ಜಾಗತಿಕ ಕಚ್ಚಾ ತೈಲ ರಾಜಕೀಯದಲ್ಲಿ ಭಾರತದ ಹೊಸ ದಾಳ!

ಭಾರತ ಮಾತ್ರ ಹಿಂದೆ ಅಮೆರಿಕಾ ಹೇಗೆ ರಾಜಕೀಯ ಮಾಡುತ್ತಿತ್ತು ಅದೇ ರಸ್ತೆಯನ್ನ ಅನುಸರಿಸುತ್ತಿದೆ. ಅದೇ ಡಬಲ್ ಸ್ಟ್ಯಾಂಡರ್ಡ್!!. ಗಮನಿಸಿ ಮೋದಿಯವರು ಅಮೆರಿಕಾಗೆ ಹೋಗುತ್ತಾರೆ "ಹೌಡಿ ಮೋದಿ" ಅಂತ ಕಾರ್ಯಕ್ರಮ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್ ನ ಪರಮ ಮಿತ್ರ ಎನ್ನುವಂತೆ ಫೋಟೋ ತೆಗೆಸಿಕೊಂಡು ಬರುತ್ತಾರೆ. ಬಂದವರು ಸುಮ್ಮನಿರುವುದಿಲ್ಲ... 
ಜಾಗತಿಕ ಕಚ್ಚಾ ತೈಲ ರಾಜಕೀಯದಲ್ಲಿ ಭಾರತದ ಹೊಸ ದಾಳ!
ಜಾಗತಿಕ ಕಚ್ಚಾ ತೈಲ ರಾಜಕೀಯದಲ್ಲಿ ಭಾರತದ ಹೊಸ ದಾಳ!

ಹಣವೆನ್ನುವುದು ಗಾಳಿಯಷ್ಟೇ ಬದುಕಿಗೆ ಮುಖ್ಯವಾಗಿಹೋಗಿದೆ. ಹಣವಿಲ್ಲದೆ ಬದುಕುವುದು ಹೇಗೆ? ನಮ್ಮಇಂದಿನ ಬದುಕಿನ ಒಂದು ದಿನವೂ ಹಣವಿಲ್ಲದೆ ಕಳೆಯಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. 

ದಶಕಗಳ ಹಿಂದೆ ಯಾವುದನ್ನ ಐಷಾರಾಮ ಎಂದು ಪರಿಗಣಿಸಲಾಗಿತ್ತು ಇಂದು ಅದು ಅವಶ್ಯಕತೆಯಾಗಿ ಮಾರ್ಪಾಟಾಗಿದೆ. ಸಮಾಜ ಬದಲಾವಣೆ ಹೊಂದುತ್ತಾ ಬಂದಂತೆಲ್ಲ ಹಣದ ಮೇಲಿನ ಸಮಾಜದ ಅವಲಂಬನೆ ಬಹಳವೇ ಹೆಚ್ಚಾಗಿದೆ. ಹಿಂದೆಲ್ಲ ಬದುಕಲು ಎಷ್ಟು ಬೇಕು ಅಷ್ಟು ಸಂಪನ್ಮೂಲಗಳ ಬಳಕೆಯಾಗುತ್ತಿತ್ತು. ಇಂದು ಬದಲಾದ ಕಾಲಘಟ್ಟದಲ್ಲಿ ಬಳಕೆಗಿಂತ ಹೆಚ್ಚಿನ ವಸ್ತುಗಳನ್ನು ಪೋಲುಮಾಡುತ್ತಿದ್ದೇವೆ. ನಮ್ಮ ಬಳಿ ಹಣವಿದೆ, ನಾನು ದುಡಿದ ಅಥವಾ ಸಂಪಾದಿಸಿದ ಹಣ ಅದರಿಂದ ಏನು ಬೇಕೋ ಕೊಳ್ಳುತ್ತೇನೆ ಎನ್ನುವ ಅಹಂಭಾವ ಜನರಲ್ಲಿ ಹೆಚ್ಚಾಗಿದೆ. ಗಮನಿಸಿ ನೋಡಿ ಹಣವೆನ್ನುವುದು ವಸ್ತುವಿನ ಮೌಲ್ಯ ಅಳೆಯಲು ನಾವು ಮಾಡಿಕೊಂಡ ಒಂದು ಸಾಧನ ಅಷ್ಟೇ! ಹಣಕ್ಕೆ ಮೌಲ್ಯವಿಲ್ಲ, ಮೌಲ್ಯವಿರುವುದು ವಸ್ತುಗಳಿಗೆ, ಸಂಪನ್ಮೂಲಗಳಿಗೆ. ಉದಾಹರಣೆ ನೋಡಿ ನಾವು ನೆಲವನ್ನ ಅಳೆಯಲು ಅಳತೆ ಟೇಪು ಉಪಯೋಗಿಸುತ್ತೇವೆ  ಆದರೆ ನೆಲವನ್ನ ಅಳೆದ ಮೇಲೆ ನೆಲಕ್ಕೆ ಬೆಲೆಯೆಷ್ಟು ಎನ್ನುವುದನ್ನ ನಿರ್ಧರಿಸುತ್ತೇವೆ ಟೇಪಿಗಲ್ಲ. ಹಾಗೆಯೇ ಹಣವೆನ್ನುವುದು ಒಂದು ವಸ್ತುವನ್ನ ಕೊಳ್ಳಲು ಅಥವಾ ಮಾರಲು ಇರುವ ಒಂದು ವಿನಿಮಯ ಮಾಧ್ಯಮವಷ್ಟೇ. ಹೀಗಾಗಿ ಮನುಷ್ಯನ ಬಳಿ ಎಷ್ಟೇ ಹಣವಿರಲಿ ಸಂಪನ್ಮೂಲದ ಕೊರತೆ ಉಂಟಾದರೆ ಹಣ ತನ್ನ ಮೌಲ್ಯವನ್ನ ತಾನಾಗೇ ಕಳೆದುಕೊಳ್ಳುತ್ತದೆ. 

ಇನ್ನೊಂದು ಉದಾಹರಣೆ ನೋಡಿ, ಜಗತ್ತಿನಲ್ಲಿ 10 ಕಾಫಿ ಮಾಡುವಷ್ಟು ಸಂಪನ್ಮೂಲವಿದೆ ಎಂದುಕೊಳ್ಳಿ. ನಾವು ಸೃಷ್ಟಿಸಿದ  ಹಣ 50 ಅಥವಾ 100 ಕಾಫಿಗೆ ಬೆಲೆ ಕಟ್ಟಿ ಅದನ್ನ ಕೊಳ್ಳುವಷ್ಟು...,  ಹಣವನ್ನೇನೋ ಸೃಷ್ಟಿಸಬಹದು ಆದರೆ ನೈಸರ್ಗಿಕವಾಗಿ ಅಲ್ಲಿರುವುದು ಕೇವಲ 10 ಕಾಫಿ ಮಾಡಬಹುದಾದ ಸಂಪನ್ಮೂಲವಷ್ಟೇ!... 

ಈಗ ಹೇಳಿ ಬೆಲೆಯಿರುವುದು ಹಣಕ್ಕೋ? ಸಂಪನ್ಮೂಲಕ್ಕೋ? ಹೀಗಿದ್ದೂ ನಾವು ಸಂಪನ್ಮೂಲಕ್ಕೆ ಬೆಲೆ ಕೊಡದೆ ಹಣಕ್ಕೆ ಬೆಲೆ ಕೊಡುತ್ತಿದ್ದೇವೆ. ನಮ್ಮ ಗಮನವನ್ನ ನಾವು ಬದಲಿಸದಿದ್ದರೆ ಅದಕ್ಕೆ ತಕ್ಕ ಬೆಲೆಯನ್ನ ಕಟ್ಟಬೇಕಾಗುತ್ತದೆ. 

ಇಂತಹ ಹಣ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಇದರ ಕೆಲಸ ಒಂದೇ ಆಗಿದ್ದರೂ ಇದರ ಹೆಸರು ಮತ್ತು ಮೌಲ್ಯ ಬದಲಾಗುತ್ತಾ ಹೋಗುತ್ತದೆ. ಅಮೆರಿಕಾ ದೇಶದ ಡಾಲರ್ ಒಂದರ್ಥದಲ್ಲಿ ವಿಶ್ವದ ಹಣವಾಗಿದೆ. ಅಂದರೆ ಗಮನಿಸಿ ಭಾರತ ಇರಾನಿನಿಂದಲೋ ಅಥವಾ ಸೌದಿಯಿಂದಲೋ ಅಥವಾ ರಷ್ಯಾದಿಂದ ತೈಲವನ್ನ ಆಮದು ಮಾಡಿಕೊಂಡರೆ ಅದಕ್ಕೆ ಪ್ರತಿಯಾಗಿ ಹಣ ಸಂದಾಯವಾಗುವುದು ಅಮೆರಿಕನ್ ಡಾಲರ್ ನಲ್ಲಿ. ಇದು ವಿಶ್ವದ ವಿಶ್ವಾಸ ಗಳಿಸಿದ ಹಣವಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ 1.48 ಟ್ರಿಲಿಯನ್ ಮೌಲ್ಯದ ಅಮೆರಿಕನ್ ಡಾಲರ್ ಚಲಾವಣೆಯಲ್ಲಿದೆ. ಅದರಲ್ಲಿ 40 ಪ್ರತಿಶತ ಮಾತ್ರ ಅಮೇರಿಕಾ ದೇಶದಲ್ಲಿ ಚಲಾವಣೆಯಲ್ಲಿದೆ. ಉಳಿದ 60 ಪ್ರತಿಶತ ಡಾಲರ್ ಬೇರೆ ದೇಶಗಳು ವಿದೇಶಿ ವಿನಿಮಯದ ಹೆಸರಿನಲ್ಲಿ ಹೊಂದಿವೆ ಎಂದರೆ ಡಾಲರ್ ನ ಪಾರುಪತ್ಯದ ಅರಿವಾದೀತು. ಹೀಗೆ ಸಂಪನ್ಮೂಲವನ್ನು ಹಣದ ಮೂಲಕ ನಿಯಂತ್ರಣ ಮಾಡಬಹುದಾದ ಒಂದು ಉದಾಹರಣೆ ನಮ್ಮ ಮುಂದಿದೆ. ಅದೇನು...? ನೋಡೋಣ ಬನ್ನಿ...

ವೆನಿಜುಯೆಲಾದ ಅಧ್ಯಕ್ಷ ನಿಕೋಲಸ್ ಮದುರೋ 2018ರಲ್ಲಿ ಮರು ಆಯ್ಕೆಯಾಗುತ್ತಾರೆ. ಈತನ ಆಯ್ಕೆಯನ್ನ ಅಮೇರಿಕಾ ಒಪ್ಪಿಲ್ಲ. ಆತ ಮೋಸದಿಂದ ಗೆದ್ದಿದ್ದಾನೆ ಎನ್ನುವುದು ವಾಷಿಂಗ್ಟನ್ ನ ವಾದ. ಹೀಗಾಗಿ ವೆನಿಜುಯೆಲಾದಿಂದ ಯಾರೇ ತೈಲವನ್ನ ಕೊಂಡರೂ ಅದರ ಪಾವತಿಗೆ ಅಮೆರಿಕನ್ ಡಾಲರ್ ಅನ್ನು ಬಳಸುವಂತಿಲ್ಲ ಎನ್ನುವ ಒಂದು ನಿರ್ಬಂಧ  ಹಾಕಲಾಗಿದೆ. ಈ ಹೊಸ ನಿಬಂಧನೆ ವೆನಿಜುಯೆಲಾ ದೇಶದ ಮೇಲೆ ಮತ್ತಷ್ಟು ಘೋರ ಪರಿಣಾಮ ಬೀರಲು ಶುರುವಾಗಿದೆ. ಕಳೆದ ಒಂದು ದಶಕದಲ್ಲಿ ಅತ್ಯಂತ ಕಡಿಮೆ ತೈಲ ಉತ್ಪಾದನೆಯನ್ನ ಆ ದೇಶ ಮಾಡಿದೆ. 2019ರ ಸೆಪ್ಟೆಂಬರ್ ತಿಂಗಳಲ್ಲಿ ನಿತ್ಯ ಅದು ಉತ್ಪಾದಿಸುತಿದ್ದ ಕಚ್ಚಾ ತೈಲದಲ್ಲಿ 32 ಪ್ರತಿಶತ ಉತ್ಪಾದನೆ ಕಡಿತವಾಗಿದೆ ಎಂದರೆ ಅದೆಷ್ಟು ದೊಡ್ಡ ಸಮಸ್ಯೆಯಲ್ಲಿ ಸಿಲುಕಿರಬಹದು ಎನ್ನುವ ಅಂದಾಜು ನಿಮ್ಮದಾಗಬಹದು. 

ವಿಶ್ವದ ದೊಡ್ಡಣ್ಣನ ಸ್ಥಾನಕ್ಕೆ ಅಮೆರಿಕಾದೊಂದಿಗೆ ಪೈಪೋಟಿ ನಡೆಸುತ್ತಾ ಬಂದಿದ್ದ ಚೀನಾ ಅಮೆರಿಕಾದ ಈ ನಿಬಂಧನೆಯನ್ನ ಒಪ್ಪಿಕೊಂಡಿದೆ. ಚೀನಾದ ಚೀನಾ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೋರೇಶನ್ ವೆನಿಜುಯೆಲಾದಿಂದ ತೈಲವನ್ನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಅಮೆರಿಕಾ ಇಲ್ಲಿ ಮುಖ್ಯವಾಗಿ ಎರಡು ಕಾರಣಕ್ಕೆ ಇಂತಹ ನಿಬಂಧನೆಯನ್ನ ಹಾಕಿದೆ. ಮೊದಲನೆಯದಾಗಿ ನಿಕೋಲಸ್ ಮದುರೋಗೆ ಹಣದ ಹರಿವನ್ನ ತಡೆಯುವುದು. ಆ ಮೂಲಕ ಆತನನ್ನ ಪದಚ್ಯುತಗೊಳಿಸಿವುದು ಮತ್ತು ತನಗೆ ಆಪ್ತರಾದವರನ್ನ ಆ ಜಗದಲ್ಲಿ ಕೂರಿಸುವುದು. ಎರಡನೆಯದಾಗಿ ವೆನಿಜುಯೆಲಾ ತೈಲ ಉತ್ಪಾದನೆಯನ್ನ ಕಡಿಮೆ ಮಾಡಿದರೆ ಜಗತ್ತಿನಲ್ಲಿ ಸಿಗುವ ತೈಲ ಕಡಿಮೆಯಾಗುತ್ತದೆ. ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆಯಾಗುತ್ತದೆ. ಆಗ ಬೆಲೆ ಹೆಚ್ಚಾಗುತ್ತದೆ. ತೈಲ ಬೆಲೆ ಅಳೆಯುವುದು  ಡಾಲರಿನಲ್ಲಿ ಹೀಗಾಗಿ ತೈಲ ಬೆಲೆ ಹೆಚ್ಚಿದಷ್ಟು ಅಮೆರಿಕಾಗೆ ಲಾಭ. ವಿಶ್ವದಲ್ಲಿ ಅಮೆರಿಕನ್ ಡಾಲರ್ ಮಾತ್ರ ಏಕೆ ಅಧಿಪತ್ಯ ನಡೆಸಬೇಕು ಎಂದು ತನ್ನ ಕರೆನ್ಸಿಯನ್ನ ಕೂಡ ವಿಶ್ವದ ಕರೆನ್ಸಿ ಮಾಡಬೇಕೆನ್ನುವ ಕೆಚ್ಚಿನಿಂದ ಹೋರಾಟ ಮಾಡುತ್ತಿದ್ದ ಚೀನಾ ಯಾವುದೇ ಪ್ರತಿರೋಧ ತೋರದೆ ವೆನಿಜುಯೆಲಾದಿಂದ ಖರೀದಿ ನಿಲ್ಲಿಸಿರುವುದು ಮಾತ್ರ ಅಚ್ಚರಿಯ ವಿಷಯ!. 

ಭಾರತ ಮಾತ್ರ ಹಿಂದೆ ಅಮೆರಿಕಾ ಹೇಗೆ ರಾಜಕೀಯ ಮಾಡುತ್ತಿತ್ತು ಅದೇ ರಸ್ತೆಯನ್ನ ಅನುಸರಿಸುತ್ತಿದೆ. ಅದೇ ಡಬಲ್ ಸ್ಟ್ಯಾಂಡರ್ಡ್!!. ಗಮನಿಸಿ ಮೋದಿಯವರು ಅಮೆರಿಕಾಗೆ ಹೋಗುತ್ತಾರೆ "ಹೌಡಿ ಮೋದಿ" ಅಂತ ಕಾರ್ಯಕ್ರಮ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್ ನ ಪರಮ ಮಿತ್ರ ಎನ್ನುವಂತೆ ಫೋಟೋ ತೆಗೆಸಿಕೊಂಡು ಬರುತ್ತಾರೆ. ಬಂದವರು ಸುಮ್ಮನಿರುವುದಿಲ್ಲ ಚೀನಾದ ದೇಶದ ಅಧ್ಯಕ್ಷರನ್ನ ಮಹಾಬಲಿಪುರಂಗೆ ಕರೆಸಿಕೊಳ್ಳುತ್ತಾರೆ. ಅವರೊಂದಿಗೂ ಅತ್ಯಂತ ಆಪ್ತತೆಯಲ್ಲಿ ಸಂವಾದ ನಡೆಯುತ್ತದೆ. ಗಮನಿಸಿ ಅರಬ್ ದೇಶಗಳಿರಬಹದು, ಯೂರೋಪಿಯನ್ ಯೂನಿಯನ್ ಇರಬಹದು, ಅಮೇರಿಕಾ, ರಷ್ಯಾ ಗಳಿರಬಹದು ಅಥವಾ ಜಗತ್ತಿನ ಯಾವುದೇ ರಾಷ್ಟ್ರಗಳಿರಬಹದು. ಭಾರತ ಇಂದು ಹಿಂದೆಂಗಿಂತಲೂ ಹೆಚ್ಚು ಅವೆಲ್ಲವುಗಳಿಂದ ಮನ್ನಣೆ ಪಡೆದಿದೆ . 

ಡೊನಾಲ್ಡ್ ಟ್ರಂಪ್ ಕೈಕುಲುಕಿದ್ದೇನೆ ಎಂದು ಭಾರತ ವೆನಿಜುಯೆಲಾದ ತೈಲವನ್ನ ಖರೀದಿಸುವುದು ನಿಲ್ಲಿಸಿಲ್ಲ ಎಂದರೆ ಅಚ್ಚರಿ ಅನ್ನಿಸಬಹದು. ಗಮನಿಸಿ ರಷ್ಯಾದ ರೋಸ್ನೆಫ್ಟ್ ಎನ್ನುವ ಸಂಸ್ಥೆ ವೆನಿಜುಯೆಲಾಗೆ ಸಾಕಷ್ಟು ಸಾಲವನ್ನ ನೀಡಿತ್ತು. ಈ ಸಾಲವನ್ನ ಮರಳಿ ಕೊಡಲು ವೆನಿಜುಯೆಲಾದ ಬಳಿ ಹಣವಿಲ್ಲ. ಸಾಲವನ್ನ ತೀರಿಸಲು ಅವರು ಕಚ್ಚಾ ತೈಲವನ್ನ ಈ ಸಂಸ್ಥೆಗೆ ನೀಡುತ್ತಿದ್ದಾರೆ. ರಷ್ಯಾ ದೇಶ ಹೀಗೆ ಹಣ ಸಂದಾಯ ಮಾಡದೆ ತೈಲವನ್ನ ಪಡೆಯುತ್ತಿದೆ. ಇದೇನೋ ತೈಲ ಪಡೆಯಿತು ಆದರೆ ಅದನ್ನ ಮಾರುವುದು ಹೇಗೆ? ಅಮೇರಿಕಾ ವೆನಿಜುಯೆಲಾದ ತೈಲ ಕೊಳ್ಳುವ ಹಾಗಿಲ್ಲ ಎಂದು ಫರ್ಮಾನು ಹೊರಡಿಸಿದೆ. ಭಾರತದ ನಯಾರಾ ಎನರ್ಜಿ ಎನ್ನುವ ಸಂಸ್ಥೆ ರಷ್ಯಾದ ರೋಸ್ನೆಫ್ಟ್ ಸಂಸ್ಥೆಯಿಂದ ಜುಲೈ ಮತ್ತು ಆಗಸ್ಟ್ 2019ರಲ್ಲಿ ಸಾಮಾನ್ಯವಾಗಿ ಆಮದು ಮಾಡಿಕೊಳ್ಳುತಿದ್ದ ಕಚ್ಚಾ ತೈಲಕ್ಕಿಂತ ಎರಡು ಪಟ್ಟು ಹೆಚ್ಚು ತೈಲವನ್ನ ಆಮದು ಮಾಡಿಕೊಂಡಿದೆ. ರಿಲಾಯನ್ಸ್ ಸಂಸ್ಥೆ ಕೂಡ ಇದೇ ತಿಂಗಳುಗಳಲ್ಲಿ ತನ್ನ ಕಚ್ಚಾ ತೈಲ ಅಮದನ್ನ 18 ಪ್ರತಿಶತ ಹೆಚ್ಚಿಸಿಕೊಂಡಿದೆ. ಇದು ಹೇಗೆ ಸಾಧ್ಯವಾಯ್ತು? ಚೀನಾದಂತಹ ದೈತ್ಯ ದೇಶವೇ ವೆನಿಜುಯೆಲಾದ ತೈಲವನ್ನ ಆಮದು ಮಾಡಿಕೊಳ್ಳುವುದು ನಿಲ್ಲಿಸಿರುವಾಗ, ಭಾರತ ಅಮದನ್ನ ದುಪಟ್ಟು ಮಾಡಿಕೊಳ್ಳುತ್ತಿದೆ? 

ದೂರದೃಷ್ಟಿ ಇರುವರು, ಉತ್ತಮ ಮುತ್ಸದಿ ದೇಶದ ನಾಯಕರಾಗಿದ್ದರೆ ಇದೆಲ್ಲ ಸಾಧ್ಯ! ಗಮನಿಸಿ ರೋಸ್ನೆಫ್ಟ್ ಮಾಲೀಕತ್ವ ಇರುವ ಒಕ್ಕೂಟ ನಮ್ಮ ನಯಾರಾ ಎನರ್ಜಿ ಯಲ್ಲಿ ಕೂಡ ಒಂದಷ್ಟು ಪಾಲುದಾರಿಕೆ ಹೊಂದಿದೆ. ಹೀಗಾಗಿ ರೋಸ್ನೆಫ್ಟ್ ನ ವೆನಿಜುಯೆಲಾದ ಕಚ್ಚಾ ತೈಲ ಭಾರತಕ್ಕೆ ಸರಾಗವಾಗಿ ಬರುತ್ತದೆ. ಅದನ್ನ ಶೋಧಿಸುವ ಕಾರ್ಯ ಕೂಡ ಆಗುತ್ತದೆ. ಕಚ್ಚಾ ತೈಲದಿಂದ ಉತ್ಪನ್ನವಾದ ಗ್ಯಾಸೋಲಿನ್ ಮತ್ತು ಗ್ಯಾಸ್ ಆಯಿಲ್ ಮರಳಿ ರಷ್ಯಾಗೆ ಕಳಿಸಲಾಗುತ್ತದೆ. ಇತರ ಪೆಟ್ರೋಲಿಯಂ ಪದಾರ್ಥಗಳು ಭಾರತದಲ್ಲಿ ಬಳಸಲ್ಪಡುತ್ತದೆ. ಹೀಗೆ ಹಾವು ಸಾಯಬಾರದು ಕೊಲು ಮುರಿಯಬಾರದು ಎನ್ನುವ ಪ್ರಹಸನ ಚೆನ್ನಾಗಿ ನಡೆಯುತ್ತಿದೆ. 

ಇದೆಲ್ಲ ಅಮೆರಿಕಾಗೆ ಗೊತ್ತಿಲ್ಲವೇ? ಗೊತ್ತು! ಚೆನ್ನಾಗಿಯೇ ಗೊತ್ತು. ಆದರೆ ಅದು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ...! ಇವೆರೆಡು ಕೊಡು-ಕೊಳ್ಳುವಿಕೆಯಲ್ಲಿ ಅಮೆರಿಕನ್ ಡಾಲರ್ ವಿನಿಮಯವಾಗಿಲ್ಲ ಹಾಗಾಗಿ ಇದು ಅಮೆರಿಕಾ ಹಾಕಿರುವ ನಿರ್ಬಂಧದ ಉಲ್ಲಂಘನೆಯಾಗುವುದಿಲ್ಲ ಎಂದು ಸ್ವತಃ ಅಮೇರಿಕಾ ಹೇಳಿಕೆ ಕೊಟ್ಟಿದೆ. ಭಾರತ ಅಂತಾರಾಷ್ಟ್ರಿಯ ಮಟ್ಟದಲ್ಲಿ ತನ್ನ ಹಿಡಿತವನ್ನ ಪ್ರಬಲವಾಗಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. 

ಕೊನೆ ಮಾತು: 1971ರಲ್ಲಿ ಹಣ ಮುದ್ರಿಸಲು ಚಿನ್ನದ ಅವಶ್ಯಕತೆ ಇಲ್ಲ ಎಂದು ಅಂದಿನ ಅಮೇರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಗೋಲ್ಡ್ ಬ್ಯಾಕ್ ಅಪ್ ಅನ್ನು ತೆಗೆದು ಹಾಕುತ್ತಾರೆ. ಹೀಗಾಗಿ ಇಂದಿನ ಹಣ ಕೇವಲ ನಂಬಿಕೆ ಆಧಾರದಲ್ಲಿ ನಡೆಯುತ್ತಿರುವ ವಿನಿಮಯ ಮಾಧ್ಯಮವಾಗಿದೆ. ಮನುಷ್ಯ ತನ್ನ ಒಳಿತಿಗೆ ಮತ್ತು ಅಭಿವೃದ್ಧಿಗೆ ಸದಾ ತನಗೆ ಬೇಕಾದ ಬದಲಾವಣೆ ಮಾಡಿಕೊಂಡು ಬರುತ್ತಲೆ ಇದ್ದಾನೆ. ಯಾವುದೇ ಒಂದು ದೇಶದ ಹಣವನ್ನ ವಿಶ್ವದ ಹಣ ಎಂದು ಒಪ್ಪುವುದು ಒಳ್ಳೆಯದಲ್ಲ. ಏಕೆಂದರೆ ಆ ದೇಶ ತನ್ನ ಲಾಭಕ್ಕೆ ಅದನ್ನ ಬೇಕಾದ ಹಾಗೆ ಬಳಸಿಕೊಳ್ಳುತ್ತದೆ. ಮುಂಬರುವ ದಿನಗಳಲ್ಲಿ ಇದಕ್ಕೂ ಒಂದು ಪರ್ಯಾಯ ಹುಡುಕಬೇಕಾಗಿದೆ. ಮೌಲ್ಯವಿರುವುದು ವಸ್ತುಗಳಿಗೆ, ಸಂಪನ್ಮೂಲಗಳಿಗೆ ಇದನ್ನ ಎಷ್ಟು ಬೇಗ ಅರಿತುಕೊಳ್ಳುತ್ತೇವೆ ಅಷ್ಟು ನಮಗೆ ಒಳ್ಳೆಯದು.

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com