ಬಾಲ್ಯದಲ್ಲೇ ಹಾಕಬೇಕಿದೆ ಆರ್ಥಿಕ ಸಾಕ್ಷರತೆಯ ಬುನಾದಿ! 

ಹಣಕಾಸು ವಿಷಯದಲ್ಲೂ ಮಕ್ಕಳು ಅಪ್ಪ ಅಮ್ಮನನ್ನ ನಕಲು ಮಾಡುತ್ತವೆ. ಐದು ವರ್ಷ ತುಂಬುವ ಹೊತ್ತಿಗೆ ಮಕ್ಕಳಲ್ಲಿ ಹಣವನ್ನ ಕುರಿತು ಒಂದು ವಿಚಿತ್ರ ಸೆಳೆತ ಉಂಟಾಗುತ್ತದೆ ಎನ್ನುತ್ತದೆ ಒಂದು ಸಂಶೋಧನೆ.

Published: 26th September 2019 12:42 AM  |   Last Updated: 03rd October 2019 04:34 PM   |  A+A-


Hanaclasu: Simple ways to teach children's Economics: here are tips

ಬಾಲ್ಯದಲ್ಲೇ ಹಾಕಬೇಕಿದೆ ಆರ್ಥಿಕ ಸಾಕ್ಷರತೆಯ ಬುನಾದಿ!

Posted By : Srinivas Rao BV
Source : Online Desk

ನಾವು ಚಿಕ್ಕಂದಿನಿಂದ ಕೇಳುತ್ತಾ ಬಂದಿರುವ ಮಾತೇನು? ಭಾಷೆ ಯಾವುದೇ ಇರಲಿ ಬಾಲ್ಯದಲ್ಲಿ ಅದನ್ನ ಕಲಿಯುವುದು ಸುಲಭ ಎನ್ನುವ ಮಾತು ಅಲ್ಲವೇ? ಕೇವಲ ಭಾಷೆ ಒಂದೇ ಅಲ್ಲ ಯಾವುದೇ ಹೊಸ ವಿಷಯವಿರಲಿ ಬಾಲ್ಯದಲ್ಲಿ ಅದನ್ನ ಕಲಿಯುವುದು ಸುಲಭವಷ್ಟೇ ಅಲ್ಲ ಬಹಳ ವೇಗವಾಗಿ ಕೂಡ ಕಲಿಯುತ್ತಾರೆ. ಮಕ್ಕಳಲ್ಲಿ ಸೋಲುವ ಭಯ ಇಲ್ಲದೆ ಇರುವುದು ಮತ್ತು ಸಹಜವಾಗೇ ಜಗತ್ತಿನ ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದಕ್ಕೆ ಪ್ರಮುಖ ಕಾರಣ. ಮಕ್ಕಳು 12 ಅಥವಾ 13 ದಾಟುವ ಮೊದಲು ಅವರಿಗೆ ಮುಕ್ತ ವಾತಾವರಣ ಕಲ್ಪಿಸಿ ಅವರ ಮನಸ್ಸಿಗೆ ಬಂದದ್ದನ್ನು ಪ್ರಯತ್ನಿಸಲು ಬಿಡಬೇಕು ಆದರೆ ಪೋಷಕರಾಗಿ ಜಗತ್ತಿನ ಮುಕ್ಕಾಲು ಪಾಲು ಜನ ಮಾಡುವುದೇನು ಗೊತ್ತೇ? ಬೇಡ, ಇಲ್ಲ, ಸಾಕು, ಹುಷಾರು, ನಿನಗೆ ತಿಳಿಯೋಲ್ಲ ಎನ್ನುವಂತ ನಕಾರಾತ್ಮಕ ಪದಗಳನ್ನ ಬಳಸುವುದು. 

90 ಕೆ.ಜಿ ತೂಗುವ ಅಪ್ಪ ಓಡಲಾರ ಅದೇ ಆತನ 6ವರ್ಷದ ಕೂಸು ಓಡಬಲ್ಲದು, ಹಿತ್ತಲ ಗೋಡೆ ಹಾರಬಲ್ಲದು, ಸಜ್ಜದಿಂದ ನೆಲಕ್ಕೆ ಧುಮುಕಬಲ್ಲದು. ಉಹೂ ಆದರೆ ಅದಕ್ಕೆ ಅಪ್ಪ ಬಿಡುವುದಿಲ್ಲ. ಹುಷಾರು ಬಿದ್ದೀಯ ಎನ್ನುವುದು ಅವನ ಬಾಯಿಂದ ತಕ್ಷಣ ಬರುವ ಪ್ರತಿಕ್ರಿಯೆ. ಮಗು ಸಜ್ಜದಿಂದ ಜಿಗಿಯುವಾಗಂತೂ ಆತನ ಅಥವಾ ಆಕೆಯ ಹೃದಯ ಬಾಯಿಗೆ ಬಂದಿರುತ್ತೆ. ಇವೆಲ್ಲ ಯಾಕಾಗುತ್ತೆ ಗೊತ್ತಾ? ಮಕ್ಕಳಂತೆ ಹಾರಲು ಕುಣಿಯಲು ವಯಸ್ಕರ ದೇಹ ಅಡ್ಡಿ ಮಾಡುತ್ತದೆ. ಅವರಲ್ಲಿರುವ 'ಸಾಧ್ಯವಿಲ್ಲ' ಎನ್ನುವ ಮನೋಭಾವವನ್ನ ತಮಗೆ ಅರಿವಿಲ್ಲದೆ ತಮ್ಮ ಮಕ್ಕಳ ಮೇಲೆ ಹೇರುತ್ತಾರೆ. 

ಗಮನಿಸಿ ಮನುಷ್ಯನ ಚರಿತ್ರೆಯನ್ನ ಓದಿಕೊಂಡು ಬನ್ನಿ. ಆತ ಮಾತು, ಭಾಷೆ, ಆಹಾರ ಒಟ್ಟಿನಲ್ಲಿ ಪೂರ್ಣ ನಡವಳಿಕೆಯನ್ನ ಬೇರೆಯವರು ಮಾಡುವುದನ್ನ ನೋಡಿ ನಕಲು ಮಾಡಿ ಕಲಿತದ್ದು. ಇಂದಿಗೂ ಮಕ್ಕಳನ್ನು ಒಂದಷ್ಟು ಗಮನವಿಟ್ಟು ನೋಡಿ ತಮ್ಮ ಸುತ್ತ ಇರುವ ಡಾಮಿನೆಂಟ್ ವ್ಯಕ್ತಿಯನ್ನ ಆ ಮಗು ನಕಲು ಮಾಡುತ್ತಿರುತ್ತದೆ. ಮಾತಾಡುವ ಶೈಲಿಯಿಂದ ಹಿಡಿದು ಎಲ್ಲವೂ... 

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಹಣಕಾಸು ವಿಷಯದಲ್ಲೂ ಅಷ್ಟೇ ಮಕ್ಕಳು ಅಪ್ಪ ಅಮ್ಮನನ್ನ ನಕಲು ಮಾಡುತ್ತವೆ. 5 ವರ್ಷ ತುಂಬುವ ಹೊತ್ತಿಗೆ ಮಕ್ಕಳಲ್ಲಿ ಹಣದ ಕುರಿತು ಒಂದು ವಿಚಿತ್ರ ಸೆಳೆತ ಉಂಟಾಗುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಇದು ಯಾಕಾಗ್ತಾ ಇತ್ತು ಅಂದರೆ ಹಿಂದೆಲ್ಲ ಎಲ್ಲಾ ವ್ಯವಹಾರವೂ ನಗದಿನ ಮೂಲಕ ನಡೆಯುತ್ತಿತ್ತು. ಅರರೆ ಇದೇನಿದು ಒಂದು ಪೇಪರ್ ತುಂಡು ಕೊಟ್ಟರೆ ಅಂಗಡಿಯವನು ಕೇಳಿದ್ದೆಲ್ಲಾ ಕೊಡುತ್ತಾನಲ್ಲ ಎನ್ನುವ ಸಹಜ ಕುತೂಹಲ. ಇಂದು ಭಾರತದಲ್ಲಿ ಇನ್ನೂ ನಗದು ನಡೆಯುತ್ತಿದೆ. ಆದರೆ ಬಹಳಷ್ಟು ಪಾಶ್ಚಾತ್ಯ ದೇಶಗಳಲ್ಲಿ ಎಲ್ಲವೂ ಡಿಜಿಟಲ್. ಹೀಗಾಗಿ ಮಗುವಿನ ಹಣದ ಕಲ್ಪನೆ ಬೇರೆ. ಅದೇನಿದ್ದರೂ ಪ್ಲಾಸ್ಟಿಕ್ ಕಾರ್ಡ್ ಉಜ್ಜುವುದಕ್ಕಷ್ಟೇ ಸೀಮಿತ. 

ಅಪ್ಪ ಅಮ್ಮನ ನೋಡಿಕೊಂಡು ಬೆಳೆಯುವ ಮಕ್ಕಳು ಅಪ್ಪ ಅಮ್ಮನ ಹಣಕಾಸು ಪರಿಪಾಠವನ್ನ ಕೂಡ ಅಳವಡಿಸಿಕೊಳ್ಳುತ್ತಾರೆ. ಕೆಲವರು ಉಳಿಕೆಗೆ ಮಹತ್ವ ಕೊಟ್ಟರೆ ಇನ್ನು ಕೆಲವರು ದುಡಿದದ್ದೆಲ್ಲ ಖರ್ಚು ಮಾಡುವುದರಲ್ಲಿ ಖುಷಿಯ ಕಾಣುತ್ತಾರೆ. ಮಕ್ಕಳಿಗೂ ಇದು ವರ್ಗಾವಣೆಯಾಗುತ್ತದೆ. 

ಅಮೆರಿಕಾದ ಇಲಿನಾಯ್ಸ್ ಯೂನಿವರ್ಸಿಟಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಅಲ್ಲಿನ 36 ಪ್ರತಿಶತ ಯುವ ಜನತೆ ಫೈನಾನ್ಸಿಯಲ್ ರಿಸ್ಕ್ ನಲ್ಲಿದ್ದಾರೆ. ಅಂದರೆ ನೂರಕ್ಕೆ 36 ಜನರಿಗೆ ಹಣವನ್ನ ಹೇಗೆ ಗಳಿಸಬೇಕು ಅದನ್ನ ದುಡಿಸಿಕೊಳ್ಳಬೇಕು ಎನ್ನುವ ಮತ್ತು ಹಣದುಬ್ಬರ, ಬಡ್ಡಿ, ಬಡ್ಡಿ ದರ, ಬ್ಯಾಂಕಿಂಗ್ ವ್ಯವಹಾರ ಹೇಗೆ ನಡೆಯುತ್ತದೆ ಎನ್ನುವ ಮೂಲಭೂತ ವಿಷಯ ಕೂಡ ಗೊತ್ತಿಲ್ಲ ಎನ್ನುತ್ತದೆ ಅಧ್ಯಯನ. ಇವರ ಹತ್ತಿರ ಸೇವಿಂಗ್ ಅಕೌಂಟ್, ಸೇವಿಂಗ್ ಅನ್ನುವ ಮಾತು ಕೂಡ ಇಲ್ಲ. ಗಮನಿಸಿ ಈ 36 ಪ್ರತಿಶತ ಯುವ ಜನತೆ 18 ದಾಟಿದವರು. ಸ್ವಂತಂತ್ರವಾಗಿ ಬದುಕಲು ಶುರು ಮಾಡಿದವರು. ಅವರಿಗೆ ಅಚಾನಕ್ಕಾಗಿ ಹೆಚ್ಚಿನ ಹಣ ಬೇಕಾದರೆ ಅದನ್ನ ಹೊಂದಿಸಲು ಸಾಧ್ಯವಾಗದವರು ಎಂದರೆ ಅವರಲ್ಲಿನ ಫೈನಾನ್ಸಿಯಲ್ ಅನಕ್ಷರತೆ, ಹಣಕಾಸು ಅಜ್ಞಾನ ಎಷ್ಟಿರಬಹದು ಎನ್ನುವುದರ ಅಂದಾಜು ನಿಮ್ಮದಾಗುತ್ತದೆ. 

ಸರಿ 36 ಪ್ರತಿಶತ ಇಂತವರಿದ್ದಾರೆ ಉಳಿದವರು ಪರವಾಗಿಲ್ಲ ಎಂದು ನೆಮ್ಮದಿಯಾಗಿರುವಂತಿಲ್ಲ. ಏಕೆಂದರೆ ಉಳಿದವರ ಪಾಡು ಕೂಡ ಅಷ್ಟಕ್ಕಷ್ಟೇ. ಒಟ್ಟು ಯುವಜನತೆಯ 22 ಪ್ರತಿಶತ ಮಾತ್ರ ಪರವಾಗಿಲ್ಲ ಎನ್ನುವ ಜ್ಞಾನ ಹೊಂದಿದ್ದಾರೆ. ಉಳಿದ 78 ಪ್ರತಿಶತ ಅಜ್ಞಾದದಲ್ಲಿ ಬಾಳುತ್ತಿದ್ದಾರೆ. ಅದರಲ್ಲೂ 36 ಪ್ರತಿಶತ ಅಪಾಯದ ಅಂಚಿನಲ್ಲಿದ್ದಾರೆ. 

ಇದು ಇಲಿನಾಯ್ಸ್ ಅಥವಾ ಅಮೆರಿಕಾದ ಕಥೆ ಎಂದು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ. ಇದು ಜಗತ್ತಿನ ಕಥೆ. ಮನೆ ಮನೆಯ ಕಥೆ. ಪೋಷಕರಾದವರು ಮಕ್ಕಳಿಗೆ ಹಣಕಾಸು ಜ್ಞಾನ ನೀಡಬೇಕು. ಅದಕ್ಕೆ ಮೊದಲು ಅವರು ತಮ್ಮ ಹಣಕಾಸು ಅಜ್ಞಾನವನ್ನ ತಿದ್ದಿಕೊಳ್ಳಬೇಕು. ಇಂದೇನಾಗಿದೆ ಜಗತ್ತಿನ 90 ಪ್ರತಿಶತ ಜನ ದುಡಿಯಬೇಕು ಅದಕ್ಕೆ ಒಂದಷ್ಟು ಹಣ ಕೊಡುತ್ತಾರೆ. ಆ ಹಣವನ್ನ ಮರು ಬಳಸಿ ಬೇಕಾದ್ದನ್ನು ಕೊಳ್ಳುವುದು, ಉಪಯೋಗಿಸುವುದು ಬದುಕುವುದು ಇದನ್ನ ಜೀವನ ಎಂದುಕೊಂಡಿದ್ದಾರೆ. ಹಣಕಾಸು ನಿಯಮಗಳು ಬದುಕಿಗೆ ಅತ್ಯಂತ ಅವಶ್ಯಕ. ನಿಯಮ ತಿಳಿಯದೆ ಆಟವನ್ನ ಗೆಲ್ಲುವುದು ಸಾಧ್ಯವಿಲ್ಲ ಅಲ್ಲವೇ?. ಇರಲಿ... 

ಪೋಷಕರು ತಮ್ಮ ಮಕ್ಕಳ ಹಣಕಾಸು ಜ್ಞಾನ ಬೆಳೆಸಲು ಕೆಳಗಿನ ಕೆಲವೊಂದು ಅಂಶಗಳನ್ನ ಅಳವಡಿಸಿಕೊಂಡರೆ ಮುಂದೆ ಅವರ ಬದುಕು ಹಸನಾಗುತ್ತದೆ. 

  1. ಎಲ್ಲಕ್ಕೂ ಮೊದಲು ಮಕ್ಕಳಿಗೆ ಹಣಕಾಸು ಪಾಠ ಬೇಗ ಶುರು ಮಾಡಿ: ಬೇಗ ಎಂದರೆ ಯಾವಾಗ ಎನ್ನುವ ಪ್ರಶ್ನೆ ಬರುತ್ತದೆ. ಮೊದಲೇ ಹೇಳಿದಂತೆ 3 ವರ್ಷದಿಂದ ಮಕ್ಕಳ ಬಳಿ ಹಣವನ್ನ ಕುರಿತು ಮಾತಾಡಬಹದು. ಐದಕ್ಕೆ ಅವಕ್ಕೆ ಹಣವನ್ನ ಕುರಿತು ಒಂದಷ್ಟು ಆಕರ್ಷಣೆ ಉಂಟಾಗುತ್ತದೆ. ಅದು ಸರಿಯಾದ ಸಮಯ. ಮೂಲಭೂತ ಮಾಹಿತಿಯಾದ ಹಣವೆಂದರೇನು? ಬದುಕಿನಲ್ಲಿ ಅದರ ಪಾತ್ರವೇನು? ಬಡ್ಡಿ ಎಂದರೇನು? ವೇಳೆಯ ಜೊತೆಗೆ ಹಣದ ಉಳಿಕೆ ಹೇಗೆ ದುಪಟ್ಟಾಗುತ್ತದೆ? ಹಾಗೆಯೇ ಸಾಲ ಎಂದರೇನು? ಸಾಲ ಕೂಡ ವೇಳೆಯ ಜೊತೆಗೆ ಹೇಗೆ ಕುತ್ತಿಗೆಗೆ ಉರುಳಾಗಿ ಪರಿವರ್ತನೆಗೊಳ್ಳಬಹದು? ಇತ್ಯಾದಿ ಮಾಹಿತಿಯನ್ನ ಹಂಚಿಕೊಳ್ಳಬೇಕು. ಇದಕ್ಕೆ ಮೊದಲು ಅಪ್ಪ ಅಮ್ಮ ಈ ವಿಷಯಗಳ ಕುರಿತು ಒಂದಷ್ಟು ತಿಳಿದುಕೊಂಡಿರುವುದು ಒಳ್ಳೆಯದು. ನಿಮಗೆ ಗೊತ್ತೇ ಜಗತ್ತಿನ ಒಟ್ಟು ಮಕ್ಕಳಲ್ಲಿ ಕೇವಲ 4 ಪ್ರತಿಶತ ಮಕ್ಕಳಿಗೆ ಐದನೇ ವಯಸ್ಸಿನಲ್ಲಿ ಹಣಕಾಸು ಶಿಕ್ಷಣ ಸಿಗುತ್ತಿದೆ. ಉಳಿದ 96 ಪ್ರತಿಶತ ಮಕ್ಕಳು? ನಮ್ಮ ಜಗತ್ತಿನಲ್ಲಿ ಎಷ್ಟು ದೊಡ್ಡ ಮಟ್ಟದ ಹಣಕಾಸು ಅನಕ್ಷರತೆ ಇದೆ ಎನ್ನುವುದರ ಅರಿವಾಯಿತಲ್ಲವೇ? 
  2. ಮಕ್ಕಳೊಂದಿಗೆ ಸಂವಹನ ಅತಿ ಮುಖ್ಯ: ಮಕ್ಕಳನ್ನ ಮನೆಯ ತಿಂಗಳ ಬಜೆಟ್ ಮಾಡುವಾಗ ಕೂರಿಸಿಕೊಳ್ಳಬೇಕು. ಪೋಷಕರಿಬ್ಬರು ದುಡಿಯುತ್ತಿದ್ದರೆ ಇಬ್ಬರ ಒಟ್ಟು ಮಾಸಿಕ ಆದಾಯ ಎಷ್ಟು? ಒಟ್ಟು ಮಾಸಿಕ ಖರ್ಚು ಎಷ್ಟು? ಒಟ್ಟು ಖರ್ಚಿನಲ್ಲಿ ನಿನ್ನ ಮೇಲೆ (ಮಗುವಿನ) ಇಷ್ಟು ಖರ್ಚಾಗುತ್ತಿದೆ. ಹಣ ಉಳಿದರೆ ಅದನ್ನ ಇಂತಹ ಕಡೆ ಉಳಿಕೆ ಅಥವಾ ಹೂಡಿಕೆ ಮಾಡುತ್ತಿದ್ದೇವೆ. ಹೀಗೆ ಹೂಡಿಕೆ ಮಾಡುವ ಅಥವಾ ಉಳಿಸುವ ಅವಶ್ಯಕತೆಯೇನು? ಇಂತಹ ವಿಚಾರಗಳನ್ನ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ಮಕ್ಕಳು ಅತ್ಯಂತ ಬುದ್ದಿವಂತರು ಅವರಿಗೆ ನಾವು ಹೇಳಿದ್ದು ಖಂಡಿತ ಅರ್ಥವಾಗುತ್ತೆ. ಆದರೆ ಪೋಷಕರು ಅವನಿಗೇನು ತಿಳಿಯುತ್ತೆ? ಇನ್ನು ಬಾಲಕ ಅಂತಲೋ ಅಥವಾ ಇನ್ನೊಂದಷ್ಟು ವರ್ಷ ಆರಾಮಾಗಿರಲಿ ನಂತರ ಜೀವನ ಪೂರ್ತಿ ಇದ್ದದ್ದೇ ಎನ್ನುವ ಮಾತುಗಳನ್ನ ಆಡುತ್ತಾರೆ. ಇದು ಸರ್ವಥಾ ಸಲ್ಲದು. ಇದು 90ಕೆ.ಜಿ ತೂಕದ ಅಪ್ಪ ತನ್ನ ಮಗುವಿಗೆ ಓಡಬೇಡ ಎಂದಂತೆ. ಅವುಗಳಿಕೆ ಗ್ರಹಿಕೆಯ ಶಕ್ತಿಯಿರುತ್ತದೆ ಅದಕ್ಕೆ ನಾವು ನೀರೆರೆಯಬೇಕು. 
  3. ಪ್ರಾಯೋಗಿಕವಾಗಿ ಅವರಿಗೆ ನಾಯಕತ್ವ ನೀಡಿ: ಇದು ಅತ್ಯಂತ ಮುಖ್ಯ. ಅಂದರೆ ಒಂದು ತಿಂಗಳು ಮನೆಯ ಲೆಕ್ಕಾಚಾರ ಅವರಿಗೆ ಮಾಡಲು ಬಿಡುವುದು. ಪೋಷಕರ ಒಟ್ಟು ಆದಾಯ ಇಷ್ಟು.. ಅದು ಬ್ಯಾಂಕಿನಲ್ಲಿ ಇಷ್ಟಿದೆ, ನಗದಿನಲ್ಲಿ ಇಷ್ಟಿದೆ. ಈ ತಿಂಗಳು ಮನೆ ನಡೆಸುವ ಭಾರ ನಿನ್ನದು ಎನ್ನಿ. ನಿಮ್ಮ ಮಗ ಅಥವಾ ಮಗಳ ಹೆಗಲಿಗೆ ಹೆಗಲು ಕೊಟ್ಟು ನೀವು ನಿಲ್ಲಿ. ಎಲ್ಲಾ ಲೆಕ್ಕ ಅವರೇ ಮಾಡಲಿ. ಮನೆಯ ಬಜೆಟ್ ನಲ್ಲಿ ಆದಾಯಕ್ಕಿಂತ ಹೆಚ್ಚಿನ ಖರ್ಚು ಕಂಡು ಬಂದರೆ ಅದು ಬಜೆಟ್ ಡೆಫಿಸಿಟ್! ಖರ್ಚಿಗಿಂತ ಹೆಚ್ಚಿನ ಆದಾಯ ಕಂಡು ಬಂದರೆ ಅದು ಬಜೆಟ್ ಸರ್ಪ್ಲಸ್!! ದೇಶದ ಬಜೆಟ್ ಮಂಡನೆಯಾದಾಗ ಸಹಜವಾಗೇ ಅವರಿಗೆ ಅದರಲ್ಲಿ ಆಸಕ್ತಿ ಬರುತ್ತದೆ. ಡೆಫಿಸಿಟ್ ಅಥವಾ ಸರ್ಪ್ಲಸ್ ಬಗ್ಗೆ ಅಂದು ಬಿಡಿಸಿ ಹೇಳಬೇಕಾದ ಅವಶ್ಯಕತೆ ಬರುವುದಿಲ್ಲ. ಡೆಫಿಸಿಟ್ ಎಂದ ತಕ್ಷಣ ಎಲ್ಲೋ ಅನವಶ್ಯಕ ಖರ್ಚು ಹೆಚ್ಚಾಗಿರಬೇಕು? ಅಥವಾ ಏನೋ ಹೆಚ್ಚು ಕಡಿಮೆಯಾಗಿದೆ. ಅದೇನು? ಎಂದು ಸರಕಾರವನ್ನ ಪ್ರಶ್ನಿಸುವ ಶಕ್ತಿ ಅವರಲ್ಲಿ ತಾನಾಗೇ ಬರುತ್ತದೆ. ಇಂದೇನಾಗಿದೆ? ಬಜೆಟ್ ಮಂಡನೆಯಾಯಿತು ಎನ್ನುವುದು ಬಿಟ್ಟರೆ ನಿಖರವಾಗಿ ಎಷ್ಟು ಹಣ ಎಲ್ಲಿಂದ ಬಂತು ಎಷ್ಟು ಹಣ ಎಲ್ಲಿಗೆ ಹೋಯ್ತು ಎನ್ನುವುದನ್ನ ಯಾರು ಕೂತು ನೋಡುತ್ತಾರೆ? ವಿಶ್ಲೇಷಿಸುತ್ತಾರೆ?? ಇದನ್ನ ಮನೆಯಿಂದ ಶುರು ಮಾಡಿಸಿ. ದೇಶದ ಬಗ್ಗೆ ನಿಧಾನವಾಗಿ ಅವರಲ್ಲಿ ಆಸಕ್ತಿ ಬರುತ್ತದೆ. 
  4. ನಿಮ್ಮ ಹಣಕಾಸು ತಪ್ಪು ನಿರ್ಧಾರಗಳಿದ್ದರೆ ಅದನ್ನ ಮುಕ್ತವಾಗಿ ಹಂಚಿಕೊಳ್ಳಿ: ನನ್ನ ಬಳಿ ಸಲಹೆ ಕೇಳಿ ಬರುವ ಬಹಳಷ್ಟು ವ್ಯಕ್ತಿಗಳು ತಮ್ಮ ತಪ್ಪಿನ ಬಗ್ಗೆ ಮಾತನಾಡುವುದಿಲ್ಲ. ಅಷ್ಟೇ ಅಲ್ಲ ಅದನ್ನ ಮುಚ್ಚಿಡುವ ಪ್ರಯತ್ನ ಕೂಡ ಮಾಡುತ್ತಾರೆ. ಆದರೇನು ಎಲ್ಲೋ ತಪ್ಪಾಗಿರಲೇಬೇಕು ಇಲ್ಲದಿದ್ದರೆ ಯಾರೂ ಸಲಹೆ ಕೇಳಿ ಬರುವುದಿಲ್ಲ. ಎಲ್ಲವೂ ಚೆನ್ನಾಗಿದ್ದಾಗ ದೇವರನ್ನ ಹೇಗೆ ನೆನೆಯುವುದಿಲ್ಲವೋ ಹಾಗೆ ಚೆನ್ನಾಗಿದ್ದಾಗ ಯಾರೂ ಹಣಕಾಸು ಸಲಹೆ ಕೇಳಿ ಬರುವುದಿಲ್ಲ. ರೋಗ ಬಂದಾಗ ವೈದ್ಯರ ಬಳಿ ಹೋದಂತೆ ನನ್ನ ಬಳಿ ಬರುವವರು ಸಮಸ್ಯೆ ಹೊತ್ತೇ ಬರುವುದು ಇರಲಿ. ಮಕ್ಕಳೊಂದಿಗೆ ನೀವು ಮಾಡಿದ ತಪ್ಪು ಅದರಿಂದ ಆದ ನಷ್ಟ, ನೋವು ಮತ್ತು ಅದರಿಂದ ಹೊರಬರಲು ಎಷ್ಟು ಸಮಯ ತೆಗೆದುಕೊಂಡಿತು ಇಷ್ಟನ್ನ ಯಾವ ಸಂಕೋಚವಿಲ್ಲದೆ ಹೇಳಿಕೊಳ್ಳಬೇಕು. ಇದನ್ನ ನೀನು ಮಾಡಬೇಡ ಎಂದು ಹೇಳಬಾರದು. ವಿಷಯವನ್ನ ಅವರಿಗೆ ಸಾಧ್ಯವಾದಷ್ಟು ಸಹಜವಾಗಿ, ಸರಳವಾಗಿ ಉತ್ಪ್ರೇಕ್ಷೆ ಇಲ್ಲದೆ ಮುಟ್ಟಿಸಬೇಕು. ಅದು ಅವರ ಮನದಲ್ಲಿ ಭಯ ಉತ್ಪನ್ನ ಮಾಡುವಂತಿರಬಾರದು. ಬದಲಾದ ಸನ್ನಿವೇಶದಲ್ಲಿ ಅದೇ ನಿರ್ಧಾರ ನಿಮ್ಮ ಮಗುವಿಗೆ ಯಶಸ್ಸು ಸಿಗುವಂತೆ ಮಾಡಬಹದು. ಹೀಗಾಗಿ ನಿಮ್ಮ ತಪ್ಪು ನಿಮ್ಮ ಮಗುವಿನ ಪಾಲಿಗೂ ತಪ್ಪೇ ಆಗಬೇಕಂದಿಲ್ಲ. ಆದರೆ ಅದನ್ನ ಮಕ್ಕಳೊಂದಿಗೆ ಹಂಚಿಕೊಳ್ಳುವುದು ಒಳಿತು. 
  5. ಉಳಿಕೆಯ ಮಹಾಮಂತ್ರ ಬೋಧಿಸಲು ಮರೆಯಬೇಡಿ: ಇವತ್ತು ಸಮಾಜ ಜಗತ್ತಿನೆಲ್ಲೆಡೆ ಉಳಿಕೆಗೆ ಹೆಚ್ಚಿನ ಮಹತ್ವ ಕೊಡುತ್ತಿಲ್ಲ. ನಾಳಿನ ಅನಿಶ್ಚಿತ ಬದುಕಿಗೆ ಒಂದಷ್ಟು ಹಣವನ್ನ ಮೀಸಲು ನಿಧಿಯಂತೆ ಕಾಯ್ದಿರಿಸುವುದು ಅತ್ಯಂತ ಅವಶ್ಯಕ. ಮನೆಯ ಬಜೆಟ್ ಮಾಡುವ ಸಮಯದಲ್ಲಿ ಇದನ್ನ ಮಕ್ಕಳಿಗೆ ಹೇಳಿಕೊಡಬೇಕು. ಗಳಿಕೆ-ಉಳಿಕೆ-ಹೂಡಿಕೆ ಎನ್ನುವ ಮಹಾಮಂತ್ರ ಮಾತ್ರ ಅವರನ್ನ ಇತರಿರಿಗಿಂತ ಭಿನ್ನವಾಗಿಸುತ್ತದೆ. ಗಳಿಸುವುದು ಅಂದರೆ ಹಣವನ್ನ ಸಂಪಾದಿಸುವುದು ಅದನ್ನ ಉಳಿಸುವುದು ಮತ್ತು ಇನ್ನೂ ಹೆಚ್ಚಿನ ಹಣವನ್ನ ಒಳ್ಳೆಯ ಆಸ್ತಿಯ ಮೇಲೆ ಹೂಡಿಕೆ ಮಾಡುವುದು ಇವು ಅತ್ಯಂತ ಫಂಡಮೆಂಟಲ್ ವಿಷಯಗಳು. 

ಕೊನೆ ಮಾತು: ಹಣಕಾಸು ಅನಕ್ಷರತೆ ಎನ್ನವುದು ವಿಶ್ವವ್ಯಾಪಿ. ಇದೊಂದು ದೊಡ್ಡ ಪಿಡುಗು. ಹಣಕಾಸು ಅಕ್ಷರತೆ ಬಂದುಬಿಟ್ಟರೆ ಜನತೆ ತಾವು ಕೆಲಸ ಮಾಡುವ ಸಂಸ್ಥೆ, ತಮ್ಮ ಸ್ಥಳೀಯ ಸರಕಾರ, ಕೇಂದ್ರ ಸರಕಾರ ಹೀಗೆ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ಹಂತಕ್ಕೆ ಬೆಳೆಯುತ್ತಾರೆ. ಯಾವುದೇ ಒಂದು ವಸ್ತು ಅಥವಾ ವಿಷಯದ ಬಗ್ಗೆ ಇರುವ ಅಜ್ಞಾನ, ಭಯವನ್ನ ಸೃಷ್ಟಿಮಾಡುತ್ತದೆ. ಸಂಶಯ ಮತ್ತು ಭಯ ಇವರೆಡೂ ಮನುಕುಲದ ಪರಮ ಶತ್ರುಗಳು. ಇದಕ್ಕೆ ಆರ್ಥಿಕ ಸಾಕ್ಷರತೆಯೊಂದೇ ಮದ್ದು. 

- ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Stay up to date on all the latest ಅಂಕಣಗಳು news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp