ಡೀಲ್ ಯಾ ನೋ ಡೀಲ್? ಬಂದೆ ಬಿಡ್ತು ಬ್ರೆಕ್ಸಿಟ್ ಫಲಿತಾಂಶದ ದಿನ!

ಕುಸಿದ ಬ್ರಿಟನ್ ನ ಹೌಸಿಂಗ್ ಸೆಕ್ಟರ್, ಹೈ ನೆಟ್ವರ್ತ್ ಭಾರತೀಯರಿಗೆ ವರದಾನವಾಗುತ್ತದೆ. ಅಲ್ಲದೆ ವಲಸೆ ನೀತಿ ಬದಲಾದರೆ, ಅಂದರೆ ಒಕ್ಕೂಟದ ನಾಗರಿಕರು ಪ್ರಪಂಚದ ಇತರ ನಾಗರೀಕರು....
ಬ್ರೆಕ್ಸಿಟ್
ಬ್ರೆಕ್ಸಿಟ್
ಬ್ರೆಕ್ಸಿಟ್ ಎನ್ನುವ ಪದ ಇಂದಿನ ದಿನಗಳಲ್ಲಿ ಕೇಳದೆ ಇರುವವರಾರು? ಯೂರೋಪಿಯನ್ ಯೂನಿಯನ್ ನಿಂದ ಬ್ರಿಟನ್ ಹೊರಹೋಗುವ ಪ್ರಕ್ರಿಯೆಗೆ ‘ಬ್ರೆಕ್ಸಿಟ್’ ಎಂದು ಹೆಸರಿಸಿದ್ದಾರೆ. 28 ದೇಶಗಳ ಒಕ್ಕೂಟ ಯೂರೋಪಿಯನ್ ಯೂನಿಯನ್. ಬ್ರಿಟನ್ ಈ ಯೂನಿಯನ್ ನ ಸದಸ್ಯ ರಾಷ್ಟ್ರ. ಹಾಗೆ ನೋಡಿದರೆ ಬ್ರಿಟನ್ ಎಂದೂ ಪೂರ್ಣವಾಗಿ ಯೂರೋಪಿಯನ್ ಯೂನಿಯನ್ ನಲ್ಲಿ ಬೆರೆತಿತ್ತು ಎಂದು ಹೇಳಲು ಆಗದು. ‘ಯುರೋ’ ಕರೆನ್ಸಿ ಒಪ್ಪದೇ ತನ್ನ ‘ಪೌಂಡ್’ ಕರೆನ್ಸಿ ಉಳಿಸಿಕೊಂಡದ್ದುಅದಕ್ಕೆ ಕಾರಣ. ಅದಕ್ಕೆ ಬ್ರಿಟನ್ ಕೊಟ್ಟ ಸಮರ್ಥನೆ ‘ಟ್ರಡಿಶನ್’. ಪೌಂಡ್ ಬಿಡಲು ಅದಕ್ಕೆ ತನ್ನ ಪರಂಪರೆ ಅಡ್ಡಿ ಬಂದಿತ್ತು. ಇದು ಹೇಗೆಂದರೆ ‘ನೆಂಟರ ಮೇಲೆ ಪ್ರೀತಿ ಅಕ್ಕಿಯ ಮೇಲೆ ಆಸೆ’ ಎನ್ನುವ ತರಹದ್ದು. ಗಮನಿಸಿ… ಉಳಿದೆಲ್ಲಾ ಸದಸ್ಯ ರಾಷ್ಟ್ರಗಳು ತಮ್ಮ ಮೂಲ ಕರೆನ್ಸಿ ಬಿಟ್ಟು ‘ಯುರೋ’ ವನ್ನು ತಮ್ಮ ಹೊಸ ಕರೆನ್ಸಿ ಎಂದು ಒಪ್ಪಿಕೊಂಡಿವೆ.
ಯಾವುದೇ ಒಂದು ಒಕ್ಕೂಟಕ್ಕೆ ಸೇರ್ಪಡೆ ಆಗುವುದು ಸದಸ್ಯ ರಾಷ್ಟ್ರಗಳಲ್ಲಿ ಸಮ್ಮತಿಯಿಂದ ಉನ್ನತಿಯೆಡೆಗೆ ನಡೆಯಲು. ಬ್ರಿಟನ್ ಒಕ್ಕೂಟ ಸೇರಿದ ದಿನದಿಂದ ತನಗೇನು ಲಾಭ ಎಂದು ಯೋಚಿಸಿತೇ ಹೊರತು, ಹೇಗೆ ಒಂದು ಒಕ್ಕೂಟವಾಗಿ ಮುನ್ನೆಡೆಯಬಹುದು ಎನ್ನುವುದರ ಬಗ್ಗೆ ಅಲ್ಲವೇ ಅಲ್ಲ. ಹೀಗೆ ಎಷ್ಟು ದಿನ ‘ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ’ ನಡೆದೀತು?  ‘ಬ್ರೆಕ್ಸಿಟ್’ ಒಂದು ದಿನದಲ್ಲಿ ಹುಟ್ಟಿದ ಕೂಗಲ್ಲ ಎನ್ನುವುದನ್ನು ತಿಳಿಸಲು ಇಷ್ಟೆಲ್ಲಾ ಹೇಳಬೇಕಾಯಿತು...
ಇದೇ ತಿಂಗಳು ( ಮಾರ್ಚ್ 21, 2019) ಬ್ರಿಟನ್ ಸಂಸತ್ತಿನಲ್ಲಿ ಮತ್ತೊಮ್ಮೆ ಇದರ ಬಗ್ಗೆ ವೋಟಿಂಗ್ ಇದೆ. ಅಲ್ಲಿ ಸಹಮತ ಸಿಕ್ಕರೆ ಅಧಿಕೃತವಾಗಿ 29 ಮಾರ್ಚ್ 2019 ರಿಂದ ಬ್ರಿಟನ್ ಯೂರೋಪಿಯನ್ ಒಕ್ಕೊಟದಿಂದ ಹೊರಬರುತ್ತದೆ. ಆದರೆ ಗಮನಿಸಿ ಇದು ಒಂದು ದಿನದಲ್ಲಿ ಮುಗಿಯುವ ಕ್ರಿಯೆಯಲ್ಲ. ಇದು 31 ಡಿಸೆಂಬರ್ 2020ಕ್ಕೆ ಮುಗಿಯುತ್ತದೆ. ಇದರಲ್ಲೂ ಸಹಮತ ಬರದಿದ್ದರೆ ಈ ಕ್ರಿಯೆಯನ್ನ ಇನ್ನೊಂದು ಅಥವಾ ಎರಡು ವರ್ಷ ಮುಂದಕ್ಕೆ ದೂಡಬಹದು. ಅಂದರೆ ಬ್ರೆಕ್ಸಿಟ್ ಪೂರ್ಣಗೊಳ್ಳಲು 2021 ಅಥವಾ 2022 ರವರೆಗೂ ಸಮಯ ಹಿಡಿಯಬಹದು. ಯೂರೋಪಿಯನ್ ಯೂನಿಯನ್ ನ ಪ್ರಮುಖ ದೇಶ ಜರ್ಮನಿಯ ಮುಖ್ಯಸ್ಥೆ ಏಂಜೆಲಾ ಮರ್ಕೆಲ್ ಈ ರೀತಿಯ ಮುಂದೂಡುವಿಕೆಯ ವಿರುದ್ಧವಿದ್ದಾರೆ.
ಸರಿಯಾದ ಕಾರಣ ಕೊಡದ ಹೊರತು ಬ್ರೆಕ್ಸಿಟ್ ಪ್ರಕ್ರಿಯೆಯನ್ನ ಯಾವುದೇ ಕಾರಣಕ್ಕೂ ಹೆಚ್ಚು ಸಮಯ ನೀಡಿ ಮುಂದಕ್ಕೆ ಹಾಕುವುದಿಲ್ಲ ಎನ್ನುವುದು ಏಂಜೆಲಾ ಮರ್ಕೆಲ್ ನಿಲುವು. ಬ್ರಿಟನ್ ದೇಶದ ಮುಖ್ಯಸ್ಥೆ ಥೆರೆಸಾ ಮೇ ಹೇಗಾದರೂ ಮಾಡಿ ಈ ಪ್ರಕ್ರಿಯೆಯನ್ನ ಮುಂದಕ್ಕೆ ಹಾಕಿ ಹೆಚ್ಚಿನ ಸಮಯವನ್ನ ಪಡೆಯಲು ಬಯುಸುತ್ತಿದ್ದಾರೆ . ಯೂರೋಪಿಯನ್ ಯೂನಿಯನ್ ಒಕ್ಕೊಟದ ಆರ್ಟಿಕಲ್ 50ರ ಪ್ರಕಾರ ಸರಿಯಾದ ಕಾರಣ ಹೇಳಿ ಹೆಚ್ಚಿನ ಸಮಯ ಪಡೆಯುವ ಅವಕಾಶವಿದೆ. ಆದರೆ ಇದನ್ನ ಬ್ರಿಟನ್ ಸಂಸತ್ತು ಮತ್ತು ಯೂರೋಪಿಯನ್ ಒಕ್ಕೊಟದ ಸಂಸತ್ತು ಎರಡೂ ಒಪ್ಪಬೇಕಾಗಿದೆ. ಥೇರೆಸಾ ಮೇ ತಮ್ಮ ದೇಶದಲ್ಲಿ ಒಂಟಿಯಾಗಿದ್ದಾರೆ. ಹಲವು ಬಾರಿ ವೋಟಿಂಗ್ ನಲ್ಲಿ ಆಕೆ ಈಗಾಗಲೇ ಮುಖಭಂಗ ಅನುಭವಿಸಿದ್ದಾರೆ. 
ಬ್ರೆಕ್ಸಿಟ್ ನೆಡೆದು ಬಂದ ದಾರಿ: 
  1.  ಜೂನ್ 2016- ಯುನೈಟೆಡ್ ಕಿಂಗ್ಡಮ್ ಯೂರೋಪಿಯನ್ ಒಕ್ಕೊಟದಿಂದ ಹೊರಹೋಗೋಣ ಎಂಬ ಜನಾದೇಶ. 
  2. ಮಾರ್ಚ್ 2017- ಆರ್ಟಿಕಲ್ 50ನ್ನು ಬ್ರಿಟನ್ ಸರಕಾರ ಲಾಗೂ ಮಾಡುತ್ತದೆ. ಇನ್ನೆರಡು ವರ್ಷದಲ್ಲಿ ಒಕ್ಕೊಟದಿಂದ ಹೊರಹೋಗುವುದಾಗಿ ಹೇಳುತ್ತದೆ. 
  3.  ಜೂನ್ 2018- ಲೆಕ್ಕಾಚಾರದ ಮಾತಿಗೆ ಕೂರುತ್ತವೆ. ಹೊರಹೋಗುವ ಪ್ರಕ್ರಿಯೆಯನ್ನು ಹೆಚ್ಚು ನೋವಿಲ್ಲದೆ ಮುಗಿಸುವ ಮಾತಾಗುತ್ತದೆ. 
  4.  ನವೆಂಬರ್ 2018- ಕರಡು ಲೆಕ್ಕಾಚಾರದ ಹೊರಹೋಗುವ ಪ್ರಕ್ರಿಯೆ ಪತ್ರಕ್ಕೆ ಅನುಮೋದನೆ ಸಿಗುತ್ತದೆ. 
  5.  ಮಾರ್ಚ್ 2019-  ಇಲ್ಲಿ ಎರಡು ಮಾರ್ಗಗಳಿವೆ. ಲೆಕ್ಕಾಚಾರದ ಪತ್ರದ ಪ್ರಕಾರ ಡೀಲ್ ಆದರೆ ಮತ್ತೊಮ್ಮೆ ಬ್ರೆಕ್ಸಿಟ್ ಪ್ರಕ್ರಿಯೆ ಪೂರ್ಣಗೊಳ್ಳಲು ವರ್ಷ ಅಥವಾ ಎರಡು ವರ್ಷವಾಗುತ್ತದೆ. ಅಕಸ್ಮಾತ್ ನೋ ಡೀಲ್ ಬ್ರೆಕ್ಸಿಟ್ ಆದರೆ 29 ಮಾರ್ಚ್ 2019 ರಂದು ಹೊರಬರಬೇಕಾಗುತ್ತದೆ. 
ಇಂಗ್ಲೆಂಡ್ ಇಂದು ಹೆಚ್ಚಿನ ಸಮಯವನ್ನ ಬಯಸುತ್ತಿದೆ. ಯೂರೋಪಿಯನ್ ಯೂನಿಯನ್ ಸಮಯ ನೀಡಲು ತಯಾರಿಲ್ಲ. ಈಗಾಗಲೆ 3 ವರ್ಷ ಇದರಲ್ಲಿ ಕಳೆದಾಗಿದೆ ಯಾವುದಾದರೂ ಒಂದು ನಿರ್ಧಾರವಾಗಿ ಹೋಗಲಿ ಎನ್ನುವುದು ಯೂರೋಪಿಯನ್ ಒಕ್ಕೊಟದ ನಿಲುವು. 
ಇಲ್ಲಿ ಈಗ ಎರಡು ಸಾಧ್ಯತೆಗಳಿವೆ 
  1. ಬ್ರೆಕ್ಸಿಟ್ ವಿಥ್ ಡೀಲ್ ಆದರೆ ಹೆಚ್ಚು ಆರ್ಥಿಕ ನಷ್ಟವಿಲ್ಲದೆ ಯುನೈಟೆಡ್ ಕಿಂಗ್ಡಮ್ ಹೊರಗೆ ಬರಬಹುದು. ಆಗ ಇದಕ್ಕೆ ಸಮಯವೂ ಸಿಗುತ್ತದೆ ಡಿಸೆಂಬರ್ 2020 ರ ವರೆಗೆ ಕಾಲಾವಕಾಶವಿದೆ. ಹೆಚ್ಚಿನ ಮಾತುಕತೆಗೆ ಸಮಯ ಸಿಗುತ್ತದೆ. ಅಲ್ಲದೆ ಬ್ರಿಟನ್ ಮಾನಸಿಕವಾಗಿ ವ್ಯಾಪಾರ ವಹಿವಾಟಿಗೆ ಹೊರ ಪ್ರಪಂಚಕ್ಕೆ ತೆರೆದುಕೊಳ್ಳಬಹುದು. 
  2. ನೋ ಡೀಲ್ ಬ್ರೆಕ್ಸಿಟ್ ಆದರೆ 29 ಮಾರ್ಚ್ 2019 ರಂದು ಒಕ್ಕೊಟದಿಂದ ಹೊರಬರುತ್ತದೆ. ಆಗ ಯುರೋಪಿಯನ್ ಒಕ್ಕೊಟದಲ್ಲಿ ವಾಸಿಸುತ್ತಿರುವ ಬ್ರಿಟಿಷರ ಕಥೆಯೇನು? ಹಾಗೆಯೇ ಬ್ರಿಟನ್ ನಲ್ಲಿ ವಾಸಿಸುತ್ತಿರುವ ಇತರ ಯೂರೋಪಿಯನ್ ದೇಶದ ಜನರ ಕಥೆಯೇನು? ಅಂದರೆ ವಲಸೆ ಮತ್ತು ವ್ಯಾಪಾರ ವಹಿವಾಟು ಅತಿ ಹೆಚ್ಚು ಪೆಟ್ಟು ತಿನ್ನುತ್ತವೆ. ಹೀಗಾದಾಗ ಅರಾಜಕತೆ ಉಂಟಾಗುತ್ತದೆ. ಬ್ರಿಟನ್ ದೇಶದಲ್ಲಿ ಈಗಾಗಲೆ ರಾಜಕೀಯ ಅಸ್ಥಿರತೆ ತಾಂಡವಾಡುತ್ತಿದೆ. ಇದು ಯಾವ ದೃಷ್ಟಿಯಿಂದಲೂ ಒಳ್ಳೆಯದಲ್ಲ. 
ಬ್ರಿಟನ್ ನಲ್ಲಿ ಸರಿ ಸುಮಾರು 3 ಮಿಲಿಯನ್ ಯೂರೋಪಿನ ಇತರ ದೇಶದ ಜನರು ವಾಸಿಸುತ್ತಿದ್ದಾರೆ. ಹಾಗೆಯೇ ಬ್ರಿಟನ್ ನಲ್ಲಿ ಜನಿಸಿದ 1.3 ಮಿಲಿಯನ್ ಬ್ರಿಟಿಷರು ಯೂರೋಪಿನ ಇತರ ದೇಶದಲ್ಲಿ ಬದುಕು ಕಂಡು ಕೊಂಡಿದ್ದಾರೆ. ಅಂದರೆ ಒಕ್ಕೂಟದಿಂದ ಹೊರ ಹೋಗುವ ನಿರ್ಧಾರ ಸರಿ ಸುಮಾರು 5 ಮಿಲಿಯನ್ ಜನರ ಬದುಕಲ್ಲಿ ತಲ್ಲಣ ಉಂಟುಮಾಡಲಿದೆ. ಇಲ್ಲಿಯವರನ್ನು ಅಲ್ಲಿಗೆ ವಾಪಸ್ ಕಳಿಸುವುದು, ಅಲ್ಲಿನವರನ್ನು ಇಲ್ಲಿಗೆ ಕರೆಸಿಕೊಳ್ಳುವುದು ಸುಲಭದ ಮಾತಲ್ಲ. ಅಲ್ಲದೆ NHS (ನ್ಯಾಷನಲ್ ಹೆಲ್ತ್ ಸರ್ವಿಸ್) ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ 5 ಪ್ರತಿಶತ ಯೂರೋಪಿನ ಇತರ ದೇಶದ ಪ್ರಜೆಗಳು ಇವರ ಕೆಲಸ ಬದುಕು ವಲಸೆ ನೀತಿ ಅವಲಂಬಿಸಿದೆ. ಒಕ್ಕೂಟದಿಂದ ಹೊರಬಂದ ನಂತರ ವಲಸೆ ನೀತಿ ಬದಲಾದರೆ, 5 ಪ್ರತಿಶತ ಸಿಬ್ಬಂದಿ ತಮ್ಮ ದೇಶಕ್ಕೆ ಮರಳಿದರೆ, ಹೆಲ್ತ್ ಸರ್ವಿಸ್ ನಲ್ಲಿ ಅಸಮತೋಲನ ಏರ್ಪಡುವುದನ್ನು ತಪ್ಪಿಸಲಾಗುವುದಿಲ್ಲ.
ಬ್ರಿಟನ್ ನಲ್ಲಿ ಉತ್ಪಾದಿಸಲಾಗುವ 45ರಿಂದ 50 ಭಾಗ ವಸ್ತುಗಳ ಗ್ರಾಹಕ ಯೂರೋಪಿಯನ್ ಯೂನಿಯನ್! ಅಂದರೆ ಬ್ರಿಟನ್ ನ ಅರ್ಧದಷ್ಟು ರಫ್ತು ಪಾಲುದಾರ ಒಕ್ಕೂಟದ ದೇಶಗಳು. ಬ್ರಿಟನ್, ಯೂರೋಪಿಯನ್ ಯೂನಿಯನ್ ನಿಂದ 8 ರಿಂದ 10 ಪರ್ಸೆಂಟ್ ಆಮದು ಮಾಡಿಕೊಳ್ಳುತ್ತದೆ.  ಇದು ಅಂಕಿ ಅಂಶ. ಎಕ್ಸಿಟ್ ಆಗುವುದರಿಂದ ಲಾಭವೇ? ನಷ್ಟವೇ? ನೀವೇ ನಿರ್ಧರಿಸಿ...
ಇದರಿಂದ ಭಾರತದ ಮೇಲೆ ಆಗುವ ಪರಿಣಾಮ ಏನು?
ಭಾರತದ ಮೇಲೆ ಆಗುವ ತಾತ್ಕಾಲಿಕ ಪರಿಣಾಮ ‘ಪೌಂಡ್’ ಕರೆನ್ಸಿಯಲ್ಲಿ ಆಗುವ ಬದಲಾವಣೆ. ನಾವು ಬ್ರಿಟನ್ ಗೆ ರಪ್ತು ಮಾಡುವುದಕ್ಕಿಂತ ಅವರಿಂದ ಆಮದು ಮಾಡಿಕೊಳ್ಳುವುದು ಹೆಚ್ಚು. ವಿನಿಮಯ ವ್ಯತ್ಯಾಸ  ರಿಸರ್ವ್ ಫಂಡ್ಸ್ ಮತ್ತು ಟ್ರೇಡ್ ಫಂಡ್ಸ್ ಎರಡರ ಮೇಲೂ ಪರಿಣಾಮ ಬೀರಲಿದೆ.
ಕುಸಿದ ಬ್ರಿಟನ್ ನ ಹೌಸಿಂಗ್ ಸೆಕ್ಟರ್, ಹೈ ನೆಟ್ವರ್ತ್ ಭಾರತೀಯರಿಗೆ ವರದಾನವಾಗುತ್ತದೆ. ಅಲ್ಲದೆ ವಲಸೆ ನೀತಿ ಬದಲಾದರೆ, ಅಂದರೆ ಒಕ್ಕೂಟದ ನಾಗರಿಕರು ಪ್ರಪಂಚದ ಇತರ ನಾಗರೀಕರು ಒಂದೇ ಎಂದು ಭಾವಿಸಿದಲ್ಲಿ  ಹೆಲ್ತ್ ಸೆಕ್ಟರ್ ನಲ್ಲಿ ಭಾರತೀಯರು ಹೆಚ್ಚು ಕೆಲಸ ಪಡೆಯುವ ಸಾಧ್ಯತೆ ಇದೆ. ಜೊತೆಗೆ ಮೂರು ಮಿಲಿಯನ್ ಮೀರಿದ ಭಾರತೀಯ ಮೂಲದ ಬ್ರಿಟಿಷರು ಭಾರತದೊಂದಿಗೆ ಹೆಚ್ಚು ವ್ಯವಹರಿಸಲು ಉತ್ಸುಕರಾಗಿದ್ದಾರೆ.
ಕೊನೆ ಮಾತು: ಜಗತ್ತು ಆರ್ಥಿಕ ಸಂಕ್ರಮಣ ಸ್ಥಿತಿಯಲ್ಲಿದೆ ಈ ಸಮಯದಲ್ಲಿ ಬ್ರಿಟನ್ ಕುಸಿತ ಯಾವುದೇ ಕಾರಣದಿಂದ ಜಗತ್ತಿನ ಆರ್ಥಿಕತೆಗೆ ಒಳ್ಳೆಯದಲ್ಲ. ಬ್ರಿಟನ್ ಒಕ್ಕೊಟದಲ್ಲಿ ಮುಂದುವರಿದ್ದಿದರೆ ಒಳ್ಳೆಯದಿತ್ತು. ಆದರೆ ಅವರು ಹೊರಹೋಗುವ ಹಾದಿಯಲ್ಲಿ ಬಹಳ ನೆಡೆದು ಬಂದಿದ್ದಾರೆ. ಈಗ ಉಳಿದಿರುವುದು ಕಡಿಮೆ ಆರ್ಥಿಕ ಸಂಕಷ್ಟದಲ್ಲಿ ಹೊರಹೋಗುವುದು ಮಾತ್ರ. ಡೀಲ್ ಅಥವಾ ನೋ ಡೀಲ್ ತಿಳಿಯಲು ಇನ್ನು 9 ದಿನ ಕಾಯಬೇಕು. ಡೀಲ್ ಆದರೆ ಕಡಿಮೆ ನೋವು, ನೋ ಡೀಲ್ ಹೆಚ್ಚು ನೋವು. ಒಟ್ಟಿನಲ್ಲಿ ನೋವು ಮಾತ್ರ ತಪ್ಪಿದ್ದಲ್ಲ.  
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com