ಚೀನಾ ನಡೆದದ್ದೇ ದಾರಿ! ಸಂಕಷ್ಟದಲ್ಲೂ ಭಾರತ ವಿಶ್ವಕ್ಕೆ ಮಾದರಿ!

ಹಣಕ್ಲಾಸು

- ರಂಗಸ್ವಾಮಿ ಮೂಕನಹಳ್ಳಿ

Published: 09th April 2020 02:59 AM  |   Last Updated: 24th July 2020 03:00 PM   |  A+A-


PM Modi- China President Xi-Jinping

ಪ್ರಧಾನಿ ನರೇಂದ್ರ ಮೋದಿ- ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್

Posted By : Srinivas Rao BV
Source : UNI

ಹಾಂಗ್ ಕಾಂಗ್ ಚೀನಾಕ್ಕೆ 1997 ರಲ್ಲಿ ಬ್ರಿಟಿಷರಿಂದ ಹಸ್ತಾಂತರವಾಗಿದೆ. ಅಂದು ಚೀನಾಕ್ಕೆ ಹಾಂಗ್ ಕಾಂಗ್ ದೊಡ್ಡ ಆದಾಯ ತಂದು ಕೊಡುವ ಪ್ರಾಂತ್ಯವಾಗಿತ್ತು. ಅಂದರೆ ಗಮನಿಸಿ 1997-99 ರ ಸಮಯದಲ್ಲಿ ಚೀನಾದ ಒಟ್ಟು ಆದಾಯ 100 ರೂಪಾಯಿ ಎಂದುಕೊಂಡರೆ 26 ರಿಂದ 28 ರೂಪಾಯಿ ಹಾಂಗ್ ಕಾಂಗ್ ಉತ್ಪಾದಿಸುತ್ತಿತ್ತು. 

ಹೀಗಾಗಿ ಹಾಂಗ್ ಕಾಂಗ್ ಸ್ವಾಯತ್ತತೆ ಬೇಕೆಂದು ಕೇಳಿದಾಗ ಚೀನಾ ಇಲ್ಲವೆನ್ನದೆ ಒಪ್ಪಿಗೆ ಕೊಡುತ್ತದೆ. ಮುಂದಿನ 49 ವರ್ಷ ಚೀನಾದ ಅಧೀನದಲಿದ್ದರೂ ನೀವು ರಾಜ್ಯಭಾರ ಮಾಡಲು ಸ್ವತಂತ್ರರು ಎಂದು ಹೇಳುತ್ತದೆ. ಇದಾಗಿ ಎರಡು ದಶಕದಲ್ಲಿ ಅಂದರೆ 2019 ರಲ್ಲಿ ಹಾಂಗ್ ಕಾಂಗ್ ಗೆ ಕೊಟ್ಟ ಮಾತು ಮುರಿದು ಆಡಳಿತದಲ್ಲಿ, ಶಿಕ್ಷಣದಲ್ಲಿ ಮೂಗು ತೋರಿಸುತ್ತದೆ. ಏಕೆ ಗೊತ್ತೇ? ಇವತ್ತಿಗೆ ಚೀನಾದ ಆದಾಯ 100 ಎಂದುಕೊಂಡರೆ ಹಾಂಗ್ ಕಾಂಗ್ ನೀಡುವ ಆದಾಯ ಕೆಲವ ಮೂರು ರೂಪಾಯಿ!! ಅಂದ ಮಾತ್ರಕ್ಕೆ ಹಾಂಗ್ ಕಾಂಗ್ ಕುಸಿಯಿತು ಎನ್ನುವ ನಿರ್ಧಾರಕ್ಕೆ ಬರಬೇಡಿ! ಅದು ಹಿಂದಿಗಿಂತ ಚೆನ್ನಾಗಿಯೇ ದುಡಿಯುತ್ತಿದೆ. ಆದರೆ ಚೀನಾ ಗೆರೆಯ ಮುಂದೆ ಇನ್ನೊಂದಷ್ಟು ದೊಡ್ಡ ಗೆರೆಗಳ ಎಳೆದಿದೆ. ಹೀಗಾಗಿ ಹಾಂಗ್ ಕಾಂಗ್ ಸಣ್ಣದಾಗಿ ಕಾಣತೊಡಗಿದೆ. ಇಂದಿಗೂ ಹಾಂಗ್ ಕಾಂಗ್ ಮತ್ತು ಚೀನಾದ ಮಧ್ಯೆ ಗೋಡೆಯಿದೆ. ಅದು ಸರಹದ್ದು. ಬೇರೆ ಚಿಕ್ಕ ಪುಟ್ಟ ದೇಶಗಳನ್ನ ಆಪೋಷನ ತೆಗೆದುಕೊಂಡಿರುವ ಚೀನಾ ತನ್ನದೇ ತಟ್ಟೆಯ ತುತ್ತನ್ನ ತಿನ್ನಲು ತಡವೇಕೆ ಮಾಡಿತು? ಅಲ್ಲಿ ಮೆಲ್ಲನೆ ಹಾಂಗ್ ಕಾಂಗ್ ಆಡಳಿತ ಶೈಲಿ ಮರೆಯಾಗಿ ಚೀನಿ ಅಧಿಕಾರ ಶೈಲಿ ತಲೆಯೆತ್ತಲಿದೆ.

ಹಾಂಗ್ ಕಾಂಗ್ ಗೆ ಹೊಂದಿಕೊಂಡು ಶೇನ್ ಜ್ಹೆನ್ ಎನ್ನುವ ನಗರವಿದೆ. ಎರಡು ದಶಕಗಳ ಹಿಂದೆ ಅಲ್ಲಿ ಕೇವಲ 30 ಸಾವಿರ ಮೀನುಗಾರರು, ಗಣಿ ಕಾರ್ಮಿಕರು ಮಾತ್ರ ಇದ್ದರು. ಚೀನಾ ಅದನ್ನ ಎಕನಾಮಿಕ್ ಜೋನ್ ಎಂದು ಘೋಷಿಸಿ ಅದನ್ನ ಬೆಳೆಸಲು ಶುರು ಮಾಡಿತು. ಇಂದಿಗೆ 1 ಕೋಟಿ ಇಪ್ಪತ್ತು ಲಕ್ಷ ಜನರಿರುವ ಮೆಗಾ ಸಿಟಿಯಾಗಿ ಅದು ಪರಿವರ್ತನೆಗೊಂಡಿದೆ. ಹಾಂಗ್ ಕಾಂಗ್ ಇರಬಹುದು, ನ್ಯೂ-ಯಾರ್ಕ್ ಇರಬಹುದು, ಶೇನ್ ಜ್ಹೆನ್ ಮುಂದೆ ಸಪ್ಪೆ ಎನ್ನುವಷ್ಟು ಜಗಮಗಿಸುತ್ತಿದೆ ಆ ನಗರ. ಚೀನಾ ಇಂದು ತಪ್ಪು ಹೆಜ್ಜೆ ಇಟ್ಟಿರಬಹುದು. ಅದರ ಮಹತ್ವಾಕಾಂಕ್ಷೆ ಸಾಧನೆಗೆ ಅದು ತುಳಿದಿರುವ ದಾರಿ ಯಾರೂ ಕೂಡ ಒಪ್ಪುವುದಿಲ್ಲ. ಆದರೆ ದಶಕಗಳ ಕಾಲ ತನ್ನ ಕಾರ್ಯ ಸಾಧನೆಗೆ ಸದ್ದಿಲ್ಲದೇ ದುಡಿಯುವ ಅದರ ತಾಕತ್ತಿಗೆ ಒಂದು ಕ್ಷಣ ಮನಸ್ಸು ವಾಹ್ ಎನ್ನದೆ ಇರಲಾಗಲ್ಲ. ನಾನು ಪ್ರಥಮ ಬಾರಿಗೆ ಚೀನಾಗೆ ಕಾಲಿಟ್ಟಾಗ ಅಲ್ಲಿನ್ನೂ ಭಾರತೀಯರ ಸಂಖ್ಯೆ ಕಡಿಮೆಯಿತ್ತು. ಇಂದು ಭಾರತೀಯ ವ್ಯಾಪಾರಿಗಳ ಹಿಂಡು ಅಲ್ಲಿ ಬೀಡು ಬಿಟ್ಟಿದೆ. ರೋಟಿ, ನಾನ್, ಚಪಾತಿ ಅಷ್ಟೇ ಅಲ್ಲ ನಮ್ಮ ಇಡ್ಲಿ ದೋಸೆ, ಅನ್ನ, ಸಾಂಬಾರ್, ರಸಂ... ಎಲ್ಲವೂ ಲಭ್ಯ.... 

ಇಂತಹ ಮೆಗಾ ಸಿಟಿಗಳನ್ನ ಚೀನಾ ಹೇಗೆ ಕಟ್ಟುತ್ತದೆ ಎನ್ನುವುದೇ ಒಂದು ರೋಚಕ ಕಥೆ. ಅದು ತನ್ನ ಉದ್ದಿಮೆದಾರರಿಗೆ ಬೇಕಾದ ಜಾಗ, ಪರವಾನಿಗಿ ಎಲ್ಲವನ್ನೂ ಯಾವುದೇ ರೀತಿಯ ಅಡೆತಡೆಯಿಲ್ಲದೆ ಕ್ಷಣ ಮಾತ್ರದಲ್ಲಿ ಕೊಟ್ಟು ಬಿಡುತ್ತದೆ. ಅದು ಕೇಳುವುದು ಇಷ್ಟು ಸಾವಿರ ಕೆಲಸ ಸೃಷ್ಟಿಸು ಎನ್ನುವುದು ಮಾತ್ರ. ಹೀಗೆ ಹತ್ತಾರು ಎಕರೆ ಜಾಗದಲ್ಲಿ ಕಾರ್ಖಾನೆ ಶುರವಾಗುತ್ತೆ. ಅಲ್ಲೇ ಕೆಲಸಗಾರರಿಗೆ ಉಳಿದುಕೊಳ್ಳಲು ವ್ಯವಸ್ಥೆ, ಅಲ್ಲೇ ಊಟದ ವ್ಯವಸ್ಥೆ. ಸಕಲವೂ ಅಲ್ಲೇ...!! ಅಂದರೆ ಕೆಲಸಗಾರರನ್ನ 3, 5 ಅಥವಾ 10 ವರ್ಷದ ಗುತ್ತಿಗೆಯ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ (ಇದು ಜೀತವಲ್ಲದೆ ಮತ್ತೇನಲ್ಲ) ಅಲ್ಲಿಯೇ ಪ್ರೇಮಿಸಿ, ಮದುವೆಯಾಗುತ್ತಾರೆ. ಅಂತವರ ಮಕ್ಕಳಿಗೆ ಶಾಲೆ ಕೂಡ ಅಲ್ಲೇ!! ತಮ್ಮ ಗುತ್ತಿಗೆ ಮುಗಿದ ಮೇಲೆ ಅವರು ಬೇಡವೆಂದರೆ ಬಿಟ್ಟು ಹೋಗಬಹುದು. ಇಂತಹ ಕೆಲಸಗಾರರಿಗೆ ಸಿಕ್ಕುವ ವೇತನ ಮಾಸಿಕ 8೦೦ ಯುವಾನ್. ಅಂದರೆ ಹತ್ತಿರತ್ತಿರ 8 ಸಾವಿರ ಭಾರತೀಯ ರೂಪಾಯಿ. ನಾವು 21 ದಿನ ನಮ್ಮ ಮನೆಯಲ್ಲಿರಲು ನೂರೊಂದು ನೆವ ಹೇಳುತ್ತಿದ್ದೇವೆ. ಚೀನಾದಲ್ಲಿ ಕೋಟ್ಯಂತರ ಚೀನಿಯರು ಇಂತಹ ಬದುಕನ್ನ ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ನನ್ನ ಎರಡನೇ ಚೀನಾ ಪ್ರಯಾಣದಲ್ಲಿ ಇಂತಹ ಒಂದು ಮೆಗಾ ಫ್ಯಾಕ್ಟರಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಅಲ್ಲಿನ ಜನರು ತಮ್ಮ ಸಣ್ಣ ಕಣ್ಣುಗಳನ್ನು ಸಾಧ್ಯವಾದಷ್ಟು ಅರಳಿಸಿ ನನ್ನ ನೋಡಿದ್ದು ಮರೆಯುವುದಾದರೂ ಹೇಗೆ?

ಹೀಗೆ ತನ್ನ ಜನರನ್ನ ದಂಡಿಸಿ, ದುಡಿಸುವ ಚೀನಾ ತನ್ನ ಪದಾರ್ಥವನ್ನ ಅತ್ಯಂತ ಕಡಿಮೆ ಬೆಲೆಗೆ ಪ್ರಪಂಚಕ್ಕೆ ಮಾರಾಟ ಮಾಡುತ್ತದೆ. ಅಷ್ಟು ಕಡಿಮೆ ಬೆಲೆಯಲ್ಲಿ ಜಗತ್ತಿನ ಇತರ ದೇಶಗಳು ಮಾರಲು ಸಾಧ್ಯವಿಲ್ಲ, ಏಕೆಂದರೆ ಜನರಿಗೆ ಕೊಡುವ ಸಂಬಳ, ಸವಲತ್ತು ಹೀಗೆ ಇತರ ಖರ್ಚುಗಳು ಪದಾರ್ಥಗಳ ಬೆಲೆ ಹೆಚ್ಚುವಂತೆ ಮಾಡುತ್ತವೆ. ಅಂದರೆ ಗಮನಿಸಿ ಚೀನಾ ಕೊಡುತ್ತಿರುವ ಬೆಲೆ ಸಾಧುವಲ್ಲ. ಅದು ತನ್ನ ಪ್ರಜೆಗಳ ಹಕ್ಕನ್ನ ಕಸಿದು, ಅವರ ರಕ್ತ ಬಸಿದು ಇಂತಹ ಪೈಪೋಟಿಗೆ ಇಳಿದಿದೆ. ಮೋದಿಯವರ ಸರ್ಕಾರವಿರಬಹುದು ಅಥವಾ ಅಮೇರಿಕಾ, ಯೂರೋಪ್ ಇರಬಹುದು ಚೀನಾದಿಂದ ಪದಾರ್ಥಗಳನ್ನ ಖರೀದಿ ಮಾಡುವುದಿಲ್ಲ ಎನ್ನಲು ಅನೇಕ ಒಪ್ಪಂದಗಳು ಅಡ್ಡಿ ಬರುತ್ತವೆ. ರಾಜತಾಂತ್ರಿಕ ನೀತಿಗಳು ಅಡ್ಡಗೋಲಾಗುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾವನ್ನ ಯಾರೂ ಟೀಕಿಸುವ, ದಂಡಿಸುವ ಮಟ್ಟದಲ್ಲಿಲ್ಲ. ಆದರೆ ನಮಗೆ? ನಮಗಾರ ಅಡ್ಡಿ ಅಂತಕವೂ ಇಲ್ಲ. ಯಾರನ್ನೇ ಆಗಲಿ, ದೈತ್ಯ ಚೀನಾವನ್ನ ಕೂಡ ನಾವು ಕೆಡವಬಹುದು. ಅವರ ಪದಾರ್ಥಗಳನ್ನ ಕೊಳ್ಳುವುದನ್ನ ನಿಲ್ಲಿಸುವುದರ ಮೂಲಕ!!! ನೆನಪಿರಲಿ ದೊಡ್ಡ ಆನೆಯ ಸೊಂಡಿಲಲ್ಲಿ ಹೊಕ್ಕು ಸಣ್ಣ ಇರುವೆ ಆನೆಯನ್ನ ಕೆಡವಬಹುದು!!. ಆಯ್ಕೆ ನಿಮ್ಮದು.

ಇದಕ್ಕಾಗಿ ನಾವೇನು ಮಾಡಬೇಕು? 

ನಾವು ಇಷ್ಟು ಮಾಡಿದರೆ ಮುಂದಿನ ಕೆಲಸ ಸರಾಗ ಏಕೆಂದರೆ: 

  1. ಕುಸಿದ ಬಡ್ಡಿ ದರ ಉದ್ಯಮಗಳಿಗೆ ವರದಾನವಾಗಲಿದೆ. ಇದು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಸಾಧ್ಯತೆ ಕೂಡ ಇದೆ. 
  2. ಜಗತ್ತಿಗೆ ಚೀನಾದ ಕುತಂತ್ರ ಅರಿವಾಗಿದೆ. ಹೀಗಾಗಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಾವು ವಿಶ್ವಕ್ಕೆ ಬೇಕಾದ ಎಲ್ಲವನ್ನೂ ತಯಾರಿಸಿ ಮಾರುವ ಅವಕಾಶವಿದೆ. 
  3. ಅಮೇರಿಕಾ, ಇಂಗ್ಲೆಂಡ್ ಮತ್ತು ಯೂರೋಪಿನಿಂದ ಭಾರತೀಯರು ಮರಳಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಅವರ ನೈಪುಣ್ಯತೆಯನ್ನ ಬಳಸಿಕೊಂಡು ನಮ್ಮ ಕಾರ್ಯ ಕ್ಷೇತ್ರವನ್ನ ವಿಸ್ತರಿಸಿಕೊಳ್ಳುವ ಅವಕಾಶ ನಮ್ಮ ಮುಂದಿದೆ. 
  4. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು-ಹೆಚ್ಚಿನ ಸಂಶೋಧನೆ ನಡೆಸುವ ಸಾಧ್ಯತೆಗಳು ನಮ್ಮ ಮುಂದಿವೆ. 
  5. ಕುಸಿದ ತೈಲ ಬೆಲೆಯನ್ನ ನಮ್ಮ ಅನುಕೂಲಕ್ಕೆ ಬಳಸಿಕೊಂಡು ಹಣದುಬ್ಬರವನ್ನ ತಡೆಯಬಹುದು. ಇದು ಜನ ಸಾಮಾನ್ಯನಿಗೆ ಅನುಕೂಲ ಮಾಡಿಕೊಡುತ್ತದೆ. 
  6. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಹೆಚ್ಚಿನ ಮಹತ್ವ ಪಡೆಯಲಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬದಲಾಣೆ ತರುವ ಸಾಧ್ಯತೆಯಿದೆ. 

ಕೊನೆ ಮಾತು: ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿ ಮುಳುಗಿವೆ. ಜಗತ್ತನ್ನು ಪೂರ್ತಿ ಒಂದು ಮನೆಯನ್ನಾಗಿ ನೋಡಿದರೆ ಒಂದು ರೂಪಾಯಿ ಆಸ್ತಿಯ ಮುಂದೆ ಎರಡೂವರೆ ರೂಪಾಯಿ ಸಾಲವಿದೆ. ದೇಶಗಳನ್ನ ಒಂದು ಮನೆಯಂತೆ ನೋಡಲು ಪ್ರಾರಂಭಿಸಿದರೆ ಅಮೆರಿಕಾ ಎಕಾನಮಿ ನಿಂತಿರುವುದೇ ಸಾಲದ ಮೇಲೆ. ಅಲ್ಲಿ ಎಲ್ಲದಕ್ಕೂ ಕ್ರೆಡಿಟ್ ಹಿಸ್ಟ್ರಿ ಬೇಕೇ ಬೇಕು. ಹೀಗೆ ಅಮೆರಿಕಾ ಯೂರೋಪಿನಿಂದ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಲೋನ್ ಡಿಫಾಲ್ಟರ್ಸ್ ಸಂಖ್ಯೆ ಹೆಚ್ಚುತ್ತದೆ. ಇದು ಸಣ್ಣ ಐಸ್ ಬಾಲ್ ರೂಪದಲ್ಲಿ ಶುರುವಾಗಿ ಅದ್ಯಾವ ಗಾತ್ರವನ್ನ ಪಡೆಯುತ್ತದೋ ದೇವರೇ ಬಲ್ಲ. ಭಾರತದಲ್ಲಿ ಕೂಡ ಇದು ಆಗಲಿದೆ. ಆದರೆ ಇಲ್ಲಿ ಸಣ್ಣದೊಂದು ಆಶಾಭಾವ ನಮ್ಮ ಪಾಲಿಗಿದೆ. ಅಮೆರಿಕಾ, ಯೂರೋಪುಗಳಲ್ಲಿ ಬಡ್ಡಿಯ ದರ ಸೊನ್ನೆ ಅಥವಾ ನೆಗಟಿವ್, ಜಪಾನ್ ಕಥೆ ಕೂಡ ಸೇಮ್. ಇತರ ಎಮರ್ಜಿಂಗ್ ಮಾರುಕಟ್ಟೆಗಳಲ್ಲಿ ಕೂಡ ಹೂಡಿಕೆಯ ಮೇಲಿನ ಲಾಭಂಶ ಅಷ್ಟಕಷ್ಟೇ! ಭಾರತದಲ್ಲಿ ಕೂಡ ಇದು ಕುಸಿದಿದೆ. ಆದರೆ ಬೇರೆಲ್ಲಾ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ಭಾರತದಲ್ಲಿ ಹೂಡಿಕೆ ಲಾಭದಾಯಕ. ಹೀಗಾಗಿ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ಸೆಸ್ಟರ್ಸ್ ಕೊರೋನೋತ್ತರ ಅಳೆದು ತೂಗಿ ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ. ಇಂತಹ ಸಂಕಷ್ಟದ ದಿನಗಳಲ್ಲಿ ಕೊರೋನವನ್ನ ಇಲ್ಲಿಯ ತನಕ ಕಂಟ್ರೋಲ್ ಮಾಡಿದ ರೀತಿ, ಆರ್ಥಿಕ ಕುಸಿತಕ್ಕೆ ಹೆದರದೆ ಪೂರ್ಣ ಲಾಕ್ ಡೌನ್ ಘೋಷಿಸಿದ ರೀತಿ, ಕೋಮುಗಲಭೆಗೆ ತುತ್ತಾಗಬಹುದಿದ್ದ ದೇಶವನ್ನ ದೀಪವನ್ನ ಬೆಳಗಿಸಿ ತಹಬದಿಗೆ ತಂದ ರೀತಿ ಇವೆಲ್ಲವೂ ವಿಶ್ವಕ್ಕೆ ಭಾರತ ಮಾದರಿ ಎನ್ನುವ ಭಾವನೆಯನ್ನ ತಂದಿವೆ. 


- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Stay up to date on all the latest ಅಂಕಣಗಳು news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp