೀಡುತ್ತಾರೆ. ರೈತರ ಸಾಲ ಮನ್ನಾ, ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವುದು, ರುಪಾಯಿಗೆ ಕೆಜಿ ಅಕ್ಕಿ.... ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಇವರು ನೀಡುವ ಭರವಸೆಗಳಲ್ಲಿ ಮುಕ್ಕಾಲು ಈಡೇರಿಸುವುದಿಲ್ಲ. ಪ್ರಜೆಗಳು ಕೂಡ 'ಏಕೆ' ಎಂದು ಕೇಳುವುದಿಲ್ಲ. ಮತ್ತೊಂದು ಮಹಾಚುನಾವಣೆ ಬಂದಾಗ ಇವು ಪುನರಾವರ್ತನೆ ಆಗುತ್ತವೆ. ಆದರೆ ಇಲ್ಲಿಯವರೆಗೆ ಯೂನಿವರ್ಸಲ್ ಬೇಸಿಕ್ ಇನ್ಕಮ್ ನೀಡುತ್ತೇವೆ ಎನ್ನುವಂತಹ ಮಾತನ್ನ ಯಾವ ರಾಜಕೀಯ ಪಕ್ಷವೂ, ಮತ್ತದರ ನೇತಾರರೂ ಆಡಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಯವರು ಈ ಮಾತನ್ನಾಡಿದ್ದಾರೆ. ಏನಿದು ಯೂನಿವರ್ಸಲ್ ಬೇಸಿಕ್ ಇನ್ಕಮ್? ಇದರ ಒಳಿತು ಕೆಡುಕುಗಳೇನು? ಇದು ಭಾರತದಂತಹ ದೇಶದಲ್ಲಿ ಲಾಗೂ ಮಾಡಲು ಸಾಧ್ಯವೇ? ಎನ್ನುವ ವಿಷಯಗಳ ಬಗ್ಗೆ ಇಂದು ಒಂದಷ್ಟು ತಿಳಿದುಕೊಳ್ಳೋಣ.  

ಏನಿದು ಯೂನಿವರ್ಸಲ್ ಬೇಸಿಕ್ ಇನ್ಕಮ್? 

ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI) ಕನ್ನಡಲ್ಲಿ ಸಾರ್ವತ್ರಿಕ ಮೂಲ ಆದಾಯ ಅನ್ನಬಹದು. ಇದೊಂದು ಥಿಯರಿ. ಇದರ ಪ್ರಕಾರ ದೇಶದ ಪ್ರತಿ ನಾಗರೀಕನಿಗೂ ಕೆಲಸವಿರಲಿ ಬಿಡಲಿ ಇಷ್ಟು ಅಂತ  ಪ್ರತಿ ತಿಂಗಳು ಹಣ ಕೊಡುವುದು. ಕೆಲಸವಿದ್ದು ಅಥವಾ ಮತ್ತೇನೋ ಆದಾಯ ಮೂಲವಿದ್ದು ಅದರಿಂದ ಅವರಿಗೆ ಹೆಚ್ಚಿನ ಆದಾಯ ಬರುತ್ತಿದ್ದರೂ ಕೂಡ ಅವರಿಗೂ ಈ ಹಣ ಸಿಗುತ್ತದೆ.  ಅರ್ಥ ಇಷ್ಟೇ ಯಾರಿಗೆ ಎಷ್ಟಾದರೂ ಆದಾಯ ಬರುತ್ತಿರಲಿ ಅಥವಾ ಏನೂ ಬಾರದೆಯೇ ಇರಲಿ ತಿಂಗಳಿಗಷ್ಟು ಎಂದು ಪ್ರತಿ ನಾಗರಿಕನಿಗೂ  ಹಣ ನೀಡುವ ಪರಿಕಲ್ಪನೆಯ ಹೆಸರೇ ಯೂನಿವರ್ಸಲ್ ಬೇಸಿಕ್ ಇನ್ಕಮ್ ಸ್ಕೀಮ್. 

ಯೂನಿವರ್ಸಲ್ ಬೇಸಿಕ್ ಇನ್ಕಮ್ ಚಾಲನೆಗೆ ಬರುವುದರಿಂದ ಆಗುವ ಅನುಕೂಲಗಳೇನು? ಅನಾನುಕೂಲಗಳೇನು?

ಎಲ್ಲಾ ವಿಷಯಗಳಿಗೆ ಪರ-ವಿರೋಧ ಇದ್ದಂತೆ ಈ ವಿಷಯದಲ್ಲೂ ಸರಿ ಎನ್ನುವರ ಗುಂಪು, ತಪ್ಪು ಎನ್ನುವರ ಗುಂಪು ದೊಡ್ಡದಿದೆ. 

ಈ ಥಿಯರಿ ಪ್ರತಿಪಾದಕರು:
 1. ಇದರಿಂದ ಸಮಾಜದಲ್ಲಿ ಕ್ರೈಂ ರೇಟ್ ಕಡಿಮೆ ಆಗುತ್ತದೆ. 
 2. ಜನರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.  
 3. ಕೊಡು-ಕೊಳ್ಳುವಿಕೆ ಹೆಚ್ಚಾಗುತ್ತದೆ. 
 4. ಬಡತನ ಮೆಲ್ಲಗೆ ನಮ್ಮ ಪ್ಲಾನೆಟ್ನಿಂದ ಕಾಲುಕೀಳುತ್ತದ್ದೆ. 
 5. ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಸ್ವಲ್ಪವಾದರೂ ಕಡಿಮೆಯಾಗುತ್ತದೆ. 
 6. ಎಲ್ಲಕ್ಕೂ ಮುಖ್ಯ ಇಡೀ ಸಮಾಜದ ಜನರ ಜೀವನ ಮಟ್ಟದ್ದಲ್ಲಿ ಉತ್ತಮ ಬದಲಾವಣೆ ಸಾಧ್ಯ. 
 7. ಹಣಕ್ಕಾಗಿ ಕೆಲಸ ಮಾಡುವ ಅವಶ್ಯಕತೆ ತಪ್ಪಿದರೆ ತಮ್ಮಿಚ್ಛೆಯ ಕಾರ್ಯಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಅವಕಾಶ ಸಿಗುತ್ತದೆ. 
ಎಂದು ವಾದಿಸುತ್ತಾರೆ. ಇವರ ವಾದದಲ್ಲಿ ತಿರುಳಿದೆ. ಆದರೆ ನಾವು ಇದಕ್ಕೆ ಸಿದ್ಧವಾಗಿದ್ದೇವೆಯೇ?  ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಕಾರ ಇದಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ಬಿಲ್ ಗೇಟ್ಸ್ ಫೌಂಡೇಶನ್ ಈ ಥಿಯರಿ ವಿರೋಧಿಸುತ್ತಿಲ್ಲ ಈ ಕ್ಷಣಕ್ಕೆ ಇದನ್ನ ಸಮಾಜದಲ್ಲಿ ಅಳವಡಿಕೆ ಮಾಡಲು ಬರುವುದಿಲ್ಲ ಎನ್ನುತ್ತದೆ. 

ಮುಂಬರುವ ವರ್ಷಗಳಲ್ಲಿ ತಾಂತ್ರಿಕತೆ ಇನ್ನಷ್ಟು ಹೆಚ್ಚಾಗಿ ಹೆಚ್ಚು ಹೆಚ್ಚು ಕೆಲಸವನ್ನ ಯಂತ್ರಗಳು ನಿರಾಯಾಸವಾಗಿ ಮನುಷ್ಯನಿಗಿಂತ ಕಡಿಮೆ ಅವಧಿಯಲ್ಲಿ ಮತ್ತು ಹೆಚ್ಚು ನಿಖರತೆಯಲ್ಲಿ ಮಾಡಿ  ಮುಗಿಸಲಿವೆ. ಹೀಗಾಗಿ ಕೆಲಸಗಳು ಕಡಿಮೆಯಾಗಲಿವೆ. ಕಳೆದ ಎರಡು ಅಥವಾ ಮೂರು ದಶಕಗಳ ಹಿಂದೆ ಇದ್ದ ಎಷ್ಟೋ ವೃತ್ತಿಗಳು ಇಂದು ಇಲ್ಲ, ಇದ್ದರೂ ಬೆರಳಿಕೆಯಷ್ಟು ಜನ ಅದರಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ಒಂದು ದಶಕದಲ್ಲಿ ಡ್ರೈವರ್, ಅಕೌಂಟೆಂಟ್, ಡೇಟಾ ಎಂಟ್ರಿ ಕೆಲಸ ಹೀಗೆ ಹಲವು ಹತ್ತು ವೃತ್ತಿಗಳು ಕೇವಲ ನೆನಪಾಗಲಿವೆ. ಅಲ್ಲದೆ ಯಾವುದೇ ಕೆಲಸಕ್ಕೆ ಇಂದು ಹತ್ತು ಜನ ಬೇಕಾಗುತಿದ್ದ ಕಡೆ ಒಬ್ಬರೋ ಇಬ್ಬರೋ ಸಾಕು ಅನ್ನುವ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಈ ಎಲ್ಲಾ ಸಾಧ್ಯತೆಗಳನ್ನ ಗಮನದಲ್ಲಿ ಇಟ್ಟುಕೊಂಡು ಯೂನಿವರ್ಸಲ್ ಬೇಸಿಕ್ ಇನ್ಕಮ್ ಎನ್ನುವ ಪರ್ಯಾಯ ಕಲ್ಪಿಸುವ ಯೋಜನೆ ಹೆಣೆದಿದ್ದಾರೆ. 

ವಸ್ತು ಅಥವಾ ವಿಷಯ ಯಾವುದೇ ಇರಲಿ ಒಂದಷ್ಟು ಜನ ಅದನ್ನ ಸರಿ ಎಂದರೆ ಒಂದು ಗುಂಪು ಎಲ್ಲವೂ ಸರಿ ಇಲ್ಲ ಎನ್ನುವ ರಾಗ ತೆಗೆಯುತ್ತದೆ. ಸಾರ್ವತ್ರಿಕ ಮೂಲ ಆದಾಯದ ವಿಷಯದಲ್ಲೂ ಹೀಗೆ ಆಗಿದೆ. 

ಈ ಥಿಯರಿಯನ್ನು ಒಪ್ಪದ ಗುಂಪು: 
 1. "ಇದರಿಂದ ಜನರಿಗೆ ಕೆಲಸದ ಮೇಲೆ ಆಸಕ್ತಿಯೇ ಹೊರಟುಹೋಗುತ್ತದೆ. 
 2. ಜನರು ಆಲಸಿಗಳಾಗುತ್ತಾರೆ. 
 3. ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತದೆ. 
 4. ಅಲ್ಲದೆ ನಮ್ಮ ದೇಶದ ಹಣಕಾಸು ಸ್ಥಿತಿ ಈ ಥಿಯರಿಯನ್ನ ಅಳವಡಿಸಿಕೊಳ್ಳುವಷ್ಟು  ಚನ್ನಾಗಿದೆಯೇ? 
 5. ಬೇಸಿಕ್ ಇನ್ಕಮ್ ಎಷ್ಟು? ಈ ಹಣದ ಮೊತ್ತವನ್ನ ಯಾವ ಆಧಾರದಲ್ಲಿ ನಿಗದಿಪಡಿಸುವುದು? 
 6. ಕೆಲಸವಿಲ್ಲದೆ ಹಣ ಸಿಗುತ್ತದೆ, ಜನರ ಬಳಿ ಹೆಚ್ಚಿನ ಸಮಯವಿರುತ್ತದೆ. ಇವು ಕ್ರೈಂ ರೇಟ್ ಹೆಚ್ಚಿಸುವ ಸಾಧ್ಯತೆಯಿದೆ. 
 7. ಭಾರತದಂತಹ ದೊಡ್ಡ ದೇಶದಲ್ಲಿ ಈಗಾಗಲೇ ದಕ್ಷಿಣ ರಾಜ್ಯಗಳ ಹಣ ಉತ್ತರದ ರಾಜ್ಯಗಳಿಗೆ ವಿನಿಯೋಗವಾಗುತ್ತಿದೆ. ಈ ಥಿಯರಿಯನ್ನ ಅಳವಡಿಸಿಕೊಂಡರೆ ದಕ್ಷಿಣದ ರಾಜ್ಯಗಳ ಅಭಿವೃದ್ಧಿಗೆ ಹಣವಿಲ್ಲದೆ ದಕ್ಷಿಣದ ರಾಜ್ಯಗಳು ದಂಗೆ ಏಳುವ ಸಾಧ್ಯತೆಗಳಿವೆ. 

ಇದೊಂದು ವಾಹ್ ಎನ್ನುವ ಥಿಯರಿ ಇದನ್ನ ಅನುಷ್ಠಾನಕ್ಕೆ ತರುವುದು ಸುಲುಭದ ಮಾತಲ್ಲ" ಎನ್ನುತ್ತಾರೆ. ಏಕೆಂದರೆ ಭಾರತದಂತಹ ದೊಡ್ಡ ದೇಶದ ಎಲ್ಲಾ 130 ಕೋಟಿಗೂ ಮೀರಿದ ಜನರಿಗೆ ಬೇಸಿಕ್ ಇನ್ಕಮ್ ನೀಡುವಷ್ಟು ಭಾರತ ಸರಕಾರದ ಬಳಿ ಆದಾಯವೇ ಇಲ್ಲ!. 

ಉದಾಹರಣೆ ನೋಡೋಣ. ಐಎಂಎಫ್ ವರದಿ ಪ್ರಕಾರ 2,600 ರೂಪಾಯಿ ಪ್ರತಿ ನಾಗರಿಕನಿಗೆ ಪ್ರತಿ ತಿಂಗಳು ಕೊಡಬೇಕು. ಇದು ಅತ್ಯಂತ ಕನಿಷ್ಠ ಹಣ. ಬೇರೆ ಬೇರೆ ಸಂಸ್ಥೆಗಳು ಬೇರೆ ಹಣದ ಮೊತ್ತವನ್ನ ಹೇಳುತ್ತವೆ . ಅದು ಒತ್ತಟ್ಟಿಗಿರಲಿ . ಐಎಂಎಫ್ ಹೇಳುವ ಮಾಸಿಕ ಬೇಸಿಕ್ ಇನ್ಕಮ್ 2,600 ರೂಪಾಯಿಯನ್ನ 130 ಕೋಟಿಯಿಂದ ಗುಣಿಸಿದರೆ  3 ಲಕ್ಷ 38 ಸಾವಿರ ಕೋಟಿ ರೂಪಾಯಿ ತಿಂಗಳಿಗೆ ಸರಕಾರಕ್ಕೆ ಖರ್ಚು ಉಂಟಾಗುತ್ತದೆ. ಇದನ್ನ ಕೊಡಲು ಸರಕಾರದ ಬಳಿ ಹಣವೆಲ್ಲಿದೆ?  ಭಾರತ ಪೂರ್ತಿ ಜಿಎಸ್ಟಿ ಕಲೆಕ್ಷನ್ ಒಂದು ತಿಂಗಳಿಗೆ ಲಕ್ಷ ಕೋಟಿ ಮುಟ್ಟುತ್ತಿಲ್ಲ ಅಂದ ಮೇಲೆ ತಿಂಗಳಿಗೆ 3 ಲಕ್ಷ ಕೋಟಿ ತರುವುದಾದರೂ ಎಲ್ಲಿಂದ?? ಸರಕಾರದ ಆದಾಯ ಮೂಲ ಕೇವಲ ಜಿಎಸ್ಟಿ ಮಾತ್ರವಲ್ಲ, ಸರಕಾರದ ಆದಾಯವನೆಲ್ಲಾ ಪುಕ್ಕಟೆ ಭಾಗ್ಯದಲ್ಲಿ ಹಂಚಿಬಿಟ್ಟರೆ ದೇಶ ಉದ್ಧಾರವಾಗುವುದೆಂದು? ಬಿಡಿ, ಇದನ್ನ ಕೇವಲ ಬಡವರಿಗೆ ಮಾತ್ರ ಕೊಡೋಣ ಅಂದು ಕೊಳ್ಳೋಣ ಆಗೇನಾಗುತ್ತೆ ನೋಡೋಣ ಬನ್ನಿ

ಭಾರತದ ನಿಖರ ಜನಸಂಖ್ಯೆ ಎಷ್ಟು ಎನ್ನುವುದು ಯಾರಿಗೂ ಗೊತ್ತಿಲ್ಲ. ಲೆಕ್ಕಕ್ಕೆ ನೂರಾಮೂವತ್ತು ಕೋಟಿ ಎಂದುಕೊಳ್ಳೋಣ. ಇನ್ನು ಬಡವರು, ಬಡತನದ ಡೆಫಿನಿಷನ್ ಕೂಡ ನಿಖರವಿಲ್ಲ. ಇವೆಲ್ಲವನ್ನು ಬದಿಗಿಟ್ಟು ಮೂವತ್ತರಿಂದ ಮುವತ್ತೈದು ಕೋಟಿ ಜನ UBI ಅಡಿಯಲ್ಲಿ ಬರುತ್ತಾರೆ ಎಂದು ಕೊಂಡರೂ ತಿಂಗಳಿಗೆ 91 ಸಾವಿರ ಕೋಟಿ ಬೇಕು ಈ ಸಂಖ್ಯೆ ನಮ್ಮ ಜಿಎಸ್ಟಿ ಕಲೆಕ್ಷನ್ ಗೆ ಒಂದಷ್ಟು ಹತ್ತಿರ ಇದೆ. ಇದನ್ನ ನೀವು ಹಂಚುತ್ತಾ ಕುಳಿತರೆ ದೇಶದ ಅಭಿವೃದ್ಧಿ ಕಥೆಯೇನು ಸ್ವಾಮಿ??. 

ಯೂನಿವರ್ಸಲ್ ಬೇಸಿಕ್ ಇನ್ಕಮ್ ಜಗತ್ತಿನ ಇತರ ದೇಶಗಳಲ್ಲಿ...

ಕಳೆದ ವರ್ಷ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಪ್ರತಿ ನಾಗರೀಕನಿಗೂ ಹೀಗೆ ಬೇಸಿಕ್ ಇನ್ಕಮ್ ಕೊಡಬೇಕು ಎನ್ನುವ ಕೂಗಿಗೆ ಅಲ್ಲಿಯ ಜನರೇ ಬೇಡ ಎನ್ನುವುದರ ಮೂಲಕ ಈ ವಿಷಯಕ್ಕೆ ಅಲ್ಲಿ ಇತಿಶ್ರೀ ಹಾಡಿದ್ದು ಇಂದಿಗೆ ಇತಿಹಾಸ. ಆದರೆ ಇದು ಅಲ್ಲಿಗೇ ನಿಂತಿಲ್ಲ.  ಫಿನ್ಲ್ಯಾಂಡ್ ಸರಕಾರ ತನ್ನ ನಿರುದ್ಯೋಗಿ ಪ್ರಜೆಗಳಿಗೆ 560 ಯೂರೋವನ್ನ ಆಯ್ದ 2000 ಜನರಿಗೆ ಮಾಸಿಕ ನೀಡುತ್ತಿದೆ ತನ್ಮೂಲಕ ಯೂನಿವರ್ಸಲ್ ಬೇಸಿಕ್ ಇನ್ಕಮ್ ಲಾಗೂ ಮಾಡಿದ ಪ್ರಥಮ ಯೂರೋಪಿಯನ್ ದೇಶ ಎನ್ನುವ ಕೀರ್ತಿಗೆ ಭಾಜನವಾಗಿದೆ.  ನಂತರದ ದಿನಗಳಲ್ಲಿ ಅವರಿಗೆ ಕೆಲಸ ಸಿಕ್ಕರೂ ಈ ಬೇಸಿಕ್ ಭತ್ಯೆ ಯನ್ನ ಮುಂದುವರಿಸಿ ಇದರ ಸಾಧಕ ಬಾಧಕ ಅಳೆಯುವ ಸೋಷಿಯಲ್ ಎಕ್ಸ್ಪಿರಿಮೆಂಟ್ಗೆ ಮುಂದಾಗಿದೆ. ಕಳೆದ ವರ್ಷ ಜೂನ್ ತಿಂಗಳಿಂದ ಇಟಲಿಯ ಲಿವೋರ್ನೊ ಎನ್ನುವ ಹಳ್ಳಿಯಲ್ಲಿ ಬಡತನದಲಿದ್ದ ನೂರು ಪರಿವಾರಕ್ಕೆ ತಿಂಗಳಿಗೆ 500 ಯುರೋ ಕೊಡುತ್ತಿದೆ, ಜನವರಿ ಒಂದರಿಂದ ಇದರ ಸಂಖ್ಯೆ ಇನ್ನು ನೂರು ಹೆಚ್ಚಾಗಿದೆ.  ರಾಗೂಸ ಮತ್ತು ನೇಪಲ್ಸ್ ನಗರಗಳು ಈ ಮಾದರಿಯನ್ನ ಅಳವಡಿಸಿಕೊಳ್ಳಲು ಮುಂದಾಗಿವೆ. 

ಕೆನಡಾ ದೇಶದ ಒಂಟಾರಿಯದಲ್ಲಿ ಕೂಡ ಇಂತಹ ಒಂದು ಪ್ರಯೋಗ ಶುರುವಾಗಿದೆ. ತಿಂಗಳಿಗೆ ಹತ್ತಿರ ಹತ್ತಿರ 1,500 ಕೆನಡಿಯನ್ ಡಾಲರ್ ಮಾಸಿಕವಾಗಿ ನೀಡಲಾಗುತ್ತಿದೆ. ಸ್ಕಾಟ್ಲೆಂಡ್ ನ ಫಿಫ್ ಮತ್ತು  ಗ್ಲ್ಯಾಸ್ಕೋ ನಗರಗಳಲ್ಲಿ ಕೂಡ ಇದನ್ನ ಅಳವಡಿಸಿಕೊಳ್ಳಲು ಮುಂದಾಗಿರುವುದು ಯುನೈಟೆಡ್ ಕಿಂಗ್ಡಮ್ ನ ಪ್ರಥಮ ನಗರಗಳಾಗಿ ಅವಕ್ಕೆ ಮನ್ನಣೆ ನೀಡಲಿವೆ. 

ಮುಂದಿನ ಎರಡು ದಶಕಗಳಲ್ಲಿ ಯೂರೋಪಿನ ಪೂರ್ಣ ರೂಪವೇ ಬದಲಾಗಿ ಹೋಗಲಿದೆ. ಅದರ ಸುಳಿವು ಆಗಲೇ ಹಲವು ದೇಶಗಳಲ್ಲಿ ಸಿಗುತ್ತಿದೆ. ಕಳೆದ ವರ್ಷ  ದಾಲಿಯಾ ರಿಸರ್ಚ್ ಫೌಂಡೇಶನ್  ಯೂರೋಪಿನ 28 ದೇಶಗಳಲ್ಲಿ ನೆಡೆಸಿದ ಸರ್ವೇ ಪ್ರಕಾರ 68 ಪ್ರತಿಶತ ಯೂರೋಪಿಯನ್ನರು  ಯೂನಿವರ್ಸಲ್ ಬೇಸಿಕ್ ಇನ್ಕಮ್ ಸ್ಕೀಮ್ ಪರವಾಗಿ ಖಂಡಿತ ಅಥವಾ ಬಹುಅಂಶ ವೋಟ್ ಮಾಡುವುದಾಗಿ ಹೇಳಿದ್ದಾರೆ. 

ಇಂತಹ ಯೋಜನೆಯಿಂದ ಜನ ಸಾಮಾನ್ಯ ಕೆಲಸದ ಕೊರತೆ ಅಥವಾ ಅಸ್ಥಿರತೆಯಿಂದ ದೂರಾಗಿ ತನ್ನವರೊಡನೆ ಸಮಯ ಕಳೆಯಬಹುದು ಅಥವಾ  ಫ್ರೀ ಟೈಮ್ ನಿಂದ ಮನುಷ್ಯನ ಮಾನಸಿಕ ಸಂತುಲನ ಬಿಗಡಾಯಿಸುತ್ತೆ ಅಂತಲೇ ಷರಾ ಏಕೆ ಹೊರಡಿಸಬೇಕು? ಅನ್ನುವುದು ಹಾವರ್ಡ್ ರೀಡ್ ಮತ್ತು ಸ್ಟೀವರ್ಟ್ ಲಾನ್ಸ್ಲೇಯ್  ಎನ್ನುವ ಆರ್ಥಿಕ ತಜ್ಞರ ಅಂಬೋಣ. 

ಕೊನೆ ಮಾತು: ಸಧ್ಯದ ಸ್ಥಿತಿಯಲ್ಲಿ ಬೇಸಿಕ್ ಇನ್ಕಮ್ ಗ್ಯಾರಂಟಿ (BIG ) ಅಥವಾ ಯೂನಿವರ್ಸಲ್  ಬೇಸಿಕ್ ಇನ್ಕಮ್ (UBI) ಎನ್ನುವುದು ಹೊಗೆಯ ರೂಪದಲ್ಲಿದೆ. ಬೆಂಕಿಯಿಲ್ಲದೆ ಹೊಗೆ ಹೇಗೆ ಬಂದೀತು?  ಇಂದಿನ ಸಣ್ಣ ಕಿಡಿ ಇನ್ನೊಂದು ದಶಕದಲ್ಲಿ ಕಾಳ್ಗಿಚ್ಚಿನಂತೆ ಜಗತ್ತನ್ನ ಅವರಿಸದೆ ಇರುವುದೇ? ಮುಂದಿನ ಐದು ಅಥವಾ ಹತ್ತು ವರ್ಷದಲ್ಲಿ ಜಗತ್ತು ಅಮೂಲಾಗ್ರ ಬದಲಾವಣೆ ಹೊಂದುವುದಂತೂ ಸತ್ಯ. ಎಲ್ಲಕ್ಕೂ ಸರಿಯಾದ ಕಾಲ ಕೊಡಿಬರಬೇಕು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳು ಮಾತ್ರ ಗೆಲುವನ್ನ ತಂದುಕೊಡಬಲ್ಲದು. ಸದ್ಯದ ಭಾರತದ ಆರ್ಥಿಕ ಸ್ಥಿತಿ ನೋಡಿದರೆ ಯೂನಿವರ್ಸಲ್ ಬೇಸಿಕ್ ಇನ್ಕಮ್ ಚಾಲನೆಗೆ ತರುತ್ತೇವೆ ಎನ್ನುವುದು ಮತದಾರನ ಮೂಗಿಗೆ ತುಪ್ಪ ಸವರುವ ಕ್ರಿಯೆಯಷ್ಟೇ ಎಂದು ಹೇಳಬಹದು. 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Stay up to date on all the latest ಅಂಕಣಗಳು news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp