ಬ್ಲ್ಯಾಕ್ ಫಂಗಸ್: ಕೊರೋನಾ ಅಲೆಗಳ ನಡುವೆ ಇದರ ಬಗ್ಗೆ ಆತಂಕ ಬೇಡ, ತಿಳುವಳಿಕೆ ಬೇಕು! (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆಯ ಏರಿಳಿತಗಳು, ಸಾವು-ನೋವುಗಳು ಮತ್ತು ಬರಬಹುದಾದ ಮೂರನೇ ಅಲೆಯ ನಡುವೆಯೇ ನಮ್ಮ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ಸವಾಲು ಎದುರಾಗಿದೆ.
ಬ್ಲ್ಯಾಕ್ ಫಂಗಸ್ ನ ಲಕ್ಷಣಗಳು (ಸಂಗ್ರಹ ಚಿತ್ರ)
ಬ್ಲ್ಯಾಕ್ ಫಂಗಸ್ ನ ಲಕ್ಷಣಗಳು (ಸಂಗ್ರಹ ಚಿತ್ರ)

ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆಯ ಏರಿಳಿತಗಳು, ಸಾವು-ನೋವುಗಳು ಮತ್ತು ಬರಬಹುದಾದ ಮೂರನೇ ಅಲೆಯ ನಡುವೆಯೇ ನಮ್ಮ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ಸವಾಲು ಎದುರಾಗಿದೆ.  ಅದೇ ಕಪ್ಪು ಶಿಲೀಂಧ್ರ  (ಬ್ಲ್ಯಾಕ್  ಫಂಗಸ್). 

ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ (Mucormycosis) ಎಂದು ಕರೆಯುತ್ತಾರೆ. ಈ ಅಪರೂಪದ ಶಿಲೀಂಧ್ರ ಸೋಂಕಿನ ಪ್ರಕರಣಗಳ ಸಂಖ್ಯೆ ದೇಶದೆಲ್ಲೆಡೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ದೇಶದ ವಿವಿಧ ಭಾಗಗಳಿಂದ ಈಗಾಗಲೇ ಹತ್ತು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಈ ಸೋಂಕು ಉಂಟಾದಾಗ ನಾಲಗೆ ಮೇಲೆ ಕಪ್ಟು ಚುಕ್ಕೆಗಳು, ಮೂಗಿನಿಂದ ಕಪ್ಟು ಸಿಂಬಳ ಕಾಣಿಸಿಕೊಳ್ಳುವುದರಿಂದ ಇದಕ್ಕೆ ಬ್ಲ್ಯಾಕ್ ಫಂಗಸ್ ಎಂಬ ಹೆಸರು ಬಂದಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಬ್ಲ್ಯಾಕ್ ಫಂಗಸ್ ಒಂದು ಅವಕಾಶವಾದಿ ಶಿಲೀಂಧ್ರ.

ಬ್ಲ್ಯಾಕ್ ಫಂಗಸ್ ಸೋಂಕು ಈ ವರ್ಷ ಹೊಸದಾಗಿ ಕಾಣಿಸಿಕೊಂಡ ಸೋಂಕಲ್ಲ. ಹಿಂದೆಲ್ಲಾ ವರ್ಷಕ್ಕೆ ಕೆಲವೇ ಕೆಲವು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದವು. ಆದ್ದರಿಂದ ಇದರ ಚಿಕಿತ್ಸೆಯ ಔಷಧಿಗಳು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರಲಿಲ್ಲ. ಆದರೆ ಈಗ  ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಾಗಾಗಿ ಔಷಧಿಗಳಿಗೆ ವಿಪರೀತ ಬೇಡಿಕೆ ಬಂದಿದೆ.

ಬ್ಲ್ಯಾಕ್ ಫಂಗಸ್ ಹೇಗೆ ಬರುತ್ತದೆ?
ನಮ್ಮ ಪರಿಸರದಲ್ಲಿ ಹಲವಾರು ಬಗೆಯ ಶಿಲೀಂಧ್ರಗಳಿವೆ. ಈ ಎಲ್ಲಾ ಶಿಲೀಂಧ್ರಗಳು ಮಾರಕವಲ್ಲ. ಇವುಗಳಲ್ಲಿ ಹರಿತ್ತು ಇಲ್ಲದೇ ಇರುವುದರಿಂದ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಆಗದು. ಆದ್ದರಿಂದ ಇವು ಇತರ ಜೀವಿಗಳಲ್ಲಿ ಸೇರಿ ಅವುಗಳ ಪೋಷಕಾಂಶಗಳನ್ನು ಹೀರಿ ಬೆಳೆಯುತ್ತವೆ. ಇವು ಗಾಳಿಯಲ್ಲಿಯೂ ಹಾರಾಡುತ್ತಿರುತ್ತವೆ. 

ಸಾಮಾನ್ಯವಾಗಿ ಮಣ್ಣು, ಕೊಳೆಯುತ್ತಿರುವ ಜೈವಿಕ ವಸ್ತುಗಳು, ಗೊಬ್ಬರದ ಗುಂಡಿ, ಪಶುಗಳು ಮಲ-ಮೂತ್ರ ಮಾಡಿದ ಜಾಗ, ತಿಪ್ಪೇಗುಂಡಿಗಳು ಮುಂತಾದ ಕಡೆ ಈ ಶಿಲೀಂಧ್ರ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಅದೇ ರೀತಿ ಸ್ವಚ್ಛತೆ ಇಲ್ಲದ ಬ್ಯಾಂಡೇಜ್, ಶುಚಿಗೊಳಿಸದ ಆಸ್ಪತ್ರೆ ಹಾಸಿಗೆಗಳು, ನೀರು ಸೋರುವ ಜಾಗ, ಅಸಮರ್ಪಕ ವಾಯು ಸಂಚಾರದ ಜಾಗ, ಶುಚಿಗೊಳಿಸದ ವೈದ್ಯಕೀಯ ಉಪಕರಣಗಳು, ಕಟ್ಟಡ ನಿರ್ಮಾಣ ಜಾಗಗಳು, ಕೊಚ್ಚೆ ನೀರು ನಿಂತ ಜಾಗಗಳಲ್ಲಿ ಶೀಲೀಂಧ್ರಗಳು ಹೆಚ್ಚು ಕಂಡು ಬರುತ್ತದೆ. ಉಸಿರಾಟದ ಮುಖಾಂತರ ಮತ್ತು ಚರ್ಮದ ಮೇಲಿನ ಗಾಯದ ಮೂಲಕ ಈ ಶಿಲೀಂಧ್ರ ನಮ್ಮ ದೇಹಕ್ಕೆ ಸೇರಿಕೊಳ್ಳುತ್ತದೆ.  

ಕೋವಿಡ್-19 ರೋಗಿಗಳಲ್ಲಿ ಆಮ್ಲಜನಕ ಪ್ರಮಾಣ ಕುಸಿದಾಗ ಮೂಗಿನ ನಳಿಕೆಗಳು ಅಥವಾ ಬಾಯಿ ಮುಖಾಂತರ ಹಾಕಿದ ಟ್ಯೂಬ್ಗಳ ಮುಖಾಂತರ ಆಮ್ಲಜನಕವನ್ನು ನೀಡಲಾಗುತ್ತದೆ. ಇಲ್ಲಿ ಒಣ ಆಮ್ಲಜನಕ ನೀಡುವುದಿಲ್ಲ. ಹ್ಯೂಮಿಡಿಫೈಯರ್ ಬೆರೆಸಿದ ಆಮ್ಲಜನಕ ನೀಡಿ ದೇಹಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ಈ ಉದ್ದೇಶಕ್ಕೆ ಬಳಸುವ ನೀರು ಪರಿಶುದ್ಧವಾಗಿರಬೇಕು. ಕಲುಷಿತ ಮತ್ತು ಸೋಂಕಿತ ನೀರು ಬಳಸಿದಲ್ಲಿ ಅದರ ಮುಖಾಂತರ ಶೀಲಿಂಧ್ರಗಳು ದೇಹಕ್ಕೆ ಸೇರಿ ಬ್ಲ್ಯಾಕ್  ಫಂಗಸ್ ಬಂದಿರುವುದು ವರದಿಯಾಗಿದೆ. ಹಾಗೆಯೇ ಮನೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಆಮ್ಲಜನಕ ಬಳಸಿದಾಗಲೂ ಶುದ್ಧವಾದ ನೀರನ್ನು ಬಳಸದೇ ಇದ್ದರೆ ಬ್ಲ್ಯಾಕ್ ಫಂಗಸ್ ಬರುತ್ತದೆ. ನಲ್ಲಿಯ ನೀರನ್ನು ಸಹ ಬಳಸಬಾರದು.

ಬ್ಲ್ಯಾಕ್ ಫಂಗಸ್ ಯಾರಿಗೆ ಬರುವ ಸಾಧ್ಯತೆ ಹೆಚ್ಚು?

ಸಾಮಾನ್ಯವಾಗಿ ಆರೋಗ್ಯವಂತ ಜನರಿಗೆ ಇಂತಹ ಶಿಲೀಂಧ್ರಗಳಿಂದ ಯಾವ ರೀತಿಯ ಸಮಸ್ಯೆಯೂ ಇಲ್ಲ. ಆದರೆ ರಕ್ತದ ಕ್ಯಾನ್ಸರ್, ಅನಿಯಂತ್ರಿತ ಮಧುಮೇಹ ಮತ್ತು ಹೆಚ್ಚಾಗಿ ಸ್ಟೀರಾಯ್ಡ್ ಬಳಸುವವರಿಗೆ ಇದರಿಂದ ತೊಂದರೆ ಹೆಚ್ಚು. 

ಅದರಲ್ಲಿಯೂ ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಸ್ಟೀರಾಯ್ಡನ್ನು ಹೆಚ್ಚಾಗಿ ಬಳಸುವುದರಿಂದ ಅವರ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುತ್ತದೆ. ಆಗ ಬ್ಲ್ಯಾಕ್ ಫಂಗಸ್ ಅವರ ಮೇಲೆ ಆಕ್ರಮಣ ಮಾಡುತ್ತದೆ. 

ಬ್ಲ್ಯಾಕ್ ಫಂಗಸ್ ಲಕ್ಷಣಗಳು 
 

ಬ್ಲ್ಯಾಕ್ ಫಂಗಸ್ ಸೋಂಕಿನ ಲಕ್ಷಣಗಳು ಹೀಗಿವೆ. ಮುಖದ ಒಂದು ಭಾಗ ಊದಿಕೊಂಡು ವಿಪರೀತ ನೋವಾಗುವುದು, ತಲೆ ನೋವು, ಮೂಗು ಕಟ್ಟಿದಂತೆ ಅನಿಸುವುದು ಮತ್ತು ಮೂಗಿನಿಂದ ಕೀವು ಮತ್ತು ದ್ರವ ಒಸರುವಿಕೆ, ಯಾವುದೇ ಔಷಧಿಗಳಿಗೆ ಸ್ಪಂದಿಸದ ಜ್ವರ, ಬಾಯಿಯೊಳಗಿನ ಪದರ, ಒಸಡು ಮತ್ತು ನಾಲಿಗೆ ಮೇಲ್ಬಾಗದಲ್ಲಿ ಬಣ್ಣ ಬದಲಾಗುವುದು, ಹುಣ್ಣಾಗುವುದು ಮತ್ತು ಕಪ್ಪು ಬಣ್ಣಕ್ಕೆ ತಿರುಗುವುದು. ಇದರಿಂದ ನಿದ್ರೆ ಮಾಡಲು ಆಗುವುದಿಲ್ಲ. ಜೊತೆಗೆ ಕಣ್ಣು ಮಂಜಾಗುವುದು, ಕಣ್ಣುಗುಡ್ಡೆ ಮುಂದೆ ಬರುವುದು ಮತ್ತು ದೃಷ್ಠಿಯಲ್ಲಿ ನ್ಯೂನತೆ ಕಂಡುಬರುತ್ತದೆ. ಕಣ್ಣಿನ ಕೆಳಭಾಗದಲ್ಲಿ ವಿಪರೀತ ನೋವು ಇರುತ್ತದೆ.

ಬ್ಲ್ಯಾಕ್ ಫಂಗಸ್ ಒಂದು ಗಂಭೀರ ಸಮಸ್ಯೆ ಏಕೆ?
 

ಬ್ಲ್ಯಾಕ್  ಫಂಗಸ್ ಸೋಂಕು ಕಣ್ಣು, ಮೆದುಳು, ಶ್ವಾಸಕೋಶ ಮತ್ತು ಸೈನಸ್ಗಳಿಗೆ ಅಪಾಯವನ್ನುಂಟು ಮಾಡುವುದರಿಂದ ಗಂಭೀರವಾದ ಸಮಸ್ಯೆಯಾಗಿದೆ. ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕಲ್ಲ. ಈವರೆಗೆ ಕೋವಿಡ್-19 ರೋಗಿಗಳಲ್ಲಿ ಬ್ಲ್ಯಾಕ್  ಫಂಗಸ್ ಹೆಚ್ಚಾಗಿ ವರದಿಯಾಗಿದೆ. 

ಆದರೆ ತಜ್ಞರು ಈ ಶಿಲೀಂಧ್ರ ಸೋಂಕು ಕೊವಿಡ್ ರೋಗವಿಲ್ಲದ ಜನರಲ್ಲಿಯೂ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.  ಕೋವಿಡ್-19  ರೋಗ ಬಂದಿರುವ ಮಧುಮೇಹ ಇರುವ (ಡಯಾಬಿಟಿಸ್) ರೋಗಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾದಾಗ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದೆ. ಕೆಲವು ಪ್ರಕರಣಗಳಲ್ಲಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವ ಮತ್ತು ಡಯಾಬಿಟಿಸ್ ಇಲ್ಲದಿರುವ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ (ಇಮ್ಯುನಿಟಿ) ಕಡಿಮೆಯಾದಾಗ ಬ್ಲಾಂಕ್ ಫಂಗಸ್ ಕಾಣಿಸಿಕೊಂಡಿದೆ. ಒಟ್ಟಾರೆ ಹೇಳುವುದಾದರೆ ಈಗ ಕಂಡುಬಂದಿರುವ ರೂಪಾಂತರಿ ಕೊರೊನಾ ವೈರಸ್, ರಕ್ತದಲ್ಲಿ ಸಕ್ಕರೆಯ ಮಟ್ಟ ಅನಿಯಂತ್ರಿತವಾದಾಗ ಮತ್ತು ರೋಗನಿರೋಧಕ ಶಕ್ತಿ ಕುಂದಿದಾಗ ಬ್ಲ್ಯಾಕ್ ಫಂಗಸ್ ಬಂದಿರುವುದು ಕಂಡುಬಂದಿದೆ. ಜೊತೆಗೆ ಮೂತ್ರಜನಕಾಂಗ (ಕಿಡ್ನಿ), ಯಕೃತ್ತಿನ (ಲಿವರ್) ಸಮಸ್ಯೆಗಳು ಮತ್ತು ನ್ಯುಮೋನಿಯಾದಂತಹ ಕಾಯಿಲೆಗಳು ಈ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ.  

ಬ್ಲ್ಯಾಕ್ ಫಂಗಸ್ ಮೊದಲಿಗೆ ಮೂಗು ಮತ್ತು ಬಾಯಿಗೆ ತಗುಲುತ್ತದೆ. ನಿಧಾನವಾಗಿ ಸೈನಸ್ ಮೂಲಕ ದೇಹದ ಒಳಹೊಕ್ಕು ಅಂಗಾಂಶಗಳನ್ನು ನಾಶಪಡಿಸುತ್ತದೆ. ಕಣ್ಣಿನ ಹಿಂದಿರುವ ನರಗಳಿಗೆ ಹಬ್ಬಿ ಅಲ್ಲಿಂದ ಮೆದುಳನ್ನು ಆಕ್ರಮಿಸಬಹುದು. ಈ ಸೋಂಕು ಆಕ್ರಮಣಕಾರಿಯಾಗಿರುವುದರಿಂದ ಅದನ್ನು ಬೇಗನೆ ಪತ್ತೆಹಚ್ಚಬೇಕು ಮತ್ತು ಇದರಿಂದಾಗಿ ಸತ್ತ ಅಂಗಾಂಶಗಳನ್ನು ಕಿತ್ತುಹಾಕಬೇಕಾಗುತ್ತದೆ. ಶಸ್ತ್ರಚಿಕಿತ್ಸಕರು ಕೆಲವೊಮ್ಮೆ ಮೆದುಳಿಗೆ ಬ್ಲ್ಯಾಕ್  ಫಂಗಸ್ ಬರುವುದನ್ನು ತಡೆಯಲು ರೋಗಿಗಳ ಕಣ್ಣುಗಳನ್ನು ತೆಗೆದುಹಾಕಬೇಕಾಗುತ್ತದೆ. 

ಕೋವಿಡ್-19  ಬಂದಾಗ ಬಿಸಿ ಹಬೆಯನ್ನು (ಸ್ಟೀಮ್) ಜನರು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ. ಅತಿ ಹೆಚ್ಚಾಗಿ ಬಿಸಿ ಹಬೆಯನ್ನು ತೆಗೆದುಕೊಂಡರೆ ಮೂಗಿನಲ್ಲಿರುವ ಲೋಳೆ (ಮ್ಯೂಕಸ್) ಪದರಕ್ಕೆ ಧಕ್ಕೆಯುಂಟಾಗಿ ಸೂಕ್ಷ್ಮಾಣುಜೀವಿಗಳು ಒಳಹೋಗುವುದು ಸುಲಭವಾಗುತ್ತದೆ. ಹೀಗೆ ಬ್ಲ್ಯಾಕ್ ಫಂಗಸ್ ದೇಹವನ್ನು ಸೇರುತ್ತದೆ. 

ಕೋವಿಡ್ ಸೋಂಕು ಬಂದಾಗಲೇ ಬ್ಲ್ಯಾಕ್ ಫಂಗಸ್ ಬರುತ್ತದೆಯೇ?

ಕೋವಿಡ್-19 ಸೋಂಕು ತಗುಲಿದ ಸಮಯದಲ್ಲಿಯೇ ಈ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳಲೇಬೇಕೆಂದಿಲ್ಲ. ಕೋವಿಡ್-19 ರೋಗಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ ಒಂದೆರಡು ವಾರಗಳ ನಂತರವೂ ಕಾಣಿಸಿಕೊಳ್ಳಬಹುದು. ಕೋವಿಡ್-19  ರೋಗ ಬಂದು ವಾಸಿಯಾದವರಲ್ಲಿ ಚೆನ್ನಾಗಿಯೇ ಇರುವ ಕಣ್ಣು ಇದ್ದಕ್ಕಿದ್ದಂತೆ ಮಂಜಾಗುವುದು, ತಲೆನೋವು, ಜ್ವರ, ಮುಖ ಊದಿಕೊಳ್ಳುವುದು, ಬಾಯಿಯಲ್ಲಿ ಹುಣ್ಣು ಮುಂತಾದವುಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

ಈ ಸೋಂಕು ಯುವಜನರಿಂದ ಹಿಡಿದು ಅತಿ ಹೆಚ್ಚು ವಯಸ್ಸಾದವರಿಗೂ ತಗುಲಬಹುದು. ಹಾಗೆಯೇ ಕೇವಲ ಮಧುಮೇಹ ಅಥವಾ ಇತರ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಬರಬೇಕೆಂದಿಲ್ಲ. ಅಂದರೆ ಯಾರಿಗೂ ಬೇಕಾದರೂ ಬರಬಹುದು.

ಮಧುಮೇಹ ಇರುವ ರೋಗಿಗಳು ಕೋವಿಡ್-19 ಬಂದಾಗ ಮತ್ತು ಬಳಿಕವೂ ಬಹಳ ಜಾಗರೂಕರಾಗಿರಬೇಕು. ಈ ಶಿಲೀಂಧ್ರ ಸೋಂಕು ಕೋವಿಡ್-19 ರೋಗ ಇಲ್ಲದೇ ಇರುವ ಮಧುಮೇಹಿಗಳಲ್ಲಿಯೂ ಕಂಡು ಬರುತ್ತದೆ. ಆದ್ದರಿಂದ ಮಧುಮೇಹ ರೋಗ ಇರುವ ಕೋವಿಡ್-19  ರೋಗ ಬಂದ ರೋಗಿಗಳು ಬಹಳ ಜಾಗರೂಕರಾಗಿರಬೇಕು.

ವೈರಾಣುಗಳು ಮತ್ತು ಶಿಲೀಂಧ್ರಗಳು ತಣ್ಣಗಿನ ವಾತಾವರಣವನ್ನು ಹೆಚ್ಚು ಇಷ್ಟಪಡುತ್ತದೆ. ಈ ಕಾರಣದಿಂದ ತಂಪಾಗಿರುವ ಪಾನೀಯ, ಜ್ಯೂಸ್ಗಳು, ತಣ್ಣಗಿರುವ ಆಹಾರವನ್ನು ಕೋವಿಡ್-19 ಸೋಂಕಿನ ಸಮಯದಲ್ಲಿ ಸೇವಿಸಬಾರದು. ಹೆಚ್ಚು ಬಿಸಿಯಾಗಿರುವ ಆಹಾರವನ್ನೇ ಸೇವಿಸಬೇಕು. ದಿನಕ್ಕೆ ನಾಲ್ಕೈದು ಬಾರಿ ಬಿಸಿನೀರಿನಿಂದ ಬಾಯಿ ತೊಳೆಯಬಹುದು. ಬೇಕಾದರೆ ಒಂದಷ್ಟು ಉಪ್ಪು ಸೇರಿಸಿ, ಉಪ್ಪಿನ ದ್ರಾವಣದಿಂದ ಬಾಯಿ ಮುಕ್ಕಳಿಸಬಹುದು.

ಹಲವು ರೋಗಿಗಳು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಆಕ್ಸಿಜನ್ ಥೆರಪಿಯನ್ನು ತೆಗೆದುಕೊಂಡೇ ಇಲ್ಲ. ಅವರಲ್ಲಿಯೂ ಸ್ಟೀರಾಯ್ಡ್ ಗಳ ಬಳಕೆಯಿಂದ ಸಕ್ಕರೆಯ ಮಟ್ಟ ಹೆಚ್ಚಾಗಿ ಕೂಡ ಈ ಸೋಂಕು ಕಂಡುಬಂದಿದೆ.

ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ
 

ಈ ಶಿಲೀಂಧ್ರ ಅರೋಗ್ಯವಂತ ವ್ಯಕ್ತಿಗಳ ಸಂಪರ್ಕಕ್ಕೆ ಬಂದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರನ್ನು ಈ ಶಿಲೀಂಧ್ರ ಮಾರಣಾಂತಿಕವಾಗಿ ಕಾಡುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ಇದನ್ನು ಗುರುತಿಸಿ ಚಿಕಿತ್ಸೆ ಪಡೆಯತಕ್ಕದ್ದು. ಎಂ.ಆರ್.ಐ. ಸ್ಕ್ಯಾನ್ ಮಾಡಿದಾಗ ಬ್ಲ್ಯಾಕ್  ಫಂಗಸ್ ದೇಹಕ್ಕೆ ಎಷ್ಟು ಹಾನಿ ಮಾಡಿದೆ ಎಂದು ತಿಳಿಯುತ್ತದೆ. 

ಬ್ಲ್ಯಾಕ್  ಫಂಗಸ್ ಇರುವ ರೋಗಿಗಳನ್ನು ಸಾಮಾನ್ಯವಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ಒಳ ರೋಗಿಗಳಾಗಿ ದಾಖಲಾತಿ ಮಾಡಿಸಿ ವೈದ್ಯರು ಚಿಕಿತ್ಸೆ ನೀಡುತ್ತಾರೆ. ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್ಯುಕ್ತ, ಪೋಷಕಾಂಶಯುಕ್ತ ದ್ರಾವಣಗಳು, ಆ್ಯಂಟಿಬಯಾಟಿಕ್ ಮತ್ತು ಶಿಲೀಂಧ್ರ ನಾಶಕ ಆಂಪೋಟೆರಿಸಿನ್ ಬಿಯನ್ನು ನೀಡಲಾಗುತ್ತದೆ. ಸೋಂಕಿನ ತೀವ್ರತೆಯ ಆಧಾರದ ಮೇಲೆ ಶಸ್ತ್ರಚಿಕಿತ್ಸೆಯೂ ಬೇಕಾಗಬಹುದು.

ಸದ್ಯಕ್ಕೆ ಆಂಪೋಟೆರಿಸಿನ್ ಬಿ ಕೊರತೆ ದೇಶದಲ್ಲಿ ಹೆಚ್ಚಿರುವುದರಿಂದ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಕಾಗಿದೆ.  ಈ ಔಷಧಿಯ ಉತ್ಪಾದನಾ ಪ್ರಮಾಣ ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ ಬ್ಲ್ಯಾಕ್  ಫಂಗಸ್ ರೋಗಿಗಳಿಗೆ 15-20 ಆಂಪೋಟೆರಿಸಿನ್ ಬಿ ವಯಲ್ಲುಗಳು ಬೇಕಾಗುತ್ತವೆ. ಒಂದು ವಯಲ್ಲಿಗೆ ಕನಿಷ್ಠ ಐದರಿಂದ ಆರು ಸಾವಿರ ಆಗುತ್ತದೆ, ಅಂದರೆ ಈ ಒಂದೇ ಔಷಧಕ್ಕೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಕೆಲವು ಜನರಿಗೆ ಸಂಪೂರ್ಣ ಸರಿ ಹೋಗಲು ಕಾಸ್ಮೆಟಿಕ್ ಸರ್ಜರಿ ಕೂಡ ಬೇಕಾಗಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಉಚಿತ. 

ಒಟ್ಟಾರೆ ಹೇಳುವುದಾದರೆ ಬ್ಲ್ಯಾಕ್ ಫಂಗಸ್ ಅತೀ ವಿರಳ ಶಿಲೀಂಧ್ರ ಸೋಂಕು. ಕೋವಿಡ್-19  ರೋಗಿಗಳಲ್ಲಿ ಈ ಸೋಂಕು 80 ಶೇಕಡ ಮಾರಣಾಂತಿಕ ಎಂದು ವರದಿಯಾಗಿದೆ. ಇದರಿಂದಾಗಿ ಹಲವಾರು ಜನರು ಶಾಶ್ವತ ಅಂಧತ್ವಕ್ಕೆ ಬಲಿಯಾಗಿದ್ದಾರೆ.

ಈ ನಿಟ್ಟಿನಲ್ಲಿ ಕೋವಿಡ್-19 ಸೋಂಕಿತರಲ್ಲಿ ಸ್ಟೀರಾಯ್ದ್ ನೀಡುವಾಗ ವಿಶೇಷ ಮುತುವರ್ಜಿ ವಹಿಸಬೇಕು ಮತ್ತು ಚಿಕಿತ್ಸೆ ಮುಗಿದ ಬಳಿಕವೂ ನಿರಂತರವಾದ ಆರೈಕೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಹಾಗೆಯೇ ಎಲ್ಲೆಡೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇದೆ.

ಡಾ. ವಸುಂಧರಾ ಭೂಪತಿ

bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com